ಗುರುವಾರ , ನವೆಂಬರ್ 26, 2020
20 °C

PV Web Exclusive | ‘ಅರಿವಿನ ಮನೆ’ಯಲ್ಲಿ ತೋಂಟದ ‘ಸಿದ್ಧಲಿಂಗ ಶ್ರೀ’ಗಳ ಬೆಳಕು...

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಸಾಹಿತ್ಯಾಸಕ್ತರೆಲ್ಲರೂ ‘ಪುಸ್ತಕದ ಸ್ವಾಮೀಜಿ’ ಎಂದೇ ಅಭಿಮಾನದಿಂದ ಕರೆಯುತ್ತಿದ್ದರು. ಭಕ್ತರ ಕೈಗೆ ಅವರು ಕಲ್ಲು ಸಕ್ಕರೆಯ ಜತೆಗೆ ಕನ್ನಡ ಪುಸ್ತಕಗಳನ್ನು ಕೊಟ್ಟು, ಅರಿವಿನ ವಿಸ್ತಾರಕ್ಕೆ ಕಾರಣರಾದರು. ಅಂತೆಯೇ, ಶ್ರೀಗಳ ಆಸೆಯಂತೆ ಒಂದು ಸುಸಜ್ಜಿತ ಗ್ರಂಥಾಲಯ ತೆರೆಯಬೇಕು ಎಂಬ ಸಂಕಲ್ಪದೊಂದಿಗೆ ಮನೆಯ ಹಿತ್ತಲಿನಲ್ಲಿದ್ದ ಹೂ– ಹಣ್ಣಿನ ತೋಟ ತೆಗೆದು; ಆ ಜಾಗದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮಿಗಳನ್ನು ತಂದು ಕೂರಿಸಿದ್ದಾರೆ ಪ್ರೊ.ಚಂದ್ರಶೇಖರ ವಸ್ತ್ರದ. ಗದುಗಿನ ‘ಅರಿವಿನ ಮನೆ’ಯಲ್ಲಿ ಈಗ ‘ಸಿದ್ಧಲಿಂಗ ಶ್ರೀ’ಗಳ ಬೆಳಕು ಚೆಲ್ಲುತ್ತಿದೆ...

---

ಶ್ರೀಸಾಮಾನ್ಯರಲ್ಲೂ ಓದಿನ ಅಭಿರುಚಿ ಬೆಳೆಸಿದ ಕೀರ್ತಿ ಸಲ್ಲುವುದು ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳಿಗೆ. ಶ್ರೀಮಠದಲ್ಲಿ ಈಗಲೂ ಅನ್ನ, ಜ್ಞಾನ ದಾಸೋಹದ ಜತೆಗೆ ಪುಸ್ತಕ ದಾಸೋಹ ನಿರಂತರವಾಗಿ ನಡೆಯುತ್ತಿದೆ.

ಶ್ರೀಗಳಿಗೆ ಪುಸ್ತಕಗಳ ಮೇಲೆ ಅಪಾರ ಪ್ರೀತಿ. ಸುಸಜ್ಜಿತವಾಗಿರುವ ಒಂದು ಪುಸ್ತಕ ಭಂಡಾರ ತೆರೆಯಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಆ ಕನಸು ಈಡೇರುವ ವೇಳೆ ಅವರು ಲಿಂಗೈಕ್ಯರಾದರು. ಬಾಲ್ಯದಿಂದಲೂ ಶ್ರೀಗಳ ಪ್ರೀತಿಯ ಸುಧೆಯನ್ನೇ ಉಂಡು ಬೆಳೆದಿರುವ ಪ್ರೊ.ಚಂದ್ರಶೇಖರ ವಸ್ತ್ರದ ಅವರು ಶ್ರೀಗಳ ದ್ವಿತೀಯ ಪುಣ್ಯಸ್ಮರಣೆಯಂದು (2020 ಅಕ್ಟೋಬರ್‌ 20) ಅವರ ಆಸೆಯನ್ನು ‘ಸಿದ್ಧಲಿಂಗ ಅರಿವಿನ ಮನೆ’ಯ ಮೂಲಕ ಪೂರ್ಣಗೊಳಿಸಿದ್ದಾರೆ. ಶ್ರೀಗಳ ಇಚ್ಛೆಯಂತೆ ಓದಿನ ಸುಖವನ್ನು ಎಲ್ಲರಿಗೂ ಮುಕ್ತವಾಗಿ ಉಣಬಡಿಸುವ ಸಂಕಲ್ಪ ಕೈಗೊಂಡಿದ್ದಾರೆ. 

‘ಅರಿವಿನ ಮನೆ’ ತೆರೆಯಲು ಪ್ರೇರಣೆ ಹಾಗೂ ಬಾಲ್ಯದಿಂದಲೂ ಒದಗಿಬಂದ ಶ್ರೀಗಳ ಜತೆಗಿನ ಒಡನಾಟದ ಸವಿಯನ್ನು ಪ್ರೊ.ಚಂದ್ರಶೇಖರ ವಸ್ತ್ರದ ವಿವರಿಸುವುದು ಹೀಗೆ:

‘ಬಾಲ್ಯದಿಂದಲೇ ಸಿದ್ಧಲಿಂಗ ಶ್ರೀಗಳ ಪ್ರೀತಿ, ವಾತ್ಸಲ್ಯ ಸಿಕ್ಕಿತು. ತಂದೆ–ತಾಯಿ ಇಬ್ಬರೂ ಕನ್ನಡ ಶಾಲೆಯ ಶಿಕ್ಷಕರು. ಅವರು ಮನೆಗೆ ಬರುವ ಸಂದರ್ಭದಲ್ಲಿ ಆಟಿಕೆಗಳ ಬದಲಿಗೆ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಹೀಗೆ ನಮ್ಮ ಬಾಲ್ಯಕ್ಕೆ ‘ಬಾಲಮಿತ್ರ’, ‘ಚಂದಮಾಮ’ನ ಕತೆಗಳು ಜತೆಯಾದವು. ಗದುಗಿನ ಶ್ರೀಗಳು ಬೇಸಿಗೆ ರಜೆ ಸಂದರ್ಭದಲ್ಲಿ ಸಿಂಧಗಿಗೆ ಬರುತ್ತಿದ್ದರು. ಆ ವೇಳೆ ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿಯಾಗುತ್ತಿದ್ದೆ. ಅವರ ಮಾತುಗಳಿಂದ ಪ್ರಭಾವಗೊಂಡ ನಾನು ಕ್ರಮೇಣ ಶ್ರೀಗಳ ಸಾಮೀಪ್ಯಕ್ಕೆ ಬಂದೆ.

ಶ್ರೀಗಳಿಗೆಓದಿನ ಹಸಿವು ವಿಪರೀತವಾಗಿತ್ತು. ಅವರು ಸಾರ್ವತ್ರಿಕವಾಗಿ ಎಲ್ಲರಲ್ಲೂ ಓದಿನ ಅಭಿರುಚಿ ಬೆಳೆಸಿದರು. ಅಪ್ಪ– ಅಮ್ಮ ಕೊಡುತ್ತಿದ್ದಂತಹ ಪುಸ್ತಕಗಳು ಮತ್ತು ಅಜ್ಜನ ಜತೆ ನಿರಂತರವಾಗಿ ನಡೆಯುತ್ತಿದ್ದ ಸಾಹಿತ್ಯಿಕ ಚರ್ಚೆಗಳು ನನ್ನಲ್ಲೂ ಓದಿನ ಅಭಿರುಚಿ ಬೆಳೆಸಿತು. ಹತ್ತನೇ ತರಗತಿಗೆ ಬರುವ ವೇಳೆಗೆ ಅನಕೃ, ಎಸ್‌.ಎಲ್‌.ಭೈರಪ್ಪ ಅವರಿಂದ ಹಿಡಿದು ಆ ಕಾಲದ ಎಲ್ಲ ಕಾದಂಬರಿಕಾರರ ಕೃತಿಗಳ ಸವಿಯನ್ನು ಗದುಗಿನ ತೋಂಟದ ಶ್ರೀಗಳು ನಮಗೆ ಉಣಬಡಿಸಿದ್ದರು.

ಯಾವುದೇ ಹೊಸ ಕಾದಂಬರಿ ಬಂದರೂ ಅದನ್ನು ಓದಿ ನಮ್ಮೆಲ್ಲರಿಗೂ ರಸವತ್ತಾಗಿ ವಿವರಿಸಿ ಹೇಳುತ್ತಿದ್ದರು. ಕೆಲವೊಮ್ಮೆ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಸಂಜೆ ವಾಯುವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಅವರೊಂದಿಗೆ ಕೃತಿಗಳ ಕುರಿತು ಚರ್ಚೆ ನಡೆಯುತ್ತಿತ್ತು. ದೇವದಾಸ್‌ ಜೀವನಾಧರಿತ ಕುರಿತ ಮೂರು ಸಿನಿಮಾಗಳನ್ನು ನೋಡಿದ್ದೆ. ಆದರೆ, ಶ್ರೀಗಳು ನಮಗೆ ಆ ಕತೆಯನ್ನು ನಿರೂಪಿಸಿದ ಶೈಲಿಯ ಮುಂದೆ; ಆ ಸಿನಿಮಾಗಳು ಸಪ್ಪೆ ಎನಿಸಿದವು.

ನಾನು ಒಮ್ಮೆ ಲಂಡನ್‌ಗೆ ಹೋಗಿ ಬಂದ ನಂತರ, ಅಲ್ಲಿನ ಗ್ರಂಥಾಲಯಗಳ ಬಗ್ಗೆ ಒಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದೆ. ಅಲ್ಲಿರುವ ಗ್ರಂಥಾಲಯಗಳ ಅಚ್ಚುಕಟ್ಟುತನ, ವಿಷಯ ವೈವಿಧ್ಯ, ಮಕ್ಕಳ ಲೈಬ್ರರಿಗಳ ಬಗ್ಗೆ ತಿಳಿಸಿದಾಗ ನಮ್ಮಲ್ಲೂ ಅಂತಹದ್ದೊಂದು ಓದಿನ ಮನೆ ಆಗಬೇಕು ಎಂದು ಶ್ರೀಗಳು ಬಯಸಿದ್ದರು. ನಾನು ವೃತ್ತಿಯಿಂದ ನಿವೃತ್ತನಾಗುವ ಸಮಯಕ್ಕೆ ಅಜ್ಜನವರು ಲಿಂಗೈಕ್ಯರಾದರು. ಅವರ ಆಸೆಯಂತೆ ಏನಾದರೂ ಮಾಡಿ ಒಂದು ಪುಟ್ಟದಾದರೂ ಚೊಕ್ಕವಾಗಿರುವ ಗ್ರಂಥಾಲಯ ಮಾಡಬೇಕು ಎಂದು ಮನಸ್ಸು ಹಂಬಲಿಸುತ್ತಿತ್ತು. ಆಗ ನನ್ನೊಳಗೆ ಕಾಣಿಸಿದ್ದು ‘ಅರಿವಿನ ಮನೆ’ ಎಂಬ ಬೆಳಕು!

ನನ್ನ ಸಂಗ್ರಹದಲ್ಲಿ 10ರಿಂದ 15 ಸಾವಿರದಷ್ಟು ಪುಸ್ತಕಗಳು ಇದ್ದವು. ಆ ಪುಸ್ತಕಗಳನ್ನು ಬಳಸಿ ಒಂದು ಗ್ರಂಥಾಲಯ ಮಾಡಬೇಕು ಎಂದು ಬಯಸಿದೆ. ನನ್ನ ಬಳಿ ಇದ್ದ ಪುಸ್ತಕಗಳ ವರ್ಗೀಕರಣ ಆಗಿರಲಿಲ್ಲ. ಲಾಕ್‌ಡೌನ್‌ ಸಮಯವನ್ನು ಅದಕ್ಕಾಗಿ ಮೀಸಲಿಟ್ಟೆ. ದಿನದಲ್ಲಿ 12 ಗಂಟೆ ಇದಕ್ಕಾಗಿ ಸಮಯ ವಿನಿಯೋಗಿಸಿದೆ. ಕತೆ, ಕಾದಂಬರಿ, ಕಾವ್ಯ, ಜೀವನ ಚರಿತ್ರೆ ಹೀಗೆ ಪುಸ್ತಕಗಳನ್ನು ವಿಭಾಗವಾರು ವರ್ಗೀಕರಿಸಿದೆ. ಹೀಗೆ ಅಜ್ಜನನ್ನು ನೆನಪಿಸಿಕೊಂಡು ‘ಅರಿವಿನ ಮನೆ’ಯ ಕೆಲಸ ಪ್ರಾರಂಭಿಸಿದೆ. ಹೂವಿನ ಮಾಲೆ ಎತ್ತಿದಷ್ಟೇ ಸರಾಗವಾಗಿ ಅದು ನೆರವೇರಿತು.

ಹಣ್ಣುಗಳು ಹೊಟ್ಟೆ ತುಂಬಿಸಿದರೆ, ಪುಸ್ತಕಗಳು ನೆತ್ತಿ ತುಂಬಿಸುತ್ತವೆ ಎಂಬ ಶ್ರೀಗಳ ಮಾತಿನಂತೆ, ಮನೆಯ ಬಳಿಯಲ್ಲಿ ಇದ್ದ ಹಣ್ಣಿನ ತೋಟ ತೆಗೆದು; ಆ ಜಾಗದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮಿಗಳನ್ನು ಕೂರಿಸಿದೆ. ಅಚ್ಚುಕಟ್ಟಾಗಿ ತಲೆಎತ್ತಿದ ಪುಟ್ಟ ಕಟ್ಟಡದೊಳಗೆ ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ಪ್ರಬಂಧ, ಆರೋಗ್ಯ, ಕೃಷಿ, ಧರ್ಮ, ತತ್ವಶಾಸ್ತ್ರ, ರಂಗಭೂಮಿ ಮತ್ತು ನಾಟಕ, ಆತ್ಮ ಚರಿತ್ರೆ, ಜೀವನ ಚರಿತ್ರೆ, ವಚನ ಸಾಹಿತ್ಯ, ಶರಣ ಸಾಹಿತ್ಯ, ಪ್ರವಾಸ, ವೈಚಾರಿಕ, ವಿಜ್ಞಾನ, ಮನೋವಿಜ್ಞಾನ, ಜಾನಪದ ಪುಸ್ತಕಗಳ ಸೊಗಡು ಅಡರಿದೆ. ಅದಕ್ಕೆ ಸಾಹಿತ್ಯಿಕ ಪತ್ರಿಕೆಗಳೂ ಸೇರಿಕೊಂಡು ‘ಅರಿವಿನ ಮನೆ’ಯ ಮೆರುಗು ಹೆಚ್ಚಿಸಿದೆ. ಶ್ರೀಗಳ ಪುಣ್ಯಸ್ಮರಣೆಯ ದಿನದಂದೇ ಅವರ ಕನಸು ಈಡೇರಿಸಿದ ಖುಷಿಯಲ್ಲಿ ಜೀಕುವ ಸರದಿ ಈಗ ನನ್ನದಾದರೆ; ಓದುವ ಖುಷಿ ಅನುಭವಿಸುವುದು ಸಹೃದಯಿಗಳದ್ದು...’

‘ಅರಿವಿನ ಮನೆ’ ನೋಡಲು ಈ ಕೊಂಡಿ ಬಳಸಿ: rb.gy/ucrsmm

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು