ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್‌ ವೇಳೆ ಭಾರತದಲ್ಲಿ 12.2 ಕೋಟಿ ಉದ್ಯೋಗ ನಷ್ಟ: ಸಿಎಂಐಇ

Last Updated 5 ಮೇ 2020, 10:22 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಿಸಿದ ಬಳಿಕ, ಕಳೆದ ತಿಂಗಳು ದೇಶದಲ್ಲಿ 12.2 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಖಾಸಗಿ ಚಿಂತಕರ ಚಾವಡಿ ಸಿಎಂಐಇ ಹೇಳಿದೆ.

ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಲ್ಲಿ ಉದ್ಯಮ ಚಟುವಟಿಕೆ ಸ್ಥಗಿತಗೊಂಡವು. ಇದರಿಂದಾಗಿ ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ನಿರುದ್ಯೋಗ ಪ್ರಮಾಣ ಶೇ 27.1ಕ್ಕೆ ಏರಿಕೆಯಾಗಿದೆ ಎಂದು ‘ಭಾರತೀಯ ಆರ್ಥಿಕ ನಿಗಾ ಸಂಸ್ಥೆ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ/ ಸಿಎಂಐಇ)’ತಿಳಿಸಿರುವುದನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ದಿನಗೂಲಿ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಲಾಕ್‌ಡೌನ್‌ನಿಂದ ದೊಡ್ಡಮಟ್ಟಿನ ಹೊಡೆತ ಬಿದ್ದಿದೆ. ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರ ನಡೆಸುವವರು, ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಕೂಲಿಯಾಳುಗಳಿಗೆ ಹೆಚ್ಚು ತೊಂದರೆಯಾಗಿದೆ ಎಂದು ಸಿಎಂಐಇ ಹೇಳಿದೆ.

‘ಅತಿ ಹೆಚ್ಚು ಸಂಕಷ್ಟಕ್ಕೀಡಾದವರೆಲ್ಲ ಸಮಾಜದ ಅತ್ಯಂತ ದುರ್ಬಲ ವರ್ಗದವರು. ಹೀಗಾಗಿ ಇದೊಂದು ಮಾನವೀಯ ದುರಂತ’ ಎಂದು ಸಿಎಂಐಇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೆಶ್ ವ್ಯಾಸ್ ಪತ್ರಿಕೆಯೊಂದಕ್ಕೆ ನೀಡಿದ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.

ಆರು ವಾರಗಳ ಕಾಲ ನಿರುದ್ಯೋಗ ಸವಲತ್ತು ಪಡೆಯುವುದಕ್ಕಾಗಿ ಅಮೆರಿಕದಲ್ಲಿ 30 ಲಕ್ಷ ಜನ ಅರ್ಜಿ ಸಲ್ಲಿಸಿರುವ ಬಗ್ಗೆ ಈಚೆಗೆ ವರದಿಯಾಗಿತ್ತು. ಆದರೆ, ಭಾರತದ ನಿರುದ್ಯೋಗ ಪ್ರಮಾಣ ಇದಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ. ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್ ವಿಸ್ತರಣೆಯಾಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಸಿಎಂಐಇ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT