ಮಾದರಿ ಶಾಲೆ ನಿರ್ಮಾಣದ ಸಂಕಲ್ಪ ತೊಟ್ಟಿರುವ ಸಹ ಶಿಕ್ಷಕ ಯಲ್ಲಪ್ಪ ಈರಪ್ಪ ಕುಂಟೋಜಿ

7
ಕುಗ್ರಾಮದ ಶಾಲೆಯ ಅಭಿವೃದ್ಧಿಗೆ ಪಣ

ಮಾದರಿ ಶಾಲೆ ನಿರ್ಮಾಣದ ಸಂಕಲ್ಪ ತೊಟ್ಟಿರುವ ಸಹ ಶಿಕ್ಷಕ ಯಲ್ಲಪ್ಪ ಈರಪ್ಪ ಕುಂಟೋಜಿ

Published:
Updated:
Deccan Herald

ಸಿಂದಗಿ: ದುಂಬಾಲು ಬಿದ್ದು ಪ್ರಶಸ್ತಿ ಪಡೆಯುವವರು ಒಂದೆಡೆ, ಪುಢಾರಿಗಳಂತೆ ರಾಜಕಾರಣ ಮಾಡುವವರು ಇನ್ನೊಂದೆಡೆ. ಶಾಲೆಗೆ ಹೋಗದೆ ಸಂಬಳ ಪಡೆಯುವವರು ಮತ್ತೊಂದೆಡೆ. ಇಂಥ ಶಿಕ್ಷಕರ ಸಾಲಿನಲ್ಲಿರದ ಅಪರೂಪದ, ಎಲ್ಲರಿಗೂ ಮಾದರಿಯಾದ ಶಿಕ್ಷಕ ಪಟ್ಟಣದಿಂದ 50 ಕಿ.ಮೀ. ದೂರದ ಚಟ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾರೆ.

11 ವರ್ಷಗಳಿಂದ ಇದೇ ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಈರಪ್ಪ ಕುಂಟೋಜಿ, ಮಕ್ಕಳ ಬೌದ್ಧಿಕ, ಶಾರೀರಿಕ, ಮಾನಸಿಕ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಓದುತ್ತಿರುವ 109 ವಿದ್ಯಾರ್ಥಿಗಳಿದ್ದಾರೆ. ಇಬ್ಬರೇ ಶಿಕ್ಷಕರು. ಮೂರೇ ಕೊಠಡಿಯಲ್ಲಿ ಮಕ್ಕಳಿಗೆ ಪ್ರೊಜೆಕ್ಟರ್ ಆಧಾರಿತ ಕಲಿಕೆ, ಕಂಪ್ಯೂಟರ್ ಶಿಕ್ಷಣ, ಸಂಗೀತ ಕಲಿಕೆ, ಗ್ರಂಥಾಲಯ... ಇನ್ನಿತರೆ ಚಟುವಟಿಕೆಗಳನ್ನು ಶಿಕ್ಷಕ ಕುಂಟೋಜಿ ನಿರ್ವಹಿಸುತ್ತಿದ್ದಾರೆ.

ಗ್ರಾಮಸ್ಥರಿಂದ ₹ 1.70 ಲಕ್ಷ ಸಂಗ್ರಹಿಸಿ, ನಾಲ್ಕು ಗುಂಟೆ ಜಮೀನು ಖರೀದಿಸುವ ಮೂಲಕ ಮಕ್ಕಳಿಗೆ ಆಟದ ಮೈದಾನ ನಿರ್ಮಿಸಿದ್ದಾರೆ. ಪಾಲಕರಿಂದ ಶಾಲೆಗೆ ಧ್ವನಿವರ್ಧಕದ ಸಾಮಗ್ರಿ, ವಿದ್ಯುತ್ ಸಾಧನ ಸಲಕರಣೆಗಳು, ಬಿಸಿಯೂಟದ ತಾಟುಗಳು, ಕುರ್ಚಿಗಳು... ಇತರೆ ವಸ್ತುಗಳನ್ನು ದಾನವಾಗಿ ಪಡೆದುಕೊಂಡಿದ್ದಾರೆ.

ಶಾಲಾ ಪರಿಸರವನ್ನು ಹಸಿರುಮಯ ಮಾಡಿದ್ದಾರೆ. ಹುಲ್ಲಿನ ಹಾಸಿಗೆ, ಕೈ ತೋಟದಲ್ಲಿ ನುಗ್ಗೆ, ಬೇವು, ಲಿಂಬೆ, ಸಂಕೇಶ್ವರ, ಕರಿಬೇವು, ಮಾವು, ತರಕಾರಿ ಬೆಳೆಸಿ, ಮಕ್ಕಳಿಗೆ ಬಿಸಿ ಊಟಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೈ ತೋಟದಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ.

ಬಿಸಿಯೂಟದಲ್ಲಿ ಪ್ರತಿ ಶನಿವಾರ ಇಡ್ಲಿ–ಸಾಂಬಾರ್ ನೀಡುತ್ತಾರೆ. ಸಂಗೀತ ಜ್ಞಾನ ಹೊಂದಿದ ಶಿಕ್ಷಕ ಕುಂಟೋಜಿ ಮಕ್ಕಳೊಂದಿಗೆ ಮಕ್ಕಳಾಗಿ ಹಾರ್ಮೋನಿಯಂ ನುಡಿಸುತ್ತಾರೆ. ಹಾಡುತ್ತಾರೆ, ಸಂಗೀತ ಕಲಿಸುತ್ತಾರೆ. ಕೋಚಿಂಗ್‌ ಹಾವಳಿ ಇಲ್ಲಿಲ್ಲ. ಶಾಲೆಯಲ್ಲೇ ನವೋದಯ, ಕಿತ್ತೂರ ಚನ್ನಮ್ಮ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆಗಳಿಗೆ ನಡೆಸುವ ಪರೀಕ್ಷೆಗೆ ಪೂರ್ವ ತರಬೇತಿಯನ್ನು ಪ್ರತಿ ಶನಿವಾರ ಉಚಿತವಾಗಿ ನೀಡುತ್ತಾರೆ.

‘ಪ್ರತ್ಯೇಕ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಹೈಟೆಕ್ ಶೌಚಾಲಯ... ಇದು ನನ್ನ ಕನಸು. ಇವುಗಳನ್ನು ಆದಷ್ಟು ಬೇಗ ನನಸು ಮಾಡಿಕೊಳ್ಳುವ ಮೂಲಕ ಇಡೀ ರಾಜ್ಯದಲ್ಲೇ ಮಾದರಿ ಶಾಲೆ ಮಾಡುವೆ. ಇದಕ್ಕೆ ಗ್ರಾಮಸ್ಥರು ಇನ್ನೂ ಸಹಕರಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿ ವರ್ಗ ಪ್ರೋತ್ಸಾಹಿಸಬೇಕಿದೆ.

ನನಗೆ ಮಕ್ಕಳು, ಶಾಲೆ ಬಿಟ್ಟು ಬೇರೇನೂ ಗೊತ್ತಿಲ್ಲ. ಯಾವ ಪ್ರಶಸ್ತಿಯೂ ಬೇಕಿಲ್ಲ. ಮಕ್ಕಳೇ ನನ್ನ ಆಸ್ತಿ. ಇದೇ ನನಗೆ ದೊಡ್ಡ ಪ್ರಶಸ್ತಿ’ ಎನ್ನುತ್ತಾರೆ ಶಿಕ್ಷಕ ಯಲ್ಲಪ್ಪ ಕುಂಟೋಜಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !