ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಆನ್‌ಲೈನ್‌ ಶಿಕ್ಷಣದ ಉಚಿತ ವೇದಿಕೆ ‘ಸ್ವಯಂ’

Last Updated 28 ಅಕ್ಟೋಬರ್ 2020, 7:59 IST
ಅಕ್ಷರ ಗಾತ್ರ
ADVERTISEMENT
""

ಆನ್‌ಲೈನ್‌ ಶಿಕ್ಷಣ ಕ್ರಮಗಳು ಜನಪ್ರಿಯಗೊಂಡಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ‘ಸ್ವಯಂ’ (SWAYAM) ಕಾರ್ಯಕ್ರಮಕ್ಕೆ ಬೇಡಿಕೆ ಬಂದಿದೆ. ಆದರೆ ಇತರ ಆನ್‌ಲೈನ್‌ ವೇದಿಕೆಗಳ ರೀತಿ ದೊಡ್ಡಮಟ್ಟದ ಪ್ರಚಾರದಲ್ಲಿ ಇಲ್ಲ.

ಸದ್ಯ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಇಲಾಖೆಗಳು ಈ ಮಾಧ್ಯಮವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಶತಪ್ರಯತ್ನ ಮಾಡುತ್ತಿವೆ. ಎಲ್ಲರಿಗೂ ಸಮಾನ ಶಿಕ್ಷಣ ಲಭ್ಯವಾಗಿಸುವುದು, ನೀತಿಯುತ ಮತ್ತು ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ.

ಆರ್ಥಿಕ ಅಥವಾ ಇನ್ಯಾವುದೋ ಕಾರಣದಿಂದ ಡಿಜಿಟಲ್‌ ಶಿಕ್ಷಣವನ್ನು ಪಡೆಯಲಾಗದ ವಿದ್ಯಾರ್ಥಿಗಳನ್ನು ಈ ಕ್ಷೇತ್ರಕ್ಕೆ ಸೆಳೆದು ಶಿಕ್ಷಣದ ಮುಖ್ಯ ವಾಹಿನಿಯಲ್ಲಿ ಸೇರಿಕೊಳ್ಳುವಂತೆ ಮಾಡುವುದು ಈ ಬೃಹತ್‌ ಮಟ್ಟದ ಮುಕ್ತ ಆನ್‌ಲೈನ್‌ ತರಗತಿ (Massive Open Online Courses (MOOCs) ಕಾರ್ಯಕ್ರಮದ ಗುರಿ.

ಸ್ಟಡಿ ವೆಬ್ಸ್‌ ಆಫ್‌ ಆಕ್ಟಿವ್‌ ಲರ್ನಿಂಗ್‌ ಫಾರ್‌ ಯಂಗ್‌ ಆಸ್ಪೈರಿಂಗ್‌ ಮೈಂಡ್ಸ್‌(Study Webs of Active Learning for Young Aspiring Minds (SWAYAM)) ಅನ್ನುವುದನ್ನೇ ಸಂಕ್ಷಿಪ್ತವಾಗಿ‘ಸ್ವಯಂ’ ಎಂದು ಕರೆಯಲಾಗಿದೆ.

9ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ, ಎಂಜಿನಿಯರಿಂಗ್‌ನಂಥ ತಾಂತ್ರಿಕ ಕೋರ್ಸ್‌ಗಳು, ಅಲ್ಪಾವಧಿ ಕೋರ್ಸ್‌ಗಳು ಕೂಡಾ ಲಭ್ಯ ಇವೆ. ಮಾತ್ರವಲ್ಲ ಇದು ಸಂವಾದಾತ್ಮಕ (ಇಂಟರಾಕ್ಟಿವ್‌) ಕೂಡಾ ಹೌದು. ಯಾವುದೇ ಸಂದೇಹ ಬಂದರೂ ಸಂಬಂಧಿಸಿದ ಶಿಕ್ಷಕರೊಂದಿಗೆ ಸಂವಾದಿಸಿ ಗೊಂದಲ ಪರಿಹರಿಸಿಕೊಳ್ಳಬಹುದು.

ಒಟ್ಟಿನಲ್ಲಿ ಎಲ್ಲ ಕೋರ್ಸ್‌ಗಳುಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಕೋರ್ಸ್‌ ಸಿದ್ಧಪಡಿಸಲು ದೇಶದಾದ್ಯಂತ ಸಾವಿರಕ್ಕೂ ಅಧಿಕ ಶಿಕ್ಷಕರು ಭಾಗಿಯಾಗಿದ್ದಾರೆ. ಮಾತ್ರವಲ್ಲ ಇಲ್ಲಿನ ತರಗತಿಗಳು ಸಂಪೂರ್ಣ ಉಚಿತ. ಕೋರ್ಸ್‌ನ ಪ್ರಮಾಣಪತ್ರ ಅಗತ್ಯವಿದ್ದರೆ ಪರೀಕ್ಷಾ ಪ್ರಕ್ರಿಯೆ ಮತ್ತು ಪ್ರಮಾಣಪತ್ರಕ್ಕಾಗಿ ಮಾತ್ರ ಕನಿಷ್ಠ ಶುಲ್ಕ ಪಾವತಿಸಬೇಕಾಗುತ್ತದೆ.

‘ಸ್ವಯಂ’ನಲ್ಲಿ ರೂಪಿಸಲಾದ ಕೋರ್ಸ್‌ಗಳು ನಾಲ್ಕು ಪ್ರಮುಖ ಮಾಧ್ಯಮಗಳಲ್ಲಿವೆ.

1. ವಿಡಿಯೋ ಉಪನ್ಯಾಸ, 2. ಡೌನ್‌ಲೋಡ್‌ ಮಾಡಿ ಓದಬಹುದಾದ (ಪಿಡಿಎಫ್‌) ಪಠ್ಯವಸ್ತುಗಳು 3. ಪರೀಕ್ಷೆಗಳು, ರಸಪ್ರಶ್ನೆಗಳು ಮತ್ತು ಸ್ವಯಂ ಮೌಲ್ಯಮಾಪನ ಪರೀಕ್ಷೆಗಳು. 4. ಸಂದೇಹ ಪರಿಹರಿಸಿಕೊಳ್ಳಲು ಆನ್‌ಲೈನ್‌ ಚರ್ಚಾ ವೇದಿಕೆಗಳು.

ಹೀಗೆ ಬಹುಮಾಧ್ಯಮ ತಂತ್ರಜ್ಞಾನವನ್ನು ಇಲ್ಲಿ ಬಳಸಿಕೊಂಡು ಉತ್ಕೃಷ್ಟ ಕಲಿಕಾ ಅನುಭವ ನೀಡಲು ಈ ವೇದಿಕೆ ಕಾರ್ಯಪ್ರವೃತ್ತವಾಗಿದೆ.

ಸರಳವಾಗಿ ನೋಂದಣಿ ಮಾಡಿಕೊಳ್ಳಬಹುದು. ಗೂಗಲ್‌, ಫೇಸ್‌ಬುಕ್‌ ಖಾತೆಗಳ ಮೂಲಕವೂ ನೋಂದಣಿಗೆ ಅವಕಾಶವಿದೆ. ಒಮ್ಮೆ ನೋಂದಣಿ ಆದರೆನಿಮಗೆ ಬೇಕಾದ ಕೋರ್ಸ್‌, ಸದ್ಯ ಆ ಕೋರ್ಸ್‌ನ ತರಗತಿ ಲಭ್ಯವಿದೆಯೇ ಇಲ್ಲವೇ, ಅಥವಾ ಕೋರ್ಸ್‌ ಆರಂಭವಾಗುವ ವೇಳಾಪಟ್ಟಿ, ಕೋರ್ಸ್‌ ರೂಪಿಸಿದವರ ವಿವರ, ಬೋಧಕರ ವಿವರ ಎಲ್ಲವೂ ಒಂದೊಂದಾಗಿಯೇ ತೆರೆದುಕೊಳ್ಳುತ್ತದೆ. ಸದ್ಯ ಚಾಲ್ತಿಯಲ್ಲಿರುವ ಕೋರ್ಸ್‌ಗಳಿಗೂ ನೇರವಾಗಿ ಸೇರಬಹುದು. ವಿಡಿಯೋದ ಕೆಳಗಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಿದರೆ ಪಠ್ಯ ವಸ್ತುಗಳೂ ಸಿಗುತ್ತವೆ. ವಿಡಿಯೋದಲ್ಲಿರುವ ಬೋಧಕರು ಹೇಳುವ ಸೂಚನೆಗಳನ್ನು ಪಾಲಿಸಬೇಕು ಅಷ್ಟೆ.

ಪ್ರಕಾಶ್‌ ಗೌಡ ಎಸ್‌.ಯು.

ಸದ್ಯಇದು ವಿಶ್ವದಲ್ಲೇ ದೊಡ್ಡದಾದ ಆನ್‌ಲೈನ್ ವೇದಿಕೆ. ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಬೃಹತ್‌ ಮಟ್ಟದ ಮುಕ್ತ ಆನ್‌ಲೈನ್‌ ತರಗತಿಗಳ ಪ್ರಯೋಜನ ಪಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಪ್ರಯೋಜನಕಾರಿ. ಪ್ರೌಢಶಾಲಾ ಮಟ್ಟದಲ್ಲೂ ಈ ವೇದಿಕೆಯನ್ನು ವ್ಯಾಪಕವಾಗಿ ಬಳಸಿಕೊಳ್ಳುವಂತಾಗಬೇಕು. ಕೋವಿಡ್‌ ಕಾಲದ ಆರ್ಥಿಕ ಸಂಕಷ್ಟದಿಂದ ಶಿಕ್ಷಣ ಮುಂದುವರಿಸಲು ಕಷ್ಟವಾಗುವ ಎಲ್ಲ ಸಮಸ್ಯೆಗಳಿಗೆ ಈ ವೇದಿಕೆ ಪರಿಹಾರ ರೂಪದಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನುತ್ತಾರೆ ಈ ಕಾರ್ಯಕ್ರಮದ ಬಗ್ಗೆ ಅಧ್ಯಯನಪ್ರಬಂಧ ಮಂಡಿಸಿರುವ ಕೊಪ್ಪಳ ತಾಲ್ಲೂಕು ಇರಕಲ್‌ಗಡಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಪ್ರಕಾಶ್‌ ಗೌಡ ಎಸ್‌.ಯು.‌‌

ಈ ವೇದಿಕೆಯಲ್ಲಿ ಉತ್ತಮ ಗುಣಮಟ್ಟದ ವಿಷಯವನ್ನುರೂಪಿಸಿ ನೀಡಲಾಗಿದೆಯೇ ಎಂಬುದರನಿಗಾ ವಹಿಸಲು ರಾಷ್ಟ್ರಮಟ್ಟದ9 ಸಂಯೋಜನಾ ಸಂಸ್ಥೆಗಳನ್ನು ನೇಮಿಸಲಾಗಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌, ತಾಂತ್ರಿಕ ವೃದ್ಧಿ ಹೊಂದಿದ ಕಲಿಕೆ ಸಂಬಂಧಿಸಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಟಿಇಎಲ್‌), ವಿಶ್ವವಿದ್ಯಾಲಯ ಅನುದಾನ ಆಯೋಗ, ಶಿಕ್ಷಣ ಸಂವಹನ ಒಕ್ಕೂಟ (ಸಿಇಸಿ), ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ), ಮುಕ್ತ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ (ಎನ್‌ಐಒಎಸ್‌), ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು (ಐಐಎಂಬಿ), ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಎನ್‌ಐಟಿಟಿಆರ್‌). ಒಂದೊಂದು ವಿಷಯದ ಮೇಲೆ ನಿಗಾ ವಹಿಸುತ್ತಿವೆ.

‘ಸ್ವಯಂ’ ವೇದಿಕೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು (ಎನ್‌ಪಿಟಿಇಎಲ್‌),ಐಐಟಿ ಮದ್ರಾಸ್, ಗೂಗಲ್ ಇಂಕ್ ಮತ್ತು ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ.

ವೆಬ್‌ಸೈಟ್‌‌ ವಿಳಾಸ:https://swayam.gov.in

ನೋಂದಣಿ ಮತ್ತು ಕೋರ್ಸ್‌ ಪ್ರವೇಶ ಮಾಹಿತಿಗೆ https://www.youtube.com/watch?v=mviM9xoE_yk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT