ಸೋಮವಾರ, ಮಾರ್ಚ್ 1, 2021
23 °C

ಗ್ರಂಥಾಲಯವೇ ಗರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಎಲ್ಲಿಂದಲೋ ಬಂದು ಒಂದಾಗಿ ಮುಂದಾಗುವ, ‘ಅನೇಕತೆಯಲ್ಲಿ ಏಕತೆ’ಯೊಂದಿಗೆ ಭವಿಷ್ಯ ರೂಪಿಸಿಕೊಳ್ಳುವ ಶಿಕ್ಷಣಕೇಂದ್ರ ಎಂಬುದು ದೇಗುಲದ ಪ್ರತಿರೂಪ. ಭಿನ್ನ ಕುಟುಂಬ, ಪರಿಸರ, ಹಿನ್ನೆಲೆಗಳಿಂದ ಬಂದವರೆಲ್ಲ ಒಂದೆಡೆ ಸೇರಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ತಾಣದಲ್ಲಿ ಪ್ರತಿಯೊಂದು ಹೃದಯವೇದ್ಯವೇ!

ನಮ್ಮ ಕಾಲೇಜು, ಕ್ಲಾಸ್ ರೂಮು, ಮೈದಾನ, ಕೂರುತ್ತಿದ್ದ ಬೆಂಚು, ಸೈಕಲ್ ಸ್ಟ್ಯಾಂಡ್, ಗುರುವೃಂದ – ಎಲ್ಲವೂ ಸಿಹಿತುತ್ತೇ, ನೆನಪಿನ ಬುತ್ತಿಯಲ್ಲಿ! ಹೃದಯತಾಕಿದ ಅಂತಹ ಭಾವಗಳ ಸಾಗರದಲ್ಲಿ ನನ್ನಿಷ್ಟದ ಮೊದಲ ಅಲೆಯೆಂದರೆ ‘ಗ್ರಂಥಾಲಯ’. ಎಸ್.ಎಸ್.ಎಲ್.ಸಿ.ವರೆಗೆ ಕನ್ನಡ ಮೀಡಿಯಂನಲ್ಲಿ ಕಲಿತು ಪಿ.ಯು.ಸಿ.ಗೆ ವಿಜ್ಞಾನ ವಿಭಾಗದ ಕದ ತಟ್ಟಿದಾಗ ಭೂಮಿಯಾಚೆಗಿನ ಜಗವೊಂದು ಎದುರು ನಿಂತಂತಿತ್ತು.

ಏನನ್ನೋ ಹೇಳುತ್ತಾ ಬಂದು ಹೋಗುತ್ತಿದ್ದ ಶಿಕ್ಷಕರು, ಪಟ ಪಟ ಉತ್ತರಿಸುತ್ತಿದ್ದ ಇಂಗ್ಲಿಷ್ ಮಾಧ್ಯಮದ ಸಹಪಾಠಿಗಳು – ತರಗತಿ ಕೋಣೆಯಿಂದ ಓಡಿಹೋಗಿಬಿಡುವಂತಾಗಿತ್ತು. ‘ಇವನ್ ನಂಬರ್’ ಅಂದರೆ ಸಮಸಂಖ್ಯೆ ಎಂದೂ ತಿಳಿಯದ ಇಂಗ್ಲಿಷ್‌ಜ್ಞಾನಕ್ಕೆ ಭರವಸೆ ನೀಡಿದ್ದು ನಮ್ಮ ಪ್ರೀತಿಯ ಗ್ರಂಥಾಲಯ.

ಪ್ರಶಾಂತತೆಯನ್ನು ತುಂಬಿಕೊಂಡು ಜ್ಞಾನವನ್ನು ಸಲಹುತ್ತಿದ್ದ ಗ್ರಂಥಾಲಯದೊಳು ಹೊಕ್ಕರೆ ಎಂಥವರೂ ಓದದೇ ಹೊರಬರಲಾಗುತ್ತಿರಲಿಲ್ಲ. ತಿಳಿಯದ ವಿಷಯದೊಂದಿಗೆ ಯುದ್ಧದಲ್ಲಿ ಕಾದಾಡಿ ಮಿತ್ರನಾಗಿಸಿಕೊಳ್ಳುವವರೆಗೆ ಅಲ್ಲಿಂದ ಕದಲುವ ಮಾತೇ ಇರಲಿಲ್ಲ. ಪಡೆದ ಪುಸ್ತಕ ಹಿಡಿದು, ಇಷ್ಟದ ಮೇಜಿನ ಮೇಲೆ ಓದುತ್ತಾ ಕುಳಿತರೆ ಸಮಯ ಸರಿದುದರ ಪರಿವೆಯೇ ಇರುತ್ತಿರಲಿಲ್ಲ. 

ಆಟದ ಮೈದಾನವನ್ನು ಬಳಸಿ ಕಾಲೇಜು ತಲುಪಿದೊಡನೆ ಮೊದಲು ಹುಡುಕುತ್ತಿದುದೆಂದರೆ, ನಾನು ದಿನವೂ ಸೈಕಲ್ ಪಾರ್ಕ್‌ ಮಾಡುತ್ತಿದ್ದ ಜಾಗವನ್ನು! ದಿನವೂ ನಿಲ್ಲಿಸುತ್ತಿದ್ದ ಸ್ಥಳದಲ್ಲೇ ಸೈಕಲ್ ನಿಲ್ಲಿಸಿ, ತಲೆಯನ್ನು ನೇವರಿಸಿ ಕ್ಲಾಸಿಗೆ ನಡೆಯುತ್ತಿದ್ದ ನನಗೂ ಸೈಕಲ್ ಸ್ಟ್ಯಾಂಡ್‌ಗೂ ಯಾವಾಗ ಗೆಳೆತನ ಬೆಳೆಯಿತೆಂಬುದು ನನಗೂ ತಿಳಿಯದ ವಿಷಯವೇ ಸರಿ!

ಹೀಗೆ ಕಾಲೇಜು ದಿನಗಳೆಂದರೆ ಬಣ್ಣ ಬಣ್ಣದ ಚಿತ್ತಾರ ಕಣ್ಣೆವೆ ತುಂಬಿ ಮನಸಿನಾಳದೊಳು ಇಳಿದುಬಿಡುತ್ತದೆ. ಗೆಳತಿಯರೊಂದಿಗೆ ಹಾಕಿದ ಹೆಜ್ಜೆಗಳು, ಆಡುತ್ತಿದ್ದ ಮೈದಾನ, ಕಲಿಸಿದ ಇಷ್ಟದ ಗುರುಗಳು, ಪರೀಕ್ಷೆಯಲ್ಲಿ ಫಸ್ಟ್ ಬಂದಾಗ ಹೆಸರು ತೋರಿದ ನೋಟಿಸ್ ಬೋಡ್೯, ಗಂಟೆಗಟ್ಟಲೆ ಶಿಕ್ಷಕರೊಂದಿಗೆ ಚರ್ಚೆ ನಡೆಸಿದ ಸ್ಟ್ಯಾಪ್ ರೂಮ್, ಪಡೆದ ಬಹುಮಾನಗಳು ಎಲ್ಲವೂ ಒಂದೊಂದು ಕಥೆಯೇ. ಅರಿವಿಲ್ಲದೇ ನಗುವಿನಾಭರಣ ತೊಡಿಸುವ ಸಿಹಿನೆನಪಿಗೊಂದು ಸಲಾಂ.

-ಮಲ್ಲಮ್ಮ  ಜೊಂಡಿ, ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು