ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಭವಿಷ್ಯಕ್ಕೆ ಶಿಸ್ತುಬದ್ಧ ಯೋಜನೆ

Last Updated 26 ಏಪ್ರಿಲ್ 2019, 13:02 IST
ಅಕ್ಷರ ಗಾತ್ರ

ಎಸ್‌. ಎಸ್‌.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳು ಮುಗಿದಿವೆ. ಫಲಿತಾಂಶದ ನಂತರ ಮಕ್ಕಳು ಮತ್ತು ಪೋಷಕರು ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಆಯ್ಕೆ ಮಾಡಿಕೊಳ್ಳಬೇಕಾದ ಸರಿಯಾದ ಕೋರ್ಸ್, ಕಾಲೇಜಿನ ಬಗ್ಗೆ ಗೊಂದಲಕ್ಕೆ ಸಿಲುಕುವುದು ಸಹಜ. ಅವುಗಳ ಕುರಿತ ಸರಿಯಾದ ಮಾಹಿತಿ ಸಿಗದಿರುವುದು ಒಂದು ಕಡೆಯಾದರೆ ಆ ಕುರಿತು ಶಿಸ್ತುಬದ್ಧವಾಗಿ ಯೋಜನೆ ಮೊದಲೇ ರೂಪಿಸಿಕೊಳ್ಳದಿರುವುದು ಮತ್ತೊಂದು ಸಮಸ್ಯೆ. ಶಿಕ್ಷಣ ಬರೀ ಜ್ಞಾನಾರ್ಜನೆಗೆ ಸೀಮಿತವಾಗದೆ, ಅದು ಎಷ್ಟು ಬೇಗ ಉದ್ಯೋಗ ಗಿಟ್ಟಿಸಿಕೊಡುತ್ತದೆ ಎಂಬುದರ ಮೇಲೆ ಅದರ ಮಹತ್ವ ಅಳೆಯಲಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ಅವಕಾಶಗಳ ಮಹಾಪೂರವೇ ಇದೆ. ಯಾವ ಅವಕಾಶದ ಬೆನ್ನು ಹತ್ತಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಮೊದಲಿಗೆ ಶೈಕ್ಷಣಿಕ ಯೋಜನೆಯನ್ನು ರೂಪಿಸಿಕೊಳ್ಳಬೇಕು.

ಶೈಕ್ಷಣಿಕ ಯೋಜನೆ
ನಮ್ಮ ಆಸಕ್ತಿ ಮತ್ತು ಕೌಶಲ್ಯಕ್ಕೆ ನೆರವಾಗುವಂತಹ ಕೋರ್ಸ್ ಮತ್ತು ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಲು, ನಮ್ಮ ಉದ್ದೇಶ, ಗುರಿಗಳನ್ನು ತಲುಪಲು ಸಾಗಬೇಕಾದ ದಾರಿಯನ್ನು ತಿಳಿಸಿಕೊಡುವಲ್ಲಿ ಶೈಕ್ಷಣಿಕ ಯೋಜನೆ ಮಹತ್ತರ ಪಾತ್ರವಹಿಸುತ್ತದೆ. ಕೆಲವರು ಹೆಚ್ಚು ಪ್ರಸಿದ್ಧಿ ಪಡೆದ ಇಲ್ಲವೇ ತಮಗೆ ಅನುಕೂಲವಾಗುವ ಕಾಲೇಜನ್ನೋ ಅಥವಾ ತಮ್ಮ ಗೆಳೆಯರು ಸೇರಿದ್ದಾರೆಂದೋ ತಮ್ಮ ಇಷ್ಟ, ಯೋಗ್ಯತೆಗಳನ್ನು ಗಮನಿಸದೇ ಪ್ರವೇಶ ಪಡೆದು, ನಂತರ ಹತಾಶರಾದ ಅನೇಕ ಉದಾಹರಣೆಗಳಿವೆ. ಈ ಹಂತದಲ್ಲಿ ಶೈಕ್ಷಣಿಕ ಯೋಜನೆ ರೂಪಿಸಿಕೊಳ್ಳಲು ತನ್ನನ್ನು ತಾನು ಸರಿಯಾದ ರೀತಿಯಲ್ಲಿ ವಿಶ್ಲೇಷಣೆ ಮಾಡಿಕೊಳ್ಳುವುದು; ಅದಕ್ಕೆ ತಕ್ಕಂತೆ ತನ್ನ ಮುಂದಿರುವ ಅವಕಾಶಗಳನ್ನು ಕಂಡುಕೊಂಡು ಆ ನಿಟ್ಟಿನಲ್ಲಿ ಮುನ್ನಡೆಯುವುದು ಮುಖ್ಯ.

ಸ್ವ ಮೌಲ್ಯಮಾಪನ
ಯಾವುದೇ ಕೋರ್ಸ್ ಆಯ್ದುಕೊಂಡು ಯಶಸ್ಸು ಗಳಿಸುವ ಮುನ್ನ ವಿದ್ಯಾರ್ಥಿಗಳು ಸ್ವಾಟ್ ಅನಾಲಿಸಿಸ್‌ಗೆ ಅಂದರೆ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು, ಆತಂಕದ ಬಗ್ಗೆ ವಿಶ್ಲೇಷಣೆ ಮಾಡಿಕೊಳ್ಳುವುದು ಸೂಕ್ತ.

ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳು ನಮ್ಮ ಒಳಗಿನ ಅಂಶಗಳಾಗಿವೆ. ನಮ್ಮ ವೈಯಕ್ತಿಕ ಶಕ್ತಿ– ಸಾಮರ್ಥ್ಯಗಳನ್ನು ಒರೆಗೆ ಹಚ್ಚಬೇಕಾಗುತ್ತದೆ. ಮನಸ್ಸನ್ನು ಗಟ್ಟಿಗೊಳಿಸಿ ಅಸಾಧ್ಯವಾದದ್ದನ್ನು ಕೂಡ ಸಾಧಿಸಲು ಸಾಧ್ಯ ಎಂಬುದನ್ನು ಅನೇಕ ಸಾಧಕರ ಬದುಕನ್ನು ಗಮನಿಸಿ ತಿಳಿಯಬಹುದು. ಅವಕಾಶಗಳು ಮತ್ತು ಆತಂಕಗಳು ಬಾಹ್ಯ ಅಂಶಗಳು. ತೀವ್ರತರ ಸ್ಫರ್ಧಾತ್ಮಕ ವಾತಾವರಣದಲ್ಲಿ ಅತ್ಯಂತ ಸಹಜವಾಗಿ ಎದೆಗುಂದಿಸುತ್ತವೆ. ಸಾಮರ್ಥ್ಯ ಮತ್ತು ಅವಕಾಶಗಳು ಒಂದು ಸಂಸ್ಥೆ ಅಥವಾ ವ್ಯಕ್ತಿಯ ಏಳಿಗೆಗೆ ನೆರವಾಗುವ ಅಂಶಗಳು.

ಸ್ವಾಟ್‌ನಂತೆಯೇ ಸ್ಮಾರ್ಟ್ ಅನಾಲಿಸಿಸ್ ಅಂದರೆ ನಿರ್ದಿಷ್ಟ, ಅಳತೆಗೆ ಸಿಗುವ, ಸಾಧಿಸಬಲ್ಲ, ನೈಜವಾದ ಹಾಗೂ ಸಮಯಬದ್ಧತೆ ಕೂಡ ಯಶಸ್ವಿ ಗುರಿ ನಿಗದಿಗೆ ಬಳಕೆಯಾಗುತ್ತಿದೆ. ಸಾಧಿಸುವ ಗುರಿ ನಿರ್ಧಿಷ್ಟವಾಗಿದ್ದು, ನಮ್ಮ ಕೈಗೆ ಸಿಗುವಂತಹ, ಸಾಧಿಸಲು ಸಾಧ್ಯವಾಗುವಂತಹ, ನಿಜವಾದ ಮತ್ತು ನಿಗದಿತ ಅವಧಿಯಲ್ಲಿ ಮುಗಿಸಿದಲ್ಲಿ ಗೆಲುವು ನಮ್ಮ ಜೇಬಿನಲ್ಲಿರುತ್ತದೆ ಎಂಬ ಅಂಶಗಳು ಯಶಸ್ವಿ ಆಯ್ಕೆಯ ಸೂತ್ರಗಳಾಗಿವೆ.

ಅರ್ಥ ಮಾಡಿಕೊಳ್ಳುವಿಕೆ
ವಿದ್ಯಾರ್ಥಿ ಮೊದಲ ಹಂತದಲ್ಲಿ ತನ್ನನ್ನು ತಾನು ಅರಿಯುವುದು. ಎರಡನೆ ಹಂತದಲ್ಲಿ ತನ್ನ ಮುಂದಿರುವ ಆಯ್ಕೆಗಳಾವವು ಹಾಗೂ ಕೊನೆಯದು ಅವುಗಳಲ್ಲಿ ತನ್ನ ಆಯ್ಕೆ ಯಾವುದು ಎಂಬುದು ಮುಖ್ಯ. ಮಕ್ಕಳು ಮೊದಲಿಗೆ ತಮ್ಮನ್ನು ತಾವು ಮೇಲಿನ ಸೂತ್ರಗಳಿಗೆ ಒಳಪಡಿಸಿಕೊಂಡು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದೇ ರೀತಿ ಪಾಲಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿಯಿಂದ ಅವರ ಮನಸ್ಸು ಮತ್ತು ಸಾಮರ್ಥ್ಯಗಳು ಅಂದರೆ ಇತಿ-ಮಿತಿಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಅದು ತಿಳಿದರೆ ಮಾತ್ರ ಸರಿಯಾದ ದಿಕ್ಕಿನಲ್ಲಿ ಪಯಣಿಸಬಹುದು.

ಇದಕ್ಕೆ ಪೂರಕವಾಗಿ ವಿದ್ಯಾರ್ಥಿ ತನ್ನ ವಿಶೇಷತೆ ಏನು? ತನ್ನ ದೌರ್ಬಲ್ಯಗಳಾವವು? ತನ್ನ ಒಳಗಿರುವ ಕೌಶಲ ಎಂತಹದ್ದು? ತನಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇದೆ? ತನ್ನ ಭವಿಷ್ಯ ಹೇಗಿರಬೇಕು? ತನ್ನ ಮುಂದಿನ ನಡೆಗೆ ಕುಟುಂಬದಿಂದ ಯಾವ ರೀತಿ ಬೆಂಬಲ ಸಿಗುತ್ತದೆ? ತನ್ನ ಬೆಳವಣಿಗೆಗೆ ಪೂರಕವಾದ ಅಂಶಗಳಾವವು? ತನ್ನ ವ್ಯಕ್ತಿತ್ವಕ್ಕೂ ತನ್ನ ಓದಿಗೂ ಹೊಂದಾಣಿಕೆಯಾಗುತ್ತದೆಯಾ? ತನ್ನ ಕಲಿಕೆಯ ಮಟ್ಟ ಹೇಗಿದೆ– ಇಂತಹ ಹತ್ತಾರು ಪ್ರಶ್ನೆಗಳಿಗೆ ತನ್ನೊಳಗೆ ಮೊದಲಿಗೆ ಸರಿಯಾದ ಉತ್ತರ ಕಂಡುಕೊಳ್ಳಬೇಕು. ಇದರಿಂದ ನಮ್ಮ ಕಲಿಕೆಯ ಕುರಿತಾದ ನಿರ್ಧಿಷ್ಟತೆ ದೊರಕುವುದಲ್ಲದೇ ನಮ್ಮ ಆಸಕ್ತಿಗಳು ಹೆಚ್ಚು ಹೊರಬರುತ್ತವೆ. ಮೊದಲ ಈ ಹಂತದ ಈ ಕಾರ್ಯ ಯಶಸ್ವಿಯಾದರೆ ನಾವು ಅರ್ಧ ಗೆದ್ದಂತೆ.

ಅವಕಾಶಗಳು
ವೈವಿಧ್ಯಮಯ ಕೆಲಸಗಳು ವಿವಿಧ ಕ್ಷೇತ್ರದಲ್ಲಿ ಹುಟ್ಟಿಕೊಳ್ಳುತ್ತಿವೆ. ಅವುಗಳಿಗೆ ಸಮರ್ಥರನ್ನು ತರಬೇತುಗೊಳಿಸಲು ಹಲವು ಹೊಸ ಹೊಸ ಕೋರ್ಸ್‌ಗಳೂ ಶುರುವಾಗುತ್ತಿವೆ. ಅಂದರೆ ಇವತ್ತಿನ ಜಗತ್ತಿಗೆ ತಕ್ಕನಾಗಿ ಅವಶ್ಯಕತೆಗಳನ್ನು ಪೂರೈಸಲು ಅವಕಾಶಗಳ ಹೆಬ್ಬಾಗಿಲು ನಮ್ಮ ಮುಂದೆ ತೆರೆದಿದೆ. ಅದರ ಒಳ ಹೋಗುವ ಮೊದಲು ನಮಗೆ ತಕ್ಕಂತ ಆಯ್ಕೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಅದಕ್ಕೂ ಮುಂಚೆ ಅವುಗಳ ಕುರಿತಾದ ಎಲ್ಲಾ ಮಹತ್ತರ ಅಂಶಗಳನ್ನು ಕ್ರೋಢೀಕರಿಸಿಕೊಳ್ಳಬೇಕು. ಅವುಗಳ ಕುರಿತಾಗಿ ಓದುತ್ತಿರುವವರನ್ನು ಮತ್ತು ಓದನ್ನು ಮುಗಿಸಿ ಉದ್ಯೋಗದಲ್ಲಿರುವವರನ್ನು ಸಂಪರ್ಕಿಸಬೇಕು. ಪತ್ರಿಕೆ ಮತ್ತು ಅಂತರ್ಜಾಲಗಳಲ್ಲಿ ಮಾಹಿತಿಗಳನ್ನು ಹೆಕ್ಕಿ ತೆಗೆದರೆ ಒಳ್ಳೆಯದು.

ಆಯ್ಕೆ
ಮೊದಲ ಹಂತದಲ್ಲಿ ನಮ್ಮ ಆಸಕ್ತಿ, ಕೌಶಲ, ಸಾಮರ್ಥ್ಯ, ಕಲಿಕೆಯ ವಿಧ, ವ್ಯಕ್ತಿತ್ವ ಮುಂತಾದವುಗಳನ್ನು ಗುರುತಿಸಿರುತ್ತೇವೆ. ಎರಡನೆ ಹಂತದಲ್ಲಿ ನಮಗೆ ಅನುಕೂಲವಾದ ಕೋರ್ಸ್ ಹಾಗೂ ಅವುಗಳ ಕುರಿತಾದ ಮಾಹಿತಿಗಳನ್ನು ಕ್ರೋಢೀಕರಿಸುತ್ತೇವೆ. ಈ ಎರಡು ಅಂಶಗಳನ್ನು ತುಲನಾತ್ಮಕವಾಗಿ ಹೋಲಿಕೆ ಮಾಡುತ್ತಾ ಹೆಚ್ಚು ಅನುಕೂಲವಾಗುವಂತಹ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುವ ಹಂತವೆ ಇದಾಗಿದೆ. ನಮ್ಮ ಕುಟುಂಬದ ಮತ್ತು ಸ್ವಸಾಮರ್ಥ್ಯ ಎರಡನ್ನೂ ಪರಿಗಣಿಸಿ ಸೂಕ್ತವಾದ ಒಂದು ನಿರ್ಧಾರ ಕೈಗೊಳ್ಳಬೇಕು. ಇದರಿಂದ ಮಕ್ಕಳು ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ತಾವೇ ಸ್ವತಃ ಆಸಕ್ತಿಯಿಂದ ಓದನ್ನು ಪೂರೈಸಿ ಯಶ ಕಾಣುವುದರಲ್ಲಿ ಅನುಮಾನವಿಲ್ಲ.

ಮಾಹಿತಿ ಸಂಗ್ರಹಿಸಿ
ಕೋರ್ಸ್‌ನ ವೈಶಿಷ್ಟ್ಯ, ಎಲ್ಲೆಲ್ಲಿ ಮತ್ತು ಯಾವ ಯಾವ ಕಾಲೇಜಿನಲ್ಲಿ ಅದು ದೊರೆಯುತ್ತದೆ, ಅದರಲ್ಲಿ ಬರುವ ವಿಷಯಗಳಾವವು, ಅದಕ್ಕೆ ಸೇರಲು ಇರುವ ಅರ್ಹತೆಗಳಾವವು, ಅದರ ಕಾಲಾವಧಿ ಎಷ್ಟು, ಅದರ ಶುಲ್ಕ ಮತ್ತು ಇತರೆ ಖರ್ಚಿನ ಜೊತೆಗೆ ಸಿಗುವ ವಿದ್ಯಾರ್ಥಿ ವೇತನಗಳಾವವು, ಕಲಿಕೆ ಮುಗಿದ ತಕ್ಷಣ ಸಿಗುವ ಕೆಲಸದ ಅವಕಾಶಗಳೇನು, ಈ ವಿಷಯದ ಮೇಲೆ ಉನ್ನತ ವ್ಯಾಸಂಗ ಮಾಡಲು ಸಾಧ್ಯವೇ– ಇತ್ಯಾದಿ ಪ್ರಶ್ನೆಗಳನ್ನು ಹಾಕಿಕೊಂಡು ಅವಕ್ಕೆ ಸಮರ್ಪಕವಾದ ಉತ್ತರಗಳನ್ನು ಕಂಡುಕೊಳ್ಳಬೇಕು. ಇದೇ ರೀತಿ ಪ್ರಿಯವಾದ ಎಲ್ಲಾ ಕೋರ್ಸ್‌ಗಳ ಮಾಹಿತಿಗಳನ್ನು ಸಂಗ್ರಹಿಸಬೇಕು. ಅವಶ್ಯವೆನಿಸಿದರೆ ಕೆರಿಯರ್ ಮಾರ್ಗದರ್ಶಕರ ಸಹಾಯ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT