ಶನಿವಾರ, ಜುಲೈ 24, 2021
28 °C

ಪ್ರಜಾವಾಣಿ Live|SSLC ಪರೀಕ್ಷೆ ದಿಕ್ಸೂಚಿ: ಸುಲಭ ಅಂಕ ನೀಡುವ ವಿಜ್ಞಾನ ಚಿತ್ರಗಳು

ಸುರೇಶ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ವಿಜ್ಞಾನದಲ್ಲಿ ಚಿತ್ರಗಳ ಮೂಲಕ ಅಂಕ ಗಳಿಕೆ ತುಂಬಾ ಸುಲಭ. ಪ್ರಶ್ನೆ ಪ್ರತಿಕೆಯಲ್ಲಿ ಇರುವ ಪ್ರಶ್ನೆಗಳು K.U.A.S (Knowledge- ಜ್ಞಾನ, Understanding- ತಿಳಿವಳಿಕೆ, Apply/Application –ಪ್ರಯೋಗ/ಬಳಕೆ, Skill- ಕೌಶಲ) ಆಧಾರದಲ್ಲಿರುತ್ತವೆ. 

1) ಜ್ಞಾನ ಆಧಾರಿತ ಒಂದು ಅಂಕದ ಪ್ರಶ್ನೆಗಳು, ವಿದ್ಯಾರ್ಥಿಗಳು ಎಷ್ಟು ಓದಿದ್ದಾರೆ ಎಂಬುದನ್ನು ಅರಿಯಲು ಕೇಳಲಾಗುತ್ತದೆ.

2) ಎರಡು ಅಂಕದ ಪ್ರಶ್ನೆಗಳು  K+U ಆಧಾರಿತ. ಎಷ್ಟು ಓದಿರುವಿರಿ ಹಾಗೂ ತಿಳಿದಿರುವಿರಿ ಎಂಬುದನ್ನು ಅರಿಯಲು ಕೇಳಲಾಗುತ್ತದೆ.

3) ಮೂರು ಅಂಕದ ಪ್ರಶ್ನೆಗಳು K+U+A ಆಧಾರಿತ. ಜ್ಞಾನ, ವಿಷಯದ ಆಳ ಹಾಗೂ ಅದನ್ನು ಪ್ರಯೋಗಿಸುವುದನ್ನು ಅವಲಂಬಿಸಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಇಲ್ಲಿ ವೀಕ್ಷಿಸಿ:

4) ನಾಲ್ಕು ಹಾಗೂ ಅದಕ್ಕೂ ಹೆಚ್ಚಿನ ಅಂಕಗಳು K+U+A+S ಆಧಾರಿತ. ಇಲ್ಲಿ ಹೆಚ್ಚುವರಿಯಾಗಿ ಕೌಶಲ ಬರುತ್ತದೆ. ಓದಿದ್ದನ್ನು, ಅರಿತಿದ್ದನ್ನು ಎಷ್ಟು ಚೆನ್ನಾಗಿ ಪ್ರಯೋಗಿಸಬಲ್ಲಿರಿ, ವಿವರಿಸಬಲ್ಲಿರಿ ಎಂಬುದನ್ನು ಆಧರಿಸಿರುತ್ತದೆ.

ನಾಲ್ಕನೇ ಅಂಶ ಬಹಳ ಮುಖ್ಯ. ‘ಕೌಶಲ’ ಗುಣ ಬೆಳೆಸಿಕೊಳ್ಳಲು ನೋಡುವುದು, ಜೋರಾಗಿ ಓದುವುದು, ಚರ್ಚಿಸುವುದು ಹಾಗೂ ಅದನ್ನು ಬರೆದು ಅಭ್ಯಾಸ ಮಾಡಬೇಕು. ಇದರಿಂದ ಪರಿಣತಿ ಸಾಧಿಸಬಹುದು.

ವಿಜ್ಞಾನದಲ್ಲಿ ಚಿತ್ರಗಳಿಗೆ 18 ಅಂಕಗಳು ಇರುತ್ತವೆ. ಹೂವಿನ ಭಾಗಗಳ ಚಿತ್ರ, ನ್ಯೂರಾನ್, ಮಿದುಳು ಹಾಗೂ ಹೃದಯ. ಈ ಚಿತ್ರಗಳನ್ನು ಪಠ್ಯದಲ್ಲಿ ಇರುವಂತೆಯೇ ಬಿಡಿಸುವ ಹಟ ಬೇಡ. ಚಿತ್ರದ ಅಂಗಗಳನ್ನು ಬಿಡಿಸಿದರೂ ಪೂರ್ಣ ಅಂಕ ಸಿಗುತ್ತದೆ. 

ಚಿತ್ರಗಳನ್ನು ಬಿಡಿಸುವುದು ಹೇಗೆ?

l ಹೂವಿನ ಭಾಗಗಳ ಚಿತ್ರ ಬಿಡಿಸುವಾಗ ಮೊದಲಿಗೆ ಅರ್ಧ ಚಿತ್ರ ಬಿಡಿಸಿ. ಒಂದು ಲಂಬ ಗೆರೆ ಎಳೆದು, ಮೊದಲಿಗೆ ಅರ್ಧ ಶಲಾಕಾಗ್ರ, ಶಲಾಕೆ, ಪುಂಕೇಸರ, ಪುಷ್ಪದಳ, ಪುಷ್ಪ ಪತ್ರ, ಅಂಡಾಶಯ ಬಿಡಿಸಿಕೊಳ್ಳಿ. ನಂತರ ಲಂಬ ಗೆರೆಯ ಮತ್ತೊಂದು ಭಾಗದಲ್ಲಿ ಚಿತ್ರ ಬಿಡಿಸಿ ಪೂರ್ಣಗೊಳಿಸಿ. ನಂತರ ಭಾಗಗಳನ್ನು ಹೆಸರಿಸಬಹುದು.

l ನರ ಅಂಗಾಂಶ(ನ್ಯೂರಾನ್‌) ಚಿತ್ರ ಬಿಡಿಸುವುದು ಇನ್ನೂ ಸುಲಭ. ಇಂಗ್ಲಿಷಿನ ‘c’ ಅಕ್ಷರವನ್ನು ಐದು ಸಲ ಹಿಮ್ಮುಖವಾಗಿ ಜೋಡಿಸಿಕೊಳ್ಳಿ. ಬಳಿಕ ಒಂದೊಂದು ತುದಿಗೆ ಕೆಲವು ರೇಖೆಗಳನ್ನು ಬಿಡಿಸಿ. ನಡುವೆ ನ್ಯೂಕ್ಲಿಯಸ್‌ ಗುರುತು ಹಾಕಿ. ತುದಿಯಲ್ಲಿ ಒಂದು ಬಾಲ ಎಳೆದು, ಅದಕ್ಕೆ ಕೋಶ ಎಂದು ಹೆಸರಿಸಿ.

l ಮಿದುಳಿನ ಚಿತ್ರ ಮತ್ತೂ ಸುಲಭ. ಕನ್ನಡ ಭಾಷೆಯ ‘ಒಂದು’ ಅಂಕಿಯನ್ನು ಸ್ವಲ್ಪ ದೊಡ್ಡದಾಗಿ ಬರೆದುಕೊಂಡು, ಅದನ್ನು ಸ್ವಲ್ಪ ಸೇರಿಸಿಕೊಂಡರೆ ತಲೆಬುರುಡೆ ಸಿದ್ಧ. ಅದರಲ್ಲಿ ಚಿಕ್ಕಚಿಕ್ಕ ಮುದುಡಿದಂತೆ ಗೆರೆ ಎಳೆದುಕೊಂಡರೆ ಮಹಾಮಸ್ತಿಷ್ಕ ಸಿದ್ಧ. ಬಳಿಕ ಇಂಗ್ಲಿಷಿನ ‘C’ ಅಕ್ಷರವನ್ನು ಅದಕ್ಕೆ ಮೇಲ್ಮುಖವಾಗಿ ಸೇರಿಸಿಕೊಳ್ಳಿ. ಅದು ಅನುಮಸ್ತಿಷ್ಕ. ಮಹಾಮಸ್ತಿಷ್ಕದ ನಡುವೆ ಹಣ್ಣಿನ ಹೋಳಿನಂತೆ ಚಿತ್ರಿಸಿದರೆ, ಅದುವೇ ಮಧ್ಯ ಮಿದುಳು. ಅನುಮಸ್ತಿಷ್ಕದ ಬಳಿ ಒಂದು ನಾಳದಂತೆ ಗೆರೆ ಎಳೆದರೆ ಅದುವೇ ಮಿದುಳು ಬಳ್ಳಿ. ಹಿಮ್ಮೆದುಳು, ಪಿಟ್ಯುಟರಿ ಗ್ರಂಥಿ ಗುರುತು ಹಾಕಿದರೆ, ಅಂಕ ಕಟ್ಟಿಟ್ಟ ಬುತ್ತಿ.

l ‌ಹೃದಯ ಚಿತ್ರವೂ ಸುಲಭವೇ. ಕನ್ನಡದ ‘ದ’ ಅಕ್ಷರವನ್ನು ತಲೆಕಟ್ಟು ಇಲ್ಲದಂತೆ ಕೆಳಮುಖವಾಗಿ ಬಿಡಿಸಿಕೊಂಡರೆ ಅದುವೇ ಹೃದಯ ಸ್ಥೂಲ ಚಿತ್ರ ಸಿದ್ಧ. ಅಡ್ಡವಾಗಿ ಒಂದು ಗೆರೆ ಎಳೆದರೆ, ಮೇಲಿನ ಎರಡೂ ಭಾಗ ಹೃತ್ಕರ್ಣಗಳು. ಕೆಳಗಿನ ಭಾಗ ಹೃತ್ಕುಕ್ಷಿಗಳು. ಹೃದಯಕ್ಕೆ ರಕ್ತ ಹೊತ್ತು ತರುವ ನಾಳಗಳು ಅಭಿಧಮನಿಗಳು. ಹೃದಯದಿಂದ ರಕ್ತ ಸಾಗಿಸುವ ನಾಳಗಳು ಅಪಧಮನಿಗಳು. ಶುದ್ಧ ರಕ್ತವನ್ನು ದೇಹಕ್ಕೆ ಪೂರೈಸುವ ನಾಳ ಮಹಾಅಪಧಮನಿ.

ಹೀಗೆ ಚಿತ್ರದ ಗಾತ್ರ, ರಚನೆ ಹಾಗೂ ಅಂಗಗಳ ಹೆಸರು ಗೊತ್ತಿದ್ದರೆ ಅಂಕಗಳು ನಿಮ್ಮ ಪಾಲಿಗೆ ಖಂಡಿತ ಬರುತ್ತವೆ.

(ಲೇಖಕರು ಶಿಕ್ಷಣ ತಜ್ಞ ಹಾಗೂ ಸಂಪನ್ಮೂಲ ವ್ಯಕ್ತಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು