ಭಾನುವಾರ, ಆಗಸ್ಟ್ 1, 2021
28 °C

ಪರೀಕ್ಷಾ ಕೊಠಡಿಯಲ್ಲಿ ‘ಕೂಲಿಂಗ್‌ ಟೈಂ’

ಶ್ರೀಲತ ಎಸ್. Updated:

ಅಕ್ಷರ ಗಾತ್ರ : | |

Prajavani

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿವರವನ್ನು ಭರ್ತಿ ಮಾಡಿದ ಮೇಲೆ 15 ನಿಮಿಷಗಳು ಸಿಗುತ್ತವೆ. ಆಗ ತಮ್ಮಲ್ಲಿರುವ ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಬೋರ್ಡ್ ಪರೀಕ್ಷೆಗಳಲ್ಲಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು 30 ನಿಮಿಷಗಳ ಮುಂಚಿತವಾಗಿ ಪರೀಕ್ಷೆ ಕೊಠಡಿಗೆ ಹೋಗುತ್ತಾರೆ. ಇನ್ವಿಜಿಲೇಟರ್ ವಿದ್ಯಾರ್ಥಿಗಳಿಗೆ ಅವರ ಹೆಸರು, ಕ್ರಮಾಂಕ, ಪರೀಕ್ಷೆಯ ಹೆಸರು.. ಇತ್ಯಾದಿ ವಿವರಗಳನ್ನು ಬರೆಯಲು ನಿರ್ದೇಶಿಸಿ, ನಂತರ ಸ್ವಯಂ ಪರಿಶೀಲಿಸಿ ಹಸ್ತಾಕ್ಷರ ಹಾಕುತ್ತಾರೆ. ಉತ್ತರ ಬರೆಯುವ 15 ನಿಮಿಷಗಳ ಮೊದಲು ಪ್ರಶ್ನೆಪತ್ರಿಕೆ ನೀಡುತ್ತಾರೆ. ಈ 15 ನಿಮಿಷಗಳು ‘ಕೂಲಿಂಗ್’ ಸಮಯ. ನಿಜ ಅರ್ಥದಲ್ಲಿಯೂ ಸಹ ಮನಸ್ಸನ್ನು ಆತಂಕ, ಆತುರದಿಂದ ಶಮನಗೊಳಿಸಿ, ಶಾಂತವಾಗಿಸುವ ಸಮಯ. ಈ ಸಮಯದಲ್ಲಿ ಉತ್ತರ ಬರೆಯುವ ಅವಕಾಶವಿಲ್ಲ. ಈ ಸಮಯವನ್ನು ಗುಣಾತ್ಮಕವಾಗಿ, ಹೆಚ್ಚು ಪ್ರಯೋಜನಕಾರಿಯಾಗುವಂತೆ ಅರ್ಥಾತ್ ಹೆಚ್ಚು ಅಂಕ ಗಳಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಕೆಲವು ಟಿಪ್ಸ್ ಇಲ್ಲಿವೆ.

* ಪ್ರಶ್ನೆಪತ್ರಿಕೆಯನ್ನು ನಿಧಾನವಾಗಿ ಗಮನವಿಟ್ಟು ಏಕಾಗ್ರತೆಯಿಂದ, ಪದಶಃ ಓದಿ.

* ನಿಧಾನವಾಗಿ ಉಸಿರಾಡುತ್ತಾ ಓದಿ. ಯಾವುದೇ ಆತಂಕ, ಗಾಬರಿಗೆ ಒಳಗಾಗಬೇಡಿ.

* ಅದರ ಉತ್ತರ ಏನೆಂದು ಮನಸ್ಸಿಗೆ ತಂದುಕೊಂಡು, ಮುಂದಿನ ಪ್ರಶ್ನೆಯನ್ನು ಓದಿ. ಹಾಗೇನಾದರೂ ಯಾವುದಾದರೂ ಪ್ರಶ್ನೆಗೆ ತಕ್ಷಣವೇ ಉತ್ತರ ಹೊಳೆಯದಿದ್ದಲ್ಲಿ, ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪ್ರಯತ್ನಿಸಬೇಡಿ. ಅದನ್ನು ಅಲ್ಲಿಗೇ ಬಿಟ್ಟು ಮುಂದಿನ ಪ್ರಶ್ನೆ ಓದಿ. ಹಿಂದಿನ ಪ್ರಶ್ನೆಯನ್ನು ಮನಸ್ಸಿನಿಂದ ಸಂಪೂರ್ಣವಾಗಿ ಹೊರಹಾಕಿ. ಇಲ್ಲದಿದ್ದರೆ ಕಣ್ಣು ಮುಂದಿನ ಪ್ರಶ್ನೆಯನ್ನು ನೋಡುತ್ತಿದ್ದರೂ ಮನಸ್ಸು ಹಿಂದಿನ ಪ್ರಶ್ನೆಯನ್ನೇ ಮೆಲುಕು ಹಾಕುತ್ತಿರುತ್ತದೆ.

* ಯಾವ ಪ್ರಶ್ನೆಗೆ ಉತ್ತರ ಚೆನ್ನಾಗಿ ಬರೆಯಬಲ್ಲೆ ಎಂಬ ವಿಶ್ವಾಸವಿದೆಯೋ ಅದನ್ನು ಮನಸ್ಸಿನಲ್ಲೇ ಪಟ್ಟಿ ಮಾಡಿಕೊಳ್ಳಿ.

* ಯಾವುದಕ್ಕೆ ಎಷ್ಟು ಸಮಯ ತನಗೆ ಬರೆಯಲು ಬೇಕಾಗಬಹುದು ಎಂಬುದನ್ನೂ ಅಂದಾಜು ಮಾಡಿ.

* ಮನಸ್ಸಿನಲ್ಲೇ ಯಾವ ಪ್ರಶ್ನೆಗಳನ್ನು ಮೊದಲು ಬರೆದರೆ ತನಗೆ ಖಚಿತವಾಗಿ ಅಂಕ ದೊರೆಯುವ ಸಾಧ್ಯತೆ ಇದೆಯೋ ಆ ಪ್ರಶ್ನೆಯ ಭಾಗದಿಂದ ಪ್ರಾರಂಭಿಸಿ. (ಒಂದು ಭಾಗದ ಪ್ರಶ್ನೆಗಳ ಉತ್ತರ ಒಂದೇ ಕಡೆ ಇರಬೇಕೆಂಬುದು ನೆನಪಿನಲ್ಲಿರಲಿ). ಯಾವ ಪ್ರಶ್ನೆಗೆ ಉತ್ತರ ಸ್ವಲ್ಪ ಗೊಂದಲ ಮೂಡಿಸುತ್ತಿದೆ ಅಥವಾ ಯಾವ ಸೂತ್ರಗಳು, ಅದರ ಘಟಕಗಳು ಸರಿಯಾಗಿ ನೆನಪಿನಲ್ಲಿಲ್ಲ ಅದನ್ನು ಕೊನೆಯಲ್ಲಿ ಬರೆಯಬಹುದು.. ಆದರೆ ಅದನ್ನೇ ಮತ್ತೆ ಮೆಲುಕು ಹಾಕುವ ಪ್ರಯತ್ನ ಬೇಡ. ಬರೆಯಲು ಪ್ರಾರಂಭ ಮಾಡಿದಾಗ ತಾನಾಗಿಯೇ ಉತ್ತರ ಮನಸ್ಸಿಗೆ ಗೋಚರವಾಗುತ್ತದೆ.

* ಈ ಸಮಯದಲ್ಲಿಯೇ ಯಾವ ಪ್ರಶ್ನೆಗೆ ಚಿತ್ರ ಬರೆಯಬೇಕು, ವಿವರಣೆ ಬೇಕು, ಸಮಸ್ಯೆ ಬಿಡಿಸಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಚಿತ್ರಣ ಮೂಡಿಸಿಕೊಳ್ಳಿ.

ಉಪ ಪ್ರಶ್ನೆಗಳತ್ತ ಗಮನ

ಯಾವ ಪ್ರಶ್ನೆಗಳಲ್ಲಿ ಎರಡು, ಮೂರು ಉಪ ಪ್ರಶ್ನೆಗಳು ಇವೆ ಎನ್ನುವುದನ್ನು ಗಮನಿಸಿ. ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಉತ್ತರ ಗೊತ್ತಿದ್ದರೂ ಸಹ, ಕೆಲವು ಉಪ ಪ್ರಶ್ನೆಗಳನ್ನು ಅವಸರದಲ್ಲಿ ಬಿಟ್ಟುಬಿಡುತ್ತಾರೆ. ಮುಖ್ಯ ಪ್ರಶ್ನೆಯಲ್ಲಿ ವ್ಯಾಖ್ಯಾನ ಕೇಳಿ, ಅದರ ಉಪಪ್ರಶ್ನೆಯಲ್ಲಿ ಉದಾಹರಣೆಯನ್ನು ಕೇಳಿರಬಹುದು. ಮುಖ್ಯ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿ ತಾನು ಆ ಪ್ರಶ್ನೆಗೆ ಪೂರ್ಣವಾಗಿ ಉತ್ತರ ಬರೆದಾಗಿದೆಯೆಂದು ಭಾವಿಸಿ ಮುಂದಿನ ಪ್ರಶ್ನೆಗೆ ಉತ್ತರ ಬರೆಯಲು ಪ್ರಾರಂಭಿಸುತ್ತಾನೆ. ಆದ್ದರಿಂದ ಈ ಸಮಯದಲ್ಲಿ ಉಪಪ್ರಶ್ನೆಗಳನ್ನು ಗಮನಿಸಿ.

ಹೀಗೆ ಮಾಡಿದಾಗ ಮನಸ್ಸು ತಾನಾಗಿಯೇ ಶಾಂತವಾಗಿ, ಆತ್ಮವಿಶ್ವಾಸ ಮೂಡುತ್ತದೆ. ಹೃದಯದ ಬಡಿತ ನಿಧಾನವಾಗಿ, ಉತ್ತರಪತ್ರಿಕೆಯನ್ನು ತೆರೆಯುವ ಸೂಚನೆ ಸಿಕ್ಕಾಗ ಪೆನ್ನು ತಾನಾಗಿಯೇ ಉತ್ತರ ಬರೆದುಕೊಂಡು ಹೋಗುತ್ತದೆ. ತಪ್ಪಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಆತ್ಮವಿಶ್ವಾಸದಿಂದ ಬರೆದ ಉತ್ತರಗಳು ಬಹುಶಃ ಸರಿಯಾಗಿಯೇ ಇರುತ್ತವೆ. ಇದು ಹೆಚ್ಚು ಅಂಕ ಗಳಿಸಿ ಕೊಡುವುದರ ಜೊತೆಗೆ, ಸರಿಯಾಗಿ ಪರೀಕ್ಷೆ ಬರೆದ ತೃಪ್ತಿಯನ್ನೂ ನೀಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು