ಸೋಮವಾರ, ಆಗಸ್ಟ್ 2, 2021
26 °C

ಸ್ಪರ್ಧಾತ್ಮಕ ಪರೀಕ್ಷೆಸಮಯ ನಿರ್ವಹಣೆ ಮುಖ್ಯ

ಅರುಣ ಬ. ಚೂರಿ ಬಾದಾಮಿ Updated:

ಅಕ್ಷರ ಗಾತ್ರ : | |

ಒಂದು ಬ್ಯಾಂಕ್ ಪರೀಕ್ಷೆ ಅಥವಾ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಗಮನಿಸಿದಾಗ ಮೊದಲ ಯತ್ನದಲ್ಲಿ ಈ ಪರೀಕ್ಷೆಯಲ್ಲಿ ಸಫಲರಾದ ಅಭ್ಯರ್ಥಿಗಳು ಇರುತ್ತಾರೆ. ಹಾಗೆಯೇ ಕಟ್ಟ ಕಡೆಯ ಯತ್ನದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳೂ ಇರುತ್ತಾರೆ. ಇಬ್ಬರಿಗೂ ಇರುವುದು ಒಂದೇ ಜ್ಞಾನ; ಆದರೆ ಅದನ್ನು ಅರ್ಥೈಸಿಕೊಳ್ಳಲು ತೆಗೆದುಕೊಂಡ ಸಮಯ ವಿಭಿನ್ನ ಹಾಗೂ ಈ ವ್ಯತ್ಯಾಸ ದಿನಚರಿಯಿಂದ ಹಿಡಿದು ಪರೀಕ್ಷೆಯಲ್ಲಿ ಸರಿಯಾದ ಪ್ರಶ್ನೆಗಳ ಆಯ್ಕೆಗಳವರೆಗೂ ಇರುತ್ತದೆ.

ಒಂದು ಸಣ್ಣ ಉದಾಹರಣೆ ನೋಡುವುದಾದರೆ ಕೆಲವೊಂದು ಪ್ರಶ್ನೆಗಳು ಒಂದು ಸ್ಲೈಡ್‌ನಲ್ಲಿ ಇದ್ದರೂ ಅದನ್ನು ಸಂಪೂರ್ಣ ಓದಲು, ಡ್ರ್ಯಾಗ್‌ ಮಾಡುವ ಅವಶ್ಯಕತೆ ಇರುತ್ತದೆ. ಇಲ್ಲಿ ಪ್ರಶ್ನೆ ಬಹಳ ಸುಲಭವಾಗಿ ಇದ್ದರೂ ಅರ್ಥೈಸಿಕೊಳ್ಳಲು ಬೇಕಾದ ಸಮಯ ತುಲನಾತ್ಮಕವಾಗಿ ಹೆಚ್ಚು ಇರುತ್ತದೆ. ಹೀಗಾಗಿ ಒಂದು ಅಂಕಕ್ಕಾಗಿ ಒಂದು ನಿಮಿಷ ವ್ಯಯಿಸುವ ಬದಲು ಪ್ರಶ್ನೆಯನ್ನು ರಿವ್ಯೂನಲ್ಲಿ ಇಟ್ಟು ಅಷ್ಟೇ ಸಮಯದಲ್ಲಿ ಸರಳವಾದ 2–3 ಪ್ರಶ್ನೆಗಳಿಗೆ ಉತ್ತರಿಸುವುದು ಸೂಕ್ತ. ಪ್ರಿಲಿಮ್ಸ್‌ನಲ್ಲಿಯೇ ಪೈಪೋಟಿ ಜಾಸ್ತಿ ಇರುವುದರಿಂದ ಇಂತಹ ಹಲವಾರು ಸುಲಭ ವಿಧಾನಗಳೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿ ಪ್ರಯತ್ನವನ್ನು ಮುಂದುವರೆಸಿ ಮೇನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.

ಬ್ಯಾಂಕಿಂಗ್ ಕ್ಷೇತ್ರದ ಪರೀಕ್ಷೆಗಳಲ್ಲಿ ಪೈಪೋಟಿ ಎಷ್ಟಿದೆ ಎಂದರೆ ಈ ಮೊದಲು ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ರೀಸನಿಂಗ್‌ ಮತ್ತು ಇಂಗ್ಲಿಷ್‌ ಎಲ್ಲ ವಿಷಯ ಸೇರಿ ಒಂದು ಗಂಟೆ ನೀಡುತ್ತಿದ್ದರು. ಇಂಗ್ಲಿಷ್‌ನಲ್ಲಿ ದುರ್ಬಲರಿದ್ದ ವಿದ್ಯಾರ್ಥಿಗಳು ಮೊದಲ ಎರಡು ವಿಷಯಗಳನ್ನು ಸಂಪೂರ್ಣ ಅಧ್ಯಯನ ಮಾಡಿ 45– 50 ನಿಮಿಷ ಈ ಎರಡು ವಿಷಯಗಳಿಗಾಗಿ ಮೀಸಲಿಟ್ಟು ಕೊನೆಯ 10– 15 ನಿಮಿಷಗಳಲ್ಲಿ ಇಂಗ್ಲಿಷ್ ವಿಭಾಗದ ತಮಗೆ ಗೊತ್ತಿರುವ ಕೆಲವೇ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಉತ್ತೀರ್ಣ ಹೊಂದುವಲ್ಲಿ ಸಫಲರಾಗುತ್ತಿದ್ದರು. ಆದರೆ ಈಗ ಪರೀಕ್ಷಾ ವಿಧಾನ ಬದಲಿಸಿದ ಪರೀಕ್ಷಾ ಮಂಡಳಿ ಮೂರು ವಿಷಯಗಳಿಗೂ ಪ್ರತ್ಯೇಕವಾಗಿ 20-20-20 ನಿಮಿಷ ಗಳನ್ನು ಮೀಸಲಿರಿಸಿದೆ.

ದಿನಪತ್ರಿಕೆ ಓದಿ

ಬ್ಯಾಂಕಿಂಗ್ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಇಂಗ್ಲಿಷ್ ವಿಷಯದಲ್ಲಿ ದೌರ್ಬಲ್ಯ ಹೊಂದಿರುವವರು ಕೆಲವು ಇಂಗ್ಲಿಷ್‌ ದಿನಪತ್ರಿಕೆಗಳ ಸಂಪಾದಕೀಯಗಳನ್ನು ಓದುವುದು ಒಳಿತು ಮತ್ತು ಅದರಲ್ಲಿ ಬರುವ ಹೊಸ ಹೊಸ ಪದಗಳನ್ನು ಕನ್ನಡದಲ್ಲಿ ನೋಟ್ಸ್ ಮಾಡಿಕೊಳ್ಳಬೇಕು. ಇದು ಇಂಗ್ಲಿಷ್ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಬಹಳ ಸಹಕಾರಿಯಾಗುತ್ತದೆ.

ಸದ್ಯ ಸರ್ಕಾರಿ ಹುದ್ದೆಗಳಿಗೆ ನಡೆಯುವ ಫಿಲ್ಟ್ರೇಶನ್ ನೋಡುವುದಾದರೆ ಅಭ್ಯರ್ಥಿ ಸಲ್ಲಿಸಿರುವ ಅರ್ಜಿ ಸ್ವೀಕೃತ ಆಗಿದೆಯೋ ಇಲ್ಲವೋ ಎಂಬುದರಿಂದ ಹಿಡಿದು ಮೊದಲನೆಯ ಹಂತ, ಎರಡನೇ ಹಂತದ ಪರೀಕ್ಷೆ ಹಾಗೂ ಇಂಟರ್‌ವ್ಯೂ, ದೈಹಿಕ ಪರೀಕ್ಷೆ (ಅಗತ್ಯವಿದ್ದಲ್ಲಿ) ಮತ್ತು ಪ್ರಮಾಣ ಪತ್ರ ಪರಿಶೀಲನೆ – ಇಲ್ಲಿಯವರೆಗೂ ನಡೆಯುವ ಎಲ್ಲ ಪರೀಕ್ಷೆ ಹಾಗೂ ಪರಿಶೀಲನೆಯಲ್ಲಿ ಉತ್ತಮ ಪೈಪೋಟಿ ನೀಡಿ ಉತ್ತೀರ್ಣರಾದಾಗ ಮಾತ್ರ ಹುದ್ದೆ ದೊರಕುವುದು. ಕೆಲವೊಮ್ಮೆ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಲಕ್ಷಗಟ್ಟಲೆ ಅರ್ಜಿಗಳು ಬಂದಾಗ ಅಭ್ಯರ್ಥಿಗಳನ್ನು ಗುರುತಿಸಲು ಪರೀಕ್ಷಾ ಸ್ಥಳಗಳನ್ನು ಹೊರ ರಾಜ್ಯಗಳಲ್ಲಿ ನಿಗದಿಪಡಿಸುವುದೂ ಉಂಟು.

ಸ್ಪರ್ಧಾತ್ಮಕ ಪರೀಕ್ಷೆಗಳು ವರ್ಷದಲ್ಲಿ ಸಾಕಷ್ಟು ಇರುತ್ತವೆ. ಅವುಗಳಲ್ಲಿ ಎಲ್ಲ ಹುದ್ದೆಗಳಿಗೂ ಅರ್ಜಿ ಹಾಕುವುದು ಖಂಡಿತ ಒಳ್ಳೆಯದಲ್ಲ. ಇವುಗಳಲ್ಲಿ ಸಾಕಷ್ಟು ಭಿನ್ನತೆ ಇರುತ್ತದೆ. ಉದಾಹರಣೆಗೆ ಪಠ್ಯಕ್ರಮ, ಕೆಲಸದ ವೈಖರಿ, ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ, ಕಣ್ಣು ಹಾಗೂ ಮಾನಸಿಕ ಪರೀಕ್ಷೆ– ಇವೆಲ್ಲವುಗಳ ಸಂಪೂರ್ಣ ವಿವರ ಪಡೆದುಕೊಂಡು ನಮಗಿಷ್ಟವಾದ ಹಾಗೂ ಅರ್ಹತೆ ಹೊಂದಿರುವ ಯಾವುದಾದರೂ ಒಂದು ಪರೀಕ್ಷೆಗೆ ಮಾತ್ರ ಅರ್ಜಿ ಸಲ್ಲಿಸಿ ಅದೇ ಪರೀಕ್ಷೆಗೆ ಗಂಭೀರವಾಗಿ ತಯಾರಿ ನಡೆಸುವುದು ಉತ್ತಮ.

ಅಧ್ಯಯನ ಸಾಮಗ್ರಿಗಳು

ನಾಗರಿಕ ಸೇವಾ ಪರೀಕ್ಷೆ ತಯಾರಿ ನಡೆಸಬೇಕೆನ್ನುವವರು ಪದವಿಯ ಕೊನೆಯ ಸೆಮಿಸ್ಟರ್‌ನಿಂದಲೇ ಸಂಬಂಧಿಸಿದ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳಬೇಕು ಹಾಗೂ ಪ್ರಾರಂಭದಲ್ಲಿ ನಕಾರಾತ್ಮಕ ಯೋಚನೆಗೆ ಅವಕಾಶ ನೀಡಲೇಬಾರದು. ಯಾವುದೇ ವಿವರಣಾತ್ಮಕ ವಿಷಯವಾಗಿರಲಿ ಅಥವಾ ಅಣಕು ಪರೀಕ್ಷೆ ಇರಲಿ. ಕಾನ್ಸೆಪ್ಟ್ ಕ್ಲಿಯರೆನ್ಸ್ ಬಹು ಮುಖ್ಯವಾಗಿರುವುದರಿಂದ ಯಾವುದೇ ಒಂದು ಕಾನ್ಸೆಪ್ಟ್ ಅರ್ಥ ಮಾಡಿಕೊಳ್ಳಲು ವಿವಿಧ ಸೂಕ್ತ ಪುಸ್ತಕಗಳನ್ನು ಅಭ್ಯಸಿಸಬೇಕೇ ಹೊರತು, ಯಾವುದೇ ಒಂದು ನಿರ್ದಿಷ್ಟ ಪುಸ್ತಕದ ಮೇಲೆ ಅವಲಂಬಿತವಾಗಿರುವುದು ಬೇಡ. ಉದಾಹರಣೆಗೆ ಸಬ್ಜೆಕ್ಟ್ 1 ಗಾಗಿ ಎಬಿಸಿ ಪುಸ್ತಕ, ಸಬ್ಜೆಕ್ಟ್ 2 ಗಾಗಿ ಎಕ್ಸ್‌ವೈಝೆಡ್‌ ಪುಸ್ತಕ.. ಈ ರೀತಿ ಓದುವುದು ಒಳಿತಲ್ಲ.

ಪ್ರಶ್ನೆಗಳಿಗೆ ಉತ್ತರಿಸಲು ಶಾರ್ಟ್‌ಕಟ್ ಅಧ್ಯಯನ ಒಳ್ಳೆಯದಲ್ಲ. ಇದು ಎಲ್ಲ ಸಮಯದಲ್ಲೂ ಉತ್ತರ ಕೊಡಲಾರದು ಹಾಗೂ ಇದಕ್ಕೆ ನಿರ್ದಿಷ್ಟ ನಿಯಮಗಳು ಇರುತ್ತವೆ. ಹೀಗಾಗಿ ಕಾನ್ಸೆಪ್ಟ್ ಮೇಲೆ ಅವಲಂಬಿತವಾಗಿರುವುದು ಒಳ್ಳೆಯದು. ಕಾನ್ಸೆಪ್ಟ್ ಕ್ಲಿಯರೆನ್ಸ್‌ಗಳಿಗಾಗಿ 6 –12ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಅಭ್ಯಸಿಸುವುದು ಬಹಳ ಸೂಕ್ತ. ಈ ಪಠ್ಯಕ್ರಮವೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿ ಹೊಂದಲು ಅತ್ಯಂತ ಸಹಾಯಕಾರಿ.

ಅಣಕು ಪರೀಕ್ಷೆಗೆ ವೆಬ್‌ಸೈಟ್‌

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರಲಿ, ಪರೀಕ್ಷೆಯ ಪಠ್ಯಕ್ರಮದ ಅಧ್ಯಯನ ನಡೆಸಿ, ಅದರನುಸಾರ ಕಾನ್ಸೆಪ್ಟ್ ಪ್ರಕಾರ ಅಭ್ಯಸಿಸಿ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ. ಅನೇಕ ಟೆಸ್ಟ್ ಸೀರೀಸ್ ವೆಬ್‌ಸೈಟ್‌ಗಳು ನೀವು ತೆಗೆದುಕೊಂಡ ಪರೀಕ್ಷೆಯ ವಿಶ್ಲೇಷಣೆಯನ್ನು ನೀಡುತ್ತವೆ. ನಿರ್ದಿಷ್ಟ ಪರೀಕ್ಷೆಯಲ್ಲಿ ಸರಳ ಪ್ರಶ್ನೆಗಳು ಹಾಗೂ ತರ್ಕಬದ್ಧ ಪ್ರಶ್ನೆಗಳ ಸಂಖ್ಯೆ ಮತ್ತು ಅವುಗಳಿಗೆ ನೀವು ನೀಡಿದ ಉತ್ತರಗಳ ಸಂಖ್ಯೆ ಹಾಗೂ ನಿಮ್ಮ ಅಂಕ, ಎಕ್ಯುರಸಿ, ಪ್ರಯತ್ನ, ಸರಿ ಹಾಗೂ ತಪ್ಪು ಉತ್ತರ, ಸಮಯ, ರ‍್ಯಾಂಕ್‌ ದೊರಕುವುದರಿಂದ ಇಂತಹ ವೆಬ್‌ಸೈಟ್ ಗಳ ಮೂಲಕ ದಿನಕ್ಕೆ ಕನಿಷ್ಠ ಪಕ್ಷ 1–2 ಅಣಕು ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ನಿಮ್ಮ ಬಲ ಹಾಗೂ ದೌರ್ಬಲ್ಯವನ್ನು ತಿಳಿದುಕೊಂಡು ಸರಳ, ಮಧ್ಯಮ ಹಾಗೂ ಕಷ್ಟಕರ ಕಾನ್ಸೆಪ್ಟ್‌ಗಳನ್ನು ವಿಂಗಡಿಸಿ ಅದರ ಅನುಸಾರ ಪ್ರಯತ್ನ ಮುಂದುವರೆಸಿ.

ಮೊದಲ ಬಾರಿಗೆ ಕಾನ್ಸೆಪ್ಟ್ ಅಧ್ಯಯನ ಮಾಡುವಾಗಲೇ ಟಿಪ್ಪಣಿ ಮಾಡುವುದು ಸೂಕ್ತ. ಇದರಿಂದ ಪರೀಕ್ಷೆಗೆ ಹತ್ತಿರವಾದಂತೆ ಸಂಪೂರ್ಣ ವಿಷಯಗಳನ್ನು ಪುನರ್‌ಮನನ ಮಾಡಲು ಬಹಳ ಸುಲಭ. ಇದು ಒಂದೇ ವಾಕ್ಯದಲ್ಲಿದ್ದರೆ ಬಹಳ ಉಪಯೋಗ. ತಕ್ಷಣಕ್ಕೆ ಎಲ್ಲ ವಿಷಯಗಳನ್ನು ನೆನಪಿಸಿಕೊಳ್ಳಬಹುದು. ಪರೀಕ್ಷೆ ಹತ್ತಿರ ಇದ್ದಾಗ ಹೊಸ ಕಾನ್ಸೆಪ್ಟ್ ಅಧ್ಯಯನ ಬೇಡ. ವಿಷಯಗಳನ್ನು ಟಿಪ್ಪಣಿಗಳ ಸಹಾಯದಿಂದ ಪುನರ್‌ಮನನ ಮಾಡುವುದು ಪರೀಕ್ಷೆಯ ಸಫಲತೆಗೆ ಅತ್ಯಂತ ಸಹಾಯಕಾರಿ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ

ಪ್ರಿಲಿಮ್ಸ್‌ನಿಂದ ಮೇನ್ಸ್‌ನವರೆಗೆ ಸ್ಪರ್ಧೆ ಸಾಕಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಹೆಚ್ಚೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಬದಲಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಸ್ಪರ್ಧೆಯಲ್ಲಿ ಉಳಿಯುವುದೇ ಸೂಕ್ತ. ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿರುವುದರಿಂದ ಹೆಚ್ಚು ಹೆಚ್ಚು ತಪ್ಪು ಉತ್ತರ ನೀಡುತ್ತಾ ಹೋದಂತೆ ಸರಿಯುತ್ತರಗಳ ಅಂಕ ಕುಸಿಯುತ್ತಾ ಹೋಗುತ್ತದೆ. ಕೊನೆಗೆ ನಿಮಗಿಂತ ಕಡಿಮೆ ಪ್ರಶ್ನೆಗಳಿಗೆ ಉತ್ತರಿಸಿದ ಅಭ್ಯರ್ಥಿಯ ಅಂಕಗಳಿಗಿಂತ ಕಡಿಮೆ ಅಂಕ ಪಡೆದು ಸ್ಪರ್ಧೆಯಿಂದ ಹೊರ ಹೋಗುವ ಸಾಧ್ಯತೆ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು