ಗುರುವಾರ , ಏಪ್ರಿಲ್ 2, 2020
19 °C

ಬಿಎಸ್‌ಸಿ ಜೊತೆಗೆ ಅನಿಮೇಶನ್‌ ಓದಬಹುದೆ?

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

Prajavani

ನಾನು ಪಿಯುಸಿಯನ್ನು ಮುಗಿಸಿ ಬಿ.ಎಸ್‌ಸಿ. (ಸಿಬಿಝೆಡ್‌)ಗೆ ಸೇರಿದ್ದೇನೆ. ಆದರೆ ನನಗೆ ಅನಿಮೇಶನ್‌ನಲ್ಲಿ ಆಸಕ್ತಿ ಇದೆ. ಬಿ.ಎಸ್‌ಸಿ. ಹಾಗೂ ಅನಿಮೇಶನ್‌ ಎರಡನ್ನೂ ಒಟ್ಟೊಟ್ಟಿಗೇ ಓದುವ ಬಗ್ಗೆ ಸಲಹೆಗಳನ್ನು ನೀಡಿ.

ಕಾರ್ತಿಕ್‌ ವಿ., ಊರು ಇಲ್ಲ

ಕಾರ್ತಿಕ್, ಅನಿಮೇಶನ್ ಕುರಿತು ತರಬೇತಿ ನೀಡುವ ನಿಮ್ಮ ಹತ್ತಿರದ ಸಂಸ್ಥೆಯನ್ನು ಸಂಪರ್ಕಿಸಿ ಅವರ ವೇಳಾಪಟ್ಟಿಯನ್ನು ತಿಳಿಯಿರಿ. ನಿಮ್ಮ ಕಾಲೇಜಿನ ಸಮಯದೊಂದಿಗೆ ಅದು ಹೊಂದಿಕೆಯಾದರೆ ಸಂಜೆ ಅಥವಾ ಬೆಳಿಗ್ಗೆ ಆ ಸಂಸ್ಥೆಯಲ್ಲಿ ತರಬೇತಿ ಪಡೆಯಿರಿ.

ಅನಿಮೇಶನ್ ಎನ್ನುವುದು ಕೌಶಲ ಮತ್ತು ಕಲೆ ಆಧಾರಿತವಾದ ಕ್ಷೇತ್ರವಾಗಿದ್ದು, ಅದಕ್ಕೆ ಉತ್ತಮ ತರಬೇತಿ ನೀಡುವ ಸಂಸ್ಥೆ ಮತ್ತು ನಿಮ್ಮ ವೈಯಕ್ತಿಕ ಪರಿಶ್ರಮ ಮುಖ್ಯ. ಉತ್ತಮ ತರಬೇತಿ ನೀಡುವ ಸಂಸ್ಥೆಗಳು ನಿಮ್ಮ ಊರು ಅಥವಾ ಹತ್ತಿರದಲ್ಲಿ ಇರದಿದ್ದರೆ, ನಿಮ್ಮ ಪದವಿ ಮುಗಿದ ನಂತರ ಬೆಂಗಳೂರು ಅಥವಾ ನಿಮ್ಮ ಊರಿಗೆ ಹತ್ತಿರವಾಗುವ ನಗರ ಪ್ರದೇಶದ ಉತ್ತಮ ಸಂಸ್ಥೆಯಲ್ಲಿ ಅನಿಮೇಶನ್ ಕೋರ್ಸ್‌ಗಳನ್ನು ಮಾಡಿ. ಅಲ್ಲಿಯ ತನಕ ನಿಮ್ಮ ವೈಯಕ್ತಿಕ ತಯಾರಿಯನ್ನು ಮುಂದುವರಿಸಿ. ಅದು ನಿಮಗೆ ಮುಂದೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಹಕಾರಿಯಾಗುತ್ತದೆ.

ಅನಿಮೇಶನ್‌ನ ಮೂಲಭೂತ ಅಂಶಗಳು ಡ್ರಾಯಿಂಗ್ (ಸ್ಕೆಚಿಂಗ್)ಗೆ ಸಂಬಂಧಿಸಿರುವುದರಿಂದ ನೀವು ಡ್ರಾಯಿಂಗ್ ಸಂಬಂಧ ತರಬೇತಿಯನ್ನು ಪಡೆಯುವುದು ಉತ್ತಮ. ಹಾಗೆಯೇ ಅನೇಕ ಆನ್‌ಲೈನ್‌ ಕೋರ್ಸ್‌ಗಳು ಕೂಡ ಮುಕ್ತವಾಗಿ ಸಿಗುತ್ತವೆ. ಅದನ್ನು ಕೂಡ ನಿಮ್ಮ ಬಿಡುವಿನ ವೇಳೆಯಲ್ಲಿ ಮಾಡಿಕೊಳ್ಳಿ. ಕೋರ್ಸೇರಾ, (www.coursera.org) ಉಡೆಮಿ (www.udemy.com) ಗಳಂತಹ ಆನ್‌ಲೈನ್‌ ಕಲಿಕಾ ವೆಬ್‌ಸೈಟ್‌ಗಳಲ್ಲಿ ಉಚಿತವಾಗಿ ಅನಿಮೇಶನ್ ಸಂಬಂಧಿತ ಕೋರ್ಸ್‌ಗಳು ಕೂಡ ಲಭ್ಯ. ನೀವು ಇಂತಹ ಕೋರ್ಸ್‌ಗಳಿಂದ ಮೂಲಭೂತ ಕೌಶಲಗಳನ್ನು ಪಡೆದು ಮುಂದೆ ತರಬೇತಿ ಸಂಸ್ಥೆಗಳಿಂದ ಸುಧಾರಿತ ಅಥವಾ ಹೆಚ್ಚಿನ ಕೌಶಲಗಳನ್ನು ಕಲಿತುಕೊಳ್ಳಿ.

ಇದು ಕೇವಲ ಉದ್ಯೋಗ ಕ್ಷೇತ್ರವಲ್ಲದೆ ಕಲಾ ಕ್ಷೇತ್ರವೂ ಆಗಿರುವುದರಿಂದ ಇಲ್ಲಿ ಹೆಚ್ಚಿನ ಸ್ಪರ್ಧೆ ಕೂಡ ಇರುತ್ತದೆ. ಯಾರು ಹೆಚ್ಚು ಸೃಜನಶೀಲತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಾರೆಯೋ ಅವರಿಗೆ ಉತ್ತಮ ಭವಿಷ್ಯ ಇರುತ್ತದೆ. ಹಾಗಾಗಿ ನಿಮಗೆ ಈಗ ಕಾಲೇಜು ಓದುತ್ತ ಕೋರ್ಸ್ ಮಾಡಲು ಆದರೆ ಮಾಡಿ, ಇಲ್ಲವಾದಲ್ಲಿ ಈ ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಬೇಕಾದ ಮೂಲಭೂತ ಅಂಶಗಳಾದ ಸ್ಕೆಚಿಂಗ್, ಕಂಪ್ಯೂಟರ್ ಬೇಸಿಕ್, ಸೃಜನಶೀಲತೆ, ಕಲೆಯ ಕುರಿತಾದ ಓದು, ಆಸಕ್ತಿ ಇತ್ಯಾದಿಗಳನ್ನು ಬೆಳೆಸಿಕೊಳ್ಳಿ. ಶುಭಾಶಯ.

***

ನಾನು ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನಾನು ಮುಂದೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಬಿ.ಎ. ಮಾಡಬಹುದೇ? ನನಗೆ ಬರವಣಿಗೆಯ ಕೌಶಲವಿದ್ದು, ಪ್ರಚಲಿತ ವಿದ್ಯಮಾನದಲ್ಲೂ ಆಸಕ್ತಿಯಿದೆ. ಬೆಂಗಳೂರಿನಲ್ಲಿ ಪತ್ರಿಕೋದ್ಯಮ ಓದಲು ಒಳ್ಳೆಯ ಕಾಲೇಜುಗಳ ಬಗ್ಗೆಯೂ ತಿಳಿಸಿ.

ನಿವೇದಿತ ಕೆ., ಬೆಂಗಳೂರು

ನಿವೇದಿತ, ನೀವು ನಿಮ್ಮ ಆಸಕ್ತಿ ಯಾವುದು, ಯಾವ ಕೌಶಲಗಳು ನಿಮ್ಮಲ್ಲಿ ಉತ್ತಮವಾಗಿವೆ ಎಂದು ತಿಳಿದು ಅವುಗಳ ಆಧಾರದ ಮೇಲೆ ನಿಮ್ಮ ಮುಂದಿನ ಓದು ಮತ್ತು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಬಹಳ ಸಂತಸಕರ ವಿಚಾರ.

ಪಿಯುಸಿ ವಿಜ್ಞಾನದ ನಂತರ ನೀವು ಬಿ.ಎ. ಜರ್ನಲಿಸಮ್ ಮಾಡಬಹುದು. ಕೆಲವು ಕಾಲೇಜುಗಳಲ್ಲಿ ನೇರವಾಗಿ ಸಮೂಹ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಪದವಿ ಕೋರ್ಸ್‌ಗಳು ಇದ್ದರೆ, ಕೆಲವು ಕಾಲೇಜುಗಳಲ್ಲಿ ಪತ್ರಿಕೋದ್ಯಮ, ಮನಃಶಾಸ್ತ್ರ, ಗ್ರಾಮೀಣ ಅಭಿವೃದ್ದಿ, ಅಪರಾಧಶಾಸ್ತ್ರ, ಇಂಗ್ಲಿಷ್ ಇತ್ಯಾದಿ ವಿಷಯಗಳನ್ನು ಹೊಂದಿರುವ ಬಿ.ಎ. ಪದವಿ ಇರುತ್ತದೆ. ಪತ್ರಿಕೋದ್ಯಮ ಇರುವ ಕಾಂಬಿನೇಶನ್ ನೋಡಿಕೊಂಡು ನಿಮಗೆ ಆಸಕ್ತಿ ಇರುವ ಇತರ ವಿಷಯಗಳನ್ನು ಆಯ್ದುಕೊಳ್ಳಿ. ಯಾವುದನ್ನು ವ್ಯಾಸಂಗ ಮಾಡಿದರೂ ಕೂಡ ಮುಂದೆ ಪತ್ರಿಕೋದ್ಯಮದಲ್ಲಿ ಉದ್ಯೋಗ ಅಥವಾ ಮಾಸ್ ಕಮ್ಯುನಿಕೇಶನ್ ಮತ್ತು ಜರ್ನಲಿಸಮ್ (ಎಂ.ಸಿ.ಜೆ.) ಅಥವಾ ಎಂ.ಎ. ಇನ್ ಮೀಡಿಯಾ ಅಂಡ್ ಮಾಸ್ ಕಮ್ಯುನಿಕೇಶನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿಕೊಳ್ಳಬಹುದು.

ಇನ್ನು ಕಾಲೇಜುಗಳ ಬಗ್ಗೆ, ನಿಮ್ಮ ಕೌಶಲಗಳನ್ನು ಹೆಚ್ಚಿಸುವ, ಅನುಭವವನ್ನು ಕೊಡಮಾಡುವ ಸಂಸ್ಥೆಯನ್ನು ಆಯ್ದುಕೊಂಡರೆ ನಿಮಗೆ ಒಳ್ಳೆಯದು. ದೇಶದ ಪ್ರತಿಷ್ಠಿತ ಕಾಲೇಜುಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾ, ಬೆಂಗಳೂರು, ಕ್ರೈಸ್ಟ್ ಕಾಲೇಜು ಬೆಂಗಳೂರು, ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಶನ್, ಪುಣೆ ಅಥವಾ ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆಯಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಯಾ ಕಾಲೇಜುಗಳ ಎನ್.ಐ.ಆರ್.ಎಫ್. ರ‍್ಯಾಂಕಿಂಗ್ ಮುಖಾಂತರ ನೋಡಿ. ಹಾಗೆಯೇ ಈ ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿ ಪಡೆದುಕೊಳ್ಳಿ.

ಇದು ಕೌಶಲ ಮತ್ತು ಜ್ಞಾನಾಧಾರಿತ ಕ್ಷೇತ್ರವಾದ್ದರಿಂದ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು, ನೀವೇ ಸ್ವತಃ ಕೌಶಲ ಮತ್ತು ಜ್ಞಾನವನ್ನು ಅಭಿವದ್ಧಿಪಡಿಸಿಕೊಳ್ಳುವುದು ಮುಖ್ಯ. ಮೊದಲಿಗೆ ಪತ್ರಿಕೋದ್ಯಮದಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂದು ಕಂಡುಕೊಳ್ಳಿ. ಆ ಕ್ಷೇತ್ರಕ್ಕೆ ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ಪಟ್ಟಿ ಮಾಡಿ ಅವುಗಳನ್ನು ಬೆಳೆಸಿಕೊಳ್ಳಿ. ಉದಾಹರಣೆಗೆ ಲಿಖಿತ ಮಾಧ್ಯಮವಾದರೆ ನಿಮ್ಮ ಬರವಣಿಗೆಯ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು, ದೃಶ್ಯ ಮಾಧ್ಯಮವಾದರೆ ಮಾತಿನ ಕೌಶಲವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಆಸಕ್ತಿಯ ವಿಷಯಗಳಾದ ಕ್ರೀಡೆ, ರಾಜಕೀಯ, ಸಾಂಸ್ಕೃತಿಕ, ಸಿನಿಮಾ ಇತ್ಯಾದಿಗಳ ಕುರಿತು ಓದಿಕೊಳ್ಳಬೇಕು. ಯಾವ ಕ್ಷೇತ್ರ ಮತ್ತು ವಿಷಯವನ್ನು ಆಯ್ದಕೊಂಡರೂ ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಎಲ್ಲ ಕ್ಷೇತ್ರಗಳ ಕುರಿತಾಗಿ ಸಾಮಾನ್ಯ ಜ್ಞಾನ ಇರಬೇಕಾಗುತ್ತದೆ. ನೀವು ಈಗಾಗಲೇ ಸೃಜನಶೀಲತೆ ಮತ್ತು ಸಾಮಾನ್ಯ ಜ್ಞಾನದ ಕುರಿತಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದೀರಿ. ಅವುಗಳನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತ, ಅದರ ಜೊತೆಗೆ ಸಂಶೋಧನಾ ಮತ್ತು ಪ್ರಗತಿಪರ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಿ..

ಓದುವಾಗಲೇ ಸ್ಥಳೀಯ ಪತ್ರಿಕೆ, ನಿಮ್ಮ ಕಾಲೇಜು ಪತ್ರಿಕೆ ಅಥವಾ ಸ್ಥಳಿಯ ಚಾನೆಲ್‌ಗಳಲ್ಲಿ ಸ್ವಯಂಸೇವೆಯಿಂದ ಅನುಭವ ಗಿಟ್ಟಿಸಿಕೊಂಡರೆ ಉದ್ಯೋಗ ಪಡೆಯುವ ಅವಕಾಶ ಮತ್ತು ಮುಂದೆ ಅದನ್ನು ನಿರ್ವಹಿಸಲು ಬೇಕಾದ ಸಾಮರ್ಥ್ಯ ಪಡೆಯುವಲ್ಲಿ ಸಹಕಾರಿಯಾಗುತ್ತದೆ. ಪತ್ರಿಕೋದ್ಯಮಕ್ಕೆ ಕೇವಲ ಕಾಲೇಜು ಕಲಿಕೆ ಮಾತ್ರವಲ್ಲದೆ ಸರ್ವತೋಮುಖವಾದ ವ್ಯಕ್ತಿತ್ವ ಬೇಕಿರುವುದರಿಂದ ಅಂತಹ ಅವಕಾಶಗಳನ್ನು ಬಳಸಿಕೊಳ್ಳಿ. ಪಿ.ಸಾಯಿನಾಥ್‌ ಅವರಂತಹ ಸಾಧಕರಿಂದ ಸ್ಫೂರ್ತಿ ಪಡೆಯಿರಿ. ಸಮಾಜದ ಕುರಿತಾದ ಕಾಳಜಿ ಹೊಂದಿರುವ ಪತ್ರಕರ್ತರಾಗಿ ಎಂದು ಈ ಮೂಲಕ ಹಾರೈಸುತ್ತೇನೆ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,
ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು