ಮಂಗಳವಾರ, ಡಿಸೆಂಬರ್ 1, 2020
18 °C

Pv Web Exclusive: ಶೀಘ್ರವೇ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ತರಗತಿ ಆರಂಭ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಾದ್ಯಂತ ಪದವಿ ಕಾಲೇಜುಗಳು ಪುನರಾರಂಭಗೊಂಡ ಬೆನ್ನಲ್ಲೇ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳೂ ‘ಆಫ್‌ಲೈನ್‌’ ತರಗತಿಗಳಿಗೆ ಚಾಲನೆ ನೀಡಲು ತುದಿಗಾಲಲ್ಲಿ ನಿಂತಿದ್ದು, ಅಗತ್ಯ ಸಿದ್ಧತೆಯಲ್ಲಿ ತೊಡಗಿವೆ.

ಕೋವಿಡ್‌ ವ್ಯಾಪಕಗೊಂಡ ಪರಿಣಾಮ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಹೇರಿದಾಗಿನಿಂದ ರಾಜ್ಯದಾದ್ಯಂತ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳೂ ‘ಆನ್‌ಲೈನ್‌’ ತರಗತಿಗಳ ಮೊರೆ ಹೋಗಿದ್ದವು. ಇದೀಗ ಪದವಿ ಕಾಲೇಜುಗಳಲ್ಲಿ ತರಗತಿಗಳಿಗೆ ಮತ್ತೆ ಚಾಲನೆ ದೊರೆತ ಹಿನ್ನೆಲೆಯಲ್ಲಿ ಅದೇ, ಮಾನದಂಡಗಳ ಅನ್ವಯ  ತರಗತಿಗಳನ್ನು ಪುನರಾರಂಭಿಸಲು ಈ ಕೇಂದ್ರಗಳು ತಯಾರಿ ನಡೆಸಿವೆ.

ಬೆಂಗಳೂರಿನ ವಿಜಯನಗರ, ಚಂದ್ರಾ ಲೇಔಟ್‌ನಲ್ಲಿ ಇರುವ ಕೆಲವು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು ಇದೇ ವಾರದಲ್ಲಿ ತರಗತಿಗಳಿಗೆ ಚಾಲನೆ ನೀಡಲಿವೆ. ಇನ್ನೂ ಕೆಲವು ಸಂಸ್ಥೆಗಳು ಮುಂದಿನ ವಾರದಿಂದ ಪುನರಾರಂಭಿಸಲು ಯೋಜಿಸಿವೆ.

ಬಹುತೇಕ ಕೋಚಿಂಗ್‌ ಕೇಂದ್ರಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಕಡ್ಡಾಯಗೋಲಿಸಿವೆ. ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಇದ್ದರೆ ಮಾತ್ರ ಕೇಂದ್ರದೊಳಗೆ ಪ್ರವೇಶ ನೀಡಲಿವೆ. ಬ್ಯಾಚ್‌ಗಳ ಸಂಖ್ಯೆಯನ್ನು ಮತ್ತು ಅದರಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಕೆಲ ಸಂಸ್ಥೆಗಳು ನಿರ್ಧರಿಸಿವೆ. ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಬದ್ಧವಾಗಿವೆ. ಈ ನಿಟ್ಟಿನಲ್ಲಿ ಪ್ರತಿ ತರಗತಿಯ ಸಾಮರ್ಥ್ಯದ ಅರ್ಧದಷ್ಟು ವಿದ್ಯಾರ್ಥಿಗಳಿಗಷ್ಟೇ ಪ್ರವೇಶ ಕೊಡಲು ನಿರ್ಧರಿಸಿವೆ.

ಬೆಂಗಳೂರಿನ ಕೆಲ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು ಹೇಗೆ ತಯಾರಿ ನಡೆಸಿವೆ ಎಂಬುದನ್ನು ಅಲ್ಲಿನ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಡಾ. ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್‌ ಸರ್ವಿಸ್

‘ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುವ ಬಹುತೇಕ ಅಭ್ಯರ್ಥಿಗಳು ಪದವೀಧರರಾಗಿರುತ್ತಾರೆ. ಕೋಚಿಂಗ್‌ ಕೇಂದ್ರಗಳು ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೇ ಬರುತ್ತವೆ. ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಕಾಲೇಜುಗಳಲ್ಲಿ ತರಗತಿಗಳ ಆರಂಭಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿ ಮತ್ತು ಎಸ್‌ಒಪಿಗಳನ್ನು ಆಧರಿಸಿ ‘ಡಾ. ರಾಜ್‌ಕುಮಾರ್‌ ಅಕಾಡೆಮಿ ಫಾರ್ ಸಿವಿಲ್‌ ಸರ್ವಿಸ್‌’ ಕೇಂದ್ರದಲ್ಲೂ ತರಗತಿಗಳನ್ನು ಇದೇ 19ರಿಂದ ಪುನರಾರಂಭಿಸಲಿದ್ದೇವೆ. ಅದಕ್ಕೆ ಅಗತ್ಯ ತಯಾರಿಯನ್ನೂ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಯುವರಾಜ್‌ಕುಮಾರ್‌.

ಐಎಎಸ್‌ ಕೋಚಿಂಗ್‌ ಅನ್ನು ನಿತ್ಯ ಎರಡು ಬ್ಯಾಚ್‌ಗೆ ಸೀಮಿತಗೊಳಿಸಿದ್ದೇವೆ. ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಬ್ಯಾಚ್‌ನ ತರಗತಿಗಳು ನಡೆಯುತ್ತವೆ. ಈ ಮೊದಲು ಒಂದು ಬ್ಯಾಚ್‌ಗೆ 220 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, 110 ವಿದ್ಯಾರ್ಥಿಗಳಿಗೆ ಮಿತಿಗೊಳಿಸಿದ್ದೇವೆ. ತರಗತಿಯಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ನೆಗೆಟಿವ್‌ ವರದಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಿತ್ಯ ಪ್ರತಿ ತರಗತಿಯ ನಂತರ ಕೊಠಡಿಯನ್ನು ಸ್ಯಾನಿಟೈಸ್‌ ಮಾಡಲಾಗುವುದು. ಇದೇ ನಿಯಮಗಳಂತೆ ಸಂಸ್ಥೆಯ ಇನ್ನೊಂದು ಕಟ್ಟಡದಲ್ಲಿ ಕೆಎಎಸ್‌ ಕೋಚಿಂಗ್‌ ಅನ್ನೂ ಶೀಘ್ರವೇ ಆರಂಭಿಸುತ್ತೇವೆ.

‘ಆಫ್‌ಲೈನ್‌’ ತರಗತಿಯನ್ನು ಲೈವ್‌ ಸ್ಟ್ರೀಮ್‌ ಮಾಡಲಾಗುತ್ತದೆ. ಅಂದು ತರಗತಿಗೆ ಗೈರು ಹಾಜರಾದವರು ಅಥವಾ ಕ್ವಾರಂಟೈನ್‌ಗೆ ಒಳಗಾದ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ನೇರ ತರಗತಿಯನ್ನ ವೀಕ್ಷಿಸಿ ಅಧ್ಯಯನದಲ್ಲಿ ತೊಡಗಬಹುದು.

ಒಂದು ವೇಳೆ ಕೋವಿಡ್‌ನ ಎರಡನೇ ಅಲೆ ಏನಾದರೂ ಕಂಡು ಬಂದರೆ ಆಫ್‌ಲೈನ್‌ ತರಗತಿಗಳನ್ನು ಮೊಟಕುಗೊಳಿಸಿ, ಆನ್‌ಲೈನ್‌ ತರಗತಿ ಮೂಲಕ ಸಿಲಬಸ್‌ ಪೂರ್ಣಗೊಳಿಸಲಾಗುವುದು ಎಂಬ ಷರತ್ತನ್ನು ಪ್ರವೇಶ ಪತ್ರದಲ್ಲಿ ಸೇರಿಸಿದ್ದೇವೆ. ಅದಕ್ಕೆ ವಿದ್ಯಾರ್ಥಿಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಕೋವಿಡ್‌ ನಿಯಂತ್ರಣ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲನೆ ಮಾಡುವುದರ ಜತೆಗೆ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಪ್ರತಿ ಬ್ಯಾಚ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮೊಟಕುಗೊಳಿಸುವುದರಿಂದ ಆಗುವ ನಷ್ಟವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡುವುದಿಲ್ಲ ಮತ್ತು ಶುಲ್ಕವನ್ನೂ ಹೆಚ್ಚಿಸುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.

ಯುನಿವರ್ಸಲ್‌ ಕೋಚಿಂಗ್‌ ಸೆಂಟರ್‌

ಲಾಕ್‌ಡೌನ್‌ನಂತರ ಆನ್‌ಲೈನ್‌ ತರಗತಿಗಳನ್ನು ನಡೆಸಿದ್ದೇವೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವ ಬಹುತೇಕರು ‘ಆಫ್‌ಲೈನ್‌’ ತರಗತಿ ನಡೆಸುವಂತೆ ಕೆಲ ತಿಂಗಳಿಂದ ಒತ್ತಡ ಹೇರುತ್ತಿದ್ದರು. ಸರ್ಕಾರ ಅನುಮತಿ ನೀಡದ ಕಾರಣ ನಾವು ತರಗತಿಗಳನ್ನು ಪುನರರಾರಂಭಿಸಲು ಆಗಿರಲಿಲ್ಲ. ಪದವಿ ಕಾಲೇಜುಗಳ ಪುನರಾರಂಭಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಿ ನಾವೂ ತರಗತಿಗಳನ್ನು ಆರಂಭಿಸಬಹುದಾ ಎಂಬುದನ್ನು ಮನದಟ್ಟು ಮಾಡಿಕೊಂಡ ಬಳಿಕವಷ್ಟೇ ತರಗತಿಗಳಿಗೆ ಚಾಲನೆ ನೀಡುತ್ತೇವೆ ಎನ್ನುತ್ತಾರೆ ಯುನಿವರ್ಸಲ್‌ ಕೋಚಿಂಗ್‌ ಸೆಂಟರ್‌ನ ಸಂಸ್ಥಾಪಕ ಉಪೇಂದ್ರ ಶೆಟ್ಟಿ.

ಪ್ರತಿ ತರಗತಿಗಳಲ್ಲಿ 150ರ ಬದಲಿಗೆ 70 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗುವುದು. ತರಗತಿಗೆ ಬರುವ ವಿದ್ಯಾರ್ಥಿಗಳು ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರಬೇಕು. ನಿತ್ಯ ಕೊಠಡಿಗಳ ಸ್ಯಾನಿಟೈಸ್‌ ಸೇರಿದಂತೆ ಸರ್ಕಾರದ ನಿಯಮಗಳನ್ನು ಸಂಸ್ಥೆಯಲ್ಲಿ ಪಾಲಿಸಲಾಗುವುದು ಎನ್ನುತ್ತಾರೆ ಅವರು.

ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ

ಎಂಟು ತಿಂಗಳಿಂದ ನಷ್ಟದ ನಡುವೆಯೂ ಸಂಸ್ಥೆಯು ಆನ್‌ಲೈನ್‌ ಕಲಿಕೆಗೆ ಒತ್ತು ನೀಡಿತ್ತು. ಆಫ್‌ಲೈನ್‌ ಕಲಿಕೆಗೆ ತೋರಿದಷ್ಟು ಆಸಕ್ತಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಆನ್‌ಲೈನ್‌ ಕಲಿಕೆಗೆ ತೋರಿಸಿಲ್ಲ. ಆಫ್‌ಲೈನ್‌ ತರಗತಿಗಳಿಗೆ ಸಂಸ್ಥೆಯಲ್ಲಿ 300ರಿಂದ 400 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು, ಆದರೆ ಆನ್‌ಲೈನ್‌ ತರಗತಿಗಳಿಗೆ ಪ್ರವೇಶ ಪಡೆಯುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟು. ಇದೀಗ ಪದವಿ ತರಗತಿಗಳು ಆರಂಭವಾಗಿರುವುದರಿಂದ ನಾವೂ ಆಫ್‌ಲೈನ್‌ನಲ್ಲಿ ತರಗತಿಗಳನ್ನು ಆರಂಭಿಸಬಹುದಾಗಿದೆ. ಹಾಗಾಗಿ ಅಗತ್ಯ ಸಿದ್ಧತೆಯನ್ನೂ ನಮ್ಮ ಸಂಸ್ಥೆಯೂ ಮಾಡಿಕೊಳ್ಳುತ್ತಿದೆ ಎನ್ನುತ್ತಾರೆ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಮೋಹನ್‌ ಕುಮಾರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು