ಬುಧವಾರ, ಆಗಸ್ಟ್ 17, 2022
27 °C
ವಿದೇಶಗಳಲ್ಲಿ ಕನ್ನಡ ಕಲಿಕೆ

ಅನಿವಾಸಿ ಕನ್ನಡಿಗರಿಗೆ ಮಾತೃಭಾಷೆ ಮತ್ತು ಪರಿಸರ ಭಾಷೆ ನಡುವಿನ ಪೈಪೋಟಿ ಒಂದು ಸವಾಲು

ಡಾ. ಜಿ.ಎಸ್.ಶಿವಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನ ದಶಕಗಳಿಂದ ನಡೆದಿದೆ. ಕನ್ನಡ ಕಲಿಕೆ ಯಾರಿಗೆ ಎಷ್ಟರಮಟ್ಟಿಗೆ ಪ್ರಸ್ತುತ ಎನ್ನುವ ವಿಚಾರ ಬಂದಾಗ ಕೆಲವು ವಿಷಯಗಳನ್ನು ಅರಿತುಕೊಳ್ಳುವುದು ಸೂಕ್ತ. ಇಂಗ್ಲಿಷ್‌ ಭಾಷೆಯೇ ಪ್ರಧಾನವಾಗಿರುವ ಅಮೆರಿಕ, ಕೆನಡಾ, ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯ, ನ್ಯೂಜಿಲೆಂಡ್‌ ದೇಶಗಳಿಗೆ ಮತ್ತು ಇಂಗ್ಲಿಷ್ ಭಾಷೆ ಬಳಕೆಯಲ್ಲಿರುವ ಯುರೋಪ್‌ನ ದೇಶಗಳಿಗೆ ವಲಸೆ ಬಂದ ಕನ್ನಡಿಗರದು ಒಂದು ಗುಂಪಾದರೆ, ಭಾರತದ ಸಮೀಪವಿರುವ ಕೊಲ್ಲಿ ರಾಷ್ಟ್ರಗಳು, ಸಿಂಗಪುರ ಮತ್ತು ಮಲೇಷ್ಯಾಗೆ ವಲಸೆ ಹೋಗಿರುವ ಕನ್ನಡಿಗರದು ಇನ್ನೊಂದು ಗುಂಪು.

ಈ ಎರಡನೇ ಗುಂಪಿನಲ್ಲಿರುವ ಕನ್ನಡಿಗರಿಗೆ ಕನ್ನಡ ನಾಡಿನ ಸಂಪರ್ಕ ಸುಲಭ. ಮೂರು– ನಾಲ್ಕು ಗಂಟೆಗಳ ಪ್ರಯಾಣದಲ್ಲಿ ಅವರು ಭಾರತವನ್ನು ತಲುಪಬಹುದು. ದೂರದ ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೋಲಿಸಿದರೆ ಇವರು ತಾಯ್ನಾಡಿಗೆ ಆಗಾಗ್ಗೆ ಬಂದು ಹೋಗಿ ಹೆಚ್ಚಿನ ಸಂಬಂಧವನ್ನು ಉಳಿಸಿಕೊಂಡಿರುತ್ತಾರೆ. ಈ ಸಮುದಾಯಕ್ಕೆ ಕನ್ನಡ ಕಲಿಕೆ ಅತ್ಯಗತ್ಯ ಎಂದು ಪರಿಗಣಿಸಬಹುದು.

ವಲಸೆಯ ಇತಿಹಾಸವನ್ನು ಗಮನಿಸಿದಾಗ, ಅತಿಹೆಚ್ಚು ಕನ್ನಡಿಗರು ನಾಲ್ಕೈದು ದಶಕಗಳಿಂದ ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ವೃತ್ತಿಯನ್ನು ಕೈಗೊಂಡು, ಅಲ್ಲಿಯ ಪೌರತ್ವವನ್ನು ಸ್ವೀಕರಿಸಿ, ಅಲ್ಲೇ ಕಾಯಂ ಆಗಿ ನೆಲೆಸಿದವರಾಗಿರುತ್ತಾರೆ. ಈ ಮೂಲ ವಲಸಿಗರ ನಂತರದ ಪೀಳಿಗೆಯವರು ವಿದೇಶದಲ್ಲೇ ಹುಟ್ಟಿ ಬೆಳೆದವರಾಗಿದ್ದು,ಅವರ ಪರಿಸರದ ಭಾಷೆ ಇಂಗ್ಲಿಷ್ ಆದ್ದರಿಂದ ಅವರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಜ್ಞೆ ಕಡಿಮೆ ಎನ್ನಬಹುದು. ಹೀಗೆ ಬೇರೆ ಬೇರೆ ಹಿನ್ನೆಲೆಗಳಲ್ಲಿ ವಲಸೆ ಬಂದ ಕನ್ನಡಿಗರು ತಮ್ಮ ತಾಯ್ನಾಡಿನ ಭಾಷೆ ಮತ್ತು ಸಾಂಸ್ಕೃತಿಕ ತುಡಿತಗಳಿಂದ ತಾವಿರುವ ನೆಲೆಗಳಲ್ಲಿ ಕನ್ನಡ ಸಂಘವನ್ನು ಕಟ್ಟಿಕೊಂಡು, ಅದರಲ್ಲಿ ನೆಮ್ಮದಿ, ತೃಪ್ತಿಯನ್ನು ಕಾಣುತ್ತ ಬಂದಿದ್ದಾರೆ. ತಮ್ಮ ಮುಂದಿನ ಪೀಳಿಗೆಯವರಿಗೆ ಕನ್ನಡ ಅಪ್ರಸ್ತುತವಾಗುವ ಆತಂಕ ಮತ್ತು ತಮ್ಮ ಭಾಷೆಯ ಮೇಲಿನ ಪ್ರೀತಿ, ಕಾಳಜಿಯ ಕಾರಣದಿಂದ ‘ಕನ್ನಡ ಕಲಿ’ ತರಗತಿಗಳನ್ನು ಪ್ರಾರಂಭಿಸಿದ್ದಾರೆ.

ಇಂಗ್ಲಿಷ್‌ ಭಾಷೆಯ ಪರಿಸರದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಮನೆಯಲ್ಲಿ ಆಡುಭಾಷೆ ಕನ್ನಡವಾದುದರಿಂದ ಕನ್ನಡದ ಅಲ್ಪ ಸ್ವಲ್ಪ ಪರಿಚಯ ಇರುತ್ತದೆ. ಮಕ್ಕಳು ಒಮ್ಮೆ ಮನೆಯಿಂದಾಚೆ ಕಾಲಿಟ್ಟು ಶಾಲೆ ಸೇರಿದ ಕೂಡಲೇ ಅವರ ಪರಿಸರದ ಭಾಷೆ ಇಂಗ್ಲಿಷ್‌ ಆಗುತ್ತದೆ. ಈ ಮಕ್ಕಳಿಗೆ ಕನ್ನಡವನ್ನು ಕಲಿಯಲು ಅಪ್ಪ– ಅಮ್ಮನ ಹಂಬಲ ಮತ್ತು ಒತ್ತಡವನ್ನು ಬಿಟ್ಟರೆ ಬೇರೆ ಯಾವ ಪ್ರೇರಣೆಯೂ ದೊರೆಯುವುದಿಲ್ಲ. ಕನ್ನಡದ ಬಗ್ಗೆ ಒಲವು ಮತ್ತು ಅಭಿಮಾನ ಇಟ್ಟುಕೊಂಡಿರುವ ಕೆಲವು ತಂದೆ–ತಾಯಿಯರು ಮಕ್ಕಳನ್ನು ಕನ್ನಡದಲ್ಲೇ ಮಾತನಾಡಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಮಕ್ಕಳು ತಮಗೆ ಕನ್ನಡ ಅರ್ಥವಾದರೂ ಸುಲಭವಾಗಿ ಮತ್ತು ಸಹಜವಾಗಿ ದಕ್ಕುವ ಇಂಗ್ಲಿಷ್ ಭಾಷೆಯಲ್ಲಿ ಅಪ್ಪ–ಅಮ್ಮನೊಡನೆ ವ್ಯವಹರಿಸಲು ತೊಡಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಕೆಲವು ತಂದೆ–ತಾಯಿ ಕನ್ನಡವನ್ನಷ್ಟೇ ಬಳಸಬೇಕೆಂದು ಮಕ್ಕಳ ಮೇಲೆ ಒತ್ತಾಯ ಹೇರುತ್ತಾರೆ. ಇನ್ನು ಕೆಲವರು, ಮಕ್ಕಳು ಸ್ವಾಭಾವಿಕವಾಗಿ ಎಷ್ಟರಮಟ್ಟಿಗೆ ಕನ್ನಡ ಕಲಿಯಲು ಸಾಧ್ಯವೋ ಅಷ್ಟೇ ಸಾಕು ಎಂಬ ನಿಲುವನ್ನು ತಾಳುತ್ತಾರೆ.

ಹೊರದೇಶದಲ್ಲಿ ಹೆಚ್ಚು ಕಾಲ ಕಳೆದಂತೆ ಈ ಮಕ್ಕಳು ಅಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ಸಂದರ್ಭದಲ್ಲಿ ತಾಯ್ನಾಡಿನ ಭಾಷೆ ಮತ್ತು ಸಾಂಸ್ಕೃತಿಕ ನಂಟುಗಳು ಸಡಿಲಗೊಳ್ಳುತ್ತವೆ. ಇಂಗ್ಲಿಷ್‌ ಸಂಸ್ಕೃತಿ ಅವರ ವ್ಯಕ್ತಿತ್ವವನ್ನು ರೂಪಿಸಲು ಮೊದಲುಗೊಂಡಾಗ, ವಿದೇಶಗಳ ಪೌರತ್ವವನ್ನು ಪಡೆದ ಇವರಿಗೆ ಭಾರತ ಅಥವಾ ಕರ್ನಾಟಕ ಎಂಬುದು ತಮ್ಮ ವಂಶಜರ ಮೂಲ ಮಾತ್ರವಾಗುತ್ತದೆ. ಹೀಗಿರುವಾಗ, ಕನ್ನಡ ಕಲಿಕೆಯ ಪ್ರಯೋಜನವಾದರೂ ಏನು ಎಂಬ ವಿಚಾರ ಈ ಪೀಳಿಗೆಯ ಮನದಲ್ಲಿ ಮೂಡುತ್ತದೆ.

ಕರ್ನಾಟಕದಲ್ಲಿರುವ ಕನ್ನಡಿಗರಿಗೆ ವಿದೇಶದಲ್ಲಿರುವ ಕನ್ನಡಿಗರೆಲ್ಲಾ ಕನ್ನಡ ಕಲಿಯಬೇಕೆಂಬ ನಿರೀಕ್ಷೆ ಮತ್ತು ಅಪೇಕ್ಷೆ ಸಹಜವೇ ಆದರೂ ಇಲ್ಲಿ ಕನ್ನಡವನ್ನು ಉಳಿಸಲು ಬಳಸಲು ಹಲವಾರು ಸಮಸ್ಯೆಗಳಿವೆ. ದೀರ್ಘಕಾಲ ಇಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಓದುವ ಹವ್ಯಾಸವನ್ನು ಇಟ್ಟುಕೊಳ್ಳದೆ, ಬರೀ ಆಡುಭಾಷೆ ಬಲ್ಲವರಾಗಿರುತ್ತಾರೆ. ಈ ರೀತಿಯ ಕೆಲವರು ತಮಗೆ ಕನ್ನಡ ಮಾತನಾಡಲು ಮಾತ್ರ ಬರುತ್ತದೆ ಎಂದು ನಿಸ್ಸಂಕೋಚದಿಂದ ಹೇಳಿಬಿಡುತ್ತಾರೆ. ಇವರು ಒಂದು ರೀತಿ ಅನಕ್ಷರಸ್ಥರೇ ಸರಿ. ಇಂತಹವರಿಗೆ ಮೊದಲು ‘ಕನ್ನಡ ಕಲಿ’ ತರಗತಿಗಳ ಅಗತ್ಯವಿದೆ. ಇದಕ್ಕೆ ವೈದೃಶ್ಯವಾಗಿ ಪಾಶ್ಚಿಮಾತ್ಯ ದೇಶಗಳಿಗೆ ಇತ್ತೀಚೆಗೆ ವಲಸೆ ಬಂದ ಕನ್ನಡಿಗರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು, ಭಾಷೆ– ಸಂಸ್ಕೃತಿಯ ಬಗ್ಗೆ ಹೆಚ್ಚಿನ ಒಲವನ್ನು ಕಾಣಬಹುದು.

ಬಹುರಾಷ್ಟ್ರೀಯ ಕಂಪನಿಗಳ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಕೆಲವೇ ವರ್ಷಗಳ ಮಟ್ಟಿಗೆ ವಿದೇಶದಲ್ಲಿ ದುಡಿದು ತಾಯ್ನಾಡಿಗೆ ಹಿಂದಿರುಗುವ ಅವಕಾಶ ಈಗ ಲಭ್ಯವಿದೆ. ಈ ರೀತಿಯ ಕುಟುಂಬದಲ್ಲಿನ ಮಕ್ಕಳಿಗೆ ಕನ್ನಡ ಕಲಿಕೆಯ ಅಗತ್ಯವಿದೆ. ಯು.ಕೆ.ಯಲ್ಲಿ ಗುಜರಾತಿ ಮತ್ತು ಬಂಗಾಳಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಮಕ್ಕಳಿಗೆ ಶಾಲೆಯಲ್ಲಿ ಇಂಗ್ಲಿಷ್ ಅಲ್ಲದೆ ತಮ್ಮ ಮಾತೃಭಾಷೆಯನ್ನು ಕಲಿಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಮ್ಮ ಕನ್ನಡಿಗರ ಮಕ್ಕಳು ಶಾಲೆಯಲ್ಲಿ ರಷ್ಯನ್, ಸ್ಪ್ಯಾನಿಷ್, ಜರ್ಮನ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಕಲಿಯುತ್ತಿದ್ದಾರೆ. ಇದರಿಂದ ಅವರಿಗೆ ಮುಂದೆ ಪ್ರಪಂಚದ ಇತರ ದೇಶಗಳಲ್ಲಿ ಕೆಲಸ ಮಾಡುವ ಅವಕಾಶ ಹೆಚ್ಚಾಗಬಹುದೆಂಬ ಪ್ರೇರಣೆ ಇರಬಹುದು. ಹೀಗಿರುವಾಗ ಕನ್ನಡವನ್ನು ಏಕೆ ಕಲಿಯಬೇಕೆಂದು ಅವರು ಪ್ರಶ್ನಿಸಬಹುದು.

ಕೆಲವು ವರ್ಷಗಳ ಹಿಂದೆ ‘ಕನ್ನಡ ಕಲಿ’ ತರಗತಿಯನ್ನು ಸ್ಥಳೀಯ ಕನ್ನಡ ಸಂಘಗಳು ಆಯೋಜಿಸಿದ್ದು, ಅದಕ್ಕೆ ಬೇಕಾದ ಪಠ್ಯಪುಸ್ತಕ ಮತ್ತು ಧನಸಹಾಯವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಪಡೆಯಲಾಗಿತ್ತು. ಕನ್ನಡಿಗರು ಅಧಿಕ ಸಂಖ್ಯೆಯಲ್ಲಿರುವ ಕೆಲವು ನಗರಗಳಲ್ಲಿ ಮಾತ್ರ ಹಿಂದೆ ಈ ರೀತಿಯ ಮುಖಾಮುಖಿ ತರಗತಿಗಳನ್ನು ನಡೆಸಲು ಸಾಧ್ಯವಾಗಿತ್ತು. ವಾರಾಂತ್ಯದ ಈ ಶಾಲೆಗಳಿಗೆ ತಂದೆ ತಾಯಂದಿರು ಬಿಡುವು ಮಾಡಿಕೊಂಡು ಹಲವಾರು ಮೈಲಿ ಪ್ರಯಾಣ ಮಾಡಿ, ಮಕ್ಕಳನ್ನು ಕರೆದುಕೊಂಡು ಬರಬೇಕಾಗಿತ್ತು. ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಅಂತರ್ಜಾಲದ ವೇದಿಕೆಗಳಿಂದ ಕನ್ನಡವನ್ನು ಎಲ್ಲಿದ್ದರೂ ಕಲಿಸುವ ಮತ್ತು ಕಲಿಯುವ ಅವಕಾಶವಿದೆ. ಹಾಗೆಯೇ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಅಕ್ಷರ ಮಾಲೆಯನ್ನು ಕಂಪ್ಯೂಟರ್ ಮತ್ತು ಮೊಬೈಲಿನಲ್ಲಿ ಬಳಸುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಪ್ರಾಧಿಕಾರವು ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ.

ಅನಿವಾಸಿ ಭಾರತೀಯರು ಇಂಗ್ಲಿಷ್ ಹೊರತು ತಮ್ಮ ಮಾತೃಭಾಷೆಯನ್ನು ಮಕ್ಕಳಿಗೆ ಕಲಿಸುವಲ್ಲಿ ಕಂಡುಬರುವ ಸಮಸ್ಯೆಗಳು ಬರೀ ಕನ್ನಡಕ್ಕೆ ಸೀಮಿತವಾಗಿಲ್ಲ. ತಮಿಳು, ತೆಲುಗು, ಪಂಜಾಬಿಯಂಥ ಭಾಷಿಗರ ಕುಟುಂಬಗಳಲ್ಲಿ ಕೂಡ ಮಕ್ಕಳು ತಮ್ಮ ಮಾತೃಭಾಷೆಯನ್ನು ಕೈಬಿಟ್ಟಿರುವುದು ಸಾಮಾನ್ಯವಾಗಿದೆ. ಅಷ್ಟೇ ಏಕೆ, ಇಲ್ಲಿ ನೆಲೆಸಿರುವ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾದಂತಹ ರಾಷ್ಟ್ರಗಳಿಗೆ ಸೇರಿದ ಸ್ನೇಹಿತರ ಕುಟುಂಬಗಳಲ್ಲೂ ಮಾತೃಭಾಷೆ ಮತ್ತು ಪರಿಸರದ ಭಾಷೆಗಳ ನಡುವೆ ಇಂತಹ ಪೈಪೋಟಿಯನ್ನು ಕಾಣಬಹುದು.

ಯೋಗ, ಭರತನಾಟ್ಯ, ಸಂಗೀತದಂತಹ ನಮ್ಮ ನಾಡಿನ ಕಲೆಗಳನ್ನು ವಿದ್ವತ್ಪೂರ್ಣವಾಗಿ ಕಲಿಯುವ ಇಲ್ಲಿಯ ಅನಿವಾಸಿ ಕನ್ನಡಿಗರ ಮಕ್ಕಳಿಗೆ ಮಾತೃಭಾಷೆ ಕಲಿಯುವುದು ದೊಡ್ಡ ವಿಷಯವಲ್ಲ. ಆದರೆ, ಕಲಿತದ್ದು ಎಷ್ಟರಮಟ್ಟಿಗೆ ಪ್ರಸ್ತುತ ಎನ್ನುವುದು ಮುಖ್ಯ. ಅದನ್ನು ಹೇಗೆ ಪ್ರಸ್ತುತಗೊಳಿಸಬೇಕು ಎಂಬುದನ್ನು ಈ ಮಕ್ಕಳ ತಂದೆ ತಾಯಂದಿರು ನಿರ್ಧರಿಸಬೇಕಾಗಿದೆ. ಒಂದು ಉಕ್ತಿ ಇದೆ; ‘ಒಂದು ಕುದುರೆಯನ್ನು ನೀರಿನ ಕೊಳದ ಬಳಿ ಕರೆದುಕೊಂಡು ಹೋಗಬಹುದು. ಆದರೆ ನೀರು ಕುಡಿಯುವುದು, ಬಿಡುವುದು ಅದರ ನಿರ್ಧಾರಕ್ಕೆ ಬಿಟ್ಟಿದ್ದು’. ಅನಿವಾಸಿ ಕನ್ನಡ ಸಂಘಗಳು ಕನ್ನಡ ಕಲಿಸುವ ಪ್ರಯತ್ನವನ್ನಂತೂ ಮಾಡಿವೆ.

ಲೇಖಕ: ಮಕ್ಕಳ ತಜ್ಞ, ಕಾರ್ಯಕಾರಿ ಸಮಿತಿ ಸದಸ್ಯ, ಯು.ಕೆ. ಕನ್ನಡ ಬಳಗ, ಶೆಫೀಲ್ಡ್, ಯು.ಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು