ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ದಿನಪತ್ರಿಕೆ ಓದಿಗೂ ಕ್ರಮವಿರಲಿ

Last Updated 5 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಪತ್ರಿಕೆ ಓದುವ ರೀತಿ ಕೂಡ ಒಂದು ಕಲೆ. ಓದುವಾಗ ನಿಮ್ಮ ದೃಷ್ಟಿಕೋನ ಪರೀಕ್ಷೆಯತ್ತ ಇರಬೇಕು. ಅದಕ್ಕೊಂದು ಕ್ರಮವಿರಬೇಕು. ಅಂದರೆ ಮಾತ್ರ ನೀವು ಪರೀಕ್ಷೆಯ ಸಾಮಾನ್ಯ ಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ.

ಸ್ಪರ್ಧಾತ್ಮಕ ಪರೀಕ್ಷೆ, ಅದು ಯಾವುದೇ ಇರಲಿ, ಎಷ್ಟು ಸಿದ್ಧತೆ ಮಾಡಿದರೂ ಸಾಲದು. ತರಬೇತಿ, ಅಣಕು ಪರೀಕ್ಷೆ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು.. ಒಂದು ಕಡೆಯಾದರೆ ನಿರಂತರ ಓದು ಇನ್ನೊಂದು ಕಡೆ. ಅದರಲ್ಲೂ ಸಾಮಾನ್ಯ ಜ್ಞಾನ, ಪ್ರಸಕ್ತ ವಿದ್ಯಮಾನದ ಕುರಿತು ನಿತ್ಯ ಅಪ್‌ಡೇಟ್‌ ಆಗುತ್ತಲೇ ಇರಬೇಕು. ಪರೀಕ್ಷೆಯಲ್ಲಿ ಯಾವುದರ ಕುರಿತು ಪ್ರಶ್ನೆ ಬರುತ್ತದೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ಹಾಗಾದರೆ ಈ ಸಾಮಾನ್ಯ ಜ್ಞಾನ ಹಾಗೂ ಪ್ರಸಕ್ತ ವಿದ್ಯಮಾನದ ಕುರಿತು ಮಾಹಿತಿ ಕಲೆ ಹಾಕಲು ಏನು ಮಾಡಬೇಕು? ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೂ ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳನ್ನು ಓದುವುದು ಕಡ್ಡಾಯ. ದಿನಪತ್ರಿಕೆಯ ಓದು ಎಷ್ಟು ಸರಳ, ಅದಕ್ಕೇನು ಸಲಹೆಗಳು ಬೇಕಾಗಿಲ್ಲ ಎಂಬುದು ಸಾಮಾನ್ಯವಾಗಿ ಆಕಾಂಕ್ಷಿಗಳು ಕೇಳುವ ಪ್ರಶ್ನೆ. ಆದರೆ ಹೇಗೆ ಓದಬೇಕು, ಯಾವುದನ್ನು ಓದಬೇಕು, ಎಷ್ಟು ಸಮಯ ಮೀಸಲಿಡಬೇಕು.. ಎಂಬುದನ್ನು ತಿಳಿದುಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವವರಿಗೆ ಸುಲಭವಾಗುತ್ತದೆ.

ನಿರಂತರ ಓದು
ವರ್ತಮಾನ ಪತ್ರಿಕೆಯ ಓದು ಕೇವಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಮಾತ್ರವಲ್ಲ, ಕೆಲವು ಕ್ರಮಗಳನ್ನು ಅನುಸರಿಸಿದರೆ ನೇಮಕಾತಿಯ ಪ್ರತಿಯೊಂದು ಪ್ರಕ್ರಿಯೆಯಲ್ಲೂ ನೆರವಿಗೆ ಬರುತ್ತದೆ ಎಂದರೆ ಅಚ್ಚರಿಪಡಬೇಕಾಗಿಲ್ಲ. ಆದರೆ ಈ ಓದು ನಿರಂತರವಾಗಿರಬೇಕು. ಖ್ಯಾತ ಪತ್ರಿಕೆಗಳಲ್ಲಿ ಅಂಕಣಕಾರರು, ಖ್ಯಾತನಾಮರು, ಅನುಭವಿ ಪತ್ರಕರ್ತರು ಬರೆಯುವ ಲೇಖನಗಳು, ಸಂಪಾದಕೀಯಗಳು ಮಾತ್ರವಲ್ಲ, ಕೆಲವೊಮ್ಮೆ ಓದುಗರು ಬರೆಯುವ ಪತ್ರಗಳು, ಅಭಿಪ್ರಾಯಗಳು, ಅಲ್ಲಿ ನಡೆಯುವ ಸಂವಾದಗಳು ಕೂಡ ಅಪಾರ ಜ್ಞಾನವನ್ನು ಒದಗಿಸುತ್ತವೆ. ಇಂತಹ ಲೇಖನಗಳು ಅಥವಾ ಸುದ್ದಿಗಳು ಒಂದು ವಿಷಯದ ಮೇಲೆ ನೀವು ಹೆಚ್ಚು ಮಾಹಿತಿ ಸಂಗ್ರಹಿಸಲು ನೆರವಾಗುತ್ತವೆ. ಜೊತೆಗೆ ಅದರಲ್ಲಿ ಬಳಸುವ ಶಬ್ದಗಳು, ಗ್ರಾಮರ್‌ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ‘ವರ್ಬಲ್‌ ಎಬಿಲಿಟಿ’ ವಿಭಾಗದಲ್ಲಿ ನೀವು ಹೆಚ್ಚು ಅಂಕ ಗಳಿಸಲು ಸಹಾಯಕ.

ಪರೀಕ್ಷೆಯಲ್ಲಿ ಮಾತ್ರವಲ್ಲ, ನಂತರ ನಡೆಯುವ ಸಂದರ್ಶನಗಳಲ್ಲೂ ಕೂಡ ಪ್ರಸಕ್ತ ವಿದ್ಯಮಾನಗಳ ಕುರಿತೇ ಪ್ರಶ್ನೆಗಳು ಇರುತ್ತವೆ. ಇತ್ತೀಚೆಗೆ ಎಂಬಿಎ ಕಾಲೇಜ್‌ಗಳು, ಐಐಎಂಗಳಲ್ಲಿ ನಡೆಯುವ ಪ್ರವೇಶ ಪರೀಕ್ಷೆ ಪ್ರಕ್ರಿಯೆಯಲ್ಲಿ ನಡೆಯುವ ಗುಂಪು ಚರ್ಚೆಯಲ್ಲಿ ಕೂಡ ಪ್ರಸಕ್ತ ವಿದ್ಯಮಾನಗಳ ಕುರಿತ ವಿಷಯವನ್ನೇ ಕೊಟ್ಟಿರುತ್ತಾರೆ. ಹೀಗಾಗಿ ನಿಯಮಿತವಾದ ದಿನಪತ್ರಿಕೆ ಓದು ಪ್ರಮುಖವಾದ ಮಾಹಿತಿ, ಅಂಕಿ– ಅಂಶಗಳನ್ನು ಸಂಗ್ರಹಿಸಲು ಉಪಯುಕ್ತ. ಇವುಗಳನ್ನು ನೀವು ಪರೀಕ್ಷೆಗಳಲ್ಲಿ ಮಾತ್ರವಲ್ಲ, ಸಂದರ್ಶನ, ಪ್ರಬಂಧ ಮಂಡನೆಯಲ್ಲೂ ಬಳಸಬಹುದು.

ಹಾಗಾದರೆ ದಿನಪತ್ರಿಕೆಗಳನ್ನು ಯಾವ ರೀತಿ ಓದಬೇಕು? ಪತ್ರಿಕೆಗಳಲ್ಲಿ ಬರುವ ಸುದ್ದಿಯಿರಲಿ, ಲೇಖನವಿರಲಿ, ಅದು ನಿಮ್ಮ ಪರೀಕ್ಷೆಯ ದೃಷ್ಟಿಯಿಂದ ಎಷ್ಟು ಉಪಯುಕ್ತ, ಯಾವ ರೀತಿ ಪ್ರಾಮುಖ್ಯ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ. ನೀವು ಎದುರಿಸಬೇಕಾದ ಪರೀಕ್ಷೆಯ 3–4 ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಿ. ಅದರ ಸಾಮಾನ್ಯ ಜ್ಞಾನ ವಿಭಾಗದ ಮೇಲೆ ಕಣ್ಣು ಹಾಯಿಸಿ. ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಎದುರಾಗಬಹುದು ಎಂಬುದರ ಕುರಿತು ನಿಮಗೊಂದು ಪಕ್ಷಿನೋಟ ಸಿಗುತ್ತದೆ.

ಯಾವ ವಿಭಾಗಕ್ಕೆ ಆದ್ಯತೆ?

ನೀವು ದಿನಪತ್ರಿಕೆಗಳಲ್ಲಿರುವ ವಿಭಾಗಗಳನ್ನು ನೋಡಿಕೊಂಡು ಆದ್ಯತೆ ನೀಡಬೇಕು.

ಮುಖಪುಟ: ಈ ಪುಟದಲ್ಲಿ ಮುಖ್ಯ ಸುದ್ದಿಗಳಿರುತ್ತವೆ. ಜೊತೆಗೆ ಕೆಲವೊಂದು ರೋಚಕ ಸುದ್ದಿಗಳಿಗೂ ಸ್ಥಾನವಿರುತ್ತದೆ. ನೀವು ನಿಮಗೆ ಬೇಕಾದ ಸುದ್ದಿಗಳನ್ನು ಗುರುತಿಸಿಕೊಂಡು ಓದಬೇಕು.

ನಗರ ಹಾಗೂ ಸ್ಥಳೀಯ ಸುದ್ದಿಗಳು: ಪರೀಕ್ಷೆಯ ದೃಷ್ಟಿಯಿಂದ ಇವು ಅಷ್ಟು ಉಪಯುಕ್ತವಲ್ಲ.

ಸಂಪಾದಕೀಯ ಮತ್ತು ಅಭಿಪ್ರಾಯ ಬರಹ: ನಿಮ್ಮ ತಿಳಿವಳಿಕೆ ಹೆಚ್ಚಿಸಲು, ಭಾಷಾ ಕೌಶಲ ಅಭಿವೃದ್ಧಿಪಡಿಸಲು, ಪ್ರಮುಖ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಇದು ಬಹು ಮುಖ್ಯ. ಇವು ಸಂದರ್ಶನದಲ್ಲಿ ಹೆಚ್ಚು ಉಪಯುಕ್ತ. ಏಕೆಂದರೆ ಮಾಹಿತಿಗಿಂತ ಹೆಚ್ಚು ವಿಶ್ಲೇಷಣೆಯಿರುತ್ತದೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ: ಇವು ಪರೀಕ್ಷೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತ.

ವಾಣಿಜ್ಯ ಮತ್ತು ಹಣಕಾಸು ಸುದ್ದಿ: ಎಂಬಿಎ ಪ್ರವೇಶ ಪರೀಕ್ಷೆಗೆ ಹೆಚ್ಚು ಉಪಯುಕ್ತ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ವಿಭಾಗದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಲು ಇದನ್ನು ಓದಿದರೆ ಸುಲಭವಾಗುತ್ತದೆ.

ಕ್ರೀಡೆ: ಪ್ರಮುಖ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪಂದ್ಯಾವಳಿ ಬಗ್ಗೆ ಮಾಹಿತಿ ಇರುತ್ತದೆ.

ಪತ್ರಿಕೆ ಓದುವಾಗ ಪ್ರಮುಖ ಅಂಶಗಳ ಬಗ್ಗೆ ಚಿಂತಿಸಿ, ವಿಶ್ಲೇಷಿಸುವುದನ್ನು ರೂಢಿ ಮಾಡಿಕೊಳ್ಳಿ. ಆಗ ನಿಮ್ಮಲ್ಲಿ ಅದರ ಬಗ್ಗೆ ಇನ್ನೊಂದಿಷ್ಟು ಪ್ರಶ್ನೆಗಳು ಮೂಡಿ ಹೆಚ್ಚಿನ ಮಾಹಿತಿಗಾಗಿ ಹುಡುಕಾಡಲು ಸಾಧ್ಯ.

ಪತ್ರಿಕೆ ಓದುವುದು ಸುಲಭ. ಆದರೆ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಹೀಗಾಗಿ ನೀವು ದಿನಪತ್ರಿಕೆ ಓದುವಾಗ ಕೈಯಲ್ಲೊಂದು ಪೆನ್‌ ಮತ್ತು ನೋಟ್‌ಬುಕ್‌ ಇಟ್ಟುಕೊಳ್ಳಿ. ನಿತ್ಯ ಒಂದರಿಂದ ಒಂದೂವರೆ ತಾಸು ಪತ್ರಿಕೆ ಓದಲು ಮೀಸಲಿಟ್ಟುಕೊಂಡು ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಳ್ಳಿ.ನೋಟ್ಸ್‌ ಮಾಡಿಕೊಳ್ಳುವಾಗ ಉದ್ದುದ್ದ ಮಾಹಿತಿ ಬೇಡ. ಕೆಲವೇ ಶಬ್ದಗಳಲ್ಲಿ ಬರೆದುಕೊಂಡರೆ ಅನುಕೂಲ.

ರಾಜಕೀಯ: ಲೋಕಸಭೆ, ರಾಜ್ಯಸಭೆಯಲ್ಲಿ ಪಾಸ್‌ ಆಗುವ ಪ್ರಮುಖ ಮಸೂದೆಗಳು, ಸಂವಿಧಾನದ ಅಧಿನಿಯಮಗಳಿಗೆ ಆಗುವ ತಿದ್ದುಪಡಿಗಳು, ಕೇಂದ್ರ ಸರ್ಕಾರ ಜಾರಿ ಮಾಡುವ ಯೋಜನೆಗಳು, ಇತ್ತೀಚೆಗೆ ನಡೆದ ಚುನಾವಣೆ, ಉನ್ನತ ಸ್ಥಾನಗಳಿಗೆ ನೇಮಕಾತಿ ಆದವರ ಹೆಸರನ್ನು ಬರೆದುಕೊಳ್ಳಿ.

ಅಂತರರಾಷ್ಟ್ರೀಯ ಸುದ್ದಿ: ವಿದೇಶಗಳಲ್ಲಿ ನಡೆಯವ ವಿದ್ಯಮಾನಗಳು, ಬಿಕ್ಕಟ್ಟು, ಜಾಗತಿಕ ಶೃಂಗಸಭೆಗಳು, ನಿರ್ಣಯಗಳು. ಅವುಗಳ ಜೊತೆ ಭಾರತದ ಸಂಬಂಧ, ಆರ್ಥಿಕ ಹಾಗೂ ರಾಜಕೀಯ ನೀತಿ, ದ್ವಿಪಕ್ಷೀಯ ಸಂಬಂಧಗಳು.

ಆರ್ಥಿಕ ಮತ್ತು ವಾಣಿಜ್ಯ: ಇತ್ತೀಚೆಗೆ ಮಂಡಿಸಿದ ಬಜೆಟ್‌, ಹಣದುಬ್ಬರ, ಆರ್ಥಿಕ ಹಿಂಜರಿತ, ಜಿಡಿಪಿ, ಪ್ರಮುಖ ಕಂಪನಿಗಳ ವಹಿವಾಟು.

ಕ್ರೀಡೆ: ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದವರು.

ತಂತ್ರಜ್ಞಾನ, ಸಿನಿಮಾ, ಸೆಲೆಬ್ರಿಟಿಗಳು, ಪ್ರಮುಖ ಆಚರಣೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT