ಮಂಗಳವಾರ, ಫೆಬ್ರವರಿ 18, 2020
29 °C

ಎಫ್‌ಡಿಎ ಪರೀಕ್ಷೆ ಸಿದ್ಧತೆಗೆ ಸರಳ ವಿಧಾನ

ಕೆ.ಎಚ್. ಮಂಜುನಾಥ್ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಲೋಕಸೇವಾ ಆಯೋಗವು ಈಗಾಗಲೇ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಕರೆದಿದೆ. 29 ಇಲಾಖೆಗಳ 973 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳು ಹಾಗೂ 27 ಇಲಾಖೆಗಳಲ್ಲಿರುವ ಕಲ್ಯಾಣ ಕರ್ನಾಟಕ ವೃಂದದ 137 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಅಧಿಸೂಚನೆಯನ್ನು ಕೆಪಿಎಸ್‌ಸಿ ಹೊರಡಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 6 ಕೊನೆಯ ದಿನವಾಗಿದ್ದು, ಪರೀಕ್ಷೆಗೆ ಸಿದ್ಧತೆ ನಡೆಸಲು ಇನ್ನೂ ಸಾಕಷ್ಟು ಕಾಲಾವಕಾಶವಿದೆ. 

ಹೊಸದಾಗಿ ಪರೀಕ್ಷೆಗೆ ಹಾಜರಾಗುವವರಿಗೆ ಈ ಪರೀಕ್ಷೆಯಲ್ಲಿ ಏನೇನು ಇರುತ್ತದೆ, ಹೇಗೆ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಕುತೂಹಲವಿರಬಹುದು. ಅಂಥವರಿಗೆ ಇಲ್ಲಿ ಸ್ಥೂಲವಾಗಿ ವಿವರಗಳನ್ನು ನೀಡಲಾಗಿದೆ.

ಈ ಪರೀಕ್ಷೆಯಲ್ಲಿ ಮೂರು ಪ್ರಶ್ನೆ ಪತ್ರಿಕೆಗಳು ಇರುತ್ತವೆ.

ಮೊದಲನೆಯದು ಕಡ್ಡಾಯ ಕನ್ನಡ ಭಾಷೆ ಪತ್ರಿಕೆಯಾಗಿದ್ದು, 150 ಅಂಕಗಳಿಗಾಗಿ ಒಂದೂವರೆ ಗಂಟೆ ಪರೀಕ್ಷೆ ಬರೆಯಬೇಕಾಗುತ್ತದೆ. ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹಾಗೆಯೇ 50ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ಕೂಡ ಅದನ್ನು ಸ್ಪರ್ಧೆಗಾಗಿ ಪರಿಗಣಿಸುವುದಿಲ್ಲ. ಒಂದು ವೇಳೆ ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯಲ್ಲಿ 50 ಅಂಕ ಪಡೆದು ಉತ್ತೀರ್ಣರಾಗಿದ್ದರೆ ಮತ್ತೆ ಈ ಪತ್ರಿಕೆ ಬರೆಯುವ ಅವಶ್ಯಕತೆ ಇರುವುದಿಲ್ಲ.

ದ್ವಿತೀಯ ಮತ್ತು ತೃತೀಯ ಪತ್ರಿಕೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆಯುವುದು ಅನಿವಾರ್ಯ. ಯಾಕೆಂದರೆ ಈ ಎರಡೂ ಪತ್ರಿಕೆಗಳನ್ನು ಸ್ಪರ್ಧೆಗೆ ಪರಿಗಣಿಸುತ್ತಾರೆ. ದ್ವಿತೀಯ ಮತ್ತು ತೃತೀಯ ಪತ್ರಿಕೆಯಲ್ಲಿ ನೀವು ಗಳಿಸಿದ ಅಂಕಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅತಿಹೆಚ್ಚು ಶ್ರಮಹಾಕಿ ಓದಬೇಕಾದ ಅನಿವಾರ್ಯತೆ ಇದೆ. ದ್ವಿತೀಯ ಪತ್ರಿಕೆ ಸಾಮಾನ್ಯ ಕನ್ನಡವಾದರೆ, ತೃತೀಯ ಪತ್ರಿಕೆಯು ಸಾಮಾನ್ಯ ಜ್ಞಾನವಾಗಿದೆ.

ಸಾಮಾನ್ಯಜ್ಞಾನ ಪತ್ರಿಕೆಯು ಒಂದು ನೂರು ಅಂಕಗಳನ್ನು ಒಳಗೊಂಡಿರುತ್ತದೆ. ತೃತೀಯ ಪತ್ರಿಕೆಯಲ್ಲಿ ನಿಮ್ಮ ಕನ್ನಡ ಭಾಷಾ ಜ್ಞಾನದ ಸಮಗ್ರ ಪರೀಕ್ಷೆ ಮಾಡುತ್ತಾರೆ. ಇದು ಕೂಡಾ ಒಂದು ನೂರು ಅಂಕಗಳನ್ನು ಒಳಗೊಂಡಿರುತ್ತದೆ.

ಪಠ್ಯಕ್ರಮ

ಒಂದು ನೂರು ಅಂಕಗಳಿರುವ ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಭಾರತದ ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಭಾರತದ ಅರ್ಥಶಾಸ್ತ್ರ, ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲದೇ ಕರ್ನಾಟಕದ ಐತಿಹಾಸಿಕ ಅಂಶಗಳು, ನಮ್ಮ ರಾಜ್ಯದ ಆರ್ಥಿಕ ಬೆಳವಣಿಗೆಗಳ ಕುರಿತ ಪ್ರಶ್ನೆಗಳು ಇರುತ್ತವೆ. ರಾಜಕೀಯ ತಿರುವುಗಳನ್ನು ಸಂವಿಧಾನಾತ್ಮಕ ದೃಷ್ಟಿಯಲ್ಲಿ ನೋಡುವಂತೆ ವಿಷಯ ಜೋಡಿಸಿ ಪ್ರಶ್ನೆಗಳನ್ನು ಹೆಣೆದಿರಲಾಗುತ್ತದೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಒಳಗೊಂಡಿರುತ್ತದೆ.

ದ್ವಿತೀಯ ಪತ್ರಿಕೆಯಾದ ಸಾಮಾನ್ಯ ಕನ್ನಡದಲ್ಲಿ ನಿಮ್ಮ ಕನ್ನಡ ಭಾಷಾ ಜ್ಞಾನದ ಸಮಗ್ರ ಪರೀಕ್ಷೆ ಮಾಡುತ್ತಾರೆ. ಇದು ಕೂಡಾ ಒಂದು ನೂರು ಅಂಕಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಪದವಿ ಹಂತದ ವಿದ್ಯಾರ್ಹತೆ ಪಡೆದಿರುವ ವ್ಯಕ್ತಿಯೋರ್ವ ಗಳಿಸಿದ ಭಾಷಾ ಜ್ಞಾನವನ್ನು ಪರೀಕ್ಷಿಸುವಂತಹ ಪ್ರಶ್ನೆಗಳಿರುತ್ತವೆ. ವ್ಯಾಕರಣ ಸಂಪತ್ತು, ಕಾಗುಣಿತ (ಸ್ಪೆಲ್ಲಿಂಗ್), ವಿರುದ್ಧಾರ್ಥಕ ಪದಗಳು, ಸಮಾನಾರ್ಥಕ ಪದಗಳ ಪರಿಜ್ಞಾನ, ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಶಕ್ತಿ ಮೊದಲಾದವುಗಳನ್ನು ಪರೀಕ್ಷಿಸಲಾಗುತ್ತದೆ.

ಪರೀಕ್ಷೆ ತಯಾರಿಗೆ ಏನೇನು ಓದಬೇಕು?

# ಹಿಂದಿನ ಎಫ್‌ಡಿಎ ಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆಪತ್ರಿಕೆಗಳು

# 8, 9 ಮತ್ತು 10ನೇ ತರಗತಿಗಳ ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಪುಸ್ತಕಗಳು

# ಕರ್ನಾಟಕ ಸರ್ಕಾರದ ಗ್ಯಾಜೆಟಿಯರ್ ಇಲಾಖೆ ಪ್ರಕಟಿಸಿರುವ ‘ಕರ್ನಾಟಕದ ಕೈಪಿಡಿ’ಯ ಇತ್ತೀಚಿನ ಆವೃತ್ತಿ

# ಸಾಮಾನ್ಯ ಕನ್ನಡ ಪತ್ರಿಕೆಗೆ ಮೈಸೂರು ವಿಶ್ವವಿದ್ಯಾಲಯದ ‘ಕನ್ನಡ ಕೈಪಿಡಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ಸಂಕ್ಷಿಪ್ತ ನಿಘಂಟು’

# ಎಫ್‌ಡಿಎ ಪರೀಕ್ಷೆಗೆಂದೇ ಪ್ರಕಟವಾದ ವಿವಿಧ ಪ್ರಕಾಶನಗಳ ಮಾರ್ಗದರ್ಶಿ ಪುಸ್ತಕಗಳು

# ‘ಪ್ರಜಾವಾಣಿ’ ಸಹಿತ ಎಲ್ಲಾ ದಿನಪತ್ರಿಕೆಗಳಲ್ಲಿ ಬರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ರಾಜ್ಯದ ಸುದ್ದಿಗಳನ್ನು ಸಂಗ್ರಹಿಸಿ ಓದುವುದು

# ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ಪ್ರಕಟವಾಗುವ ಮಾಸಪತ್ರಿಕೆಗಳು

# ಭಾರತದ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕ ಸಮೀಕ್ಷೆ, ಸಾಧ್ಯವಾದರೆ ಕೇಂದ್ರ ಸರ್ಕಾರದ ಪ್ರಕಾಶನ ವಿಭಾಗ ಪ್ರಕಟಿಸಿದ ಇಂಡಿಯಾ ಇಯರ್ ಬುಕ್-2020 ಓದಬಹುದು

# ಕೇಂದ್ರ ಸರ್ಕಾರದ ಪ್ರಕಾಶನ ವಿಭಾಗ ಪ್ರಕಟಿಸುವ ಯೋಜನಾ ಮಾಸಿಕ ಮತ್ತು ರಾಜ್ಯ ಸರ್ಕಾರ ಪ್ರಕಟಿಸುವ ಜನಪದ ಮಾಸ ಪತ್ರಿಕೆ

#ಕೋಚಿಂಗ್ ತರಗತಿಗೆ ಹೋಗುತ್ತಿದ್ದರೆ ಅಲ್ಲಿ ನೀಡಲಾದ ನೋಟ್ಸ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು