ಶನಿವಾರ, ಜೂಲೈ 11, 2020
23 °C

ವಿರಳ ಲಿಪಿಗಳ ಕಲಿಯಬೇಕೆ?

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Deccan Herald

ಇತಿಹಾಸ ರಚನೆಗೆ ಹಸ್ತಪ್ರತಿಗಳು ಸಹ ಪ್ರಮುಖ ಆಕರ. ತಾಳೇಗರಿಗಳ ಮೇಲೆ ಕೈ ಬರಹದಿಂದ ರಚನೆಯಾಗಿರುವ ಹಸ್ತಪ್ರತಿಗಳು ದೇಶದಲ್ಲಿ ಸಾಕಷ್ಟು ದೊರೆತಿವೆಯಾದರೂ, ಅವುಗಳನ್ನು ಓದುವುದು ಸುಲಭವಲ್ಲ. ಹಾಗಾಗಿ ಹಸ್ತಪ್ರತಿಗಳನ್ನು ಓದುವವರು ವಿರಳ. ಹಸ್ತಪ್ರತಿಗಳಲ್ಲಿನ ಲಿಪಿಗಳನ್ನು ಓದಲು ವಿಶೇಷ ತರಬೇತಿ ಅಗತ್ಯ. ಇದಕ್ಕಾಗಿ ಬೆಂಗಳೂರಿನ ಇಂದಿರಾ
ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್‌ಸಿಎ)  ಪ್ರಾಯೋಗಿಕವಾಗಿ ‘ಮೋಡಿ’ ಮತ್ತು ‘ತಿಗಳಾರಿ’ ಲಿಪಿಗಳ ಕಲಿಕಾ ಕಾರ್ಯಾಗಾರ ಹಮ್ಮಿಕೊಂಡಿದೆ.

ಒಟ್ಟು 2,85,000 ಹಸ್ತಪ್ರತಿಗಳನ್ನು 22 ಸಾವಿರ ಮೈಕ್ರೊಫಿಲ್ಮ್‌ ರೋಲ್‌ಗಳಲ್ಲಿ ರ→ಕ್ಷಿಸಿರುವ ಐಜಿಎನ್‌ಸಿಎ ಇವುಗಳ ಅಧ್ಯಯನಕ್ಕೆ ಪಣತೊಟ್ಟಿದೆ. ವಿವಿಧ ಭಾಷೆಗಳ ಹಸ್ತಪ್ರತಿಗಳನ್ನು ಓದಿದರೆ ದೇಶದ ಇತಿಹಾಸ ವಿಸ್ತರಣೆಗೊಳ್ಳುತ್ತದೆ ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದೆ.

ದೇಶದಲ್ಲಿ ಪ್ರಾಚೀನಕಾಲದಿಂದ 19ನೇ ಶತಮಾನದವರೆಗೆ ಬರವಣಿಗೆಗೆ ತಾಳೆಗರಿಗಳನ್ನು ಬಳಸಲಾಗುತ್ತಿತ್ತು. ಕ್ರಮೇಣ ಕಾಗದದ ಬಳಕೆ ಹೆಚ್ಚಾಯಿತು. ದೇಶದ ಅಪಾರ ಸಾಹಿತ್ಯ ಸಂಪತ್ತಿನ ಕಣಜವಾಗಿರುವ ಈ ಹಸ್ತಪ್ರತಿಗಳಲ್ಲಿ ಏನಿದೆ? ಅವು ಯಾವ ಕಾಲ ಮತ್ತು ವಿಷಯದ ಮೇಲೆ ಬೆಳಕು ಚೆಲ್ಲುತ್ತವೆ ಎಂಬುದನ್ನು ತಿಳಿದುಕೊಳ್ಳಲು ಐಜಿಎನ್‌ಸಿಎ ಈ ಕಾರ್ಯಾಗಾರ ಆಯೋಜಿಸಿದ್ದು, ಇದೇ 7ರಿಂದ ಆರಂಭವಾಗಲಿದೆ.

ಮೋಡಿ ಲಿಪಿ: ಮೋಡಿ ಬರವಣಿಗೆ ಹರವು ದೆಹಲಿಯಿಂದ ತಂಜಾವೂರಿನವರೆಗೂ ಇತ್ತು. ಬಿಜಾಪುರದ ಸುಲ್ತಾನರ ಕಾಲದಲ್ಲೂ ಈ ಲಿಪಿ ಬಳಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕ್ರಿ.ಶ 17ನೇ ಶತಮಾನದಿಂದ 1950ರವರೆಗೆ ಮರಾಠಿ ಭಾಷೆ ಬರೆಯಲು ಮೋಡಿ ಲಿಪಿ ಬಳಸಲಾಗುತ್ತಿತ್ತು. ಬಳಿಕ ದೇವನಾಗರಿ ಲಿಪಿಯು ಮರಾಠಿ ಭಾಷೆ ಬರವಣಿಗೆಯ ಮಾಧ್ಯಮವಾಗಿ ಪರಿವರ್ತನೆಯಾಯಿತು.

ಶಿವಾಜಿ ಕಾಲದ ಮೋಡಿ ಲಿಪಿ ಓದಲು ಕಷ್ಟ. ಇದು ವಕ್ರ ರೇಖೆಯ ಲಿಪಿ. ಪೇಶ್ವೆಗಳಿಂದ ಕನ್ನಡದಲ್ಲೂ ಮೋಡಿ ಲಿಪಿ ಬಳಕೆಗೆ ಬಂದಿತ್ತು. ಮೈಸೂರು ರಾಜ್ಯವನ್ನು ಹೈದರಾಲಿ ವಶಪಡಿಸಿಕೊಂಡ ಮೇಲೆ ದಿವಾನರಾಗಿದ್ದ ಪೂರ್ಣಯ್ಯ (ಮರಾಠಿ ಬ್ರಾಹ್ಮಣ) ಅವರ ಅವಧಿಯಲ್ಲಿ ಕನ್ನಡದಲ್ಲಿ ಮೋಡಿ ಲಿಪಿ ಹೆಚ್ಚು ಬಳಕೆಯಲ್ಲಿತ್ತು. ಟಿಪ್ಪು ನಂತರವೂ ಮೈಸೂರು ಆಸ್ಥಾನದಲ್ಲಿದ್ದ ಮರಾಠಿ ಕಾರಕೂನರು ಈ ಲಿಪಿಯನ್ನು ಹೆಚ್ಚಾಗಿ ಬಳಸುತ್ತಿದ್ದರು.

ತಿಗಳಾರಿ ಲಿಪಿ: ಇದು ಮಲಯಾಳಂ ಮತ್ತು ತುಳು ಭಾಷೆಯ ವಿಸ್ತರಣಾ ರೂಪ. ಕೇರಳ, ಕರ್ನಾಟಕದ ತೀರ ಪ್ರದೇಶ, ಮಲೆನಾಡಿನ ಪ್ರದೇಶದಲ್ಲಿ ಬಳಕೆಯಿದ್ದ ಲಿಪಿ. ಇದು ಗ್ರಂಥ ಲಿಪಿ ಇರಬಹುದು ಎನ್ನಲಾಗಿದೆ.

ಈ ಎರಡೂ ವಿರಳ ಲಿಪಿಗಳ ಹುಟ್ಟು, ಬೆಳವಣಿಗೆ ಮತ್ತು ಭಾಷಾ ಸಂಪರ್ಕವನ್ನು ಕಾರ್ಯಾಗಾರದಲ್ಲಿ ತಿಳಿದುಕೊಳ್ಳಬಹುದು. ತಾಳೇಗರಿಗಳಲ್ಲಿ ಇರುವ ಈ ಲಿಪಿಗಳ ಓದುವ ವಿಧಾನವನ್ನು ಕಲಿಯಬಹುದು. ಇದು ಹೊಸ ಸಂಶೋಧನೆ, ಇತಿಹಾಸ ರಚನೆಗೆ ನೆರವಾಗಬಹುದು. ಮುಂದಿನ ದಿನಗಳಲ್ಲಿ ಹಲವು ಭಾರತೀಯ ಲಿಪಿಗಳ ಕಲಿಕಾ ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶವನ್ನು ಕೇಂದ್ರ ಹೊಂದಿದೆ.

ಲಿಪಿ, ಭಾಷೆ ಕುರಿತು ಆಸಕ್ತಿ ಹೊಂದಿರುವವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ನೋಂದಣಿ ಶುಲ್ಕ ಒಂದು ಕಾರ್ಯಾಗಾರಕ್ಕೆ ₹ 500.  ಮುಂಬೈ, ದೆಹಲಿ, ಚೆನ್ನೈಗಳಿಂದಲೂ ಲಿಪಿ ಕಲಿಯಲು ಆಸಕ್ತರು ಬರುತ್ತಿದ್ದಾರೆ. ಸಂಪರ್ಕ: 080–23212320/ 23212332/ 23212356 

* * * *

ಮೋಡಿ ಲಿಪಿಯ ಕಾರ್ಯಾಗಾರ ಇದೇ 7ರಿಂದ 15ರವರೆಗೆ ಹಾಗೂ ತಿಗಳಾರಿ ಲಿಪಿಯ ಕಾರ್ಯಾಗಾರ ಇದೇ 17ರಿಂದ 25ರವರೆಗೆ ನಡೆಯಲಿದೆ. ಸೋಮವಾರದಿಂದ ಶುಕ್ರವಾರ (ಸಂಜೆ 5.30ರಿಂದ ರಾತ್ರಿ 8), ಶನಿವಾರ (ಬೆಳಿಗ್ಗೆ 10ರಿಂದ ಸಂಜೆ 5). ಸ್ಥಳ: ಸೆಮಿನಾರ್‌ ಹಾಲ್‌, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು