ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ಪಿಎಚ್‌ಡಿ: ಜಿಆರ್‌ಇಗೆ ಮಹತ್ವ

Last Updated 7 ಮೇ 2019, 19:30 IST
ಅಕ್ಷರ ಗಾತ್ರ

ನಾನು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮೈಕ್ರೊಬಯಾಲಜಿಯಲ್ಲಿ ಎಂ.ಎಸ್ಸಿ. ಮಾಡುತ್ತಿದ್ದೇನೆ. ಸದ್ಯ 4ನೆಯ ಸೆಮಿಸ್ಟರ್‌ ಓದುತ್ತಿದ್ದೇನೆ. ಮುಂದೆ ಪಿಎಚ್‌.ಡಿ. ಮಾಡಬೇಕೆಂಬ ಆಸೆಯಿದೆ. ಹಾಗೆಯೇ ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಬಯಕೆಯೂ ಇದೆ. ಮುಂದೆ ನನ್ನ ಕ್ಷೇತ್ರದಲ್ಲಿ ಯಾವ ಬಗೆಯ ಉದ್ಯೋಗಾವಕಾಶಗಳಿವೆ? ಹಾಗೆಯೇ ಫೆಲೊಶಿಪ್‌ ಕುರಿತೂ ವಿವರ ನೀಡಿ.

ಪೊನ್ನಣ್ಣ ಎಂ.ಬಿ., ದಾವಣಗೆರೆ

ಪಿಎಚ್.ಡಿ. ಎನ್ನುವುದು ದೀರ್ಘವಾದ ಮತ್ತು ಗಂಭೀರವಾದ ಕಲಿಕಾ ಪ್ರಕ್ರಿಯೆಯಾಗಿದ್ದು ಹೆಚ್ಚಿನ ಮಾನಸಿಕ ಮತ್ತು ಶೈಕ್ಷಣಿಕ ತಯಾರಿ ಮುಖ್ಯವಾಗುತ್ತದೆ. ಹೀಗಾಗಿ ಮೊದಲಿಗೆ, ಪಿಎಚ್.ಡಿ. ಓದಲು, ಮುಂದಿನ 4–5 ವರ್ಷಗಳನ್ನು ಮೀಸಲಿಡಲು ನಿಜವಾಗಿಯೂ ತಯಾರಿದ್ದೇವೆಯೇ ಎಂದು ಧೃಡೀಕರಿಸಿಕೊಳ್ಳಬೇಕು. ಮೈಕ್ರೊಬಯಾಲಜಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ನಿರ್ದಿಷ್ಟವಾಗಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಯಾಕೆ? ಮತ್ತು ಹಿಂದೆ ಇದೇ ವಿಷಯದ ಮೇಲೆ ಏನೇನು ಸಂಶೋಧನೆಗಳಾಗಿವೆ? ನಿಮ್ಮ ಸಂಶೋಧನಾ ಪ್ರಶ್ನೆಗಳು ಯಾವವು? ಯಾವ ಸಂಶೋಧನಾ ವಿಧಾನ ಅನುಸರಿಸುತ್ತೀರಿ? ಇತ್ಯಾದಿಗಳನ್ನು ನಿಗದಿಪಡಿಸಿಕೊಂಡು ರಿಸರ್ಚ್ ಪ್ರಪೋಸಲ್ ತಯಾರಿ ಮಾಡಿಕೊಳ್ಳಬೇಕು. ನೀವು ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿ ಸಂಶೋಧನೆಗಳು, ಯಾವ ಸಂಶೋಧಕರು ಯಾವ ವಿಶ್ವವಿದ್ಯಾನಿಲಯದಲ್ಲಿ ಕೈಗೊಂಡಿದ್ದಾರೆ ಎಂದು ಅಂತರ್ಜಾಲದಲ್ಲಿ ನೋಡಿಕೊಳ್ಳಿ. ಪಿಎಚ್.ಡಿ. ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡುವ ವಿಭಾಗ ಮತ್ತು ಪಿಎಚ್.ಡಿ. ಗೈಡ್‌ಗಳು ತಮ್ಮ ಪರಿಣತಿಯ ವಿಷಯದ ಮೇಲೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ವಿದ್ಯಾರ್ಥಿಗಳಿಗೂ ಅವರಿಂದ ಸೂಕ್ತ ಮಾರ್ಗದರ್ಶನ ದೊರಕುತ್ತದೆ.

ಪಿಎಚ್.ಡಿ. ಅಧ್ಯಯನವನ್ನು ಯಾವ ಸಂಸ್ಥೆಯಿಂದ ಪಡೆದಿದ್ದೀರ ಎನ್ನುವುದು ಬಹಳ ಮುಖ್ಯವಾದ ಅಂಶವಾದ್ದರಿಂದ ದೇಶ ಅಥವಾ ವಿದೇಶದಲ್ಲಿ ಉತ್ತಮ ರ‍್ಯಾಂಕ್‌ ಪಡೆದಿರುವ ಸಂಸ್ಥೆಗಳಲ್ಲಿ ಮೊದಲು ಪ್ರವೇಶಾತಿ ಪಡೆಯಲು ಪ್ರಯತ್ನಿಸಬೇಕು.

ಭಾರತದಲ್ಲಿ ಪಿಎಚ್.ಡಿ.: ಭಾರತದಲ್ಲಿ ಪಿಎಚ್.ಡಿ. ಅಧ್ಯಯನವು 4–5 ವರ್ಷ ಅವಧಿಯವರೆಗೆ ನಡೆಯಲಿದ್ದು ಐ.ಐ.ಎಸ್.ಇ. ಬೆಂಗಳೂರು, ಏಮ್ಸ್, ಐ.ಐ.ಟಿ.ಗಳಂತಹ ಸರ್ಕಾರಿ ಸ್ವತಂತ್ರ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ಕೇಂದ್ರ ವಿಶ್ವವಿದ್ಯಾನಿಲಯ, ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕೆಲವು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಬಹುದು.

ಪಿಎಚ್.ಡಿ.ಗೆ ಪ್ರವೇಶಾತಿ ಪಡೆಯಲು ಪ್ರವೇಶಾತಿ ಪರೀಕ್ಷೆ ಮತ್ತು ಸಂದರ್ಶನಗಳಲ್ಲಿ ತೇರ್ಗಡೆ ಹೊಂದಬೇಕು. ಯು.ಜಿ.ಸಿ. ಆಯೋಜಿಸುವ ಸಿ.ಎಸ್.ಐ.ಆರ್. ನ ಜೂನಿಯರ್ ರಿಸರ್ಚ್ ಫೆಲೊಶಿಪ್ (ಜೆ.ಆರ್.ಎಫ್.) ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಹೆಚ್ಚಿನ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾತಿ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ ಮತ್ತು ನೇರವಾಗಿ ಸಂದರ್ಶನ ಸುತ್ತಿಗೆ ಆಯ್ಕೆ ಆಗುತ್ತಾರೆ.

ವಿದೇಶದಲ್ಲಿ ಪಿಎಚ್.ಡಿ.: ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ ಜರ್ಮನಿಯಂತಹ ವಿದೇಶಿ ರಾಷ್ಟ್ರಗಳಲ್ಲಿ ಉನ್ನತ ವ್ಯಾಸಂಗಕ್ಕೆ ಉತ್ತಮ ಅವಕಾಶಗಳಿವೆ. ಮೈಕ್ರೊಬಯಾಲಾಜಿಯಲ್ಲಿ ನೀವು ಸಂಶೋಧನೆ ಮಾಡಲು ಇಚ್ಚಿಸುವ ವಿಷಯದ ಕುರಿತು ಯಾವ ದೇಶದ ಯಾವ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗಳು ಆಗಿವೆ ಎಂದು ತಿಳಿದು ಆಯ್ಕೆ ಮಾಡಿಕೊಳ್ಳಿ. ನಂತರ ಆಯಾ ದೇಶದ ಆಯಾ ವಿಶ್ವವಿದ್ಯಾನಿಲಯದ ನಿಯಮಗಳೇನು ಎಂದು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಪ್ರವೇಶ ಪ್ರಕ್ರಿಯೆಗಳು ಈ ಕೆಳಗಿನಂತಿರುತ್ತವೆ: ಹೆಚ್ಚಿನ ಸಂಸ್ಥೆಗಳಲ್ಲಿ ಜಿ.ಆರ್.ಇ. ಪರೀಕ್ಷೆಯ ಅಂಕವನ್ನು ಪ್ರಾರಂಭಿಕ ಆಯ್ಕೆ ನಡೆಸಲು ಬಳಸುತ್ತಾರೆ. ಹಾಗಾಗಿ ಪ್ರವೇಶ ಪ್ರಕ್ರಿಯೆಯ ಮೊದಲ ಹಂತವಾಗಿ ಜಿ.ಆರ್.ಇ. ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು. ಜಿ.ಆರ್.ಇ. ಪರೀಕ್ಷೆಯಲ್ಲಿ ತಾರ್ಕಿಕ ಆಲೋಚನೆ, ಗಣಿತ, ಮತ್ತು ಬರವಣಿಗೆಯ ಸಾಮರ್ಥ್ಯದ ಕುರಿತಾಗಿ ಪ್ರಶ್ನೆಗಳಿರುತ್ತವೆ.

ನಮ್ಮ ಪ್ರಥಮ ಭಾಷೆ ಇಂಗ್ಲಿಷ್ ಆಗಿಲ್ಲದ ಕಾರಣ ನಾವು ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನು ದೃಢೀಕರಿಸಬೇಕಾಗುತ್ತದೆ. ಅದಕ್ಕಾಗಿ IELTS ಅಥವಾ TOEFL ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಪಿಎಚ್.ಡಿ. ವ್ಯಾಸಂಗಕ್ಕೆ ಹಚ್ಚಿನ ಭಾಷಾ ಸಾಮರ್ಥ್ಯ ಬೇಕಿರುವುದರಿಂದ ಹೆಚ್ಚಿನ ವಿಶ್ವವಿದ್ಯಾನಿಲಯಗಳು IELTS ಪರೀಕ್ಷೆಯಲ್ಲಿ 7.5 ರಷ್ಟು ಅಂಕವನ್ನು ನಿರೀಕ್ಷಿಸುತ್ತವೆ. ಕೆಲವು ಸಂಸ್ಥೆಗಳು 6 ಕ್ಕಿಂತ ಹೆಚ್ಚಿನ ಅಂಕವನ್ನು ಅಪೇಕ್ಷಿಸುತ್ತದೆ. ಅಮೆರಿಕ ಮತ್ತು ಇಂಗ್ಲೆಂಡ್ ಎರಡು ಕಡೆಯಲ್ಲಿ IELTS ಪರೀಕ್ಷೆಯು ಮಾನ್ಯತೆ ಹೊಂದಿದ್ದು, ಅಮೆರಿಕದ ಕೆಲವು ವಿಶ್ವವಿದ್ಯಾನಿಲಯಗಳು IELTS ಗಿಂತ TOEFL ಪರೀಕ್ಷೆಗೆ ಆದ್ಯತೆ ನೀಡುತ್ತದೆ.

ಜಿ.ಆರ್.ಇ. ಅಂಕ, IELTS/TOEFL ಅಂಕ, ಎಸ್.ಓ.ಪಿ. (ಸ್ಟೇಟ್ಮೆಂಟ್ ಆಫ್ ಪರ್ಪಸ್) ಮತ್ತು ಇತರೆ ದಾಖಲೆಯೊಂದಿಗೆ ಆಯಾ ಸಂಸ್ಥೆಯ ಪ್ರವೇಶಾತಿಯ ಸಂದರ್ಭದಲ್ಲಿ ಆನ್‌ಲೈನಲ್ಲಿ ಅರ್ಜಿ ಸಲ್ಲಿಸಬೇಕು.

ಪಿ.ಎಚ್.ಡಿ. ಆಯ್ಕೆಯಲ್ಲಿ ಎಸ್. ಓ. ಪಿ. (ಸ್ಟೇಟ್ಮೆಂಟ್ ಆಫ್ ಪರ್ಪಸ್) ಬಹಳ ಪ್ರಮುಖವಾಗಿದ್ದು ನಮ್ಮ ಹಿನ್ನೆಲೆ, ಈವರೆಗಿನ ವೈಯಕ್ತಿಕ ಮತ್ತು ಶೈಕ್ಷಣಿಕ ಸಾಧನೆಗಳು, ಪಿಎಚ್.ಡಿ. ಓದುವ ಉದ್ದೇಶ, ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡಲು ಕಾರಣ, ಮುಂದಿನ ಯೋಜನೆ ಇತ್ಯಾದಿಗಳನ್ನು ಸ್ಪಷ್ಟವಾಗಿ ಬರೆಯಬೇಕು.

ಮೊದಲ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವಿದ್ಯಾಸಂಸ್ಥೆಗಳು ಸ್ಕೈಪ್ ಅಥವಾ ಇತರೆ ವಿಡಿಯೊ ಕರೆಯ ಮುಖಾಂತರ ಸಂದರ್ಶನ ನಡೆಸುತ್ತಾರೆ.

ಅಂತಿಮ ಆಯ್ಕೆಯು ಅರ್ಹತಾ ಪರೀಕ್ಷೆಗಳ ಅಂಕ, ಪದವಿ ಅಧ್ಯಯನದ ಅಂಕ, ಎಸ್. ಓ. ಪಿ. ಯಲ್ಲಿನ ಸ್ಪಷ್ಟತೆ, ವಿಷಯದ ಮೇಲಿನ ಹಿಡಿತ, ಭಾಷಾ ಸಾಮರ್ಥ್ಯ ಹಾಗೂ ನಮ್ಮ ಒಟ್ಟು ಪ್ರೊಫೈಲಿನ ಮೇಲೆ ನಿರ್ಧರಿತವಾಗುತ್ತದೆ.

ಆರ್ಥಿಕ ಸಹಾಯ: ಭಾರತದಲ್ಲಿ ಈ ಜೆ.ಆರ್.ಎಫ್. ಅರ್ಹತೆ ಹೊಂದಿದ್ದರೆ ಯು.ಜಿ.ಸಿ. ಕಡೆಯಿಂದ ಪಿಎಚ್.ಡಿ. ಅಧ್ಯಯನ ನಡೆಸಲು ಫೆಲೊಶಿಪ್ ದೊರಕುತ್ತದೆ. ಮೊದಲ ಎರಡು ವರ್ಷದಲ್ಲಿ ತಿಂಗಳಿಗೆ ₹ 31,000 ಮತ್ತು ಮುಂದಿನ ಮೂರು ವರ್ಷಕ್ಕೆ ತಿಂಗಳಿಗೆ ₹ 35,000 ಮತ್ತು ಶೇ 30 ರಷ್ಟು ನಿವೇಶನ ಭತ್ಯೆ ಸಿಗುತ್ತದೆ. ಇನ್ನು, ಕೆಲವು ಸಂಸ್ಥೆಗಳಲ್ಲಿ ತಮ್ಮದೇ ಆದ ಫೆಲೊಶಿಪ್ ನೀಡುವ ಸೌಲಭ್ಯವು ಇದೆ.

ವಿದೇಶದಲ್ಲಿ ಹೆಚ್ಚಿನ ಸಂಸ್ಥೆಗಳು ಶೈಕ್ಷಣಿಕ ಅರ್ಹತೆ ಅಥವಾ ಅವಶ್ಯಕತೆಯ ಅರ್ಹತೆಯ ಮೇಲೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡುತ್ತವೆ. ಸಂಸ್ಥೆಯಿಂದ ನೀಡುವ ಫೆಲೊಶಿಪ್ ಪಡೆಯಲಾಗದಿದ್ದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆಂದು ಇರುವ ‘ಇನ್ ಲ್ಯಾಕ್ಸ್ ಫೌಂಡೇಷನ್’, ಕಾಮನ್‌ವೆಲ್ತ್ ಫೆಲೊಶಿಪ್‌ಗಳಿಂದ ಪ್ರಯೋಜನ ಪಡೆಯಬಹುದು. ಕೆಲವು ಫೆಲೋಶಿಪ್‌ಗಳು ಪೂರ್ತಿ ಕಲಿಕಾ ಮತ್ತು ಜೀವನ ವೆಚ್ಚವನ್ನು ಹಾಗೂ ಕೆಲವು ಭಾಗಶಃ ವೆಚ್ಚವನ್ನು ಭರಿಸುತ್ತವೆ.

ಪಿಎಚ್.ಡಿ. ಪದವಿಯ ನಂತರ ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಬಹುದು. ಅಷ್ಟು ಮಾತ್ರವಲ್ಲದೆ ಪ್ರತಿಷ್ಠಿತ ಫಾರ್ಮಾಸೂಟಿಕಲ್, ಫುಡ್ ಮತ್ತು ಬೆವರೇಜ್, ಆರೋಗ್ಯ, ಬಯೊಟೆಕ್ನಾಲಜಿ ಹಾಗೂ ಇನ್ನಿತರ ಕಂಪನಿಗಳ ಸಂಶೋಧನ ವಿಭಾಗಳಲ್ಲಿ ಉತ್ತಮ ವೇತನದೊಂದಿಗೆ ಕೆಲಸ ಪಡೆಯಬಹುದು.

ಇದಿಷ್ಟು ಸಾಮಾನ್ಯ ಮಾಹಿತಿಯಾಗಿದ್ದು ವಿದೇಶದಲ್ಲಿ ಓದುವ ಬಗ್ಗೆ ಒಂದು ಸಾಮಾನ್ಯ ತಿಳಿವಳಿಕೆಯನ್ನು ನೀಡುತ್ತದೆ. ಆದರೆ ಹೆಚ್ಚಿನ ಬಾರಿ ಪ್ರತಿಯೊಂದು ವಿಶ್ವವಿದ್ಯಾನಿಲಯವು ತನ್ನದೆ ಆದ ನಿಯಾಮಾವಳಿಗಳನ್ನು ರೂಪಿಸುವುದರಿಂದ ನಿರ್ದಿಷ್ಟ ಮಾಹಿತಿಗಾಗಿ ಆಯಾ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟಿನ ಮಾಹಿತಿಯನ್ನು ಓದಬೇಕು. ಪಿಎಚ್.ಡಿ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಜ್ಞಾನ ಮತ್ತು ಅನುಭವದ ಜೊತೆ ನಾಲ್ಕೈದು ವರ್ಷಗಳ ಕಠಿಣ ತರಬೇತಿ ಮತ್ತು ಪ್ರಕ್ರಿಯೆಗೆ ಬದ್ಧತೆ ಹೊಂದಿರುತ್ತಾರೆಯೇ ಎಂದು ಪರೀಕ್ಷಿಸುತ್ತಾರೆ. ನಮ್ಮ ಶೈಕ್ಷಣಿಕ ಅರ್ಹತೆಯ ಜೊತೆಗೆ ಕೆಲವು ವರ್ಷಗಳ ಕೆಲಸದ ಅನುಭವ ಕೂಡ ಇದ್ದಲ್ಲಿ ಅದು ನಮ್ಮ ಪ್ರೊಫೈಲನ್ನು ಮತ್ತು ಮಂದೆ ಸಂಶೋಧನ ಪ್ರಕ್ರಿಯೆಯನ್ನು ಬಲಪಡಿಸುತ್ತದೆ.

ನಿಮ್ಮ ಮುಂದಿನ ಅಧ್ಯಯನಕ್ಕೆ ಶುಭವಾಗಲಿ.

ನಾನು 2018ರಲ್ಲಿ ಸಿವಿಲ್‌ ವಿಭಾಗದಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದೇನೆ. ನಾನು ಇಂಗ್ಲೆಂಡ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವುದಾದರೆ ಯಾವ ರೀತಿಯ ಪ್ರಕ್ರಿಯೆಗಳಿವೆ?

ಶಿಲ್ಪಾ, ಊರು ಬೇಡ

ಇಂಗ್ಲೆಂಡ್ ಅಥವಾ ಯು.ಕೆ. ಯಲ್ಲಿ ಉನ್ನತ ಶಿಕ್ಷಣ ಹೆಚ್ಚು ಗುಣಮಟ್ಟ ಮತ್ತು ವೃತ್ತಿಪರತೆಯಿಂದ ಕೂಡಿರುವುದರಿಂದ ಪ್ರಪಂಚದಾದ್ಯಂತ ವಿದ್ಯಾರ್ಥಿಗಳು ಅಲ್ಲಿ ಕಲಿಯಲು ಆಶಿಸುತ್ತಾರೆ. ಯು.ಕೆ.ಯ ಸ್ನಾತಕೋತ್ತರ ಪದವಿಗಳು ಹೆಚ್ಚು ಸಂಶೋಧನ ಸಾಮರ್ಥ್ಯದ ಮೇಲೆ ಗಮನಹರಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಆ ಸಾಮರ್ಥ್ಯವನ್ನು ಬೆಳೆಸುತ್ತದೆ.

ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್. ಡಿಗ್ರಿ ಕೊಡುವ ಪ್ರತಿಷ್ಠಿತ ಸಂಸ್ಥೆಗಳ ವೈಬ್‌ಸೈಟಿನಲ್ಲಿ, ಆ ಸಂಸ್ಥೆಗಳ ಪ್ರವೇಶಾತಿ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ, ಯಾವ ಶೈಕ್ಷಣಿಕ ಅರ್ಹತೆ ಬೇಕು, ಎಷ್ಟು ಜಿ.ಪಿ.ಎ. ಇರಬೇಕು, ಐ.ಇ.ಎಲ್.ಟಿ.ಎಸ್ ಪರೀಕ್ಷೆಯಲ್ಲಿ ಎಷ್ಟು ಅಂಕವಿರಬೇಕು, ಶುಲ್ಕ ಎಷ್ಟಾಗುತ್ತದೆ, ಸಂಸ್ಥೆಯ ಕಡೆಯಿಂದ ಫೆಲೊಶಿಪ್ ಮತ್ತು ವಸತಿ ವ್ಯವಸ್ಥೆ ಇದೆಯೇ ಎಂಬೆಲ್ಲ ವಿವರಗಳನ್ನು ತಿಳಿದುಕೊಳ್ಳಿ. ಸಾಮಾನ್ಯವಾಗಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿರಬೇಕಾಗಿದ್ದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು.

ಈ ಎಲ್ಲ ಅರ್ಹತೆಗಳು ಇದ್ದಲ್ಲಿ ಐ.ಇ.ಎಲ್.ಟಿ.ಎಸ್. ಪರೀಕ್ಷೆಯ ತಯಾರಿ ನಡೆಸಿ.ನಮ್ಮ ಪ್ರಥಮ ಭಾಷೆ ಇಂಗ್ಲಿಷ್ ಆಗಿಲ್ಲದ ಕಾರಣ ನಾವು ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನು ಐ.ಇ.ಎಲ್.ಟಿ.ಎಸ್. ಪರೀಕ್ಷೆಯ ಮುಖಾಂತರದೃಢೀಕರಿಸಬೇಕಾಗುತ್ತದೆ. ಹೆಚ್ಚಿನ ಸಂಸ್ಥೆಗಳಿಗೆ ಪ್ರವೇಶಾತಿ ಪಡೆಯಲುಐ.ಇ.ಎಲ್.ಟಿ.ಎಸ್. ಪರೀಕ್ಷೆಯಲ್ಲಿ 6 ರಿಂದ 6.5 ರಷ್ಟು ಅಂಕ ಹೊಂದಿರಬೇಕಾಗುತ್ತದೆ.

ಅಭ್ಯರ್ಥಿಗಳು ಆಯಾ ವಿಶ್ವವಿದ್ಯಾನಿಲಯದ ವೈಬ್‌ಸೈಟಿನಲ್ಲಿ ಅರ್ಜಿ ಹಾಕುವಾಗ ಈ ಕೆಳಗಿನವುಗಳನ್ನು ಹೊಂದಿರಬೇಕು.

ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಹೊಂದಿರುವ ಬಯೋಡೇಟಾ

ನಮ್ಮ ಹಿನ್ನೆಲೆ, ಈವರೆಗಿನ ವೈಯಕ್ತಿಕ ಮತ್ತು ಶೈಕ್ಷಣಿಕ ಸಾಧನೆಗಳು, ಎಂ.ಎಸ್. ಓದುವ ಉದ್ದೇಶ, ವೈಯಕ್ತಿಕ ಪ್ರೇರಣೆ, ಆಸಕ್ತಿ ಮತ್ತು ಮುಂದಿನ ಯೋಜನೆ ಇತ್ಯಾದಿಗಳನ್ನು ಸ್ಪಷ್ಟವಾಗಿ ಬರೆದಿರುವಎಸ್.ಓ.ಪಿ. ಅಥವಾ ಪರ್ಸನಲ್ ಸ್ಟೇಟಮೆಂಟ್

ನಿಮ್ಮ ಪ್ರಾಧ್ಯಾಪಕರು ಬರೆದಿರುವ ಎರಡು ರೆಫರೆನ್ಸ್ (ಶಿಫಾರಸ್ಸು) ಪತ್ರ

ಪದವಿ ಅಂಕಪಟ್ಟಿ ಮತ್ತು ಟ್ರಾನ್ಸ್‌ಸ್ಕ್ರಿಪ್ಶನ್ ಪತ್ರ.

ಐ.ಇ.ಎಲ್.ಟಿ.ಎಸ್. ಪರೀಕ್ಷೆಯ ಅಂಕಪತ್ರ

ಈ ಎಲ್ಲ ದಾಖಲೆಗಳ ಆಧಾರದಲ್ಲಿ ಅರ್ಹತೆಯ ಮೇರೆಗೆ ಪ್ರವೇಶಾತಿ ಕಲ್ಪಿಸಲಾಗುತ್ತದೆ. ಸಾಮಾನ್ಯವಾಗಿ ಎಂ.ಎಸ್. ಪದವಿಗಳಿಗೆ ಸಂದರ್ಶನ ಇರುವುದಿಲ್ಲ. ಆಯ್ಕೆ ಆದನಂತರ ವೀಸಾ ಮತ್ತು ಇತರ ಪ್ರಕ್ರಿಯೆಗಳಿಗೆ ಆಯಾ ಸಂಸ್ಥೆಗಳು ಮಾರ್ಗದರ್ಶನ ನೀಡುತ್ತವೆ.

ಖರ್ಚು: ಸಾಮಾನ್ಯವಾಗಿ ಒಂದು ವರ್ಷಕ್ಕೆ 16–25 ಲಕ್ಷದವರೆಗೆ ಕಲಿಕಾ ಶುಲ್ಕ ಭರಿಸಬೇಕಾಗುತ್ತದೆ. ಅದರೊಂದಿಗೆ ವಸತಿ, ಪುಸ್ತಕ ಹಾಗೂ ಇತ್ಯಾದಿ ಖರ್ಚುಗಳಿಗೆ 7–8 ಲಕ್ಷ ಖರ್ಚಾಗಬಹುದು.ಕೆಲವು ಸಂಸ್ಥೆಗಳು ಫೆಲೊಶಿಪ್ ಹಾಗೂ ವಸತಿ ವ್ಯವಸ್ಥೆಯನ್ನು ಮಾಡುತ್ತವೆ. ಅದು ಆಯಾ ಸಂಸ್ಥೆಯ ನಿಯಮ ಅನುಸಾರವಾಗಿರುವುದರಿಂದ ಆ ಸಂಸ್ಥೆಗಳ ವೆಬ್‌ಸೈಟನ್ನು ಪರಿಶೀಲಿಸಬೇಕು. ಆರ್ಥಿಕ ಸಹಾಯಕ್ಕಾಗಿ ಚೆವನಿಂಗ್ ಫೆಲೊಶಿಪ್, ಕಾಮನ್‌ವೆಲ್ತ್ ಪೆಲೊಶಿಪ್‌ಗಳಿಗೆ ಪ್ರಯತ್ನಿಸಬಹುದು.

ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸುವುದರಿಂದ ಹೆಚ್ಚಿನ ಸ್ಪರ್ಧೆ ಇರುತ್ತದೆ. ಹಾಗೆ ಪದವಿಯಲ್ಲಿನ ಉತ್ತಮ ಅಂಕ ಮತ್ತು ಪ್ರೊಫೈಲ್ ಹೆಚ್ಚಿನ ಅವಕಾಶವನ್ನು ತೆರೆದಿಡುತ್ತದೆ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT