ಸೋಮವಾರ, ಸೆಪ್ಟೆಂಬರ್ 28, 2020
28 °C
ಸೆ.5 ಶಿಕ್ಷಕರ ದಿನ

ಬೋಧನಾ ಕಲೆಗೆ ಕ್ರಿಯಾಶೀಲತೆಯ ಸೆಲೆ

ಪರಮೇಶ್ವರಯ್ಯ ಸೊಪ್ಪಿಮಠ Updated:

ಅಕ್ಷರ ಗಾತ್ರ : | |

Prajavani

ಬೋಧನೆ ಒಂದು ಕಲೆ ಹಾಗೂ ಕೌಶಲ. ಅದನ್ನು ತಕ್ಷಣ ಒಲಿಸಿಕೊಳ್ಳಲು ಸಾಧ್ಯವಿಲ್ಲ. ನಿರಂತರ ಶ್ರಮದ ಜೊತೆಗೆ ಅನೇಕ ವರ್ಷಗಳ ಅನುಭವ ಸೇರಿದಾಗ ಒಲಿಯುತ್ತದೆ. ಒಮ್ಮೆ ಅದು ಕರಗತವಾದಲ್ಲಿ ಮತ್ತೆ ಹಿಂತಿರುಗಿ ನೋಡುವ ಪ್ರಶ್ನೆಯೇ ಬರುವುದಿಲ್ಲ. ಅದನ್ನು ಶಿಕ್ಷಕ ಸಿದ್ಧಿಸಿಕೊಳ್ಳಲು ಶಿಸ್ತುಬದ್ಧ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಅದನ್ನು ತರಗತಿಯೊಳಗೆ ಸಂಘಟನಾತ್ಮಕವಾಗಿ ತೊಡಗಿಸಬೇಕು.

***

ಶಿಕ್ಷಕರು ತಮ್ಮ ತರಗತಿಯುದ್ದಕ್ಕೂ ಸೃಜನಶೀಲತೆಯನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚು ಮೌಲ್ಯ ಪಡೆದಿದೆ. ಹಾಗಾದರೆ ಸೃಜನಶೀಲತೆ ಎಂದರೆ ಏನು? ಇದು ತಕ್ಷಣ ಪರಿಹಾರಕ್ಕಿಂತ ಹೆಚ್ಚಿನದನ್ನು ಹುಡುಕುವ ಜಾಣ್ಮೆ ಎಂದು ಸರಳವಾಗಿ ಹೇಳಬಹುದು. ಅಂದರೆ ಸಮಸ್ಯೆಗಳು ಅಥವಾ ತೊಡಕುಗಳಿಗೆ ಹೊಸ ಆಯಾಮಗಳನ್ನು ಹುಡುಕುವ ಅಥವಾ ಹೊಸ ಪರಿಹಾರ ಮಾರ್ಗಗಳನ್ನು ಕಂಡುಹಿಡಿಯುವ ಸಾಮರ್ಥ್ಯ ಎಂದೂ ಕರೆಯಬಹುದು. ಸೃಜನಶೀಲತೆ ಎಲ್ಲ ಕ್ಷೇತ್ರಗಳಲ್ಲಿ ಅದರಲ್ಲೂ ಶಿಕ್ಷಣ ಕ್ಷೇತ್ರ ಇದನ್ನು ಹೆಚ್ಚು ಆಪೇಕ್ಷಿಸುತ್ತಿರುವುದು ಸುಳ್ಳೇನಲ್ಲ.

ತರಗತಿಯಲ್ಲಿ ಸೃಜನಶೀಲತೆಯ ಮಹತ್ವ: ಶಿಕ್ಷಕರಾದವರು ಸೃಜನಶೀಲತೆ ಮತ್ತು ಪಠ್ಯಕ್ರಮಗಳನ್ನು ಸರಿಯಾಗಿ ಮಿಶ್ರಣ ಮಾಡಿದರೆ ಮಾತ್ರ ಮಗುವಿನಲ್ಲಿ ಮತ್ತು ತರಗತಿಯಲ್ಲಿ ಹೊಸತನ ತರಲು ಸಾಧ್ಯ. ಉತ್ತಮ ತರಗತಿ ಯಾವಾಗಲೂ ಸೃಜನಶೀಲತೆಯಿಂದ ಕೂಡಿರಬೇಕಾದರೆ ಅಲ್ಲಿ ಸೃಜನಶೀಲ ಶಿಕ್ಷಕರು ಅಗತ್ಯವಾಗುತ್ತಾರೆ. ಮಕ್ಕಳ ಜೊತೆಗೆ ಶಿಕ್ಷಕರಲ್ಲಿಯೂ ಸದಾ ಹೊಸತನ್ನು ಕಲಿಯುವ - ಹೊಸತನ್ನು ತರುವ ಹಂಬಲ ಇರಬೇಕಾಗುತ್ತದೆ. ಈ ಅಂಶಗಳನ್ನು ಒಳಗೊಂಡ ಸೃಜನಶೀಲತೆ ಹೊಂದಿದ ತರಗತಿ ಮಕ್ಕಳಲ್ಲಿ ಸಾಮಾಜಿಕ ಕೌಶಲದ ಜೊತೆಗೆ ಸಂವಹನ ಕೌಶಲಗಳು ಗರಿಷ್ಠಮಟ್ಟವನ್ನು ತಲುಪುತ್ತವೆ.

ಬೋಧನಾ ಪ್ರಕ್ರಿಯೆಯಲ್ಲಿ ಬಳಕೆ: ಮಕ್ಕಳಲ್ಲಿ ಸಂತೋಷದ ಕಲಿಕೆ ಒತ್ತಡರಹಿತ ಕಲಿಕೆಯಾಗಬೇಕು. ಇದಕ್ಕೆ ಸೃಜನಶೀಲತೆ ಹೆಚ್ಚು ಬೆಂಬಲ ನೀಡುತ್ತದೆ. ಉದಾಹರಣೆಗೆ ತರಗತಿಯಲ್ಲಿ ಪಠ್ಯಕ್ಕೆ ಪೂರಕವಾಗಿ ಒಂದು ಕಥೆ, ನಾಟಕದ ಮೂಲಕ ಅಭಿವ್ಯಕ್ತಿಗೆ ಅವಕಾಶ ನೀಡಿದಾಗ ಅಲ್ಲಿ ಅಭಿವ್ಯಕ್ತಿಗೆ ಸ್ವಾತಂತ್ರ್ಯ ಸಿಕ್ಕು ಕಲಿಕೆ ಸುಲಭವಾಗುತ್ತದೆ. ಇದೇ ರೀತಿಯಾಗಿ ಮಕ್ಕಳ ಭಾವನಾತ್ಮಕ ಬೆಳವಣಿಗೆಗೆ ಅವಕಾಶ ದೊರೆಯುತ್ತದೆ.

ಅವರಲ್ಲಿ ಯೋಚನಾ ಶಕ್ತಿ ಅಭಿವೃದ್ಧಿಯಾಗುತ್ತದೆ. ಒತ್ತಡ ಮತ್ತು ಆತಂಕಗಳು ಸಹಜವಾಗಿ ಕಡಿಮೆಯಾಗುತ್ತವೆ. ಅವರಲ್ಲಿ ಉತ್ತಮ ಸಂವಹನ ಕೌಶಲ ವೃದ್ಧಿಯಾಗುತ್ತದೆ. (ಇನ್ನೋವೇಟಿವ್ ಮೈಂಡ್ ಸೆಟ್) ಉತ್ತಮ ಮತ್ತು ಹೊಸತಾದ ಯೋಚನೆಗಳನ್ನು ಹೆಚ್ಚಿಸುತ್ತದೆ. ಕಲಿಕೆ ಪರೀಕ್ಷೆಗೆ ಅಥವಾ ತಾತ್ಕಾಲಿಕವಾಗದೇ ಬಹಳ ದಿನದವರೆಗೆ ಮಕ್ಕಳೊಡನೆ ಉಳಿಯುತ್ತದೆ.

ತರಗತಿಯಲ್ಲಿ ಅಳವಡಿಕೆ: ಶಿಕ್ಷಕರು ತರಗತಿಯಲ್ಲಿ ಮಕ್ಕಳ ಚಟುವಟಿಕೆಗಳಿಗೆ ಸದಾ ಬೆಂಬಲವಾಗಿ - ಒತ್ತಾಸೆಯಾಗಿ ನಿಂತಿರಬೇಕು. ಮಕ್ಕಳ (ಐಡಿಯಾ) ಭಾವನೆಗಳನ್ನು ನಿರ್ಲಕ್ಷ ಮಾಡದೇ ಸದಾ ಸ್ಪಂದಿಸಬೇಕು. ಮಕ್ಕಳಿಗೆ ಸಾಧ್ಯವಾದಷ್ಟು ಸ್ವಾತಂತ್ರ್ಯ ನೀಡಬೇಕು. ಪ್ರೋತ್ಸಾಹ ನೀಡುವ ಮುಖಾಂತರ (ಈ ರೀತಿ ಪದ ಬರೆಯಲು ಪ್ರಯತ್ನಿಸಿ, ಚಿತ್ರಿಸಿ, ಹುಡುಕಿ, ಯೋಚಿಸಿ ಇತ್ಯಾದಿ ) ಯೋಚನಾ ಲಹರಿ ಹೆಚ್ಚಿಸುವ ಕೆಲಸ ಮಾಡಬೇಕು. ಮಕ್ಕಳಿಗೆ ನೆರವಾಗುವಂತಹ ಹಿಮ್ಮಾಹಿತಿಗಳನ್ನು ನೀಡುತ್ತಿರಬೇಕು. ಸದಾ ಕ್ರಿಯಾಶೀಲರಾಗಿರುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕು. ಪ್ರೇರೇಪಣೆ ಮಾಡುತ್ತಿರಬೇಕು.

ಬೋಧನಾ ತಂತ್ರಗಳು: ಸೃಜನಶೀಲ ಶಿಕ್ಷಕನ ಬೋಧನೆ ಸದಾ ನವನವೀನತೆಗಳನ್ನು ಪಡೆಯಲು ಯೋಚಿಸುತ್ತಿರುತ್ತದೆ. ಒಂದೇ ವಿಷಯದ ಕಲಿಕೆಗೆ ಅನೇಕ ರೀತಿಯ ವಿವಿಧ ಬಗೆಯ ತಂತ್ರಗಳ ಬಳಕೆ ಮಾಡುವ ವಿಧಾನಗಳನ್ನು ಹುಡುಕುವುದು ಮಕ್ಕಳ ಕಲಿಯುವ ಹಂಬಲಕ್ಕೆ ಬೋಧನೆ ನೀರೆರೆಯುವಂತಿರುತ್ತದೆ. ಬರೀ ಪಠ್ಯಪುಸ್ತಕ ಅಥವಾ ಬೋಧನೆಗೆ ಮಾತ್ರ ಸೀಮಿತವಾಗದೇ ಬೇರೆ ವಿಷಯಗಳಲ್ಲೂ ಶಿಕ್ಷಕರಿಗೆ ಕುತೂಹಲವಿರುತ್ತದೆ.

ಪ್ರಾಯೋಗಿಕತೆ: ಮಕ್ಕಳು ಪಠ್ಯದ ಜ್ಞಾನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಅದು ಅವಶ್ಯಕತೆ ಬಂದಾಗ ಬಳಕೆಯಾಗಬೇಕು ಎಂದಾದಲ್ಲಿ ಶಿಕ್ಷಕರ ಸೃಜನಶೀಲತೆ ಪಾತ್ರ ದೊಡ್ಡದಾಗಿರುತ್ತದೆ. ಸಮಾಜ ವಿಜ್ಞಾನದಲ್ಲಿ ವಾಣಿಜ್ಯ ಬೆಳೆಯಲ್ಲಿ ಚಹಾದ ಎಲೆ ಕೂಡಾ ಒಂದು. ಅದನ್ನು ಮಕ್ಕಳಿಗೆ ಶಿಕ್ಷಕ ತಲುಪಿಸಲು ಹಲವಾರು ವಿಧಾನಗಳಿವೆ. ಅದರ ಸುತ್ತಮುತ್ತಲಿನ ಪಠ್ಯದ ಹೊರತಾದ ಎಲ್ಲಾ ವಿಷಯವನ್ನು ಮಕ್ಕಳಿಗೆ ಪರಿಚಯಿಸಿದಲ್ಲಿ ಅದು ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.

‘ನಿಮ್ಮ ಮನೆಯಲ್ಲಿ ಚಹಾ ಮಾಡುತ್ತೀರಿ ಅಲ್ಲವೇ? ಅದಕ್ಕೆ ಬಳಸುವ ಸಾಮಗ್ರಿಗಳಾವವು?’ ಎಂಬ ಪ್ರಶ್ನೆಗೆ ಮಕ್ಕಳು ಉತ್ತರ ನೀಡುತ್ತಾರೆ. ಚಹಾದ ಗಿಡವನ್ನು ಬೆಳೆಯುವ ವಿಧಾನ ಯಾವ ರೀತಿ ಇದೆ? ಅದಕ್ಕೆ ಎಂತಹ ಪರಿಸರ ಅಗತ್ಯವಿದೆ? ಎಲೆ ಸಂಗ್ರಹ ಮಾಡುವ ರೀತಿ ಹೇಗಿರುತ್ತದೆ? ಅದನ್ನು ಒಣಗಿಸುವ ವಿಧಾನ ಯಾವುದು? ಅದನ್ನು ಹೇಗೆ ಪುಡಿ ಮಾಡುತ್ತಾರೆ? ಗಿಡದ ವಿಶೇಷತೆ ಏನು? ಅದನ್ನು ನಮ್ಮ ದೇಶ ಮತ್ತು ರಾಜ್ಯದಲ್ಲಿ ಎಲ್ಲೆಲ್ಲಿ ಬೆಳೆಯುತ್ತಾರೆ? ಬೆಳೆಯಿಂದ ಆಗುವ ಪ್ರಯೋಜನಗಳಾವುವು? ಇದು ಮೊದಲನೇ ಹಂತ.

ಎರಡನೇ ಹಂತದಲ್ಲಿ ಚಹಾಗೆ ಬಳಸುವ ಸಕ್ಕರೆ ತಯಾರಿಸುವ ವಿಧಾನ, ಕಬ್ಬನ್ನು ಎಲ್ಲಿ ಬೆಳೆಯುವವರು, ಕಬ್ಬಿನ ರಸ ಹೇಗೆ ತೆಗೆಯುವರು, ನಂತರ ಸಕ್ಕರೆಯನ್ನು ಹೇಗೆ ತಯಾರಿಸುವರು, ಭಾರತದಲ್ಲಿ ಎಲ್ಲೆಲ್ಲಿ ಕಬ್ಬು ಬೆಳೆಯುವರು, ಸಕ್ಕರೆ ಉತ್ಪಾದನೆ ಮಾಡುವ ಪ್ರಸಿದ್ಧ ಕಾರ್ಖಾನೆಗಳು, ಅದರ ಉಪ ಉಪ ಉತ್ಪನ್ನಗಳಾವುವು? ಹೀಗೆ ಸಕ್ಕರೆ ಬಗ್ಗೆ ಚರ್ಚೆ ಮಾಡಬಹುದು. ಇದೇ ರೀತಿ ಚಹಾಗೆ ಬಳಸುವ ಹಾಲು.

ಈ ರೀತಿಯಾಗಿ ಒಂದು ವಿಷಯವನ್ನು ಅವರ ನಿತ್ಯ ಬದುಕಿನ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಗೊತ್ತಿಲ್ಲದ ವಿಚಾರಗಳನ್ನು ಆಸಕ್ತಿಯುತವಾಗಿ ತಿಳಿಸಿದಲ್ಲಿ ಮಕ್ಕಳು ಸುಲಭವಾಗಿ ಮರೆಯಲಾರರು. ಒಂದು ವಿಷಯದ ಮೂಲಕ ಅನೇಕ ಸಂಗತಿಗಳನ್ನು, ವಿಚಾರಗಳನ್ನು, ವ್ಯಕ್ತಿಗಳನ್ನು, ಸ್ಥಳಗಳನ್ನು ನೋಡಿ -ಮಾಡಿ, ತಿಳಿಯುವುದೇ ಒಂದು ಸೃಜನಶೀಲ ಚಟುವಟಿಕೆ. 

ಪ್ರಶ್ನೆ ಕೇಳುವುದನ್ನು ಉತ್ತೇಜಿಸಿ

ಪ್ರಶ್ನೆಗಳು ನಮ್ಮನ್ನು ವಿಭಿನ್ನವಾಗಿ ಯೋಚಿಸಲು ಇರುವ ಬಹುದೊಡ್ಡ ಅಸ್ತ್ರಗಳು ಎನ್ನಬಹುದು. ನಮ್ಮ ಮನಸ್ಸು ಎಷ್ಟು ವೇಗವಾಗಿ ಪಯಣಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಆ ಮನಸ್ಸನ್ನು ಒಂದೇ ದಿಕ್ಕಿನೆಡೆ ಸಾಗುವಂತೆ ಮಾಡಿ, ಚಿಂತನ-ಮಂಥನ ಮಾಡಲು ಪ್ರಶ್ನೆಗಳ ಕೊಡುಗೆ ಸಾಕಷ್ಟಿದೆ. ಇದರ ಜೊತೆಗೆ ಕೆಲವು ಸಲ ಮಕ್ಕಳು ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಬಹುತೇಕ ಕಡೆಗಳಲ್ಲಿ ಶಿಕ್ಷಕರು ಅವುಗಳಿಗೆ ಕಿವಿಯಾಗುವುದೇ ಇಲ್ಲ. ಮಕ್ಕಳ ಮಾತು ಮತ್ತು ಪ್ರಶ್ನೆಗಳಿಗೆ ಶಿಕ್ಷಕರು ತಾಳ್ಮೆಯಿಂದ ಆಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ಕ್ರಿಯಾಶೀಲ ಶಿಕ್ಷಕರು ಮಕ್ಕಳಿಗೆ ತಾವೇ ಪ್ರಶ್ನೆಗಳನ್ನು ಹಾಕಿ ಯೋಚಿಸಲು ಪ್ರೇರಣೆ ನೀಡಬೇಕು. ಮನುಷ್ಯನ ಮೈ ಬಣ್ಣ ಹಸಿರಾಗಿದ್ದರೆ ಏನಾಗುತ್ತಿತ್ತು? ನಮಗೆಲ್ಲ ರೆಕ್ಕೆಗಳು ಬಂದರೆ ಏನಾಗಬಹುದು? ತಾರೆಗಳೆಲ್ಲ ಭೂಮಿಗೆ ಬಂದರೆ ಏನಾಗಬಹುದು? ಇಂತಹ ಹಲವಾರು ಪ್ರಶ್ನೆಗಳನ್ನು ಕೇಳಬಹುದು.

ಅದೇ ರೀತಿಯಾಗಿ ಭಾಷಾ ಆಟಗಳು, ಕಥೆಯನ್ನು ಕಟ್ಟುವುದು, ಒಂದು ಪದ ಬಿಡಿಸಿ ಹೇಳುವುದು, ಅಂತ್ಯಾಕ್ಷರಿ ಪದರಚನೆ, ಸಮಾನಾರ್ಥಕ ಪದಗಳು, ಚರ್ಚೆ, ಭಾಷಣ, ಗಾದೆ/ಒಗಟು ಮುಂತಾದವುಗಳ ಮುಖಾಂತರ ಮಕ್ಕಳ ಕಲ್ಪನಾ ಶಕ್ತಿಯನ್ನು ಶಿಕ್ಷಕರು ಹೆಚ್ಚಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು