ಸೋಮವಾರ, ಮಾರ್ಚ್ 8, 2021
29 °C

ಓದೋ ‘ಪ್ಲಾನ್’ ಸರಿ, ಜಾರಿ ಮಾಡೋದು ಹೇಗೆ?

ಕೋಕಿಲ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

ಈಗ ತಾನೆ ಹೈಸ್ಕೂಲ್ ಮುಗಿಸಿ ನೂರಾರು ಕನಸುಗಳ ಬುತ್ತಿ ಹೊತ್ತು ಕಾಲೇಜಿಗೆ ಕಾಲಿಡುವ ಬಹುತೇಕ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಬಗ್ಗೆ ತಮ್ಮದೆ ನಿಲುವು ತಳೆದಿರುತ್ತಾರೆ. ಜೀವನದ ಗುರಿಯೆಡೆಗಿನ ನಡೆ ಕೂಡ ಅಷ್ಟೇ ಗಟ್ಟಿಯಾಗಿರುತ್ತದೆ. ಕೆಲವೊಮ್ಮೆ ಕಂಡ ಕನಸನ್ನು ಸಾಕಾರಗೊಳಿಸುವ ಹಾದಿ ಸುಲಭದ್ದೇನಲ್ಲ. ಶಾಲಾ ವಾತಾವರಣದಿಂದ ಕಾಲೇಜು ವಾತಾವರಣಕ್ಕೆ ಸಾಕಷ್ಟು ಬದಲಾವಣೆಗಳಿರುತ್ತವೆ. ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಯೋಜಿತ ರೀತಿಯಲ್ಲಿ ಮಾಡುವ ವಿದ್ಯಾಭ್ಯಾಸದ ತಯಾರಿ, ನಿಜಕ್ಕೂ ಅಂದುಕೊಂಡದ್ದನ್ನು ಸಾಧಿಸುವಲ್ಲಿ ಸಹಕಾರಿಯಾಗುತ್ತದೆ.

ವಿಷಯದ ಆಯ್ಕೆ

ವಿಷಯದ ಆಯ್ಕೆ ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲಿದ್ದಂತೆ. ಹಾಗಾಗಿ ಅತ್ಯಂತ ಜಾಗರೂಕರಾಗಿ ಆಯ್ದುಕೊಳ್ಳುವುದು ಒಂದು ಜಾಣ್ಮೆ. ಯಾರನ್ನೋ ಮೆಚ್ಚಿಸುವ ಬದಲು ಆಸಕ್ತಿಯ ವಿಷಯವನ್ನು ಕಾಲೇಜಿನಲ್ಲಿ ಆಯ್ದುಕೊಳ್ಳುವುದು ಉತ್ತಮ. ಉದಾಹರಣೆಗೆ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿ ಹತ್ತನೆಯ ತರಗತಿಯಲ್ಲಿ ಶೇ 92ರಷ್ಟು ಅಂಕ ಗಳಿಸಿದ್ದಾನೆ ಎನ್ನುವ ಕಾರಣಕ್ಕೆ ಸೈನ್ಸ್ ಕಾಂಬಿನೇಷನ್‌ ತೆಗೆದುಕೊಳ್ಳಬೇಕು ಎನ್ನುವುದು ಎಷ್ಟು ಸರಿ?

ಸಿಲಬಸ್ ಬಗ್ಗೆ ಎಷ್ಟು ಗೊತ್ತು?

ಬಹಳಷ್ಟು ವಿದ್ಯಾರ್ಥಿಗಳು ಆ ವರ್ಷದಲ್ಲಿ ಇರುವ ವಿಷಯವಾರು ಸಿಲಬಸ್‌ನ ಬಗ್ಗೆಯೇ ತಿಳಿದುಕೊಂಡಿರುವುದಿಲ್ಲ. ಪರೀಕ್ಷೆ ಒಂದೆರಡು ವಾರ ಇದೆ ಎನ್ನುವಾಗ ಸಿಲಬಸ್ ಪ್ರತಿ ಹಿಡಿದು ಅಲೆಯುವವರೂ ಇದ್ದಾರೆ. ಪ್ರತೀ ವಿಷಯದಲ್ಲಿ ಏನೆಲ್ಲಾ ಅಡಗಿದೆ ಎಂಬುದನ್ನು ತಿಳಿದುಕೊಳ್ಳುವುದು, ವಿಷಯದ ಆಳವನ್ನು ಅರಿತುಕೊಳ್ಳುವಷ್ಟೇ ಮುಖ್ಯ. ಇದು ಒಂಥರಾ ಅಡುಗೆ ಮಾಡುವ ಮುನ್ನ ರೆಸಿಪಿ ಬರೆದುಕೊಂಡಂತೆ.

ಕಷ್ಟದ ವಿಷಯವೂ ಇಷ್ಟವಾಗುವುದು

ಪರೀಕ್ಷೆ ಇನ್ನೂ ಮೂರು ತಿಂಗಳಿದೆ, ನಿಧಾನಕ್ಕೆ ಓದಿದರಾಯಿತು ಎನ್ನುವ ಉಡಾಫೆ ಬಿಟ್ಟು ಆರಂಭದಲ್ಲಿಯೇ ಪ್ರತಿಯೊಂದು ವಿಷಯಕ್ಕೂ ಇಂತಿಷ್ಟು ಸಮಯವನ್ನು ಮೀಸಲಿಟ್ಟರೆ ಕಷ್ಟವಾದ ವಿಷಯ ಕೂಡ ನಿಧಾನವಾಗಿ ಇಷ್ಟವಾಗುತ್ತದೆ. ವಿಶ್ವವಿಖ್ಯಾತ ಗಯನನ ಕಥೆ ಇದಕ್ಕೊಂದು ಉತ್ತಮ ನಿದರ್ಶನ. ತನ್ನ ಪ್ರೀತಿಯ ಚಿಕ್ಕ ಕೋಣವನ್ನು ಹೊತ್ತು ಪ್ರತಿದಿನ ಬೆಟ್ಟ ಹತ್ತಲು ನಿರ್ಧರಿಸಿದ. ಶುರುವಿನಲ್ಲಿ ಕಷ್ಟವಾದರೂ ಛಲ ಬಿಡದ ಗಯನ ತನ್ನ ಅಭ್ಯಾಸವನ್ನು ಮುಂದುವರೆಸಿದ್ದ. ದಿನ ಕಳೆದಂತೆ ಕೋಣ ದೊಡ್ಡದಾಯಿತು, ಆದರೆ ಗಯನನ ಪ್ರತಿದಿನದ ಅಭ್ಯಾಸ, ಹವ್ಯಾಸವಾಗಿ ಬದಲಾಗಿದ್ದರಿಂದ ಕೋಣದ ತೂಕ ಅವನಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟುಮಾಡಲಿಲ್ಲ.

ಸಾಕಷ್ಟು ವಿದ್ಯಾರ್ಥಿಗಳು ಕಷ್ಟವಾದ ವಿಷಯವನ್ನು ಓದುವುದೇ ಇಲ್ಲ. ತನಗದು ಕಷ್ಟ ಎನ್ನುವ ಕಾರಣಕ್ಕೆ ಅದರಿಂದ ಸಾಧ್ಯವಾದಷ್ಟು ದೂರವೇ ಉಳಿಯುತ್ತಾರೆ. ಇದರಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾಗುವುದೇ ಹೊರತು ಬೇರೆ ಯಾವ ಪ್ರಯೋಜನವೂ ಇಲ್ಲ. ಅಂತಹ ವಿಷಯಗಳನ್ನು ಪದೇಪದೇ ಅಭ್ಯಾಸ ಮಾಡುವುದರ ಜೊತೆಗೆ ಒಂದಿಷ್ಟು ಸರಳ ಉಪಾಯಗಳನ್ನು ಅನುಸರಿಸುವುದು ಒಳ್ಳೆಯದು. ಉದಾಹರಣೆಗೆ ಆಲಿಸುವಿಕೆಯಿಂದ ಅರ್ಥವಾಗದ ಅದೆಷ್ಟೋ ವಿಷಯಗಳಿಗಾಗಿಯೇ ಈಗ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವಿಡಿಯೊಗಳು ಲಭ್ಯ.

ಓದುವ ಪರಿ

ಕಷ್ಟದ ವಿಷಯವನ್ನೇ ಇಡೀ ದಿನ ಓದಬೇಕೆಂದೇನೂ ಇಲ್ಲ. ಉಳಿದ ವಿಷಯಗಳಿಗಿಂತ ಒಂಚೂರು ಹೆಚ್ಚಿನ ಸಮಯ, ಕಾಳಜಿ ಕೊಟ್ಟರೆ ಸಾಕು. ಓದಲು ಕುಳಿತಾಗ ಮೊದಲು ಇಷ್ಟವಾದ ವಿಷಯದಿಂದ ಶುರುಮಾಡಿ ನಂತರ ಕಷ್ಟವಾದ ವಿಷಯಗಳನ್ನು ಕೈಗೆತ್ತಿಕೊಳ್ಳುವುದು ಉತ್ತಮ. ಮನಸ್ಸಿಗೂ ಒಂದು ರೀತಿಯ ಸಮಾಧಾನ.

ಲೈಫ್ ಸೈನ್ಸ್ ಓದುವಾಗ ಅಲ್ಲಿ ಕಂಠಪಾಠ ಮಾಡುವುದಕ್ಕಿಂತ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಒಂದೆರಡು ಬಾರಿ ಓದಿ ಅರ್ಥೈಸಿಕೊಂಡು ಮುಚ್ಚಿಟ್ಟು ಪುನಃ ಬರೆಯುವುದರಿಂದ ತುಂಬ ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಫಾರ್ಮುಲಾಗಳನ್ನು ಕಂಠಪಾಠ ಮಾಡುವುದರ ಜೊತೆಗೆ ದಿನಕ್ಕೆರಡು ಬಾರಿ ಬರೆಯುತ್ತಿರಬೇಕು. ಕೆಲವು ದಿನಗಳು ಬಳಸದಿದ್ದರೆ ನಮ್ಮ ಫೇಸ್‌ಬುಕ್ ಅಕೌಂಟ್‌ಗಳಿಗೆ ಕೊಟ್ಟ ಪಾಸ್‌ವರ್ಡ್‌ನ್ನೇ ಮರೆಯುತ್ತೇವೆ, ಅಂತಹದ್ದರಲ್ಲಿ ಬೇರೆಯವರು ಮಾಡಿಟ್ಟ ಫಾರ್ಮುಲಾ ಮರೆಯುವುದರಲ್ಲಿ ಅತಿಶಯೋಕ್ತಿ ಇಲ್ಲ. ಜೊತೆಗೆ ಕೆಲವೊಂದು ವಿಚಾರಗಳನ್ನು ರೇಖಾಚಿತ್ರದ ಮೂಲಕ ಕಲಿಯುವುದು ಒಳ್ಳೆಯದು. ಉದಾಹರಣೆಗೆ ಆಹಾರ ಸರಪಳಿ, ವಾಟರ್ ಸೈಕಲ್, ಮನುಷ್ಯನ ಜೀರ್ಣಕ್ರಿಯೆ. ಇದರಿಂದ ಇಡೀ ಪ್ಯಾರಾ ಓದಿ ಜೀರ್ಣಿಸಿಕೊಳ್ಳುವ ಬದಲು ರೇಖಾಚಿತ್ರ ನೋಡಿದಾಕ್ಷಣ ವಿಷಯ ಸಂಪೂರ್ಣವಾಗಿ ಅರ್ಥವಾಗುತ್ತದೆ.

ಇನ್ನು ‘ಗಣಿತದ ಸಮಸ್ಯೆ ಬಿಡಿಸಿದ್ದೀಯಾ?’ ಎನ್ನುತ್ತೇವೆಯೇ ಹೊರತು ಅಪ್ಪಿತಪ್ಪಿಯೂ ‘ಗಣಿತದ ಸಮಸ್ಯೆಗಳನ್ನು ಓದಿಕೋ’ ಎನ್ನುವುದಿಲ್ಲ. ಹಾಗೆಯೇ ಗಣಿತದ ಸಮಸ್ಯೆಗಳನ್ನು ನಿರಂತರವಾಗಿ ಬಿಡಿಸುವ ಮೂಲಕ ಸುಲಭವಾಗಿಸಿಕೊಳ್ಳಬೇಕು. ಸಮಸ್ಯೆಗಳು, ಮತ್ತದನ್ನು ಬಿಡಿಸುವ ವಿಧಾನ ಒಂದೇ ಇರುತ್ತದೆ. ಆದರೆ ಪ್ರಶ್ನೆಯಲ್ಲಿನ ಸಂಖ್ಯೆಗಳಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ.

ಎಲ್ಲ ಐಚ್ಛಿಕ ವಿಷಯಗಳಿಗೆ ಹೆಚ್ಚು ಒತ್ತು ಕೊಡುವ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷನ್ನು ಮರೆತೇ ಬಿಡುತ್ತಾರೆ. ಸಾಹಿತ್ಯದ ಒಳ ಅರ್ಥಗಳನ್ನು ತಿಳಿದು ಅದರ ನೋಟ್ಸ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಷ್ಟು ಕಠಿಣವೇನಲ್ಲ. ಇಂಗ್ಲಿಷ್ ಪತ್ರಿಕೆಗಳನ್ನು ಓದುವುದು, ಸುದ್ದಿ ಚಾನೆಲ್‌ಗಳನ್ನು ನೋಡುವುದು, ಗೊತ್ತಿಲ್ಲದ ಪದಗಳಿಗೆ ಆಗಾಗ ಅರ್ಥ ತಿಳಿದುಕೊಳ್ಳುವುದರಿಂದ ಆದಷ್ಟು ಆಂಗ್ಲಭಾಷೆಯೆಡೆಗಿನ ನಿರುತ್ಸಾಹವನ್ನು ಕಡಿಮೆ ಮಾಡಬಹುದು.

ಇತಿಹಾಸಕ್ಕೆ ಬಂದರೆ ಬರಿಯ ಇಸವಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಾಹಸದ ಕೆಲಸವೇ ಸರಿ. ಕಣ್ಣಿಗೆ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ಬರೆದು ಡಿಸ್‌ಪ್ಲೇನಲ್ಲಿ ಹಾಕುವುದರ ಜೊತೆಗೆ ಪದೇಪದೇ ಓದುತ್ತಿರುವುದೇ ಇದಕ್ಕಿರುವ ಉಪಾಯ.

ಸ್ಮಾರ್ಟ್ ಟೈಂ ಟೇಬಲ್

ಈಗ ಓದಿಗಾಗಿ ಮಾಡುವ ಟೈಂ ಟೇಬಲ್‌ಗಳಿಗಾಗಿಯೇ ಸಾಕಷ್ಟು ಆ್ಯಪ್‌ಗಳು ಆನ್‌ಲೈನ್‌ನಲ್ಲಿ ಲಭ್ಯ. ಸೂಕ್ತವೆನಿಸಿದ್ದನ್ನು ಬಳಸಿಕೊಳ್ಳಬಹುದು.

ಮೊಬೈಲ್‌ನಿಂದ ದೂರ: ಟೈಂ ಟೇಬಲ್ ನೆಪದಿಂದ ಮೊಬೈಲ್‌ಗಳಲ್ಲಿಯೇ ಮುಳುಗುವುದು ಸರಿಯಲ್ಲ. ಮಾಹಿತಿ ಹುಡುಕುವುದಕ್ಕಷ್ಟೆ ಬಳಸಿದರೆ ಸಮಸ್ಯೆಯಿಲ್ಲ. ಆದರೆ ಸೋಷಿಯಲ್ ಮಿಡಿಯಾಗಳಲ್ಲಿ, ವಾಟ್ಸಾಪ್ ಗ್ರೂಪ್‌ಗಳಲ್ಲಿ ವಿನಾಕಾರಣ ಕಾಲಹರಣ ಮಾಡುವುದು ಓದಿಗೆ ತೊಡಕಾಗುತ್ತದೆ.

ಮನೆಯಲ್ಲೊಂದು ಪುಟ್ಟ ಡಿಸ್‌ಪ್ಲೇ ಬೋರ್ಡ್: ಓದುವ ಕೋಣೆಯಲ್ಲಿ ಟೇಬಲ್ ಮುಂದೆ ಪುಟ್ಟದೊಂದು ಡಿಸ್‌ಪ್ಲೇ ಬೋರ್ಡ್‌ಅನ್ನು ಇಟ್ಟು ಅದರಲ್ಲಿ ಬೇಕಾದ ಮಾಹಿತಿಗಳನ್ನು ಹಾಕಿಕೊಳ್ಳುವುದು ಒಳ್ಳೆಯದು. ಎಲ್ಲ ವಿಚಾರಗಳು ನೆನಪಿನಲ್ಲಿ ಉಳಿಯುವುದು ಸ್ವಲ್ಪ ಕಷ್ಟಸಾಧ್ಯ. ಪುನರ್‌ಮನನ ಮಾಡಬೇಕಾದ ಪಾಯಿಂಟ್‌ಗಳನ್ನು ಸಾಧ್ಯವಾದಷ್ಟು ಗಾಢ ಬಣ್ಣಗಳಲ್ಲಿ ಬರೆಯುವುದು ಒಳ್ಳೆಯದು.

ಅಂದಿನ ಕೆಲಸ ಅಂದೇ ಮುಗಿಸಿ: ಅಸೈನ್‌ಮೆಂಟ್‌ಗಳನ್ನು ನೀಡಲು ಸಾಕಷ್ಟು ಕಾಲಾವಕಾಶ ಸಿಗುತ್ತದೆ. ಹೀಗಾಗಿ ದಿನದ ಪಾಠಗಳು ಪುನರ್‌ಮನನ ಆಗುವುದೇ ಇಲ್ಲ. ಎಲ್ಲದಕ್ಕೂ ನಾಳೆ ಮಾಡಿದರಾಯಿತು ಎನ್ನುವ ಸ್ವ ಸಮಾಧಾನದ ಮಾತು ಇನ್ನಷ್ಟು ಸೋಮಾರಿಯನ್ನಾಗಿಸುತ್ತದೆ. ಹೀಗಾಗಿ ನಾಳೆ ಎನ್ನದೆ ಅಂದಿನ ಕೆಲಸ ಅಂದೇ ಮುಗಿಸುವುದು ಉತ್ತಮ.

ನೋಟ್ಸ್ ಅಷ್ಟೇ ಸಾಲದು: ಅಧ್ಯಾಪಕರು ನೀಡುವ ನೋಟ್ಸ್‌ಗಳು ವಿಷಯದ ಬಗ್ಗೆ ಮಾಹಿತಿ ನೀಡುತ್ತವೆಯೇ ವಿನಃ ಸಂಪೂರ್ಣ ವಿಷಯವನ್ನಲ್ಲ. ಹೀಗಾಗಿ ನೋಟ್ಸ್‌ಗಳ ಜೊತೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವುದು ವಿಷಯದ ಆಳವನ್ನು ಅರಿಯಲು ಸಹಾಯಕವಾಗುತ್ತದೆ.

ಇರಲಿ ಸ್ವಂತಕ್ಕೊಂದಿಷ್ಟು ಪುಸ್ತಕಗಳು: ವಿಷಯವಾರು ಪುಸ್ತಕಗಳಿಗೆ ಬರಿ ಲೈಬ್ರರಿಯಲ್ಲೋ ಅಥವಾ ಅಧ್ಯಾಪಕರ ಬಳಿ ಎರವಲು ಪಡೆಯುವುದಕ್ಕಿಂತ ಸ್ವಂತಕ್ಕಾಗಿ ಪುಸ್ತಕಗಳನ್ನು ಕೊಂಡುಕೊಳ್ಳುವುದು ಉತ್ತಮ. ಸದಾ ನಿಮ್ಮೊಂದಿಗಿದ್ದರೆ ಬೇಕಾದಾಗ ಸಹಾಯಕ್ಕೆ ಬರುತ್ತವೆ. ಕೆಲವು ಪುಸ್ತಕಗಳು ವಿದ್ಯಾರ್ಥಿ ಜೀವನದ ನಂತರಕ್ಕೂ ಶೇಖರಿಸಿ ಇಡಬಹುದು.

ಅಧ್ಯಾಪಕರೊಟ್ಟಿಗೆ ಒಳ್ಳೆಯ ಒಡನಾಟ: ಈಗೇನಿದ್ದರೂ ಸ್ಮಾರ್ಟ್ ಫೋನ್, ಇಂಟರ್‌ನೆಟ್‌ನ ಕಾಲ. ಕ್ಷಣಾರ್ಧದಲ್ಲಿಯೇ ಬೆರಳ ತುದಿಯಲ್ಲಿ ಬೇಕಾದ ಮಾಹಿತಿ ಲಭ್ಯ. ಇದರಿಂದ ಎದುರಿಗಿರುವ ಶಿಕ್ಷಕರಿಗಿಂತ ನಾನೇ ತಿಳಿದವ ಎನ್ನುವ ವಿದ್ಯಾರ್ಥಿಗಳೇ ಹೆಚ್ಚು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಶಿಕ್ಷಕನ ಸ್ಥಾನ ತುಂಬಲು ಮಾತ್ರ ಸಾಧ್ಯವಿಲ್ಲ. ಅಷ್ಟಲ್ಲದೆ ಹಿರಿಯರು ಹೇಳಿದ್ದಾರೆ ‘ಜೀವನದಲ್ಲಿ ಮುಂದೆ ಗುರಿಯಿದ್ದರೆ ಸಾಕೆ?, ಹಿಂದೆ ಗುರುವೂ ಇರಬೇಕಲ್ಲವೇ?’ ಎಂದು.

(ಲೇಖಕಿ ತುಮಕೂರಿನ ವಿಶ್ವವಿದ್ಯಾಲಯ ಕಲಾ ಕಾಲೇಜಿನಲ್ಲಿ ಉಪನ್ಯಾಸಕಿ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು