ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕಾಲೇಜು ಶಿಕ್ಷಣ ಸೊರಗುವುದಕ್ಕೆ ಒಂದು ‘ಪ್ರಭಾರಿ’ ಕಾರಣ!

ಕೇಡರ್ ಪ್ರಾಂಶುಪಾಲರ ನೇಮಕಕ್ಕೆ ಹಿಡಿದ ‘ಗ್ರಹಣ’ಕ್ಕೆ ಕೊನೆ ಎಂದು?
Last Updated 1 ಸೆಪ್ಟೆಂಬರ್ 2020, 6:34 IST
ಅಕ್ಷರ ಗಾತ್ರ

ನಮ್ಮ ಉನ್ನತ ಶಿಕ್ಷಣ, ಉನ್ನತ ಸ್ಥಿತಿಯಲ್ಲಿ ಇಲ್ಲ. ಶಿಕ್ಷಣದ ಗುಣಮಟ್ಟವನ್ನು ಎತ್ತರಿಸಲೇಬೇಕು ಎಂಬ ಮಾತುಗಳು ಬಹಳ ಕಾಲದಿಂದಲೂ ಕೇಳಿಬರುತ್ತಿವೆ. ಗುಣಮಟ್ಟ ಸುಧಾರಣೆಗೆ ಮತ್ತು ಅದನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡಲು ಹತ್ತಾರು ಯೋಜನೆಗಳು, ಉಸ್ತುವಾರಿ ವ್ಯವಸ್ಥೆಗಳು, ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಮಾರ್ಗಸೂಚಿಗಳು, ನ್ಯಾಕ್‌ (National Assessment and Accreditation Council– NAAC)... ಹೀಗೆ ನಾನಾ ವ್ಯವಸ್ಥೆಗಳು ಹುಟ್ಟಿಕೊಂಡಿವೆ, ಉಪಕ್ರಮಗಳು ಜಾರಿಗೆ ಬಂದಿವೆ. ಆದರೆ ಯೋಜನೆಗಳಿಗೂ ಅವು ಅನುಷ್ಠಾನಗೊಳ್ಳುವ ರೀತಿಗೂ ನಮ್ಮಲ್ಲಿ ಅಗಾಧ ಅಂತರ ಇರುತ್ತದೆ ಎಂಬುದು ಎಲ್ಲರೂ ಬಲ್ಲ ಸಂಗತಿ. ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಂತೂ ಇದು ಕಳವಳಕಾರಿ ಹಂತ ಮುಟ್ಟಿದೆ ಎಂಬುದು ಕಹಿಯಾದರೂ ಒಪ್ಪಿಕೊಳ್ಳಲೇಬೇಕಾದ ವಾಸ್ತವ.

ಕಾಲೇಜು ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಟ್ಟಕ್ಕೆ ಏರಿಸಬೇಕೆಂಬ ಮಾತು, ಹೋಬಳಿ ಹಂತದ ಕಾಲೇಜುಗಳ ವೇದಿಕೆಯಿಂದ ದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಂಗಳದವರೆಗೂ ಮೊಳಗುತ್ತಲೇ ಇದೆ. ಪದವಿ ಶಿಕ್ಷಣದ ನ್ಯೂನತೆಗಳಿಗೆ ಸೆಮಿಸ್ಟರ್ ಪದ್ಧತಿಯು ಪರಿಣಾಮಕಾರಿ ಮದ್ದು ಎಂದು ನೀತಿನಿರೂಪಕರು, ಶಿಕ್ಷಣ ತಜ್ಞರು ತೀರ್ಮಾನಿಸಿದ್ದರಿಂದ ನಾಲ್ಕು ತಿಂಗಳಿಗೊಂದು ಪರೀಕ್ಷೆಯಂತೆ ವರ್ಷಕ್ಕೆ ಎರಡು ಪರೀಕ್ಷೆಗಳನ್ನೂ ಮತ್ತು ಪ್ರತೀ ಸೆಮಿಸ್ಟರ್‌ನಲ್ಲೂ ಮೂರು ಕಿರು ಪರೀಕ್ಷೆಗಳನ್ನೂ ನಡೆಸುವ ಕ್ರಮ ಜಾರಿಗೆ ಬಂದಿದೆ. ಪರೀಕ್ಷೆಗಳು, ಅವುಗಳ ಯೋಜನೆ, ಪಠ್ಯ, ಪ್ರಶ್ನೆಪತ್ರಿಕೆ, ಮೌಲ್ಯಮಾಪನ, ಅಂಕಗಳು... ಇವುಗಳ ಸುತ್ತ ಗಮನ ಗಿರಕಿ ಹೊಡೆಯುತ್ತಿದೆಯೇ ವಿನಾ ವಿದ್ಯಾರ್ಥಿಗಳ ನೈಜ ಸಾಮರ್ಥ್ಯ, ಕೌಶಲ, ಕಲಿಕಾಸಕ್ತಿಯನ್ನು ಅರಳಿಸುವಂತಹ ವಾತಾವರಣ ಸೃಷ್ಟಿಗೆ ಅಲ್ಲ.

ಪರಿಣಾಮವಾಗಿ ಕಾಲೇಜು ಶಿಕ್ಷಣ ಹಳ್ಳ ಹಿಡಿದಿದೆ. ಇದಕ್ಕೆ, ನಮ್ಮನ್ನು ಆಳುವ ಮಂದಿಯ ಅಸಡ್ಡೆ ಹಾಗೂ ದೂರದೃಷ್ಟಿ ಕೊರತೆಯೇ ಮೊದಲ ಮತ್ತು ಪ್ರಧಾನ ಕಾರಣ.ಒಂದು ನಿದರ್ಶನವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಿತಿಗತಿಯನ್ನು ಒರೆಗೆ ಹಚ್ಚೋಣ. ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ಒಟ್ಟು 3.45 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆ ಪೈಕಿ ಶೇಕಡ 54ರಷ್ಟು ವಿದ್ಯಾರ್ಥಿಗಳು ಹೆಣ್ಣುಮಕ್ಕಳು.ವೃತ್ತಿ ಶಿಕ್ಷಣದ ಎಲ್ಲ ಬಗೆಯ ಸೆಳೆತಗಳ ನಡುವೆಯೂ ನಮ್ಮ ದೇಶದಲ್ಲಿನ ಅಪಾರ ಯುವಸಮೂಹಕ್ಕೆ ಇಂದಿಗೂ ಬಿ.ಎ., ಬಿ.ಎಸ್ಸಿ, ಬಿ.ಕಾಂನಂತಹ ಪದವಿ ಶಿಕ್ಷಣವು ಅನಿವಾರ್ಯ ಎಂಬಂತಾಗಿದೆ. ಇದಕ್ಕೆ ಕಾರಣಗಳನ್ನು ಕೆದಕಿದರೆ ಮಹಾಪ್ರಬಂಧಕ್ಕೆ ಅದೇ ಒಂದು ವಸ್ತು ಆಗಬಲ್ಲದು. ಆದರೆ, ಈ ಕಾಲೇಜುಗಳಿಗೆ ಕೇಡರ್‌ ನೆಲೆಯಲ್ಲಿ ಹಕ್ಕು–ಬಾಧ್ಯತೆ ನಿರ್ವಹಿಸಲು, ಮಾರ್ಗದರ್ಶನ ಮಾಡಲು ಬೇಕಾದ ಕಾಯಂ ಪ್ರಾಂಶುಪಾಲರೇ ಇಲ್ಲ! ತಾತ್ಕಾಲಿಕ ತಲೆಯಾಳುಗಳ ಅಧೀನದಡಿ ದೇಕುತ್ತಿವೆ ಈ ಕಾಲೇಜುಗಳು.

ಇಡೀ ರಾಜ್ಯದಲ್ಲಿ ಪ್ರಾಂಶುಪಾಲರ ಕಾಯಂ (ಕೇಡರ್) ಹುದ್ದೆಯಲ್ಲಿ ಇರುವವರು ಬರೀ ಮೂವರು ಮಾತ್ರ. ಅವರು ಕೂಡ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಆಯುಕ್ತರ ಕಚೇರಿಯ ಆಡಳಿತ ನಿರ್ವಹಣೆಯ ವಿವಿಧ ಹೊಣೆಗಾರಿಕೆಗಳಿಗೆ ಹೆಗಲು ಕೊಟ್ಟಿದ್ದಾರೆ. ಹಾಗಾದರೆ, ಕಾಲೇಜುಗಳ ನಿರ್ವಹಣಾ ವ್ಯವಸ್ಥೆ ಹೇಗೆ? ಅದಕ್ಕೆ ವಿಲಕ್ಷಣ ವ್ಯವಸ್ಥೆಯನ್ನು ಸರ್ಕಾರ ಶೋಧಿಸಿ ಆಚರಣೆಯಲ್ಲಿ ಇರಿಸಿದೆ.

ಕಾಯಂ ಪ್ರಾಂಶುಪಾಲರಾಗಿ ಆ ಕೇಡರ್‌ನವರ್‍ಯಾರೂ ಕಾಲೇಜುಗಳಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ, ಒಒಡಿ ಪ್ರಾಂಶುಪಾಲ ಎಂಬ ಪರಿಕಲ್ಪನೆಯನ್ನು ಸೃಷ್ಟಿಸಿದೆ. ಯಾವುದೋ ಊರಿನ, ಯಾವುದೋ ಒಂದು ಕಾಲೇಜಿನಲ್ಲಿ ಬೋಧನೆ ಮಾಡುತ್ತಿರುವ ಕಾಯಂ ಸಹಪ್ರಾಧ್ಯಾಪಕರನ್ನು ಒಒಡಿ ಹೆಸರಿನಲ್ಲಿ ಮತ್ತೊಂದು ಊರಿನ, ಇನ್ಯಾವುದೋ ಕಾಲೇಜಿಗೆ ಪ್ರಭಾರಿ ಪ್ರಾಂಶುಪಾಲರಾಗಿ ನಿಯೋಜಿಸುವ ವ್ಯವಸ್ಢೆ ಇದು. ರಾಜ್ಯದಲ್ಲಿ ಸುಮಾರು 300 ಕಾಲೇಜುಗಳು ಇಂತಹ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ.

ಒಒಡಿ ವ್ಯವಸ್ಥೆಯಡಿ ಹೊರಗಿನಿಂದ ಬಂದು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಲು ಯಾರೂ ಲಭ್ಯವಿಲ್ಲದಿದ್ದಾಗ ಅಥವಾ ಒಒಡಿ ಪ್ರಾಂಶುಪಾಲರಾಗಿ ನಿಯೋಜನೆಗೊಂಡವರ ಸೇವಾಜ್ಯೇಷ್ಠತೆಯನ್ನು ಪ್ರಶ್ನಿಸಿದಂತಹ ಪ್ರಕರಣಗಳಲ್ಲಿ ಆಯಾ ಕಾಲೇಜಿನ ಹಿರಿಯ ಸಹಪ್ರಾಧ್ಯಾಪಕರೊಬ್ಬರನ್ನು ಇನ್‌ಚಾರ್ಜ್ ಪ್ರಾಂಶುಪಾಲರನ್ನಾಗಿ ನಿಯೋಜಿಸುವಂತಹ ಕ್ರಮ ಕೂಡ ಇದೆ.ವಿಚಿತ್ರವೆಂದರೆ, ಪ್ರೊಬೇಷನರಿ ಅವಧಿ ಪೂರ್ಣಗೊಳಿಸದೇ ಇರುವವರಿಗೂ ಕೆಲವೆಡೆ ಪ್ರಭಾರಿ ಪ್ರಾಂಶುಪಾಲರ ಹೊಣೆ ವಹಿಸಲಾಗಿದೆಯಂತೆ. ಅವರನ್ನು ಬಿಟ್ಟರೆ ಬೇರೆ ಕಾಯಂ ಅಧ್ಯಾಪಕರೇ ಆ ಕಾಲೇಜಿನಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ.

2008ರ ನಂತರ ಪ್ರಾಂಶುಪಾಲರ (ಕೇಡರ್) ಹುದ್ದೆಗಳಿಗೆ ನೇಮಕವೇ ಆಗದಿರುವುದು ಈ ದುಃಸ್ಥಿತಿಗೆ ಕಾರಣ ಎಂಬ ಅಧ್ಯಾಪಕರ ಅಳಲು, ನೋವು, ಅಸಹಾಯಕತೆಯು ಶಿಕ್ಷಣ ಇಲಾಖೆಯ ಕಿವಿಗೆ ಬೀಳದೇ ಇರುವುದು ಸೋಜಿಗದ ಸಂಗತಿ.ಪ್ರಾಂಶುಪಾಲರ ನೇಮಕದಿಂದ ಬೊಕ್ಕಸದ ಮೇಲೆ ದೊಡ್ಡ ರೀತಿಯಲ್ಲಿ ಆರ್ಥಿಕ ಹೊರೆ ಬೀಳಲಿದೆ ಎಂಬ ಕಾರಣಕ್ಕೆ ಸರ್ಕಾರ ಹಿಂದೇಟು ಹಾಕುತ್ತಿರಬಹುದೇ ಎಂಬ ಅನುಮಾನದ ಹುತ್ತ ಬಗೆದರೆ ಅದರಲ್ಲೂ ಹುರುಳಿಲ್ಲ ಎಂಬುದು ಮನವರಿಕೆ ಆಗುತ್ತದೆ. ‘ಅಸೋಸಿಯೇಟ್‌ ಪ್ರೊಫೆಸರ್ ಹಂತಕ್ಕೆ ಏರುವಷ್ಟರಲ್ಲಿ ಪ್ರಾಂಶುಪಾಲರ ಶ್ರೇಣಿಗೆ ತಲುಪಿಬಿಟ್ಟಿರುತ್ತೇವೆ. ಪ್ರಾಂಶುಪಾಲರ ಭತ್ಯೆ ಅಂತ ತಿಂಗಳಿಗೆ ಹೆಚ್ಚುವರಿಯಾಗಿ ₹ 3000 ಕೊಡಮಾಡುವುದು ಬಿಟ್ಟರೆ ಉಳಿದಂತೆ ಇನ್ಯಾವ ಹೊರೆಯೂ ಇಲ್ಲ’ ಎನ್ನುತ್ತಾರೆ ಪ್ರಾಧ್ಯಾಪಕರು.

ಯುಜಿಸಿ ನಿಯಮಗಳ ಅಡಿ ಅರ್ಹತೆಯನ್ನು ಖಾತರಿಪಡಿಸಿಕೊಂಡು ಪ್ರಾಂಶುಪಾಲರ ಹುದ್ದೆಗೆ ನೇಮಿಸಲು ಯಾವ ಅಡ್ಡಿಯೂ ಇಲ್ಲ. ಅಡ್ಡಿಯಾಗಿರುವುದು ಸರ್ಕಾರದ ಮನೋಧೋರಣೆ ಮಾತ್ರ ಎಂಬ ಅಸಮಾಧಾನವು ಬೋಧಕ ವಲಯದಲ್ಲಿ ಮಡುಗಟ್ಟಿದೆ. ನೂರಾರು ಮಕ್ಕಳ ಭವಿಷ್ಯ ರೂಪಿಸುವಂತಹ ಕಾಲೇಜುಗಳಿಗೆ ಕಾಯಂ ಮುಖ್ಯಸ್ಥರನ್ನೇ ನೇಮಿಸಲು ಆಗದಿರುವ ಈ ವ್ಯವಸ್ಥೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನಿರೀಕ್ಷಿಸುವುದಾದರೂ ಹೇಗೆ?

ಪ್ರಾಂಶುಪಾಲರ ನೇಮಕಕ್ಕೆ ಆಡಳಿತ ವ್ಯವಸ್ಥೆಯು ಬೆನ್ನು ತಿರುಗಿಸಿದ ಈ 12 ವರ್ಷಗಳ ಅವಧಿಯಲ್ಲಿ ರಾಜ್ಯದ ಮೂರೂ ಪ್ರಧಾನ ಪಕ್ಷಗಳ ನೇತೃತ್ವದ ಸರ್ಕಾರಗಳು ಆಳ್ವಿಕೆ ನಡೆಸಿವೆ. ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಇವರೆಲ್ಲರೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಬಸವರಾಜ ರಾಯರಡ್ಡಿ, ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಜಿ.ಟಿ. ದೇವೇಗೌಡ ಅಂಥವರು ಉನ್ನತ ಶಿಕ್ಷಣ ಖಾತೆಯ ಹೊಣೆ ನಿಭಾಯಿಸಿದ್ದಾರೆ. ಈಗ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೇ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಕಾಲೇಜುಗಳಿಗೆ ಕಾಯಂ ಪ್ರಾಂಶುಪಾಲರನ್ನು ನೇಮಿಸಬೇಕಾದುದು ಅಗತ್ಯ ಎಂಬುದುಇವರ್‍ಯಾರಿಗೂ ಅನ್ನಿಸದೇ ಹೋದುದು ಹೇಗೆ? ಪಕ್ಷ, ಸಿದ್ಧಾಂತ, ವ್ಯಕ್ತಿ ಎಂಬ ಯಾವ ಭೇದವೂ ಇಲ್ಲದೆ ಒಂದೇ ಬಗೆಯಲ್ಲಿ ಯೋಚಿಸುವಂತೆ, ಅದಕ್ಕೆ ಅಂಟಿಕೊಳ್ಳುವಂತೆ ಮಾಡಿದ ಆ ಸಮಾನ ಅಂಶ ಯಾವುದಿರಬಹುದು? ಈ ಯಕ್ಷಪ್ರಶ್ನೆಗೆ ನಿರ್ದಿಷ್ಟ ಉತ್ತರ ಕಂಡುಕೊಂಡರೆ ಪ್ರಾಂಶುಪಾಲರ ನೇಮಕ ಆಗದೇ ಇರುವುದಕ್ಕೆ ಸಂಬಂಧಿಸಿದ ಕಗ್ಗಂಟು ಬಿಡಿಸಲು ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT