ಶುಕ್ರವಾರ, ಜನವರಿ 17, 2020
20 °C

ಪ್ರಬಂಧ ಬರವಣಿಗೆ ಸೃಜನಶೀಲವಾಗಿರಲಿ!

ಭಾರ್ಗವಿ ಕೆ.ಆರ್. Updated:

ಅಕ್ಷರ ಗಾತ್ರ : | |

Prajavani

ಶಾಲಾ– ಕಾಲೇಜುಗಳಲ್ಲೇ ಇರಲಿ ಅಥವಾ ಸ್ಪರ್ಧೆಗಳಲ್ಲೇ ಇರಲಿ, ನಿಬಂಧ ಅಥವಾ ಪ್ರಬಂಧ ಬರೆಯುವುದು ಒಂದು ಕಲೆ. ಕೊಟ್ಟ ವಿಷಯವನ್ನು ಅರ್ಥ ಮಾಡಿಕೊಂಡು, ಸಮಗ್ರವಾಗಿ ಬರವಣಿಗೆಗೆ ಇಳಿಸುವುದು ಹೇಗೆ?

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ವಿವಿಧ ರೀತಿಯ ಕಲಿಕಾ ಚಟುವಟಿಕೆಗಳಲ್ಲಿ ನಿಬಂಧ ಅಥವಾ ಪ್ರಬಂಧ ಬರವಣಿಗೆ ಕೂಡ ಸೇರಿದೆ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ವಿಷಯವನ್ನು ಕೊಟ್ಟು ಅದರ ಬಗ್ಗೆ ಪ್ರಬಂಧ ಬರೆಯಲು ಹೇಳುತ್ತಾರೆ. ಇದು ಕೆಲವು ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿ ಕಂಡರೆ, ಇನ್ನು ಕೆಲವರಿಗೆ ವಿನೋದಮಯವಾಗಿರುತ್ತದೆ. ಕೆಲವೊಮ್ಮೆ ಎರಡರಿಂದ ಮೂರು ಪುಟಗಳ ಬರವಣಿಗೆ ವಿದ್ಯಾರ್ಥಿಗಳ ಪಾಲಿಗೆ ತುಂಬಾ ಕಷ್ಟದ ಕೆಲಸ ಎಂದು ಕಂಡುಬಂದರೂ, ಆ ವಿಷಯದ ಕುರಿತು ಅವರಿಗಿರುವ ಅಭಿಪ್ರಾಯ, ದೃಷ್ಟಿಕೋನ, ಗ್ರಹಿಕೆಯನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಲು ಸಿಕ್ಕಿರುವ ಅವಕಾಶ ಎಂದು ಹೇಳಬಹುದು.

ಪರೀಕ್ಷೆಯಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳ ಕುರಿತು ಪ್ರಬಂಧ ಬರೆಯಲು ಹೇಳಬಹುದು. ಇನ್ನು ಕೆಲವೊಮ್ಮೆ ಪ್ರಬಂಧ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಇಲ್ಲಿ ಯಾವುದಾದರೂ ಸಾಮಾನ್ಯ ವಿಷಯ ಕೊಟ್ಟಿರುತ್ತಾರೆ. ಯಾವುದೇ ವಿಷಯ ಇರಲಿ ಅದಕ್ಕೆ ಸಿಲೆಬಸ್‌ನಲ್ಲಿ ಇರುವಂತೆ ನಿರ್ದಿಷ್ಟ ಉತ್ತರ ಎಂದು ಇರುವುದಿಲ್ಲ. ವಿಷಯನ್ನು ಅರ್ಥಮಾಡಿಕೊಂಡರೆ ಸಾಕು, ಬಾಯಿಪಾಠ ಮಾಡುವ ಕೆಲಸವಿಲ್ಲದೇ ಅವರದ್ದೇ ಆದ ವಾಕ್ಯಗಳಲ್ಲಿ ಬರೆಯಬಹುದು.

ಸೂಚನೆ ಅರ್ಥ ಮಾಡಿಕೊಳ್ಳಿ
ಪಠ್ಯಕ್ಕೆ ಸಂಬಂಧಪಟ್ಟ ವಿಷಯವೇ ಇರಲಿ ಅಥವಾ ಸಾಮಾನ್ಯ ವಿಷಯವೇ ಇರಲಿ, ಬರೆಯುವ ಮುನ್ನ ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ಕೆಲವೊಮ್ಮೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ಯ್ರವೂ ನಮ್ಮದೇ ಆಗಿರುತ್ತದೆ. ಕೊಟ್ಟಿರುವ ವಿಚಾರದ ಕುರಿತು ವಿಶ್ಲೇಷಣೆ ಮಾಡಲು ಹೇಳಿದ್ದಾರೋ ಅಥವಾ ಅದನ್ನು ಟೀಕಿಸಿ ವಿರೋಧವನ್ನು ವ್ಯಕ್ತಪಡಿಸಲು ಹೇಳಿದ್ದಾರೋ ಎಂದು ತಿಳಿದುಕೊಂಡು ಬರೆಯಬೇಕು. ಏಕೆಂದರೆ ಕೆಲವರು ಅವಸರದಲ್ಲಿ ಪ್ರಶ್ನೆಯನ್ನು ಪೂರ್ತಿಯಾಗಿ ಓದದೆ ಕೇಳಿರುವುದನ್ನು ಬಿಟ್ಟು ಇನ್ನೇನೊ ಬರೆಯುತ್ತಾರೆ. ಸೂಚನೆಯನ್ನು ಅರ್ಥೈಸಿಕೊಂಡು ಐದು ನಿಮಿಷ ಶಾಂತವಾಗಿ ಯಾವ ಅಂಶಗಳನ್ನು ಸೇರಿಸಬಹುದು ಎಂದು ಯೋಚಿಸಿ ಬರೆಯಬೇಕು.

ಬರೆಯುವ ಮುನ್ನ ರೂಪರೇಷೆಯನ್ನು ಹಾಕಿಕೊಳ್ಳಿ: ಕೆಲವು ವಿದ್ಯಾರ್ಥಿಗಳಿಗೆ ಬರೆಯಲು ಶುರುಮಾಡಿದಾಗ ಎಲ್ಲಾ ಅಂಶಗಳು ಒಟ್ಟಿಗೆ ನೆನಪಾಗುತ್ತವೆ. ಯಾವುದನ್ನು ಮೊದಲು ಬರೆಯಬೇಕು, ಯಾವುದನ್ನು ನಂತರ ಬರೆಯಬೇಕು ಎಂದು ವಾಕ್ಯಗಳನ್ನು ಜೋಡಿಸುವ ಅವಸರದಲ್ಲಿ ಕೆಲವೊಂದು ಮುಖ್ಯವಾದ ಅಂಶಗಳನ್ನು ಮರೆತು ಬಿಡುತ್ತಾರೆ. ಹೀಗಾಗಿ ನೆನಪಾದ ಹಾಗೂ ಬರೆಯಬೇಕೆಂದಿರುವ ಎಲ್ಲಾ ಅಂಶಗಳನ್ನು ಕೊನೆಯ ಪುಟದಲ್ಲಿ ನೋಟ್ ಮಾಡಿಕೊಂಡು, ನಂತರ ಒಂದೊಂದೇ ಅಂಶವನ್ನು ವಿಶ್ಲೇಷಿಸುತ್ತಾ ಹೋಗಿ. ಆರಂಭ ಹಾಗೂ ವಿವರಣೆ ಹೇಗಿರಬೇಕು, ಅದರಲ್ಲಿ ಏನೆಲ್ಲ ಅಂಶಗಳು ಇರಬೇಕು, ಹೇಗೆ ಕೊನೆಗೊಳಿಸಬೇಕು ಇವೆಲ್ಲವನ್ನೂ ಕಚ್ಛಾ ನೋಟ್ ಮಾಡಿಕೊಂಡಲ್ಲಿ ಬರವಣಿಗೆ ಸುಲಭವಾಗುತ್ತದೆ.

ಸಂಶೋಧನೆ
ಸಾಮಾನ್ಯ ವಿಷಯದ ಮೇಲೆ ಪ್ರಬಂಧ ಬರೆಯುವಾಗ ಸಂಶೋಧನೆ ಬಹಳ ಅಗತ್ಯ. ವಿಚಾರಗಳ ಆಳ- ಅಗಲ ತಿಳಿದಷ್ಟೂ ನಮ್ಮ ಜ್ಞಾನ ಹೆಚ್ಚುತ್ತದೆ. ಅದನ್ನು ಸುಲಭವಾಗಿ ಬರವಣಿಗೆಗೆ ಇಳಿಸಬಹುದು. ಸಂಶೋಧನೆಗಾಗಿ ಅಂತರ್ಜಾಲ ಅಥವಾ ಸಂಬಂಧಪಟ್ಟ ಯಾವುದೇ ಪುಸ್ತಕಗಳನ್ನು ನೋಡಬಹುದು. ಇದರಿಂದ ಹೊಸ ಪದಗಳ ಪರಿಚಯವಾಗಿ ಬರವಣಿಗೆಗೆ ಪ್ರಯೋಜನವಾಗುತ್ತದೆ.

ಪ್ರಬಂಧ ಬರೆಯುವ ಶೈಲಿ
ಕೊಟ್ಟಿರುವ ವಿಚಾರ ಹಾಗೂ ಸೂಚನೆಗೆ ಅನುಗುಣವಾಗಿ ಪ್ರಬಂಧ ಬರೆಯಲು ಬೇರೆ ಬೇರೆ ಶೈಲಿಗಳಿವೆ. ಇಲ್ಲಿ ವಿದ್ಯಾರ್ಥಿಯ ಸೃಜನಶೀಲತೆ ಮುಖ್ಯವಾಗುತ್ತದೆ.

ಜನಪ್ರಿಯ ಶೈಲಿ: ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬರೆಯುವ ಶೈಲಿ ಇದು. ವಿಚಾರದ ಕುರಿತು ಪರ ಅಥವಾ ವಿರೋಧವಾಗಿ ಬರೆಯುವುದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ..

ವಾಕ್ಯಗಳ ರಚನೆ: ವಿದ್ಯಾರ್ಥಿಗಳು ತಮ್ಮನ್ನು ತಾವು ಬರವಣಿಗೆಯಲ್ಲಿ ತೊಡಗಿಸಿಕೊಂಡಾಗ ವ್ಯಾಕರಣಕ್ಕೆ ಹೆಚ್ಚಿನ ಒತ್ತು ಕೊಡುತ್ತಾರೆ. ಆದರೆ ವಾಕ್ಯಗಳ ರಚನೆಯಲ್ಲಿ ಎಡವುವ ಸಾಧ್ಯತೆಗಳಿರುತ್ತವೆ. ವಿಷಯವನ್ನು ವಿವರಿಸುವ ಭರದಲ್ಲಿ ಎಲ್ಲಾ ವಾಕ್ಯಗಳು ಒಂದೇ ರೀತಿಯಾಗಿರುತ್ತವೆ. ಹೀಗಾಗಿ ಒಂದು ವಾಕ್ಯಕ್ಕಿಂತ ಮತ್ತೊಂದು ವಾಕ್ಯ ಭಿನ್ನವಾಗಿದೆಯೆ ಎಂದು ಗಮನಿಸಬೇಕು. ಆರಂಭದ ವಾಕ್ಯ ಆದಷ್ಟು ಚೆನ್ನಾಗಿರಬೇಕು. ಹಾಗೇ ಪ್ಯಾರಾಗ್ರಾಫ್‌ನ ಕೊನೆಯ ವಾಕ್ಯಗಳೂ ಸಹ.

ಪದಗಳ ಬಳಕೆ: ಒಂದು ವಾಕ್ಯದಲ್ಲಿ ಬಳಸಿದ ಪದ ಮತ್ತೊಂದು ವಾಕ್ಯದಲ್ಲಿ ಪುನಃ ಬಳಕೆಯಾಗದಂತೆ ಎಚ್ಚರ ವಹಿಸಿ. ಅದರ ಬದಲು ಬೇರೆ ಪದಗಳ ಬಳಕೆ ಮಾಡಿ.

ಚಿಹ್ನೆಗಳು: ಚಿಹ್ನೆಗಳು ವಾಕ್ಯಗಳ ಅರ್ಥವನ್ನು ಹೇಳುತ್ತವೆ ಹಾಗೂ ಆ ವಾಕ್ಯಕ್ಕೊಂದು ಮೆರಗನ್ನು ನೀಡುತ್ತವೆ. ಚಿಹ್ನೆಯು ತಪ್ಪಾಗಿ ಬಳಕೆಯಾದಲ್ಲಿ ವಾಕ್ಯಗಳು ಅರ್ಥ ಕಳೆದುಕೊಂಡು ಕಳೆಗುಂದುತ್ತವೆ. ಹೀಗಾಗಿ ಚಿಹ್ನೆಗಳ ಉಪಯೋಗವನ್ನು ಸರಿಯಾಗಿ ತಿಳಿದುಕೊಳ್ಳಿ.

ಏಕಾಗ್ರತೆ: ಬರೆಯುವಾಗ ನಮ್ಮ ಗಮನ ಅತ್ತಿತ್ತ ಕದಲಬಾರದು. ಕೆಲವರು ಒಂದೇ ಸಮನೆ ಗೀಚುತ್ತಿರುತ್ತಾರೆ. ಅವರನ್ನು ನೋಡಿ ‘ಏನಪ್ಪಾ ಇವರು ಒಂಚೂರು ತಲೆ ಎತ್ತದೆ ಬರೀತಾ ಇದ್ದಾರೆ. ಅಷ್ಟೊಂದು ಏನಿರಬಹುದು? ನಾನಿನ್ನೂ ಒಂದಕ್ಷರವನ್ನು ಬರೆದಿಲ್ಲ’ ಹೀಗೆ ಆಲೋಚನೆಗಳು ಸುಳಿಯುತ್ತವೆ. ಯಾರು ಎಷ್ಟಾದರೂ ಬರೆಯಲಿ. ನೀವು ಏಕಾಗ್ರತೆಯಿಂದ ಮನಸ್ಸನ್ನು ಬೇರೆ ಯೋಚನೆಗೆ ಎಡೆಕೊಡದೆ ನಿಮ್ಮ ಬರಹವನ್ನು ಮುಂದುವರಿಸಿ.

ಅಂತಿಮ ಸ್ಪರ್ಶ
ಪ್ರಬಂಧ ಕೊನೆಗೊಳಿಸಿದ ಕೂಡಲೇಬರವಣಿಗೆ ಮುಕ್ತಾಯವಾಗುವುದಿಲ್ಲ. ಅದನ್ನು ಆರಂಭದಿಂದ ಕೊನೆಯವರೆಗೆ ಸಂಪೂರ್ಣವಾಗಿ ಪರಿಶೀಲಿಸಬೇಕು. ಆಗ ಯಾವುದಾದರೂ ಸ್ಪೆಲ್ಲಿಂಗ್ ತಪ್ಪಾದರೆ, ವಾಕ್ಯಗಳ ಜೋಡಣೆ ಅಥವಾ ಯಾವುದಾದರೂ ಅಂಶಗಳು ಮರೆತು ಹೋಗಿದ್ದಲ್ಲಿ ಸೇರಿಸಬಹುದು. ಎಲ್ಲವೂ ಕ್ರಮಬದ್ಧವಾಗಿದೆಯೆ ಎಂದು ಪರಿಶೀಲಿಸಬೇಕು. ಕೊಟ್ಟಿರುವ ಪ್ರಶ್ನೆ ಹಾಗೂ ಸೂಚನೆಯನ್ನು ಮತ್ತೊಮ್ಮೆ ಓದಿ ಅದರಂತೆ ನಿಮ್ಮ ಪ್ರಬಂಧ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು