ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮಾಹಿತಿ: ಫ್ಯಾಷನ್ ಡಿಸೈನಿಂಗ್‌ನಲ್ಲಿ ಯುವತಿಯರಿಗೆ ತೆರೆದ ಅವಕಾಶಗಳು

Last Updated 12 ಡಿಸೆಂಬರ್ 2019, 6:27 IST
ಅಕ್ಷರ ಗಾತ್ರ
  • ನಾನು ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90 ಹಾಗೂ ಪಿಯುಸಿಯಲ್ಲಿ ಶೇ 60 ಅಂಕ ಪಡೆದಿದ್ದೇನೆ. ನನಗೆ ಫ್ಯಾಷನ್‌ ಡಿಸೈನಿಂಗ್ ಹಾಗೂ ಟೈಲರಿಂಗ್‌ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದೆ. ಈ ಎರಡಕ್ಕೂ ಇರುವ ವ್ಯತ್ಯಾಸವೇನು?ಫ್ಯಾಷನ್‌ ಡಿಸೈನಿಂಗ್‌‌ನಲ್ಲಿ ಎಷ್ಟು ವಿಷಯಗಳಿವೆ? ಇದರಿಂದ ಭವಿಷ್ಯ ಇದೆಯೇ? ಇದರಲ್ಲಿ ಯಾವ ರೀತಿಯ ಕೆಲಸಗಳು ಇವೆ ತಿಳಿಸಿ.
  • - ಸೌಮ್ಯ, ಮೈಸೂರು

    ಸೌಮ್ಯ, ಮೊದಲಿಗೆ ಫ್ಯಾಷನ್‌ ಡಿಸೈನಿಂಗ್ ಹಾಗೂ ಟೈಲರಿಂಗ್‌ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ಎರಡೂ ಒಂದೇ ಕ್ಷೇತ್ರದ ಕಾರ್ಯಗಳಾದರೂ ಅವುಗಳ ಕಾರ್ಯ ವ್ಯಾಪ್ತಿ ಮತ್ತು ಅಳವಡಿಕೆಯಲ್ಲಿ ವ್ಯತ್ಯಾಸ ಇದೆ. ಫ್ಯಾಷನ್‌ ಡಿಸೈನಿಂಗ್ ಎಂಬ ವಿಶಾಲವಾದ ಕ್ಷೇತ್ರದಲ್ಲಿ ಟೈಲರಿಂಗ್‌ ಅದರ ಒಂದು ಭಾಗವಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಬೇರೆ ಉದಾಹರಣೆಯಿಂದ ತಿಳಿದುಕೊಳ್ಳುವುದಾದರೆ ಕಲ್ಲುಗಳನ್ನು ಕಟ್ಟಿ ಗೋಡೆ ಕಟ್ಟುವ ಕೆಲಸ ಟೈಲರಿಂಗ್ ಆದರೆ, ಹೊಸದಾದ ಶೈಲಿಯ ಗೋಡೆಯನ್ನೇ ಕಟ್ಟುವುದು ಫ್ಯಾಷನ್ ಡಿಸೈನಿಂಗ್. ಅಂದರೆ ಟೈಲರಿಂಗ್ ಕಲಿತಾಗ ನಿಮಗೆ ಬಟ್ಟೆಯ ಅಳತೆ ತೆಗೆದುಕೊಳ್ಳುವ, ಅದನ್ನು ಅಳತೆಗೆ ತಕ್ಕಂತೆ ಕತ್ತರಿಸುವ ಹಾಗೂ ಹೊಲಿಯುವ ಕೌಶಲ ಬರುತ್ತದೆ. ಫ್ಯಾಷನ್ ಡಿಸೈನಿಂಗ್ ಕಲಿತಾಗ ಇವೆಲ್ಲದರ ಜೊತೆಗೆ ಹೊಸದಾದ ಶೈಲಿಯ ಉಡುಪನ್ನು ವಿನ್ಯಾಸ ಮಾಡುವ ಜ್ಞಾನ ಮತ್ತು ಕೌಶಲ ಬರುತ್ತದೆ.

    ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಅನೇಕ ಪ್ರಕಾರದ ವಿಷಯಗಳಿದ್ದು ಉಡುಪುಗಳ ವಿನ್ಯಾಸ, ಆಭರಣಗಳ ವಿನ್ಯಾಸ, ಪರಿಕರಗಳ ವಿನ್ಯಾಸ ಇತ್ಯಾದಿ ವಿಷಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಫ್ಯಾಷನ್ ಡಿಸೈನಿಂಗ್ ವಿಷಯವನ್ನು ಕ್ರಮಬದ್ಧವಾಗಿ ಕಲಿಯಲು ಬೇರೆ ಬೇರೆ ಹಂತದ ಕೋರ್ಸ್‌ಗಳು ಲಭ್ಯವಿದ್ದು, ಅಲ್ಪ ಕಾಲಿಕ ಹಾಗೂ ದೀರ್ಘ ಕಾಲಿಕ ಕೋರ್ಸ್‌ಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ದುಕೊಳ್ಳಬಹುದು. ಮೂರರಿಂದ ನಾಲ್ಕು ವರ್ಷದ ಬ್ಯಾಚುಲರ್ ಆಫ್ ಫ್ಯಾಷನ್ ಡಿಸೈನಿಂಗ್, ಬಿ.ಎಸ್‌ಸಿ. ಇನ್ ಫ್ಯಾಷನ್ ಡಿಸೈನಿಂಗ್, ಡಿಪ್ಲೋಮಾ ಇನ್ ಫ್ಯಾಷನ್ ಡಿಸೈನಿಂಗ್, ಫ್ಯಾಷನ್ ಡಿಸೈನಿಂಗ್‌ನಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿ, ಪಿ.ಜಿ. ಡಿಪ್ಲೋಮಾ ಇನ್ ಫ್ಯಾಷನ್ ಡಿಸೈನಿಂಗ್ ಇತ್ಯಾದಿ ಓದಬಹುದು. ಇದಲ್ಲದೆ ಕೆಲವು ಸಂಸ್ಥೆಗಳಲ್ಲಿ ಅಲ್ಪಾವಧಿಯ ಆರು ತಿಂಗಳಿನಿಂದ ಒಂದು ವರ್ಷದ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಮಾಡಬಹುದು.

    ಭಾರತದಲ್ಲಿ ಅನೇಕ ಪ್ರತಿಷ್ಠಿತ ಫ್ಯಾಷನ್ ಡಿಸೈನಿಂಗ್ ವಿದ್ಯಾಸಂಸ್ಥೆಗಳಿದ್ದು ಅವುಗಳಿಗೆ ನೀವು ಪ್ರವೇಶಾತಿ ಪರೀಕ್ಷೆ ಬರೆದು ದಾಖಲಾತಿ ಪಡೆಯಬಹುದು. ಪ್ರವೇಶಾತಿ ಅಥವಾ ಸಿ.ಇ.ಟಿ. ಪರಿಕ್ಷೆಯ ಪ್ರಕಾರ ಮತ್ತು ವಿಷಯಗಳ ಕುರಿತು ಮಾಹಿತಿ ಪಡೆದುಕೊಳ್ಳಿ. ದೇಶದ ಕೆಲವು ಪ್ರತಿಷ್ಠಿತ ಸಂಸ್ಥೆಗಳಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಬೆಂಗಳೂರು, ಚೆನ್ನೈ, ಹೈದರಾಬಾದ್, ಕಣ್ಣೂರು, ಮುಂಬೈ ಹಾಗೂ ಒಟ್ಟು 17 ಸ್ಥಳಗಳಲ್ಲಿ ಐ.ಐ.ಎಫ್.ಟಿ. ಸಂಸ್ಥೆಗಳಿವೆ.) ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ಪ್ರಯತ್ನಿಸಿದರೆ ಉತ್ತಮ. ಅದಲ್ಲದೆ, ಇಂಡಿಯನ್ ಸ್ಕೂಲ್ ಆಫ್ ಡಿಸೈನ್ ಅಂಡ್ ಇನ್ನೋವೇಶನ್, ಮುಂಬೈ, ಸೃಷ್ಟಿ ಸ್ಕೂಲ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ ಬೆಂಗಳೂರು ಇತ್ಯಾದಿಗಳಲ್ಲಿ ಪ್ರಯತ್ನಿಸಬಹುದು.

    ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿದ್ದು ಆಭರಣ ಹಾಗೂ ಉಡುಪುಗಳನ್ನು ವಿನ್ಯಾಸ ಮಾಡುವ ಕಂಪನಿಗಳಲ್ಲಿ ಡಿಸೈನೈರ್ ಆಗಿ ಕೆಲಸ ನಿರ್ವಹಿಸಬಹುದು. ಕೇವಲ ಆಭರಣ ಮತ್ತು ಉಡುಪುಗಳು ಮಾತ್ರವಲ್ಲದೆ ಪಾದರಕ್ಷೆ, ಬ್ಯಾಗ್ ಹಾಗೂ ಇತರ ಅನೇಕ ಪರಿಕರಗಳ ಡಿಸೈನಿಂಗ್ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಕಂಪನಿಗಳಲ್ಲಿ ಡಿಸೈನರ್ ಆಗುವುದರ ಜೊತೆಗೆ ಸವಾಲಿನ ಕೆಲಸಗಳಾದ ಸಮಾರಂಭ, ಸಿನಿಮಾ ಹಾಗೂ ಸೆಲೆಬ್ರಿಟಿಗಳ ಫ್ಯಾಷನ್‌ಗೆ ಸಂಬಂಧಿಸಿದ ಫ್ಯಾಷನ್ ಇಲ್ಲಸ್ಟ್ರೇಟರ್, ಫ್ಯಾಷನ್ ಸ್ಟೈಲಿಸ್ಟ್, ಫ್ಯಾಷನ್ ಸಂಯೋಜಕರಾಗಿ ಕೆಲಸ ಮಾಡಬಹುದು. ಡಿಸೈನಿಂಗ್ ಕ್ಷೇತ್ರದಲ್ಲಿ ಸ್ಚಂತ ಉದ್ಯೋಗಿಗಳಾಗಿ, ಸಲಹೆಗಾರರಾಗಿ, ಶಿಕ್ಷಕರಾಗಿ ಕೆಲಸ ಮಾಡಬಹುದು.

    ಫ್ಯಾಷನ್ ಡಿಸೈನಿಂಗ್ ಕ್ಷೇತ್ರವು ಸ್ಪರ್ಧಾತ್ಮಕ ಕ್ಷೇತ್ರವಾಗಿದ್ದು ಹೆಚ್ಚು ಪರಿಪೂರ್ಣತೆ, ಏಕಾಗ್ರತೆ ಮತ್ತು ಹೊಸ ಹೊಸ ಆಲೋಚನೆಗೆ ತೆರೆದುಕೊಳ್ಳುವ ಮನೋಭಾವ ಇರಬೇಕಾದ ಕ್ಷೇತ್ರವಾಗಿದ್ದು ಆ ನೆಲೆಯಲ್ಲಿ ನಿಮ್ಮನ್ನು ನೀವು ತಯಾರಿ ಮಾಡಿಕೊಳ್ಳುವುದು ಮುಖ್ಯ.

  • ನಾನು ಅರ್ಥಶಾಸ್ತ್ರ, ಇತಿಹಾಸ ಹಾಗೂ ಅಪ್ಲೈಡ್‌ ಸಂಖ್ಯಾಶಾಸ್ತ್ರದಲ್ಲಿ ಬಿ.ಎ. ಮಾಡಿದ್ದೇನೆ. ಈಗ ಸೈಕಾಲಜಿಯಲ್ಲಿ ಎಂ.ಎ./ ಎಂ.ಎಸ್‌ಸಿ. ಮಾಡಲು ಸಾಧ್ಯವೇ? ಸಾಧ್ಯವಾದರೆ ಒಳ್ಳೆಯ ಕಾಲೇಜು/ ವಿಶ್ವವಿದ್ಯಾಲಯದ ಬಗ್ಗೆ ಸಲಹೆ ನೀಡಿ.

- ಮೃತ್ಯುಂಜಯ ಕೆ., ಊರು ಇಲ್ಲ

ಮೃತ್ಯುಂಜಯ, ಸಾಮಾನ್ಯವಾಗಿ ಹೆಚ್ಚಿನ ಕಾಲೇಜ್‌ ಮತ್ತು ವಿಶ್ವವಿದ್ಯಾಲಯಗಳಲ್ಲಿ ಎಂ.ಎಸ್‌ಸಿ. ಅಥವಾ ಎಂ.ಎ ಸೈಕಾಲಜಿ ಓದಲು ಪದವಿಯಲ್ಲಿ ಮನಃಶಾಸ್ತ್ರ ವಿಷಯವನ್ನು ಮೇಜರ್/ಆಪ್ಶನಲ್ ಆಗಿ ಓದಿರಬೇಕು. ಮಂಗಳೂರು, ಮೈಸೂರು, ಬೆಂಗಳೂರು, ಧಾರವಾಡ ಇತ್ಯಾದಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಮತ್ತು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆಯಲು ಪದವಿ ಹಂತದಲ್ಲಿ ಮನಃಶಾಸ್ತ್ರ ಓದುವುದು ಕಡ್ಡಾಯವಾಗಿದೆ. ಆದರೆ ಭಾರತದ ಕೆಲವೊಂದು ಖಾಸಗಿ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೇರೆ ವಿಷಯಗಳೊಂದಿಗೆ ಪದವಿ ಮಾಡಿದವರಿಗೂ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಅವಕಾಶವಿದೆ ಎಂದು ಹೇಳಲಾಗುತ್ತದೆ. ಆದರೆ ಆ ಬಗ್ಗೆ ನಿಖರವಾದ ಮಾಹಿತಿ ಹುಡುಕಿ ಹೇಳಲು ಇಲ್ಲಿ ಆನಾನುಕೂಲವಿರುವುದರಿಂದ ನೀವು ಆಯಾ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ಆ ಬಗ್ಗೆ ನಿಖರವಾದ ಮಾಹಿತಿ ಪಡೆಯಬಹುದು. ಮೊದಲಿಗೆ ಮನಃಶಾಸ್ತ್ರದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೊಡಮಾಡುವ ವಿಶ್ವವಿದ್ಯಾಲಯಗಳ ಹೆಸರುಗಳನ್ನು ಪಟ್ಟಿ ಮಾಡಿ. ನಂತರ ಆಯಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅಥವಾ ಕರೆ ಮಾಡಿ ವಿಚಾರಿಸಿ.

ಹಾಗೆಯೇ, ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮುಖಾಂತರ ಪಡೆಯಲು ಈ ರೀತಿಯ ಯಾವ ನಿರ್ಬಂಧಗಳೂ ಇಲ್ಲ. ಮನಃಶಾಸ್ತ್ರದ ಕುರಿತಾದ ಜ್ಞಾನ ಮತ್ತು ಡಿಗ್ರಿಗಾಗಿ ದೂರ ಶಿಕ್ಷಣದಲ್ಲಿ ಓದಬಹುದು. ಆದರೆ ದೂರ ಶಿಕ್ಷಣದ ಮುಖಾಂತರ ಪಡೆಯವ ಜ್ಞಾನ ಮತ್ತು ಪದವಿಯ ಆಧಾರದ ಮೇಲೆ ಮನಃಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ಪಡೆಯುವುದು ಸ್ವಲ್ಪ ಕಷ್ಟವಾಗುತ್ತದೆ. ಹಾಗಂತ ಅಸಾಧ್ಯವೇನಲ್ಲ, ಸ್ವಲ್ಪ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಮನಃಶಾಸ್ತ್ರ ವಿಷಯವನ್ನು ನೀವು ಯಾಕಾಗಿ ಓದಲು ಇಚ್ಛಿಸುತ್ತಿದ್ದೀರಿ ಮತ್ತು ಅದರ ಉದ್ದೇಶ ಏನು ಎಂದು ಸ್ಪಷ್ಟಪಡಿಸಿಕೊಂಡು ಅದಕ್ಕೆ ಸೂಕ್ತವಾದ ಮಾರ್ಗವನ್ನು ಯೋಚಿಸಿ ನಿರ್ಧರಿಸಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,
ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT