ಸೋಮವಾರ, ಜೂನ್ 1, 2020
27 °C

ಹೆಣ್ಣು ಮಕ್ಕಳ ಕಾಳಜಿಗೆ ‘ಸುಖೀಭವ’

ಮಾನಸ ಬಿ.ಆರ್‌. Updated:

ಅಕ್ಷರ ಗಾತ್ರ : | |

Deccan Herald

ತಿಂಗಳಲ್ಲಿ ನಾಲ್ಕು ದಿನ ಆಕೆ ನೋವು ಅನುಭವಿಸುತ್ತಾಳೆ. ಮಾನಸಿಕ ಹಾಗೂ ದೈಹಿಕ ಬದಲಾವಣೆಗಳಿಗೆ ಒಳಗಾಗುತ್ತಾಳೆ. ಇದರ ನಡುವೆಯೂ, ಅದನ್ನು ತಿನ್ನಬೇಡ, ಇದು ಮಾಡಬೇಡ, ಹೀಗೇ ಇರು, ಹಾಗೆ ಮಾಡು ಎನ್ನುವ ಸಂಕೋಲೆಗಳನ್ನು ಆಕೆ ಎದುರಿಸಬೇಕು. 

ಶಾಲೆಗೆ ಹೋಗುವ ಮಕ್ಕಳಿಗೆ ‘ಮುಟ್ಟು’ ಎನ್ನುವುದು ಕೇಳಲು ಅಸಹ್ಯವಾದ ಪದ. ಇದನ್ನು ಆಗಾಗ ದೊಡ್ಡವರು ಹೇಳುವುದನ್ನು ಕೇಳಿದ್ದರೂ, ಇದರ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲ. ಇದನ್ನು ಹೇಳಿಕೊಡಬೇಕಾದ ತಂದೆ, ತಾಯಿ, ಶಿಕ್ಷಕರೂ ನಾಚಿಕೆಯಲ್ಲಿ ಮುಳುಗಿದ್ದಾರೆ. 

ಇಂಥ ಪರಿಸ್ಥಿತಿಯಿಂದ ಮಕ್ಕಳನ್ನು ಕಾಪಾಡುವ ಉದ್ದೇಶದಿಂದ ಹುಟ್ಟಿಕೊಂಡಿದ್ದು, ‘ಸುಖೀಭವ’ ಸಂಸ್ಥೆ. ಇದು ಸಮಾಜ ಹಾಗೂ ಮಕ್ಕಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವಲ್ಲಿ ತನ್ನದೇ ಹೆಜ್ಜೆ ಇಡುತ್ತಿದೆ. 2014ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ 15ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ದಿಲೀಪ್‌ ಕುಮಾರ್ ಪಟುಬಾಲ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದರು.

ಮುಟ್ಟಾಗಿ 9ನೇ ದಿನದಿಂದ 19ನೇ ದಿನದವರೆಗೆ ಆಕೆಯ ಅಂಡಾಣು, ಗರ್ಭನಾಳಕ್ಕೆ ಬಿಡುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ಆಕೆ ಮಾನಸಿಕವಾಗಿ ಕೆಲವು ಬದಲಾ ವಣೆಗಳಿಗೆ ಒಳಗಾಗುತ್ತಾಳೆ. ಕೋಪ ಮತ್ತು ಅಸಹಜ ಪ್ರತಿಕ್ರಿಯೆಗಳನ್ನು ತೋರುತ್ತಾಳೆ. ಇವೆಲ್ಲವನ್ನೂ ಗಂಡು ಮಕ್ಕಳೂ ತಿಳಿದುಕೊಂಡಿರಬೇಕು.

ಆದ್ದರಿಂದ ಯುವಕರನ್ನೂ ಸಂಸ್ಥೆಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಡಲಾಗಿದೆ. ಅವರಿಗೂ ಫೆಲೋಶಿಪ್‌ ನೀಡಿ ಬೇರೆ ಬೇರೆ ಕಡೆ ಕೆಲಸ ಮಾಡುವಂತೆ ಉತ್ತೇಜನ ನೀಡಲಾಗುತ್ತಿದೆ. ಗಂಡು ಮಕ್ಕಳು ಪುರುಷರಿಗೆ ಈ ಕುರಿತು ತಿಳಿವಳಿಕೆ ನೀಡಲಿದ್ದಾರೆ.

15 ಮಹಿಳೆಯರ ಜೊತೆಗೆ ಯಾದಗಿರಿ, ಧಾರವಾಡ, ಪುಣೆ, ರಾಜಸ್ಥಾನ, ಗುಜರಾತ್‌, ಉತ್ತರ ಪ್ರದೇಶದಲ್ಲಿ ಕೆಲವು ವಿದ್ಯಾರ್ಥಿನಿಯರಿಗೆ ಫೆಲೋಶಿಪ್‌ ನೀಡಿ ಕೆಲಸ ಮಾಡಲು ಹುರಿದುಂಬಿಸಿದೆ. 

ಸಂಸ್ಥೆಯ ಕೆಲಸಗಳೇನು?: ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರು ಮೊದಲು ಕೊಳೆಗೇರಿ, ಬಡತನ ರೇಖೆಗಿಂತ ಕೆಳಗಿರುವ ಜನರು ವಾಸಿಸುವ ಕಡೆಗೆಲ್ಲಾ ಹೋಗುತ್ತಾರೆ. ಅಲ್ಲಿರುವ ಮಕ್ಕಳೊಂದಿಗೆ ಹಾಗೂ ತಾಯಂದಿರ ಜೊತೆ ಮುಟ್ಟಿಗೆ ಸಂಬಂಧಿಸಿದ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಮುಖ್ಯವಾಗಿ ಶಾಲೆಗಳಿಗೆ ಈ ತಂಡ ಭೇಟಿ ಕೊಡಲಿದೆ.

ಏನು ಮಾಡಬೇಕು?

*ಮುಟ್ಟಿನ ಸಂದರ್ಭದಲ್ಲಿ ಎಲ್ಲವನ್ನೂ ತಿನ್ನಬೇಕು. ಹಾಲು, ಮೊಸರು, ಪಪ್ಪಾಯ ತಿನ್ನದಿರುವುದುಸರಿಯಲ್ಲ

* ಮುಟ್ಟಾಗದ 7ರಿಂದ 10ನೇ ತರಗತಿ ಮಕ್ಕಳಾಗಿದ್ದರೆ ಕಡ್ಡಾಯವಾಗಿ ನ್ಯಾಪ್‌ಕಿನ್‌ ಅನ್ನು ಶಾಲೆಗೆ ದಿನವೂ ತೆಗೆದುಕೊಂಡು ಹೋಗುವಂತೆ ಸಲಹೆ

* ನಾಲ್ಕು ತಾಸಿಗೊಮ್ಮೆ ಪ್ಯಾಡ್ ಬದಲಿಸಲೇಬೇಕು

* ಬಳಸಿದ ಪ್ಯಾಡ್‌ಗಳನ್ನು ಪೇಪರ್‌ನಲ್ಲಿ ಸುತ್ತಿ, ಅದರ ಮೇಲೆ X ಚಿಹ್ನೆಯನ್ನು ಬರೆದು ಕಸದಬುಟ್ಟಿಗೆ ಹಾಕಬೇಕು

* ಮುಟ್ಟಾಗುವ ರೀತಿ, ಆದಾಗ ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಹಾಗೂ ಹೆದರದೇ ಶಿಕ್ಷಕರ ಬಳಿ ಹೇಳಿಕೊಳ್ಳುವಂತೆ ಮನವೊಲಿಕೆ

 * ಮುಟ್ಟಿನ ಸಂದರ್ಭದಲ್ಲಿ ದೈಹಿಕ, ಮಾನಸಿಕ ಬದಲಾವಣೆಗೆ ಹೆದರದಿರಿ

ಪೋಷಕರೊಂದಿಗೆ ...

* ಮಕ್ಕಳು ಮುಟ್ಟಾಗುತ್ತಿದ್ದಂತೆ ಹದಿಹರೆಯ ಅವರನ್ನು ಆವರಿಸುತ್ತದೆ. ನೋಡಿದವರನ್ನೆಲ್ಲಾ ಇಷ್ಟಪಡಲು ಆರಂಭಿಸುತ್ತಾರೆ. ಈ ಸಮಯದಲ್ಲಿ ಆಗುವುದು ಪ್ರೀತಿ ಅಲ್ಲ. ಕೇವಲ ಆಕರ್ಷಣೆ ಎನ್ನುವುದನ್ನು ತಂದೆ, ತಾಯಿಗಳೇ ತಿಳಿವಳಿಕೆ ನೀಡುವಂತೆ ಮಾಡುವುದು

*ಸರಿಯಾದ ನ್ಯಾಪ್‌ಕಿನ್‌ ಆಯ್ಕೆ ಕುರಿತು ಮಾಹಿತಿ

ಪರಿಸರ ಕಾಳಜಿ

ಮಾರುಕಟ್ಟೆಯಲ್ಲಿ ಸಿಗುವ ನ್ಯಾಪ್‌ಕಿನ್‌ಗಳನ್ನು ಬಳಸಿ ಬಿಸಾಡುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಇದನ್ನು ತಡೆಯಲು ‘ಸುಖೀಭವ‘ ಹೆಣ್ಣುಮಕ್ಕಳಿಗೆ ಕೆಲವು ಮಾರ್ಗಗಳನ್ನು ಪರಿಚಯಿಸಿದೆ. 

* ‘ಸಾಫ್ಟ್ ಸ್ಕಿನ್‌’: ಕೆಲವು ಕಡೆ ಮಾತ್ರ ಇದು ಲಭ್ಯವಿದೆ. ಇದನ್ನು ಬಟ್ಟೆಯ ರೀತಿಯಲ್ಲಿ ಒಳಉಡುಪಿನಲ್ಲಿ ಬಳಸಬಹುದು. ಎಂಟು ತಾಸು ಇದನ್ನು ಉಪಯೋಗಿಸಬಹುದು. ನೋಡಲು ಪ್ಯಾಡ್ ಮಾದರಿಯಲ್ಲೇ ಇರುತ್ತದೆ. ಇದಕ್ಕೆ ₹250 ಬೆಲೆ ಇದೆ. ಒಂದು ಪ್ಯಾಕ್‌ನಲ್ಲಿ ಎರಡು ಪ್ಯಾಡ್‌ಗಳು ಇರುತ್ತವೆ. ತೊಳೆದು ಬಿಸಿಲು ಅಥವಾ ನೆರಳಿನಲ್ಲೂ ಒಣಗಿಸಬಹುದು. ಒಂದು ವರ್ಷದವರೆಗೂ ಬಳಕೆ ಸಾಧ್ಯ.

*ಮಲ್ಲೇಶ್ವರದಲ್ಲಿ ‘ಮಿಥು’ ಎಂಬ ಸಂಸ್ಥೆ ಇದೆ. ಇವರು ಕೆಲವೊಮ್ಮೆ ಉಚಿತವಾಗಿ ಪ್ಯಾಡ್ ನೀಡುತ್ತಾರೆ. ಕೊಂಡರೆ ₹150. ಇದನ್ನು ಕೂಡ ಬಟ್ಟೆ ರೀತಿಯಲ್ಲಿ ಬಳಕೆ ಮಾಡಬಹುದು. ಒಂದು ಪ್ಯಾಕ್‌ನಲ್ಲಿ ಎರಡು ಪ್ಯಾಡ್ ಇರುತ್ತದೆ. 

* ಟ್ಯಾಂಪೂನ್‌: ಅಮೆರಿಕದಲ್ಲಿ ಇದರ ಬಳಕೆ ಹೆಚ್ಚು. ಚಾಕ್‌ಪೀಸ್‌ ರೀತಿ ಇರುವ ಒಂದು ಸಾಧನ. ಇದನ್ನು ಖಾಸಗೀ ಭಾಗದಲ್ಲಿ ಇಟ್ಟುಕೊಳ್ಳಬೇಕು. ಆಟ ಆಡುವವರು, ದೂರ ಪ್ರಯಾಣಕ್ಕೆಲ್ಲಾ ಇವುಗಳ ಬಳಕೆ ಹೆಚ್ಚು. 

*ಮೆನ್ಸ್‌ಟ್ರಲ್‌ ಕಪ್‌: ಕಪ್‌ ರೀತಿಯ ಒಂದು ಸಾಧನ. ಇದರ ಬೆಲೆ ₹500. ಎಂಟು ತಾಸಿಗೊಮ್ಮೆ ಕಪ್‌ ಅನ್ನು ತೊಳೆದು ಮತ್ತೆ ಬಳಕೆ ಮಾಡಬೇಕು. ಮುಟ್ಟಾಗುವ ದಿನ ಹತ್ತಿರ ಬಂದಾಗ ಈ ಕಪ್‌ ಅನ್ನು ಬಿಸಿನೀರಿನಲ್ಲಿ ಕುದಿಸಿ ಇಟ್ಟುಕೊಂಡಿರಬೇಕು. ಮಾರುಕಟ್ಟೆಯಲ್ಲಿ ‘ಶಿ ಕಪ್‌’ ಎನ್ನುವ ಕಪ್‌ಗಳು ಕೂಡ ಲಭ್ಯ. ಇವುಗಳ ಬಳಕೆಯಿಂದ ಪರಿಸರಕ್ಕೆ ಹಾನಿ ಇಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.