ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತಂದ ಸಂಕಷ್ಟ: ಶೇ.62ರಷ್ಟು ಕುಟುಂಬಗಳ ಮಕ್ಕಳ ಶಿಕ್ಷಣ ಸ್ಥಗಿತ

15 ರಾಜ್ಯಗಳಲ್ಲಿ 7,235 ಕುಟುಂಬಗಳ ಸಮೀಕ್ಷೆ:
Last Updated 11 ಜುಲೈ 2020, 18:26 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಹಬ್ಬಿದ ಬಳಿಕ 15 ರಾಜ್ಯಗಳಲ್ಲಿ ಶೇಕಡ 62ರಷ್ಟು ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ಪಡೆಯುವುದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಮಕ್ಕಳ ಹಕ್ಕುಗಳ ಕುರಿತಾದ ಸರ್ಕಾರೇತರ ಸಂಸ್ಥೆ ‘ಸೇವ್‌ ದ ಚಿಲ್ಡ್ರನ್‌’ ಈ ಸಮೀಕ್ಷೆ ಕೈಗೊಂಡಿತ್ತು. ಜೂನ್‌ 7ರಿಂದ 30ರವರೆಗೆ 7,235 ಕುಟುಂಬಗಳ ಸಮೀಕ್ಷೆಯನ್ನು ಈ ಸಂಸ್ಥೆ ನಡೆಸಿದೆ.

ಉತ್ತರ ಭಾರತದಲ್ಲಿ ಶೇಕಡ 64 ಮತ್ತು ದಕ್ಷಿಣ ಭಾರತದಲ್ಲಿ ಶೇಕಡ 48ರಷ್ಟು ಮಕ್ಕಳು ಶಿಕ್ಷಣ ಸ್ಥಗಿತಗೊಳಿಸಿದ್ದಾರೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ದೊರೆಯದ ಬಗ್ಗೆಯೂ ಹಲವರು ದೂರಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಾಲೆ ಅಥವಾ ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿ ಬೆಂಬಲ ದೊರೆಯಲಿಲ್ಲ ಎಂದು ಸರಾಸರಿಯಾಗಿ ಐದರಲ್ಲಿನ ಎರಡು ಕುಟುಂಬಗಳು ತಿಳಿಸಿವೆ.

ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಹಲವರಲ್ಲಿ ಸ್ಮಾರ್ಟ್‌ಫೋನ್‌ಗಳು ಇಲ್ಲದಿರುವುದು ಕಂಡು ಬಂದಿದೆ. ಜತೆಗೆ, ಶಾಲೆಗಳು ಮುಚ್ಚಿರುವುದರಿಂದ ನಾಲ್ವರಲ್ಲಿ ಒಂದು ಮಗು ಮನೆಯಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಆಸ್ತಿ ಮಾರಾಟ

ಹಲವರಿಗೆ ಬದುಕು ಸಾಗಿಸುವ ಸಂಕಷ್ಟ ಎದುರಾಗಿದೆ. ಆದಾಯದ ಕೊರತೆಯಿಂದಾಗಿ ಶೇಕಡ 45ರಷ್ಟು ಮಂದಿ ಸಾಲ ಪಡೆಯುವ ಕ್ರಮಕ್ಕೆ ಮುಂದಾಗಿದ್ದಾರೆ. ಹತ್ತು ಮಂದಿಯಲ್ಲಿ ಒಬ್ಬರು ಗೃಹೋಪಯೋಗಿ ವಸ್ತುಗಳು ಮತ್ತು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ.

ಪೌಷ್ಟಿಕ ಆಹಾರದ ಕೊರತೆ

‘ಮಕ್ಕಳಿಗೆ ಪೌಷ್ಟಿಕ ಆಹಾರವೂ ದೊರೆಯುತ್ತಿಲ್ಲ. ಮಧ್ಯಾಹ್ನದ ಬಿಸಿಯೂಟ ದೊರೆಯುತ್ತಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಹುಪಾಲು ಮಕ್ಕಳಿಗೆ ಬೆಂಬಲ ದೊರೆಯುತ್ತಿಲ್ಲ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ’ ಎಂದು ಸಂಸ್ಥೆಯ ಯೋಜನೆಗಳ ನಿರ್ದೇಶಕ ಅನಿಂದಿತ್‌ ರಾಯ್‌ ಚೌಧರಿ ತಿಳಿಸಿದ್ದಾರೆ.

‘ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಿದ್ದಾರೆ. ಅವರಿಗೆ ತಮ್ಮ ಊರಲ್ಲಿ ಮನೆ ಇದೆ. ಆದರೆ, ಉದ್ಯೋಗ ಇಲ್ಲದಂತಾಗಿದೆ. ಆದಾಯ ಇಲ್ಲದೆ ಗ್ರಾಮೀಣ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಈ ರೀತಿಯ ಎಲ್ಲ ಸಮಸ್ಯೆಗಳಿಂದ ಬಾಲಕಾರ್ಮಿಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಮಕ್ಕಳ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆ ಇದೆ. ಬಾಲ್ಯ ವಿವಾಹಗಳು ಹೆಚ್ಚಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆ ವಿವರ

1,722: ಪೂರ್ವ ವಲಯದ ಕುಟುಂಬಗಳು

1,130:ಪಶ್ಚಿಮ ವಲಯದ ಕುಟುಂಬಗಳು

ಶೇಕಡ 40:ನಗರ ಪ್ರದೇಶದ ಮಕ್ಕಳಿಗೆ ಬಿಸಿಯೂಟ ಇಲ್ಲ

ಶೇಕಡ 38: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಿಸಿಯೂಟ ಇಲ್ಲ

ಶೇಕಡ 10; ಕುಟುಂಬಗಳಿಗೆ ಆದಾಯದ ಕೊರತೆ

ಶೇಕಡ 14:ಕುಟುಂಬಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲ

ಶೇಕಡ 80: ಕುಟುಂಬಗಳಲ್ಲಿ ಹಣದ ಕೊರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT