ಶುಕ್ರವಾರ, ಜನವರಿ 24, 2020
21 °C

ಮಹಿಳೆಯರೂ ಓಡಿಸಬಹುದು ಇ–ಆಟೊ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೊದ ಅವಶ್ಯಕತೆ ಹೆಚ್ಚಿದೆ. ಮೆಟ್ರೊ ನಿಲ್ದಾಣಗಳಿಂದ ಮನೆ ಅಥವಾ ಕಚೇರಿಗೆ ತಲುಪಲು ಜನ ಆಟೊಗಳನ್ನೇ ಅವಲಂಬಿಸಿದ್ದಾರೆ. ಮೆಟ್ರೊವನ್ನೇ ಗುರಿಯಾಗಿಸಿಕೊಂಡ ಜನಯತ್ರಿ ಯೋಜನೆಯ ಆಟೊಗಳ ಬಗ್ಗೆ ಒಂದು ವರದಿ.

ಮಹಿಳೆಯರಿಗೆ ಎಲೆಕ್ಟ್ರಿಕ್‌ ಆಟೊ (ಇ–ಆಟೊ) ಓಡಿಸಲು ಕಲಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಲು ಹೊರಟಿದೆ ನಗರದ ‘ಯುವ ಚಿಂತನ ಫೌಂಡೇಶನ್‌’ ಟ್ರಸ್ಟ್.

‘ಜನಯತ್ರಿ’ ಎಂಬ ಹೆಸರಿನಲ್ಲಿ ಈ ಫೌಂಡೇಶನ್ ರಾಜ್ಯದ ಎಲ್ಲಾ ಭಾಗದ 250 ಮಹಿಳೆಯರಿಗೆ ಉಚಿತವಾಗಿ ಇ–ಆಟೊ ಓಡಿಸಲು ತರಬೇತಿ ನೀಡುತ್ತಿದೆ.

ನಿಮಗೆ 18 ವರ್ಷವಾಗಿದ್ದು, 7ನೇ ತರಗತಿ ಓದಿದ್ದು, ನಿಮ್ಮ ಬಳಿ ದ್ವಿಚಕ್ರ ವಾಹನದ ಪರವಾನಗಿ ಇದ್ದರೆ (ಕಡ್ಡಾಯವಿಲ್ಲ) ನೀವು ಆಟೊ ಓಡಿಸಲು ಕಲಿಯಬಹುದು. 

ಮೆಟ್ರೊ ನಿಲ್ದಾಣದಿಂದ 5ಕಿ.ಮೀ. ವ್ಯಾಪ್ತಿಯಲ್ಲಿ ಈ ಆಟೊಗಳು ಸಂಚರಿಸಲಿದ್ದು ದಾಸರಹಳ್ಳಿ, ವೈಟ್‌ಫೀಲ್ಡ್‌ ಹಾಗೂ ಯಲಚೇನಹಳ್ಳಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. 

‘ಕೇಂದ್ರ ಸರ್ಕಾರ 2030ರ ಹೊತ್ತಿಗೆ ಇಂಧನ ಚಾಲಿತ ವಾಹನಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಇ–ವಾಹನಗಳು ರಸ್ತೆಯಲ್ಲಿ ಓಡಾಡುವಂತೆ ಮಾಡಬೇಕು ಎಂದು ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಕೆಲವು ಇ–ವಾಹನ ತಯಾರಿಕಾ ಕಂಪನಿಗಳು ಹುಟ್ಟಿಕೊಂಡಿವೆ. ಬೆಂಗಳೂರಿನಂತಹ ಮೆಟ್ರೊ ಸಿಟಿಗಳಿಗೆ ಇವು ತುಂಬ ಮುಖ್ಯ. ಕೇಂದ್ರದ ಈ ಯೋಜನೆಯಂತೆ ಬಿಬಿಎಂಪಿ ‘ಸಾರಥಿ’ ಯೋಜನೆಯಡಿ ಮಹಿಳೆಯರಿಗಾಗಿ 500 ಇ–ಆಟೊಗಳನ್ನು ನೀಡಲಿದೆ. ಮಹಿಳಾ ಸ್ವಾವಲಂಬನೆಯ ಉದ್ದೇಶದಿಂದ 250 ಆಟೊಗಳನ್ನು ನಮ್ಮ ಫೌಂಡೇಶನ್‌ಗೆ ತರಲಿದ್ದೇವೆ. ಆ ಮೂಲಕ ಮಹಿಳೆಯರಿಗೆ ಉಚಿತವಾಗಿ 45 ದಿನಗಳ ತರಬೇತಿ ನೀಡಲಿದ್ದೇವೆ’ ಎನ್ನುತ್ತಾರೆ ಟ್ರಸ್ಟ್‌ನ ಸಂಸ್ಥಾಪಕಿ ಅನುಪಮಾ ಗೌಡ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೊದ ಅವಶ್ಯಕತೆ ಹೆಚ್ಚಿದೆ. ಅದರಲ್ಲೂ ಮೆಟ್ರೊ ನಿಲ್ದಾಣಗಳಿಂದ ಮನೆ ಅಥವಾ ಕಚೇರಿಗೆ ತಲುಪಲು ಜನ ಆಟೊಗಳನ್ನೇ ಅವಲಂಬಿಸಿದ್ದಾರೆ. ಆ ಕಾರಣದಿಂದ ನಮ್ಮ ಜನಯತ್ರಿ ಯೋಜನೆಯ ಆಟೊಗಳು ಮೊದಲು ಮೆಟ್ರೊವನ್ನೇ ಗುರಿಯನ್ನಾಗಿಸಿಕೊಂಡಿವೆ ಎನ್ನುತ್ತಾರೆ ಅನುಪಮಾ.

ಬೆಂಗಳೂರಿನ ಮಹಿಳೆಯರಿಗಷ್ಟೇ ಸೀಮಿತವಲ್ಲ

ಈ ಯೋಜನೆಯಡಿ ರಾಜ್ಯದ ಎಲ್ಲಾ ಭಾಗದ ಮಹಿಳೆಯರು ನಗರದಲ್ಲಿ ಬಂದು ಆಟೊ ಓಡಿಸಲು ಕಲಿಯಬಹುದು. ವಸತಿ ವ್ಯವಸ್ಥೆಯನ್ನೂ ಯುವ ಚಿಂತನ ಫೌಂಡೇಶನ್ ಮಾಡುತ್ತದೆ. ಆದರೆ ಒಂದು ವರ್ಷಗಳ ಕಾಲ ಕಡ್ಡಾಯವಾಗಿ ಯುವ ಚಿಂತನ ಫೌಂಡೇಶನ್ ಜೊತೆಗೆ ಕೆಲಸ ಮಾಡಬೇಕು ಎಂಬುದು ಟ್ರಸ್ಟ್‌ನ ನಿಬಂಧನೆ.

‘ಸುಮ್ಮನೆ ಕಾಟಾಚಾರಕ್ಕೆ ಆಟೊ ಓಡಿಸಲು ಕಲಿತು ತರಬೇತಿ ಮುಗಿದ ನಂತರ ತಮ್ಮ ಊರಿಗೆ ಮರಳಿ ಕಲಿತದ್ದನ್ನು ಮರೆಯಬಾರದು. ಜೊತೆಗೆ ದುಡಿಮೆಯ ಅನಿವಾರ್ಯತೆ ಅರಿವೂ ಅವರಿಗಾಗಬೇಕು. ಅಲ್ಲದೇ ನಗರದಲ್ಲಿ ಪರಿಪೂರ್ಣತೆಯಿಂದ ಆಟೊ ಓಡಿಸಿದರೆ ರಾಜ್ಯದ ಯಾವ ಭಾಗದಲ್ಲಾದರೂ ಅವರು ಯಾವುದೇ ಅಡೆತಡೆಯಿಲ್ಲದೇ ಆಟೊ ಓಡಿಸಬಹುದು ಎಂಬುದು ನಿಬಂಧನೆಯ ಉದ್ದೇಶ‘ ಎನ್ನುತ್ತಾರೆ ವೈಸಿಎಫ್‌ನ ಸಂಸ್ಥಾಪಕಿ.

ಈಗಾಗಲೇ 8 ಮಂದಿ ಸಂಸ್ಥೆಯಲ್ಲಿ ತರಬೇತಿ ಪಡೆದು ಆಟೊ ಓಡಿಸುತ್ತಿದ್ದಾರೆ. ಮಾಲಾ ಹಾಗೂ ಪರಮೇಶ್ವರಿ ಎಂಬ ಇಬ್ಬರೂ ನುರಿತ ಚಾಲಕಿಯರು ತರಬೇತಿ ನೀಡುತ್ತಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ 250 ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಪರಿಪೂರ್ಣ ಇ–ಆಟೊ ಚಾಲಕರನ್ನಾಗಿಸುವ ಉದ್ದೇಶ ಫೌಂಡೇಶನ್‌ನದ್ದು.

ಬೇಕಾಗುವ ದಾಖಲಾತಿಗಳು

ಆಟೊ ಓಡಿಸಲು ಕಲಿಯುವ ಮಹಿಳೆಯರು ಆಧಾರ್ ಕಾರ್ಡ್‌, ಓದಿನ ಪ್ರಮಾಣ ಪತ್ರ (ಕಡ್ಡಾಯವಿಲ್ಲ), ಬ್ಯಾಂಕ್ ಖಾತೆಯ ವಿವರ ಇಷ್ಟನ್ನು ಟ್ರಸ್ಟ್‌ಗೆ ನೀಡಬೇಕು. ತರಬೇತಿ ಪಡೆದ ನಂತರ ಸ್ವಂತ ಆಟೊ ಖರೀದಿಸುವವರಿಗೆ ಬ್ಯಾಂಕ್ ಲೋನ್‌ ಪಡೆದುಕೊಳ್ಳಲು ಬೇಕಾದ ಸಹಾಯವನ್ನು ಟ್ರಸ್ಟ್ ಮಾಡುತ್ತದೆ. 

ಮಹಿಳಾ ಸುರಕ್ಷತೆಗೂ ಒತ್ತು

ಜಿಪಿಎಸ್‌ ವ್ಯವಸ್ಥೆ ಆಳವಡಿಸುವ ಕಾರಣದಿಂದ ಇದೂ ಸುರಕ್ಷತೆಗೆ ನೆರವಾಗಲಿದೆ. ಸದ್ಯಕ್ಕೆ ರಾತ್ರಿ 7ರ ವರೆಗೆ ಮಾತ್ರ ಚಾಲಕಿಯರು ಆಟೊಗಳನ್ನು ಓಡಿಸುತ್ತಾರೆ. ಮುಂದಿನ ದಿನಗಳಲ್ಲಿ ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಸೇವೆಗಳಲ್ಲೂ ತಮ್ಮ ಆಟೊಗಳನ್ನು ಸೇರಿಸಲಿದ್ದು ಇದರಿಂದ ಪ್ರಯಾಣಿಕರು ಹಾಗೂ ಚಾಲಕಿಯರಿಗೆ ಇನ್ನಷ್ಟು ನೆರವಾಗಲಿದೆ.

ತರಬೇತಿಯ ಕುರಿತು

ಜನಯತ್ರಿ ಯೋಜನೆಯಡಿ ನಡೆಯುವ ತರಬೇತಿಯಲ್ಲಿ 3ಹಂತಗಳಿರುತ್ತವೆ. ಮೊದಲು ಆಟೊ ಓಡಿಸುವುದು, ನಂತರ ಆಟೊದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು, ಮೂರನೆಯದು ಆ್ಯಪ್‌ನಂತಹ ತಂತ್ರಜ್ಞಾನದ ಬಳಕೆಯ ಕುರಿತು ಅರಿವು ಮೂಡಿಸುವುದು.

ವ್ಯಾಪ್ತಿ ವಿಸ್ತರಣೆಯತ್ತ ಚಿತ್ತ

ಸದ್ಯಕ್ಕೆ ಬೆಂಗಳೂರಿಗಷ್ಟೇ ಸಿಮೀತವಾಗಿರುವ ಜನಯತ್ರಿ ಆಟೊ ತರಬೇತಿ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯದ ಮೈಸೂರು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಕ್ಷಿಣಕನ್ನಡ, ಕಲಬುರ್ಗಿ ಈ ಆರು ಜಿಲ್ಲೆಗಳಲ್ಲಿ ತನ್ನ ವ್ಯಾಪ್ತಿ ಮುಂದುವರಿಸುವ ಯೋಚನೆಯಲ್ಲಿದೆ. ಈ ಜಿಲ್ಲೆಗಳಲ್ಲಿ ಜಿಲ್ಲೆಗೆ 50 ಮಂದಿಯಂತೆ 300 ಜನರನ್ನು ಆಟೊ ಓಡಿಸಲು ಸಮರ್ಥರನ್ನಾಗಿಸಿ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕು ಎಂಬುದು ಟ್ರಸ್ಟ್‌ನ ಗುರಿ. ಸದ್ಯಕ್ಕೆ ವೈಟ್‌ಫೀಲ್ಡ್‌ನಲ್ಲಿ ಇ–ಆಟೊ ಚಾಲನಾ ತರಬೇತಿ ನೀಡುತ್ತಿದ್ದು ಆಸಕ್ತರು ಸಂಪರ್ಕಿಸಬಹುದು.

ಅನುಪಮಾ ಗೌಡ: 9945002529

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು