ಸೋಮವಾರ, ಮಾರ್ಚ್ 30, 2020
19 °C

ಪಠ್ಯಪುಸ್ತಕಗಳಲ್ಲಿ ಕ್ಯುಆರ್ ಕೋಡ್

ಬೇದ್ರೆ ಮಂಜುನಾಥ Updated:

ಅಕ್ಷರ ಗಾತ್ರ : | |

ನೀವು ಈ ವರ್ಷ ಪ್ರಕಟವಾಗಿ ಸರಬರಾಜಾಗಿರುವ ಹೊಸ ಪಠ್ಯಪುಸ್ತಕಗಳನ್ನು ನೋಡಿದ್ದೀರಾ? ರಾಷ್ಟ್ರಮಟ್ಟದಲ್ಲಿ ಏಕರೂಪದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರೂಪಿತವಾದ ಹೊಸಶಿಕ್ಷಣ ನೀತಿಯ ಅನ್ವಯ ಪಠ್ಯಪುಸ್ತಕಗಳಲ್ಲಿ ನವೀನ ವಿನ್ಯಾಸ, ಬಹುವರ್ಣದ ಮುದ್ರಣದ ಜೊತೆಗೆ ಇಡೀ ಯೂನಿಟ್ ಅಥವಾ ಪಾಠದ ವಿದ್ಯುನ್ಮಾನ ರೂಪ ಅಂದರೆ ಎಲೆಕ್ಟ್ರಾನಿಕ್ ಟೆಕ್ಸ್ಟ್ (ಇ-ಟೆಕ್ಸ್ಟ್) ನಿಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಮೂಡಿಬರಲು ಸಹಾಯಕವಾಗುವ ಕ್ಯುಆರ್ ಕೋಡ್ ಹೊಂದಿವೆ. ಮೊದಲಿಗೆ ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕಗಳಲ್ಲಿ ಮಾತ್ರವಿದ್ದ ಈ ಕ್ಯುಆರ್ ಕೋಡ್‌ಗಳು ಇದೀಗ ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ಹೊಸ ಪಠ್ಯಪುಸ್ತಕಗಳಲ್ಲಿ ಮುದ್ರಿತವಾಗಿವೆ. ಕರ್ನಾಟಕ ಪಠ್ಯಪುಸ್ತಕ ಸಂಘದ ((http://ktbs.kar.nic.in) ವೆಬ್‌ಸೈಟ್‌ನಲ್ಲಿ ಪಠ್ಯಪುಸ್ತಕಗಳು ಲಭ್ಯವಿವೆ.

ಏನಿದು ಕ್ಯುಆರ್ ಕೋಡ್?

ಕ್ಯುಆರ್ ಕೋಡ್ ಎಂಬುದು ಕ್ವಿಕ್ ರೆಸ್ಪಾನ್ಸ್ ಕೋಡ್‌ನ ಸಂಕ್ಷಿಪ್ತ ರೂಪ. ಇತ್ತೀಚೆಗೆ ಅಂಗಡಿಗಳಲ್ಲಿ, ಉಪಾಹಾರಗೃಹಗಳಲ್ಲಿ, ತರಕಾರಿ ಗಾಡಿಗಳಲ್ಲಿಯೂ ಇ-ಪೇಮೆಂಟ್ ಮಾಡಲು ಸುಲಭವಾಗಿಸಲು ಇಟ್ಟಿರುವ ಪೇಟಿಎಮ್, ಗೂಗಲ್ ಪೇ, ಭೀಮ್ ಮೊದಲಾದ ಆ್ಯಪ್‌ಗಳ ಚಚ್ಚೌಕಾಕಾರ ಕೋಡ್‌ಗಳು ಮುದ್ರಿತಗೊಂಡಿರುವ ಪಟ್ಟಿಕೆಗಳನ್ನು ನೋಡಿರಬಹುದು. ಇದನ್ನು ಮೊಬೈಲ್ ಅಥವಾ ಸ್ಕ್ಯಾನರ್‌ನಲ್ಲಿ ಕ್ಲಿಕ್ ಮಾಡಿದಾಗ ಆಯಾ ವಸ್ತುವಿನ ಪೂರಕ ಮಾಹಿತಿ, ಬಿಲ್ ಪೇಮೆಂಟ್ ವಿಧಾನ ಎಲ್ಲವೂ ತೆರೆದುಕೊಳ್ಳುತ್ತವೆ.

ಈ ಕ್ಯುಆರ್ ಕೋಡ್‌ಗಳು ಇದೀಗ ಪಠ್ಯಪುಸ್ತಕಗಳಲ್ಲಿಯೂ ಇದ್ದು, ಅವನ್ನು ಸ್ಕ್ಯಾನ್ ಮಾಡಿದಾಗ ಆಯಾ ಪಾಠದ ಪೂರ್ಣ ವಿವರ, ಪ್ರಶ್ನೋತ್ತರ, ಆಡಿಯೊ, ವೀಡಿಯೊ ತೆರೆದುಕೊಳ್ಳುತ್ತವೆ. ಪ್ರೊಜೆಕ್ಟರ್ ಸಹಾಯದಿಂದ ಅವೆಲ್ಲವನ್ನೂ ಗೋಡೆಯ ಮೇಲೆ ತೋರಿಸಬಹುದು. ಎನ್.ಸಿ.ಇ.ಆರ್.ಟಿ. ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೊಸ ವೆಬ್‌ಸೈಟ್ ಮತ್ತು ಆ್ಯಪ್ ದೀಕ್ಷಾ (DIKSHA - https://diksha.gov.in) ಈ ಕ್ಯುಆರ್‌ ಕೋಡ್‌ನ ಪೂರಕ ಮಾಹಿತಿ ಪ್ರದರ್ಶಿಸುತ್ತದೆ. ಸದ್ಯಕ್ಕೆ ಇದರಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳನ್ನು ಅಳವಡಿಸಲಾಗಿದೆ. ಎನ್.ಸಿ.ಇ.ಆರ್.ಟಿ. ಮತ್ತು ಡಿ.ಎಸ್.ಇ.ಆರ್.ಟಿ.ಗಳ ವೆಬ್‌ಸೈಟ್‌ಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿರುವವರಿಗಾಗಿ ಹಲವು ವಿನೂತನ ಪೋರ್ಟಲ್‌ಗಳ ಲಿಂಕ್‌ಗಳಿವೆ. ಕೆಲವು ವೆಬ್‌ಸೈಟ್‌ಗಳು ಇಲ್ಲಿವೆ: 

http://epathshala.nic.in
http://ncert.nic.in/tamanna/tamanna.html
http://ncert.nic.in/ebooks.html
https://itpd.ncert.gov.in
https://eg4.nic.in/edu/opac/dlibrary.aspx
https://ciet.nic.in 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)