ಗುರುವಾರ , ಏಪ್ರಿಲ್ 2, 2020
19 °C
4ರಿಂದ ದ್ವಿತೀಯ ಪಿಯು ಪರೀಕ್ಷೆ

ಉತ್ತರ ಕೊನೆಗೊಂಡ ಮೊಹರು ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಇದೇ 4ರಿಂದ ಆರಂಭವಾಗಲಿದ್ದು, ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಉತ್ತರ ಪತ್ರಿಕೆಯ ಕೊನೆಯಲ್ಲಿ ಉತ್ತರ ಕೊನೆಗೊಂಡಿದೆ ಎಂದು ಸೂಚಿಸುವ ಮೊಹರು (ದಿ ಎಂಡ್‌) ಹಾಕಿಸುವುದು ಕಡ್ಡಾಯವಾಗಿದೆ.

ಈ ಬಾರಿ ಉತ್ತರ ಬರೆಯುವುದಕ್ಕಾಗಿ 40 ಪುಟಗಳ ಬುಕ್‌ಲೆಟ್‌ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಉತ್ತರ ಕೊನೆಗೊಳಿಸಿದ ಮುಂದಿನ ಹಾಳೆಯಲ್ಲಿ ‘ದಿ ಎಂಡ್‌’ ಮೊಹರು ಹಾಕಿ, ಪರೀಕ್ಷಾ ಮೇಲ್ವಿಚಾರಕರು ಸಹಿ ಹಾಕಬೇಕು. ಇದಕ್ಕಾಗಿ ಈಗಾಗಲೇ ಪ್ರತಿ ಪರೀಕ್ಷಾ ಕೊಠಡಿಗೆ ರಬ್ಬರ್‌ ಸ್ಟಾಂಪ್‌ ಮತ್ತು ಇಂಕ್‌ ಪ್ಯಾಡ್‌ ಕಳುಹಿಸಿಕೊಡಲಾಗಿದೆ.

‘ಉತ್ತರ ಬರೆದ ನಂತರ ಪರೀಕ್ಷಾ ಅಕ್ರಮ ನಡೆಯಬಾರದು ಎಂಬ ಕಾರಣಕ್ಕೆ ಈ ಕ್ರಮವನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಇಂತಹ ಅಕ್ರಮಗಳು ನಡೆದ ವರದಿಯಾಗಿಲ್ಲ, ಆದರೂ ಕಟ್ಟುನಿಟ್ಟಿನ ಪರೀಕ್ಷಾ ವ್ಯವಸ್ಥೆ ರೂಪಿಸುವ ಭಾಗವಾಗಿ ಇದನ್ನು ಜಾರಿಗೆ ತರಲಾಗುತ್ತಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಒಟ್ಟು ಮೂರು ಕಡೆ ಮೊಹರು ಹಾಕಬೇಕಾಗುತ್ತದೆ. ಮೊದಲನೆಯದಾಗಿ ಉತ್ತರ ಕೊನೆಗೊಂಡ ಹಾಳೆಯ ಮುಂದಿನ ಹಾಳೆಯಲ್ಲಿ, ಎರಡನೆಯದಾಗಿ ಬುಕ್‌ಲೆಟ್‌ನ ಕೊನೆಯ ಹಾಳೆಯಲ್ಲಿ ಹಾಗೂ ಇನ್ನೊಂದು ಮೊದಲ ಪುಟದಲ್ಲಿ.

ದ್ವಿಚಕ್ರ ವಾಹನದಲ್ಲಿ ಸಾಗಿಸುವಂತಿಲ್ಲ: ಪರೀಕ್ಷಾ ಕೇಂದ್ರಗಳಿಂದ ಅಂಚೆ ಮೂಲಕ ಮೊಹರು ಹಾಕಿದ ಪ್ಯಾಕೆಟ್‌ ರೂಪದಲ್ಲಿ ಕಳುಹಿಸಲಾಗುತ್ತಿದ್ದು, ಈ ಉತ್ತರ ಪತ್ರಿಕೆಗಳನ್ನು ದ್ವಿಚಕ್ರ ವಾಹನದಲ್ಲಿ ಅಂಚೆ ಕಚೇರಿಗೆ ಸಾಗಿಸಬಾರದು, ನಾಲ್ಕು ಚಕ್ರದ ವಾಹನ ಅಥವಾ ಆಟೊದಲ್ಲಿ ಸಾಗಿಸಬೇಕು ಎಂದು ಸೂಚಿಸಲಾಗಿದೆ.

ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ರವಾನಿಸುವ ಕೆಲಸಕ್ಕೆ ‘ಡಿ’ ಗುಂಪಿನ ನೌಕರರನ್ನು ಬಳಸಿಕೊಳ್ಳಬಾರದು, ಸ್ವತಃ ಇಲಾಖೆಯ ಅಧಿಕಾರಿಗಳೇ ಇದರ ಹೊಣೆ ಹೊರಬೇಕು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು