ಶನಿವಾರ, ಡಿಸೆಂಬರ್ 5, 2020
19 °C

PV Web Exclusive I ಕನ್ನಡ ಮಾಧ್ಯಮದಲ್ಲಿ ಓದಿದರೆ ಫ್ಯೂಚರ್ ಹಾಳೇ ?!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಗವರ್ನ್‌ಮೆಂಟ್ ಸ್ಕೂಲ್‌ ಸೇರಿಸಿ ನೀವೇ ನಿಮ್ ಮಗಳ ಫ್ಯೂಚರ್ ನ ಹಾಳ್ ಮಾಡ್ತಿದಿರಾ... ಒಂದಿಪ್ಪತ್ತೈದು ಸಾವಿರ ಡೊನೇಷನ್ ಕಟ್ಟೋಕೂ ಆಗಲ್ವ ನಿಮ್ ಕೈಲಿ...’

‘ಮಗಳ‌ ಎಜುಕೇಷನ್ ವಿಷಯದಲ್ಲಿ ಎಕ್ಸ್‌ಪೆರಿಮೆಂಟ್‌ ಮಾಡ್ತಿದಿರ ನೀವು.. ಈ ಟೈಮ್‌ನಲ್ಲಿ ಕನ್ನಡ ಮೀಡಿಯಂನಲ್ಲಿ ಓದಿದವರಿಗೆ ಫ್ಯೂಚರ್ ಇದೆಯಾ.. ಮುಂದೆ ಅನುಭವಿಸ್ತೀರ...’

ನನ್ನ ಮಗಳ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡೇ ಆಪ್ತರು ಇಂತಹ ಮಾತುಗಳನ್ನು ನನಗೆ ಆಗಾಗ ಹೇಳ್ತಿರ್ತಾರೆ. ಒಂದು ಅಂಶ ನಾನಿಲ್ಲಿ ಸ್ಪಷ್ಟ ಪಡಿಸ್ತೀನಿ. ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಆದರ್ಶ ಮೆರೆಯಬೇಕು ಎಂದಾಗಲಿ, ಕನ್ನಡ ಮಾಧ್ಯಮದಲ್ಲಿ ಓದಿಸಿ ಕನ್ನಡ ಪ್ರೇಮ ಪ್ರದರ್ಶಿಸಬೇಕು ಎಂಬ ಉದ್ದೇಶವಾಗಲಿ ನನ್ನದಲ್ಲ. ( ಐದಂಕಿ ವೇತನ ತೆಗೆದುಕೊಳ್ಳುವವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಓದಿಸುವುದನ್ನು ಈಗ ಸಾಧನೆ ಎಂದೇ ಪರಿಗಣಿಸಲಾಗುತ್ತದೆ. ಅದು ದೊಡ್ಡ ಸುದ್ದಿಯೂ ಆಗುತ್ತದೆ) ಅಂಥ ಸಾಧಕನಾಗುವ ಹಂಬಲವೂ ನನಗಿಲ್ಲ.

‘ಅನಿವಾರ್ಯ’ ಕಾರಣಗಳಿಂದ ಎರಡನೇ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ. ಅಂಥ ಅನಿವಾರ್ಯತೆ ಏನೆಂಬುದು ಇಲ್ಲಿ ಅಪ್ರಸ್ತುತ.

***
ಸಣ್ಣ ಮಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದರೆ, ದೊಡ್ಡ ಮಗಳು ಕೆವಿ‌ಯಲ್ಲಿ ( ಕೇಂದ್ರೀಯ ವಿದ್ಯಾಲಯ) ಹಿಂದಿ ಮಾಧ್ಯಮದಲ್ಲಿ ಕಲಿಯುತ್ತಿದ್ದಾಳೆ. ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದಾರೆ. ಅಂದರೆ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಮಾಧ್ಯಮದ ಮಕ್ಕಳನ್ನು ತೀರಾ ಹತ್ತಿರದಿಂದ ನೋಡುವ ‘ಸೌಭಾಗ್ಯ’ ನನ್ನದು !

ಇಂಗ್ಲಿಷ್, ಹಿಂದಿ ಮಾಧ್ಯಮದಲ್ಲಿರುವ ಮಕ್ಕಳನ್ನು ನೋಡಿದರೆ, ಕನ್ನಡ ಮೀಡಿಯಂನಲ್ಲಿ ಕಲಿಯುತ್ತಿರುವ ನನ್ನ ಮಗಳೇ ಹೆಚ್ಚು ಚೂಟಿ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ‌ ಮತ್ತು ಅನುಭವ.

ಕೊರೊನಾ ಬಿಕ್ಕಟ್ಟು ಆರಂಭವಾದಾಗಿನಿಂದ ಆನ್‌ಲೈನ್‌ನಲ್ಲಿಯೇ ತರಗತಿ ನಡೆಯುವುದು ಸಾಮಾನ್ಯವಾಗಿದೆ. ದೊಡ್ಡ ಮಗಳಿಗೆ ಟೈಮ್ ಟೇಬಲ್ ಪ್ರಕಾರ, ಶಿಸ್ತುಬದ್ಧವಾಗಿ ಕ್ಲಾಸ್‌ಗಳು ನಡೆಯುತ್ತಿದ್ದರೆ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಸಣ್ಣ ಮಗಳಿಗೆ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಕಾರಣ, ಅವಳ ಬಹುಪಾಲು ಗೆಳೆಯ ಗೆಳತಿಯರ ಪೋಷಕರ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ. ಅಗಸ್ತ್ಯ ಫೌಂಡೇಷನ್‌ನವರು ಸರ್ಕಾರಿ ಶಾಲೆಯ ಮಕ್ಕಳಿಗೆ ಆನ್‌ಲೈನ್‌ನಲ್ಲಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಮಗಳೂ ಸೇರಿದಂತೆ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಹಾಜರಾಗುತ್ತಿದ್ದಾರೆ.

ಕೆವಿ ಮಗಳ ತರಗತಿಯ ವಿದ್ಯಾರ್ಥಿಗಳೆಲ್ಲರ ಹಾಜರಿ ತೆಗೆದುಕೊಳ್ಳುವುದಕ್ಕೇ ಅರ್ಧ ತಾಸು ಆಗುತ್ತದೆ. ಆದರೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಕ್ಲಾಸ್ ತೆಗೆದುಕೊಳ್ಳುವ ಅಗಸ್ತ್ಯ ಫೌಂಡೇಷನ್‌ನ ಶಿಕ್ಷಕರು, ಇರುವ ಕೆಲವೇ ವಿದ್ಯಾರ್ಥಿಗಳಿಗೆ ಎರಡು- ಮೂರು ಸಲ ಆನ್‌ಲೈನ್‌ ಕ್ಲಾಸ್‌ಗೆ ‘ಜಾಯಿನ್’ ಆಗಿ ಎಂದು ಮಕ್ಕಳನ್ನು ಕೋರುತ್ತಾರೆ. ಕನಿಷ್ಠ 10 ವಿದ್ಯಾರ್ಥಿಗಳನ್ನಾದರೂ ತೋರಿಸಬೇಕು ಎಂಬ ‘ಟಾರ್ಗೆಟ್’ ಅವರಿಗೆ.

ಇದನ್ನೆಲ್ಲ ನೋಡಿ, ಸಣ್ಣ ಮಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದೇನಾ ಎಂದೆನಿಸಿದ್ದು ಸುಳ್ಳಲ್ಲ. ಆದರೆ, ಸಣ್ಣ ಮಗಳ‌ ಆತ್ಮವಿಶ್ವಾಸ, ಆಸಕ್ತಿ ನೋಡಿ ಆ ಅಳಕು ಮಾಯವಾಗಿದ್ದೂ ಇದೆ.

ಆನ್‌ಲೈನ್‌ ತರಗತಿಗೆ ಹಾಜರಾಗುವ ಸರ್ಕಾರಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಬೇರೆ ಬೇರೆ ತರಗತಿಯ ಮಕ್ಕಳನ್ನು ಸೇರಿಸಿ ಕ್ಲಾಸ್ ನಡೆಸುತ್ತಾರೆ.‌ ಅಂದರೆ, ಐದನೇ ತರಗತಿಯ ನನ್ನ ಮಗಳು, 8, 9, 10ನೆಯ ತರಗತಿಯ ಪಾಠಗಳನ್ನೂ ಕೇಳುತ್ತಿದ್ದಾಳೆ‌‌ ಮತ್ತು ಸರಿಯೋ, ತಪ್ಪೋ ಶಿಕ್ಷಕರು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದಾಳೆ. ಆದರೆ, ಕೆವಿಯಲ್ಲಿ ಓದುತ್ತಿರುವ ಮಗಳಿಗೆ ಒಂದೆರಡು ಅಧ್ಯಾಯಗಳು ಹಿಂದೆ-ಮುಂದೆ ಆದರೂ ಕಸಿವಿಸಿ, ಆತಂಕ‌. ಆಯಾ ಮಕ್ಕಳ ಬೌದ್ಧಿಕ ಸಾಮರ್ಥ್ಯ ಬೇರೆ ಬೇರೆಯಾಗಿರುತ್ತೆ ಎಂಬುದು ನಿಜವಾದರೂ, ಸರ್ಕಾರಿ ಶಾಲೆಯ ಮಕ್ಕಳಿಗೆ ಇರುವ 'ಕಾನ್ಫಿಡೆನ್ಸ್' ಬೇರೆ ಮಕ್ಕಳಿಗೆ ಅಷ್ಟಾಗಿ ಇರದು ಎಂಬುದೂ ಸುಳ್ಳಲ್ಲ.

ಶೇ 90, A, A+ ಗ್ರೇಡ್ ತೆಗೆದುಕೊಂಡ ಮಗಳ ಕೆವಿಗೆ ಪೇರೆಂಟ್ಸ್ ಮೀಟಿಂಗ್  ಹೋದಾಗ, ‘ಯುವರ್ ಡಾಟರ್ ಹ್ಯಾವ್ ಟು ಇಂಪ್ರೂವ್’ ಎಂದು‌ ಅಲ್ಲಿನ ಶಿಕ್ಷಕರು ಮುಖ ತಿರುಗಿಸಿದರೆ, ಶೇ 75, 80ರಷ್ಟು ಅಂಕ ತೆಗೆದುಕೊಂಡ ಸರ್ಕಾರಿ ಶಾಲೆ ಮಗಳ ಪೋಷಕರ ಸಭೆಗೆ ಹೋದಾಗ, ‘ತುಂಬಾ ಚೆನ್ನಾಗಿ ಓದ್ತಾಳೆ ನಿಮ್ ಮಗಳು’ ಎಂಬ ಮಾತು ಕೇಳಿದರೆ, ನನಗೂ ‘ಕಾನ್ಫಿಡೆನ್ಸ್’ ಹೆಚ್ಚುತ್ತದೆ, ನನ್ನ ನಿರ್ಧಾರ ಸರಿ ಎಂದು.

ಆದರೂ, ಸ್ವಲ್ಪಮಟ್ಟಿಗೆ ಉತ್ತಮ ವೇತನ ಇರುವ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಏಕೆ ಸೇರಿಸುವುದಿಲ್ಲ ಎಂದು ಪ್ರಶ್ನಿಸಿದಾಗ ‘ಸ್ಟೇಟಸ್ ಪ್ರಾಬ್ಲಂ’ ಎಂಬ ಉತ್ತರ ಸಿಗುತ್ತದೆ‌‌. ತೀರಾ ಅನಿವಾರ್ಯವಾದಾಗ ಅಂದರೆ, ಮನೆಯ ಸುತ್ತ-ಮುತ್ತ ಉತ್ತಮ ಖಾಸಗಿ ಶಾಲೆ ಇರದಿದ್ದರೆ‌‌ ಅಥವಾ ಆರ್ಥಿಕವಾಗಿ ಆ ಪೋಷಕರು ಸಬಲರಾಗಿರದಿದ್ದರೆ ಮಾತ್ರ ಕೊನೆಯ ಆಯ್ಕೆ ಎಂಬಂತೆ ಸರ್ಕಾರಿ ಶಾಲೆಯ ಬಾಗಿಲು ತಟ್ಟುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಲು ಆ ಶಾಲೆಗಳ ಗುಣಮಟ್ಟ ಹೆಚ್ಚಾಗಿರುವುದೂ ಅಲ್ಲ, ಕನ್ನಡದ ಮೇಲಿನ ಪ್ರೇಮವೂ ಅಲ್ಲ, ಕೋವಿಡ್ ಬಿಕ್ಕಟ್ಟು ಸೃಷ್ಟಿಸಿದ ಅನಿವಾರ್ಯತೆಯೇ ಬಹುಮುಖ್ಯ ಕಾರಣ.

ನಗರ ಪ್ರದೇಶದಲ್ಲಿ ವಾಸಿಸುತ್ತಿರುವ, ಮಧ್ಯಮ ವರ್ಗದ ಕುಟುಂಬದವರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದರೂ, ಅವರಿಗೆ ‘ಆದರ್ಶದ ಹುಚ್ಚು’ ಎಂದೋ, ‘ಜಿಪುಣ’ ಎಂದೋ ಮೂದಲಿಸಲಾಗುತ್ತದೆ.

ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೂ ‘ಫ್ಯೂಚರ್’ ಇದೆ, ಕನ್ನಡ ಮಾಧ್ಯಮದಲ್ಲಿ ಓದಿದರೂ ಕೆಲಸ ಸಿಗುತ್ತೆ ಎಂಬ ‘ಕಾನ್ಫಿಡೆನ್ಸ್’ ಅನ್ನು ಪೋಷಕರಲ್ಲಿ, ಸಮಾಜದಲ್ಲಿ ಸರ್ಕಾರ ಬೆಳೆಸದೇ ಹೋದರೆ, ಎಂತಹ ಶಿಕ್ಷಣ ನೀತಿ ರೂಪಿಸಿದರೂ, ಕನ್ನಡದ ಪರ ಎಷ್ಟೇ ಭಾಷಣ ಮಾಡಿದರೂ ಪ್ರಯೋಜನವಾಗುವುದಿಲ್ಲ, ‘ಯೂ ಹ್ಯಾವ್ ಟು ಇಂಪ್ರೂವ್’ ಎನಿಸಿಕೊಳ್ಳುವುದು ತಪ್ಪುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು