ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿಗೆ ಜೊತೆಯಾಗಲಿ ದೈಹಿಕ ಶಿಕ್ಷಣ

Last Updated 8 ಜನವರಿ 2019, 19:30 IST
ಅಕ್ಷರ ಗಾತ್ರ

ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಶಾಲಾ ಪಠ್ಯಕ್ರಮದ ಪಾತ್ರ ಎಷ್ಟು ಮಹತ್ವದ್ದೋ, ದೈಹಿಕ ಶಿಕ್ಷಣವೂ ಅಷ್ಟೇ ಅತ್ಯಗತ್ಯ ಎಂಬುದು ನಿರ್ವಿವಾದ. ಪ್ರಾಥಮಿಕ ಶಾಲಾ ಹಂತದಿಂದಲೇ ದೈಹಿಕ ಶಿಕ್ಷಣ ಅಳವಡಿಕೆಯಾಗಿದೆಯಾದರೂ, ದೈಹಿಕ ಶಿಕ್ಷಣ (Physical Education) ಮತ್ತು ದೈಹಿಕ ತರಬೇತಿ (Physical Training) ಬಗ್ಗೆ ಶಾಲೆಗಳಲ್ಲಿ ಅನೇಕ ಗೊಂದಲಗಳಿವೆ. ಅಂಥ ಗೊಂದಲಗಳ ಮಧ್ಯೆ ದೈಹಿಕ ಶಿಕ್ಷಣದ ಮುಖ್ಯ ಉದ್ದೇಶ ಮತ್ತು ಒಟ್ಟಾರೆ ಆಶಯವೇ ಕಡೆಗಣಿಸಲ್ಪಡುವ ಎಲ್ಲ ಸಾಧ್ಯತೆಗಳೂ ಇದ್ಧೇ ಇದೆ. ದೈಹಿಕ ತರಬೇತಿ ಕೇವಲ ದೈಹಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ. ಆದರೆ ದೈಹಿಕ ಶಿಕ್ಷಣದ ವ್ಯಾಪ್ತಿ ಬಹಳ ದೊಡ್ಡದು. ಅದು ಶಾರೀರಿಕ ವ್ಯಾಯಾಮವಷ್ಟೇ ಅಲ್ಲದೆ ಮತ್ತಿತರ ವಿಷಯಗಳಾದ ಸರಿಯಾದ ಆಹಾರಕ್ರಮ, ಉತ್ತಮ ಜೀವನಶೈಲಿ, ಶಿಸ್ತುಬದ್ಧ ಜೀವನ, ಸ್ಪರ್ಧಾ ಮನೋಭಾವ, ತಾಳ್ಮೆ-ಸಹನೆ ಮೊದಲಾದ ಸಫಲ ಜೀವನಕ್ಕೆ ಬೇಕಾಗುವ ಪ್ರಮುಖ ಪಾಠಗಳನ್ನು ಕಲಿಸುವಂಥದ್ದು. ಒಬ್ಬ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ದೈಹಿಕ ಶಿಕ್ಷಣ ಅತ್ಯಗತ್ಯ.

ಇತ್ತೀಚೆಗೆ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆಯಾದರೂ, ಅದು ಕೇವಲ ಆಟೋಟಗಳಿಗೆ ಸೀಮಿತವಾಗಿದೆ. ಹೆಚ್ಚಿನ ಪೋಷಕರು ಇಂದೂ ಸಹ ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ನಡೆಸುವ ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡದ ಉದಾಹರಣೆಗಳಿವೆ. ಅದೇ ವೇಳೆಯನ್ನು ಓದುವುದರಲ್ಲಿಯೋ, ಇಲ್ಲ ಬರೆಯುವುದರಲ್ಲಿಯೋ, ಉಪಯೋಗಿಸಿಕೊಳ್ಳಬೇಕೆಂದು ಮಕ್ಕಳಿಗೆ ಹೇಳಿಯೇ ಶಾಲೆಗೆ ಕಳುಹಿಸುತ್ತಾರೆ. ಅಂಕಗಳೇ ಮುಖ್ಯ ಎಂದೆಣಿಸಿರುವ ಪಾಲಕರಿಗೆ, ದೈಹಿಕ ಶಿಕ್ಷಣ ಮತ್ತದರ ಮಹತ್ವ ಗೌಣವೇ! ಸಾಮೂಹಿಕ ವ್ಯಾಯಾಮ (Mass P.T.) ವಿನಾಯ್ತಿ ಕೋರಿ ಪತ್ರಗಳನ್ನು ಕ್ಷುಲ್ಲಕ ನೆಪವೊಡ್ಡಿ ಪೋಷಕರು ಕಳುಹಿಸುವುದು ಸಾಮಾನ್ಯವಾಗಿದೆ. ಹೀಗೆ ಬೆಳೆದ ಮಕ್ಕಳು ಮುಂದೆ ಸಾಮಾನ್ಯ ಕಷ್ಟಗಳನ್ನು ಎದುರಿಸಲು ಸಮರ್ಥರಿರುವುದಿಲ್ಲ ಮತ್ತು ಅಂಥ ಪರಿಸ್ಥಿತಿಗಳಲ್ಲಿ ಕಂಗಾಲಾಗುತ್ತಾರೆ ಎಂಬುದು ವಾಸ್ತವ. ಇನ್ನು ಜೀವನದ ಸವಾಲುಗಳನ್ನು ಅವರು ಹೇಗೆ ಎದುರಿಸಿಯಾರು?

ಬೆಂಗಳೂರಿನಂಥ ನಗರಗಳಲ್ಲಿ ಶಾಲೆಗೆ ಮಕ್ಕಳು ನಡೆದು ಬರುವುದೇ ಅಪರೂಪ. ಕೆಲವು ಪೋಷಕರಂತೂ, ಬೆಳಗಿನ ಬಿಸಿಲು ಬಿದ್ದರೆ ಮಗಳ ಚರ್ಮ ಕಪ್ಪಾಗುವುದೆಂದೂ ಮತ್ತು ನೆರಳಿನಲ್ಲಿ ಆಟವಾಡುವ ವ್ಯವಸ್ಥೆ ಮಾಡಬೇಕೆಂದೂ ಕೋರಿದ್ದಿದೆ. ಒಮ್ಮೆ ಶಾಲೆಯ ಕ್ರೀಡಾಸ್ಪರ್ಧೆಗಳು ನಡೆಯುತ್ತಿದ್ದಾಗ, ಒಬ್ಬ ತಾಯಿ ತನ್ನ ಮಗನಿಗೆ ‘ಜೋರಾಗಿ ಓಡಬೇಡ, ಬಿದ್ದು ಗಾಯವಾದೀತು’ ಎಂದು ಹೇಳುತ್ತಿದ್ದುದನ್ನು (ಹೆದರಿಸುತ್ತಿದ್ದುದನ್ನು?) ಕಂಡಿದ್ದೇನೆ. ಇಂಥ ಪರಿಪಾಠ, ಪಾಲಕವರ್ಗ ದೈಹಿಕ ಶಿಕ್ಷಣವನ್ನು ಹೇಗೆ ಅರ್ಥೈಸಿಕೊಂಡಿದೆ ಎಂಬುದಕ್ಕೆ ಸಾಕ್ಷಿ. ಮಕ್ಕಳೊಂದಿಗೆ ಪಾಲಕರಿಗೂ ಶಿಕ್ಷಣದ ಅಗತ್ಯವಿದೆ ಎಂದರೂ ಉತ್ಪ್ರೇಕ್ಷೆಯಲ್ಲ.

ಶಾರೀರಿಕ ವ್ಯಾಯಾಮದ ಜೊತೆಗೆ ಸರಿಯಾದ ಆಹಾರಕ್ರಮ, ಶಿಸ್ತು, ಸಮಷ್ಟಿಭಾವನೆ, ಸಹಕಾರ ಮುಂತಾದುವುಗಳ ಸಮಗ್ರ ಪಾಠವೇ ದೈಹಿಕ ಶಿಕ್ಷಣ. ಅದನ್ನು ಶಾಲೆಯಲ್ಲಿ ಬೋಧಿಸಬೇಕಾದ್ದು ಎಲ್ಲ ಶಿಕ್ಷಕರ ಕರ್ತವ್ಯವಲ್ಲವೇ? ಪ್ರತಿ ಹಂತದಲ್ಲೂ ವಿದ್ಯಾರ್ಥಿಗೆ ಈ ವಿಷಯದಲ್ಲಿ ಮಾರ್ಗದರ್ಶನ ನೀಡುವುದು ಅತ್ಯಗತ್ಯ; ಅದು ಒಂದು ಪೀರಿಯಡ್ಡಿಗೋ ಅಥವಾ ಆಟದ ಸಮಯಕ್ಕೋ ಸೀಮಿತವಲ್ಲ. ಸರತಿಸಾಲಿನಲ್ಲಿ ಕ್ರಮಬದ್ಧವಾಗಿ ನಿಲ್ಲುವುದು, ತರಗತಿಯಲ್ಲಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು, ನಡೆಯುವ ಭಂಗಿ ಮತ್ತು ರಾಷ್ಟ್ರಗೀತೆ ಹಾಡುವಾಗ ನಿಲ್ಲಬೇಕಾದ ಭಂಗಿ ಇವೆಲ್ಲವುದರ ಸರಿಯಾದ ತಿಳಿವಳಿಕೆಯನ್ನು ನೀಡಬೇಕಾದ ಅಗತ್ಯವಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಮಿತಿಮೀರಿದೆಯೆಂದರೆ, ಶಿಕ್ಷಕರಿಗೆ ಇವನ್ನೆಲ್ಲ ಗಮನಿಸುವ ವ್ಯವಧಾನವಾಗಲೀ ಅಸಕ್ತಿಯಾಗಲೀ ಇಲ್ಲವಾಗಿದೆ. ಇನ್ನು ದೈಹಿಕ ಶಿಕ್ಷಣದ ಮೂಲ ಉದ್ದೇಶ ಅರ್ಥವಾಗುವುದು ದೂರವೇ ಉಳಿಯಿತು.

ಇನ್ನು ಆಹಾರದ ವಿಷಯ. ಸರಿಯಾದ ಸಮತೋಲನ ಆಹಾರಪದ್ಧತಿಯನ್ನು ಮಕ್ಕಳಿಗೆ ಶಾಲೆಯಲ್ಲಿ ಕಲಿಸಲೇಬೇಕು. ಇದಕ್ಕೆ ಪೋಷಕರ ಸಹಕಾರ ಮತ್ತು ಸಹಯೋಗ ಅತ್ಯಗತ್ಯ. ಪಟ್ಟಣಗಳಲ್ಲಿ ನೋಡುವುದಾದರೆ, ಬಹುತೇಕ ಮನೆಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸದ ನಿಮಿತ್ತ ಹೊರಹೋಗುವುದರಿಂದ, ಸಮಯದ ಅಭಾವದ ಕಾರಣ, ಅನೇಕ ವೇಳೆ ಹೋಟೆಲುಗಳಿಂದಲೋ ಬೇಕರಿಗಳಿಂದಲೋ ತರಿಸಿಕೊಂಡ ಆಹಾರವನ್ನು ಡಬ್ಬಿಗೆ ತುಂಬಿಸಿ ಕಳುಹಿಸುವವರೇ ಹೆಚ್ಚು; ಇಲ್ಲವೇ ‘ಟೂ ಮಿನಿಟ್ ನೂಡಲ್ಸ್!’ ಶಾಲೆಗಳ ಕ್ಯಾಂಟೀನುಗಳಲ್ಲಿ ಮಾರುವ ಆಹಾರ ವಿದ್ಯಾರ್ಥಿಗಳ ಆರೋಗ್ಯಕ್ಕೆ ಪೂರಕವಾಗಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ. ಒಂದೆಡೆ ಶಾರೀರಿಕ ವ್ಯಾಯಾಮವಿಲ್ಲ, ಮತ್ತೊಂದೆಡೆ ತಪ್ಪಾದ ಆಹಾರಕ್ರಮ. ಇನ್ನು ನಮ್ಮ ಮುಂದಿನ ಪೀಳಿಗೆ ಸದೃಢವಾಗುವುದೆಂತು? ಸಣ್ಣ ವಯಸ್ಸಿಗೇ ಬೊಜ್ಜು, ಸ್ಥೂಲಕಾಯ, ನಿರಾಸಕ್ತಿ, ಮಾಂಸಖಂಡಗಳ ಬಲಹೀನತೆ, ದೃಷ್ಟಿದೋಷ ಮುಂತಾದವುಗಳಿಂದ ಮಕ್ಕಳು ಬಳಲುತ್ತಾರೆ. ಶಾಲೆಗಳಲ್ಲಿ ಮಕ್ಕಳು ಸೇವಿಸುವ ಆಹಾರದ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಆಗಾಗ್ಗೆ ತರಗತಿಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಇದರ ಮೇಲ್ವಿಚಾರಣೆ ನಡೆಸುತ್ತಿರಬೇಕು. ಅಗತ್ಯವಿದ್ದಲ್ಲಿ ಸರಿಯಾದ ತಿಳಿವಳಿಕೆಯನ್ನು ಮಕ್ಕಳಿಗೆ ನೀಡಬೇಕು.

ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಶಾಲಾ ಕ್ಯಾಂಟೀನುಗಳಿಗೆ ಆಗಾಗ್ಗೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ಮಾರುವ ಆಹಾರದ ತಪಾಸಣೆ ನಡೆಸುವುದು ಉತ್ತಮ. ಶಾಲಾ ದೈಹಿಕ ಶಿಕ್ಷಣದ ಪಠ್ಯಕ್ರಮದಲ್ಲಿ ಮಕ್ಕಳ ದೈನಂದಿನ ಆಹಾರದ ವಿವರಣೆ ಮತ್ತು ಈ ವಿಷಯದಲ್ಲಿ ಶಾಲೆಗಳು ಪಾಲಿಸಬೇಕಾದ ನಿಯಮಗಳನ್ನು ಇಲಾಖೆಯವರು ಸೇರಿಸಿದರೆ ಇನ್ನೂ ಉತ್ತಮ. ಆದರೆ ಅಷ್ಟು ತಾಳ್ಮೆ ಮತ್ತು ಮಾನವ ಸಂಪನ್ಮೂಲ, ಆಹಾರ ಇಲಾಖೆಯವರಿಗೆ ಇದೆಯೇ – ಎಂಬುದು ಪ್ರಶ್ನೆ. ದೈಹಿಕ ಆರೋಗ್ಯವನ್ನು ಎಂದೂ ಕಡೆಗಣಿಸಕೂಡದು. ಅಂಕ ಆಧಾರಿತ ಶಿಕ್ಷಣದ ವ್ಯವಸ್ಥೆಯಲ್ಲಿ ದೈಹಿಕ ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡುವ, ಸ್ವಸ್ಥಸಮಾಜದ ನಿರ್ಮಾಣದತ್ತ ಆ ಮೂಲಕ ಪ್ರಯತ್ನಿಸಬೇಕಾದ ಜವಾಬ್ದಾರಿ ಎಲ್ಲರದ್ದು .

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ನಾಣ್ನುಡಿಯಂತೆ ಶಾಲಾಜೀವನದಲ್ಲಿಯೇ ಮಕ್ಕಳಿಗೆ ಪರಿಪೂರ್ಣ ದೈಹಿಕ ಶಿಕ್ಷಣದ ಮಾರ್ಗದರ್ಶನ ನೀಡದಿದ್ದರೆ ಮುಂದೆ ತಿದ್ದುವುದು ಕಷ್ಟವೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT