ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೊಂದು ಅನ್ವೇಷಣಾ ಫಲಕ!

Last Updated 9 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಮಕ್ಕಳು ವಿಜ್ಞಾನ ವಿಷಯದ ಕುರಿತು ತುಂಬಾ ಕುತೂಹಲಿಗಳಾಗಿರುತ್ತಾರೆ ಹಾಗೂ ಸಂಶೋಧನಾ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಪ್ರತಿಯೊಂದು ಮಗುವಿನ ಬಳಿ ಹೊಸ ಹೊಸ ಯೋಜನೆಗಳಿರುತ್ತವೆ. ಆ ಯೋಜನೆಗಳ ಮೂಲಕ ನವೀನ ಸಂಶೋಧನೆಗಳನ್ನು ಮಾಡಬೇಕೆಂಬ ಹಂಬಲವಿರುತ್ತದೆ. ಇದಕ್ಕೊಂದು ವೇದಿಕೆ ಕಲ್ಪಿಸಿಕೊಟ್ಟರೆ ಮಗುವಿನ ವೈಜ್ಞಾನಿಕ ಆಸಕ್ತಿ ಹೆಚ್ಚಿಸಬಹುದು. ಇಂತಹ ಉದ್ದೇಶವನ್ನು ಈಡೇರಿಸುವ ಸಲುವಾಗಿ ಶಾಲೆಗೊಂದು ಅನ್ವೇಷಣಾ ಫಲಕವನ್ನು ಮಾಡಿಕೊಳ್ಳುವುದು ಅಗತ್ಯ.

ಅನ್ವೇಷಣಾ ಫಲಕ ಎಂದರೇನು?
ಶಾಲೆಯ ಹೊರಾಂಗಣದಲ್ಲಿ ಒಂದು ಖಾಲಿ ಬ್ಲ್ಯಾಕ್ (ಕಪ್ಪು) ಬೋರ್ಡ್‌ ಅನ್ನೇ ತೆಗೆದುಕೊಂಡು ಅದರ ಮೇಲೆ ಅನ್ವೇಷಣಾ ಫಲಕವೆಂದು ಬರೆದು, ಅದರ ಮೇಲೆ ವಿದ್ಯಾರ್ಥಿಯ ಹೆಸರು, ತರಗತಿ, ನಿಮ್ಮ ಹೊಸ ಯೋಜನೆ/ ಕಲ್ಪನೆ, ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಅಂಟಿಸುವುದು.. ಹೀಗೆ ಈ ಎಲ್ಲ ಮಾಹಿತಿಗಳನ್ನು ವಿದ್ಯಾರ್ಥಿಯು ನಮೂದಿಸಬಹುದು. ಈ ಫಲಕ ತಯಾರಿಕೆಗೆ ಯಾವುದೇ ಅನುದಾನದ ಅವಶ್ಯಕತೆಗಳಿಲ್ಲ. ಕೇವಲ ಒಂದು ಪ್ಲೈವುಡ್ ಹಲಗೆಯನ್ನು ತೆಗೆದುಕೊಂಡು ಅದಕ್ಕೆ ಕಪ್ಪು ಬಣ್ಣವನ್ನು ಹಚ್ಚಿದರೆ ಆಯಿತು ನಮ್ಮ ಅನ್ವೇಷಣಾ ಫಲಕ ತಯಾರಾದಂತೆ.

ಈ ಎಲ್ಲ ಅಂಶಗಳನ್ನು ಈ ಅನ್ವೇಷಣಾ ಫಲಕದ ಮೂಲಕ ಸಾಧಿಸಬಹುದಾಗಿದೆ. ಉದಾಹರಣೆಗೆ- ಜಗತ್ತು ಇಂದು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಎಲೆಕ್ಟ್ರಾನಿಕ್ ತ್ಯಾಜ್ಯಗಳ ನಿರ್ವಹಣೆ, ಕೃಷಿ ತ್ಯಾಜ್ಯ ದಹನ ತಪ್ಪಿಸಲು ಯಾವ ತಂತ್ರಜ್ಞಾನ ಸೂಚಿಸುವಿರಿ? ಸಾಂಕ್ರಾಮಿಕ ರೋಗಗಳಿಂದ ಮುಕ್ತಿಗಾಗಿ ಏನು ಪರಿಹಾರ ಸೂಚಿಸುವಿರಿ? ಇಂತಹ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅವರ ಕಲ್ಪನೆಗಳನ್ನು ಪಟ್ಟಿ ಮಾಡಲು ತಿಳಿಸಿ, ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ವಿವರಣಾತ್ಮಕ ಉತ್ತರಗಳನ್ನು ಆ ಅನ್ವೇಷಣಾ ಫಲಕದ ಮೇಲೆ ಬರೆಯುವುದು. ಅವರಲ್ಲಿಯೇ ಬೇರೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಗಳಿದ್ದರೂ ಅದನ್ನು ಆ ಫಲಕದ ಮೇಲೆ ಬರೆಯುವಂತೆಯೂ ಸೂಚಿಸಬಹುದು. ಜೊತೆಗೆ ಶಾಲೆಯಲ್ಲಿ ಬೋಧಿಸಿದ ವೈಜ್ಞಾನಿಕ ತತ್ವ/ ಸಿದ್ಧಾಂತಗಳು ನಮ್ಮ ನಿತ್ಯ ಜೀವನದಲ್ಲಿ ಎಲ್ಲಿ ಬಳಸಬಹುದು? ಎಂಬ ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂತೆಯೂ ಪ್ರೇರೇಪಿಸಬಹುದು.

ಅನ್ವೇಷಣಾ ಫಲಕದಿಂದಾಗುವ ಪ್ರಯೋಜನ
*
ಜ್ಞಾನವನ್ನು ಬದುಕಿಗೆ ಸಮೀಕರಿಸಬಹುದು.
*ಬಾಯಿಪಾಠ ಮಾಡುವ ವಿಧಾನದಿಂದ ಕಲಿಕೆಯನ್ನು ಬೇರ್ಪಡಿಸುವುದರ ಜೊತೆಗೆ ಅವರಲ್ಲಿ ಸ್ವತಂತ್ರ ವಿಚಾರ, ಅನ್ವೇಷಣಾ ಪ್ರವೃತ್ತಿಯನ್ನು ಬೆಳೆಸಲು ಸಹಾಯಕ.
*ಪಠ್ಯಕ್ರಮ, ಪಠ್ಯಪುಸ್ತಕಗಳನ್ನು ಮೀರಿ ನಿಲ್ಲುವಂತೆ ವಿದ್ಯಾರ್ಥಿಗಳನ್ನು ಬೆಳೆಸಬಹುದು.
*ವಿಮರ್ಶಾತ್ಮಕ ಚಿಂತನೆಗೆ ಮಕ್ಕಳನ್ನು ಅಣಿಗೊಳಿಸುತ್ತದೆ.
*ಏನನ್ನು ಕಲಿಯಬೇಕು? ಹೇಗೆ ಕಲಿಯಬೇಕು? ಎಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸುವಂತೆ ಪ್ರೋತ್ಸಾಹಿಸಿ, ನಿರ್ಣಯ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ.
*ಕಲಿಕಾ ಆಸಕ್ತಿಯ ಜೊತೆಗೆ ಉತ್ಪಾದಕ ಕೆಲಸಕ್ಕೆ ಉತ್ತೇಜಿಸುತ್ತದೆ.
*ಆತ್ಮವಿಶ್ವಾಸ, ಸೃಜನಶೀಲತೆ ಬೆಳೆಸುತ್ತದೆ.
*ಆಧುನಿಕ ಜಗತ್ತಿನ ಬೇಡಿಕೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡಬಹುದು.
*ಉದ್ಯೋಗ ಕ್ಷೇತ್ರಕ್ಕೆ ಪ್ರವೇಶ ದೊರಕಿಸುವಂತಹ ಪ್ರಾಯೋಗಿಕ ತಂತ್ರ, ಕೌಶಲಗಳ ಗಳಿಕೆಗೆ ವಿದ್ಯಾರ್ಥಿ ಹಂತದಿಂದಲೇ ವೇದಿಕೆ ಒದಗಿಸಬಹುದು.
*ಪಠ್ಯಗಳಲ್ಲಿ ಕಲಿತ ತತ್ವಗಳನ್ನು ಆವಿಷ್ಕರಿಸುವ ಕೌಶಲಗಳನ್ನು ಅಭಿವೃದ್ಧಿಗೊಳಿಸಬಹುದು.
*ವಿಜ್ಞಾನ ವಿಷಯವು ಕೇವಲ ಅಂಕ ಗಳಿಸಲು ಮಾತ್ರವಲ್ಲದೇ ನಮ್ಮ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಪೂರಕವಾಗಿರುವಂತೆ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸಬಹುದು.
*ಪುನರ್‌ಬಳಸಬಹುದಾದ ಸಂಪನ್ಮೂಲಗಳನ್ನು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿಚಾರಗಳಿಗೆ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಲು ಸಹಾಯಕ.
*ದೇಶಕ್ಕೆ ಅಗತ್ಯವಾಗಿರುವ ಯುವ ವಿಜ್ಞಾನಿಗಳನ್ನು ಬೆಳೆಸಬಹುದು.
*ಅನುಭವಾತ್ಮಕ ಕಲಿಕೆಗೆ ಸನ್ನಿವೇಶವನ್ನು ಒದಗಿಸಬಹುದು.
*ಗುಣಮಟ್ಟದ ಕಲಿಕೆ ಹಾಗೂ ವಾಸ್ತವದ ಕಲಿಕೆಗೆ ಅವಕಾಶ ಮಾಡಿಕೊಡುತ್ತದೆ.
*ಕ್ಲಿಷ್ಟ ವಿಷಯಗಳನ್ನು ಸರಳೀಕರಿಸಿ ಅರ್ಥೈಸುವಂತಹ ಚಟುವಟಿಕೆಗಳನ್ನು ಅಳವಡಿಸಿ, ವಿದ್ಯಾರ್ಥಿಗಳು ತಮ್ಮಷ್ಟಕ್ಕೆ ತಾವೇ ಕಲಿಕೆಯನ್ನು ಸರಳೀಕರಿಸಿಕೊಳ್ಳುವ ಅವಕಾಶ ಒದಗಿಸಬಹುದು.
*ಅನ್ವೇಷಣಾ ಫಲಕದ ಮೂಲಕ ಸಮಸ್ಯೆಯನ್ನು ಗುರುತಿಸುವುದು, ಅದನ್ನು ವ್ಯಾಖ್ಯಾನಿಸುವುದು ಮತ್ತು ವಿಶ್ಲೇಷಿಸುವುದು, ದತ್ತಾಂಶಗಳ ಸಂಗ್ರಹಣೆ ಮತ್ತು ಅರ್ಥೈಸುವುದು, ಕಲ್ಪನೆಗಳನ್ನು ಬೇರೆ ಕ್ಷೇತ್ರಕ್ಕೆ ಅನ್ವಯಿಸುವುದು.. ವೈಜ್ಞಾನಿಕ ವಿಧಾನದ ಈ ಎಲ್ಲ ಹಂತಗಳನ್ನು ಅನ್ವೇಷಣಾ ಫಲಕದಲ್ಲಿ ಅಳವಡಿಸಬಹುದಾಗಿದೆ.

(ಲೇಖಕರು ಸಹ ಸಂಪಾದಕರು, ಜೀವನ ಶಿಕ್ಷಣ ಮಾಸ ಪತ್ರಿಕೆ ಡಯಟ್, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT