ಭಾನುವಾರ, ಮಾರ್ಚ್ 29, 2020
19 °C

ಮಕ್ಕಳಿಗೆ ಮಾನಸಿಕ ದೃಢತೆ ಕಲಿಸಿ

ಎನ್‌.ವಸಂತ್‌ Updated:

ಅಕ್ಷರ ಗಾತ್ರ : | |

Prajavani

ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಒಬ್ಬ ತರಲೆ ಹುಡುಗನಿದ್ದ. ಪದೇಪದೇ ಅನುತ್ತೀರ್ಣನಾಗುತ್ತಿದ್ದ ಅವನು 12 ವರ್ಷವಾದಾಗ 4ನೇ ತರಗತಿಯಲ್ಲಿದ್ದ. ಎಲ್ಲರಿಂದ ಪಾಟಿಯ (ಸ್ಲೇಟ್‌) ಮೇಲೆ ಬರೆಯುವ ಕಡ್ಡಿ(ಬಳಪ) ಯನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದ ಅವನನ್ನು ‘ಕಡ್ಡಿ ಭಾಸ್ಕಿ’ ಎಂದು ಕರೆಯುತ್ತಿದ್ದೆವು. ಅವನಿಂದ ತಪ್ಪಿಸಿಕೊಳ್ಳುವುದು ನಮಗೆ ನಿತ್ಯದ ತಲೆನೋವಾಗಿತ್ತು.

ಈ ರೀತಿ ಶಕ್ತಿವಂತರು ದುರ್ಬಲರನ್ನು ಶೋಷಿಸುವ ಸಾಮಾಜಿಕ ಪ್ರವೃತ್ತಿ ಮಕ್ಕಳಲ್ಲಿಯೂ ಕಂಡುಬರುತ್ತದೆ. ಇವತ್ತು ಇದು ಹಲವಾರು ರೂಪಾಂತರಗಳನ್ನು ಪಡೆದುಕೊಂಡು ಕೆಲವೊಮ್ಮೆ ದೊಡ್ಡಮಟ್ಟದ ಶಾಲಾ ಸಮಸ್ಯೆಯಾಗಿ ಕಾಡಬಹುದು. ಕಾಲೇಜುಗಳಲ್ಲಿ ಇದು ‘ರ‍್ಯಾಗಿಂಗ್‌’ ಎಂದು ಕರೆಸಿಕೊಂಡಿದೆ. ಶಿಕ್ಷಕರು ಮತ್ತು ಶಾಲಾ ಆಡಳಿತದವರು ಈ ‘ಬುಲ್ಲಿಯಿಂಗ್‌’ ಬಗ್ಗೆ ಸಾಕಷ್ಟು ಎಚ್ಚರವಹಿಸಿದರೂ ಪೋಷಕರು ಇದನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ.

ಏನಿದು ಬುಲ್ಲಿಯಿಂಗ್‌ ಅಥವಾ ದಬ್ಬಾಳಿಕೆ?

ಪ್ರಬಲರಾಗಿರುವವರು ದುರ್ಬಲರ ಮೇಲೆ ನಡೆಸುವ ಒಂದು ರೀತಿಯ ದಬ್ಬಾಳಿಕೆ ಅಥವಾ ಹಿಂಸಾಚಾರವೇ ಬುಲ್ಲಿಯಿಂಗ್‌. ಇಂತಹ ಪ್ರಾಬಲ್ಯ ಕೇವಲ ದೈಹಿಕವಾಗಿರುತ್ತದೆ ಎಂದು ಹೇಳುವಂತಿಲ್ಲ. ಬುದ್ಧಿವಂತರೆನ್ನಿಸಿಕೊಂಡವರು ಸಾಮಾನ್ಯ ಮಕ್ಕಳ ಮೇಲೆ, ಸ್ಫುರದ್ರೂಪಿಗಳು ಸಾಮಾನ್ಯ ರೂಪಿನವರ ಮೇಲೆ, ಹಣವಂತರ ಮಕ್ಕಳು ಬಡಹುಡುಗರ ಮೇಲೆ ಮಾತಿನ ಚಾಟಿಯಿಂದ ಹಿಂಸಿಸಬಹುದು. ನಮ್ಮ ದೇಶದಲ್ಲಿ ಜಾತಿ, ಧರ್ಮಗಳ ಆಧಾರದ ಮೇಲೂ ಬುಲ್ಲಿಯಿಂಗ್‌ ನಡೆಯುವುದು ಅಪರೂಪವೇನಲ್ಲ. ಗಂಡುಮಕ್ಕಳು ಹುಡುಗಿಯರಿಗೆ ನೀಡುವ ಕಿರುಕುಳಗಳಂತೂ ವಿಶ್ವವ್ಯಾಪಿಯಾಗಿದೆ.

ಈ ದಬಾವಣೆ ಎನ್ನುವುದು ಒಂದು ಸಾಮಾಜಿಕ ಸಮಸ್ಯೆಯಾಗಿಬಿಟ್ಟಿದೆ. ಶಾಲೆಗಳಲ್ಲಿ ಮಾತ್ರವಲ್ಲ, 7–8 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಎಲ್ಲಿ ಸೇರಿದರೂ ಅಲ್ಲಿ ಒಂದು ರೀತಿಯ ದಬಾವಣೆ ಇದ್ದೇ ಇರುತ್ತದೆ. ಲೇವಡಿ ಮಾಡುವುದು ಈ ದಬ್ಬಾಳಿಕೆಯಷ್ಟು ಗಂಭೀರ ಸ್ವರೂಪದ್ದಲ್ಲ. ಕೆಲವೊಮ್ಮೆ ಲೇವಡಿಯನ್ನು ತಮಾಷೆ ಎಂದುಕೊಂಡು ಆ ಕ್ಷಣಕ್ಕೆ ನಕ್ಕು ಸುಮ್ಮನಾಗಬಹುದು. ಆದರೆ ಇದು ಅತಿಯಾದಾಗ, ಕೆಲವೊಮ್ಮೆ ದೈಹಿಕವಾಗಿಯೂ ಹಲ್ಲೆ ನಡೆದರೆ ಆ ಮುಗ್ಧ ಮನಸ್ಸಿನಲ್ಲಿ ಇನ್ನಿಲ್ಲದ ಖಿನ್ನತೆ, ಆತಂಕ ಆವರಿಸಿಬಿಡುತ್ತದೆ. ಐದಾರು ತಿಂಗಳ ಹಿಂದೆ ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ 13 ವರ್ಷ ವಯಸ್ಸಿನ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ.

ಪೋಷಕರ ಜವಾಬ್ದಾರಿಗಳೇನು?

ದೈಹಿಕ ಮಟ್ಟದಲ್ಲಿ ಅಥವಾ ಅವಾಚ್ಯ, ಅಶ್ಲೀಲ ಶಬ್ದಗಳ ಮೂಲಕ ನಡೆಯುವ ಬುಲ್ಲಿಯಿಂಗ್‌ನ ಜವಾಬ್ದಾರಿ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಮೇಲಿರುತ್ತದೆ. ಆದರೆ ಗುಪ್ತಗಾಮಿನಿಯಾಗಿ ಮತ್ತು ಪರೋಕ್ಷ ಚುಚ್ಚುಮಾತುಗಳಿಂದ ನಡೆಯುವ ಬುಲ್ಲಿಯಿಂಗ್‌ ಅಷ್ಟೇ ಅಪಾಯಕಾರಿಯಾದರೂ ಶಿಕ್ಷಕರು ಅದನ್ನು ಹಿಡಿತದಲ್ಲಿಡಲು ಮಿತಿಗಳಿರುತ್ತವೆ. ತಮ್ಮ ಮಕ್ಕಳು ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಬೇಕಾದ ಮಾನಸಿಕ ದೃಢತೆಯನ್ನು ಪೋಷಕರು ಕಲಿಸಬೇಕಾಗುತ್ತದೆ.

ಮಕ್ಕಳು ನೋವನ್ನು ಅನುಭವಿಸುತ್ತಿದ್ದಾರೆ ಎನ್ನುವ ಅಂಶ ಪೋಷಕರ ಸಿಟ್ಟು, ಬೇಸರ, ಹತಾಶೆಗಳಂತಹ ಭಾವೋದ್ವೇಗಕ್ಕೆ ಕಾರಣವಾಗುವುದು ಸಹಜ. ಆದರೆ ಇವುಗಳಿಂದ ಮಕ್ಕಳ ಗೊಂದಲಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಪೋಷಕರು ಇಂತಹ ಪರಿಸ್ಥಿತಿಗಳಲ್ಲಿ ತಮ್ಮ ಭಾವನಾತ್ಮಕ ಏರಿಳಿತಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಮಕ್ಕಳಿಗೆ ಜೀವನಪಾಠವಾಗುತ್ತದೆ. ‘ನೀನೂ ಹಾಗೆಯೇ ಮಾಡು’ ಎಂದು ಮಕ್ಕಳನ್ನು ಪ್ರತ್ಯಾಕ್ರಮಣಕ್ಕೆ ಪ್ರಚೋದಿಸುವುದು ಪರಿಹಾರವಲ್ಲ. ಮನೆಯ ಸುತ್ತಲಿನ ಸ್ನೇಹಿತರೇ ಬುಲ್ಲಿಗಳಾಗಿದ್ದರೆ ನೇರವಾಗಿ ಮಕ್ಕಳಿಬ್ಬರ ಜೊತೆಗೆ (ಅಗತ್ಯವಿದ್ದರೆ ಪೋಷಕರನ್ನೂ ಸೇರಿಸಿಕೊಂಡು) ಕೂರಿಸಿಕೊಂಡು ಮಾತನಾಡಬಹುದು.

ಕೆಲವೊಮ್ಮೆ ಮಕ್ಕಳು ಶಾಲೆಯಲ್ಲಿ ಎದುರಿಸುವ ಮಾನಸಿಕ ಹಿಂಸೆಯನ್ನು ಹೇಳಿಕೊಳ್ಳದೆ ಇರಬಹುದು. ಅವರ ವರ್ತನೆಯಲ್ಲಿನ ಬದಲಾವಣೆಗಳು, ಓದುವುದರಲ್ಲಿ ಹಿಂದುಳಿಯುವುದು, ಆಕ್ರಮಣಕಾರಿ ಪ್ರವೃತ್ತಿ ತೋರುವುದು, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ, ಆಹಾರ ಸೇವನೆ, ದಿನಚರಿಯಲ್ಲಿನ ಏರುಪೇರು ಮುಂತಾದವುಗಳನ್ನು ಗಮನಿಸಿ ಪೋಷಕರು ಶಾಲೆಯಲ್ಲಿನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕು.

ಪರಿಸ್ಥಿತಿಯ ತೀವ್ರತೆಯನ್ನು ಅನುಸರಿಸಿ ಪೋಷಕರು ಶಿಕ್ಷಕರ ಬಳಿ ಇದರ ಬಗ್ಗೆ ಚರ್ಚಿಸಬಹುದು. ದೋಷಿ ವಿದ್ಯಾರ್ಥಿಯನ್ನು ಖಳನಾಯಕನನ್ನಾಗಿ ಮಾಡಿ ಶಿಕ್ಷಿಸುವ ಅಥವಾ ಶಾಲೆಯಿಂದ ಹೊರಹಾಕಲು ಒತ್ತಾಯಿಸುವ ಮೊದಲು ಅವನ ಪೋಷಕರನ್ನು ಸಂಪರ್ಕಿಸಿ ಆಪ್ತಸಮಾಲೋಚಕರ ಸಹಾಯ ಪಡೆದುಕೊಳ್ಳಲು ಸೂಚಿಸಬಹುದು.

 ತಮ್ಮ ಮಕ್ಕಳು ‘ಬಿಗ್‌ ಬುಲ್ಲಿ’ಗಳಾಗಿದ್ದಾರೆಯೇ ಎನ್ನುವುದೂ ಪೋಷಕರ ಕಾಳಜಿಯಾಗಬೇಕು. ಅಹಿತಕರ ಮತ್ತು ಹಿಂಸಾತ್ಮಕ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವ ಮಕ್ಕಳು ತಮ್ಮ ಭಾವನಾತ್ಮಕ ಕಸಿವಿಸಿಗಳನ್ನು ದಬ್ಬಾಳಿಕೆ ಮತ್ತು ಹಿಂಸೆಯ ಮೂಲಕ ಹೊರಹಾಕುತ್ತಾರೆ. ಹಾಗಾಗಿ ಮಕ್ಕಳನ್ನು ದೂಷಿಸುವ ಬದಲು ಕೌಟುಂಬಿಕ ಸಂಬಂಧಗಳನ್ನು ಸರಿಪಡಿಸಿಕೊಳ್ಳುವುದು ಅವರ ಆದ್ಯತೆಯಾಗಬೇಕು. 

***

ನೇರವಾಗಿ ಅಥವಾ ಪರೋಕ್ಷವಾಗಿ ಪದೆಪದೆ ಟೀಕೆ, ಚುಚ್ಚುಮಾತುಗಳು ಮಕ್ಕಳಿಗೆ ಮಾನಸಿಕ ಹಿಂಸೆಯನ್ನು ಉಂಟುಮಾಡುತ್ತವೆ. ಆದರೆ ಮಕ್ಕಳು ಶಾಲೆಯಿಂದ ತರುವ ದೂರುಗಳು ಎಷ್ಟು ತೀವ್ರವಾದವು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ.

ಮಕ್ಕಳನ್ನು ರಕ್ಷಿಸುವ ಧಾವಂತದಲ್ಲಿ ಸ್ನೇಹಿತರ ನಡುವೆ ನಡೆಯುವ ಎಲ್ಲಾ ವಿಚಾರಗಳಲ್ಲಿ ಪೋಷಕರು ಮೂಗು ತೂರಿಸುವ ಅಗತ್ಯವೇನಿಲ್ಲ. ‘ನಿನಗೆ ಏನೇನು ಕಷ್ಟಗಳಾಗುತ್ತಿವೆ? ಟೀಕೆ, ವ್ಯಂಗ್ಯ, ಚುಚ್ಚುಮಾತುಗಳಿಂದ ಬೇಸರವಾದಾಗ, ಸಿಟ್ಟು ಬಂದಾಗ ಏನು ಮಾಡುತ್ತೀಯಾ? ಇವೆಲ್ಲಾ ದಿನನಿತ್ಯ ನಡೆಯುತ್ತವೆಯೇ? ನಿನ್ನ ಬಗ್ಗೆ ಮಾತ್ರ ಇರುತ್ತದೆಯೇ? ಬೇರೆಯವರಿಗೆ ಇಂತಹ ಅನುಭವವಾದಾಗ ನೀನೇನು ಮಾಡುತ್ತೀಯಾ? ಇದರ ಕುರಿತು ಶಿಕ್ಷಕರು ಅಥವಾ ಸ್ನೇಹಿತರ ಹತ್ತಿರ ಮಾತಾಡುತ್ತೀಯಾ? ನಾನು ಹೇಗೆ ಸಹಾಯ ಮಾಡಲಿ?’ ಹೀಗೆ ಸಣ್ಣಸಣ್ಣ ಪ್ರಶ್ನೆಗಳ ಮೂಲಕ ಮಕ್ಕಳ ಮನೋಪ್ರಪಂಚದ ಆಳಕ್ಕೆ ಹೋದರೆ ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)