ಶನಿವಾರ, ಜನವರಿ 18, 2020
20 °C
ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ l ಶಾಲೆಯ ಆವರಣದಲ್ಲಿವೆ 224ಕ್ಕೂ ಹೆಚ್ಚು ಮರಗಳು

ಹಸಿರ ನಡುವೆ ಕಂಗೊಳಿಸುವ ಶಾಲೆ

ಅಭಿಷೇಕ ಎನ್‌.ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಹಚ್ಚ ಹಸಿರಿನ ಗಿಡ ಮರಗಳ ನಡುವೆ ವಿಶಾಲವಾದ ಪ್ರದೇಶದಲ್ಲಿರುವ ತಾಲ್ಲೂಕಿನ ಯಂಕಂಚಿ ಪುನರ್ವಸತಿ ಕೇಂದ್ರದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾರ್ವಜನಿಕರನ್ನು ಆಕರ್ಷಿಸುತ್ತದೆ. 

ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಬೇವು, ತೆಂಗು, ಕರಿಬೇವು, ಸಾಗವಾನಿ, ವಿವಿಧ ಹೂವಿನ ಗಿಡ ಸೇರಿ  224 ಕ್ಕೂ ಹೆಚ್ಚಿನ ಗಿಡ–ಮರಗಳ ಮಧ್ಯದಲ್ಲಿರುವ ಶಾಲೆಯ ವಾತಾವರಣ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಮೂಡಿಸುತ್ತಿದೆ. 

ಒಂದರಿಂದ ಏಳನೇ ತರಗತಿಯವರೆಗಿರುವ ಶಾಲೆಯಲ್ಲಿ ಒಟ್ಟು 133 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿರುವ ಶಿಕ್ಷಕರು ಕ್ರಿಯಾಶೀಲರಾಗಿರುವುದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

‘ಹಳೆ ಯಂಕಂಚಿ ಗ್ರಾಮ ಮುಳುಗಡೆಯಾದ ಬಳಿಕ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರವಾದ ನಂತರ ಇಷ್ಟೊಂದು ವಿಶಾಲವಾದ ಜಾಗದಲ್ಲಿ ಪ್ರಾರಂಭವಾದ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆಯಿಲ್ಲ. 7ನೇ ತರಗತಿಯ ಮಕ್ಕಳಿಗೆ ಆರು ಜನ ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಎಲ್ಲ ವಿಷಯಗಳನ್ನು ಬೋಧಿಸುವ ಶಿಕ್ಷಕರಿರುವುದರಿಂದ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ’ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಎಸ್.ಪಿ.ಕೆಂಗನಾಳ. 

‘ವಿದ್ಯಾರ್ಥಿಗಳಿಗೆ ಬೇಕಿರುವ ಕುಡಿಯುವ ನೀರು, ಶೌಚಾಲಯ ಸೇರಿ  ಎಲ್ಲ ರೀತಿಯ ಅನುಕೂಲವನ್ನು ಎಸ್‌ಡಿಎಂಸಿ ಅಧ್ಯಕ್ಷರು ಮಾಡಿಸಿದ್ದಾರೆ. ಶಾಲೆಯ ವಿಶಾಲವಾದ ಕ್ರೀಡಾಂಗಣದಲ್ಲಿ
ತರಬೇತಿ ಪಡೆದ ವಿದ್ಯಾರ್ಥಿನಿಯರು ಇತ್ತೀಚೆಗೆ ನಡೆದ ತಾಲ್ಲೂಕು ಮಟ್ಟದ 100 ಮೀಟರ್ ಓಟದಲ್ಲಿ ದ್ವಿತೀಯ, ಎತ್ತರ ಜಿಗಿತದಲ್ಲಿ ತೃತೀಯ ಹಾಗೂ 100X4 ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ’ ಎಂದು ತಿಳಿಸಿದರು.

‘ಮಕ್ಕಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿದಿನ ಪ್ರಾರ್ಥನೆಯ ಸಮಯದಲ್ಲಿ ರಸಪ್ರಶ್ನೆ ಕೇಳಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಬರವಣಿಗೆಯಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಶಾಲೆಯಲ್ಲಿ ಬೆಳೆದಿರುವ ಗಿಡ, ಮರಗಳಿಂದಾಗುವ ಪ್ರಯೋಜನಗಳ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಬೇಕು ಎನ್ನುವ ಹಿನ್ನೆಲೆಯಲ್ಲಿ ವಾರದಲ್ಲಿ ಒಂದು ದಿನ ನೆನೆಸಿದ ಕಾಳುಗಳನ್ನು ನೀಡಲಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು