ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಕೊನೆಯ ಹಂತ; ಬೇಡ ಆತಂಕ

Last Updated 15 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕೊನೆಯ ಹಂತ ಎಂಬ ಆತಂಕ ಬೇಡ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುನ್ನ ಸಿಗುವ 15 ದಿನಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಶೇ 90ರಷ್ಟು ಅಂಕ ಪಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಹೀಗೆನ್ನುತ್ತಾರೆ ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಟಾಪರ್‌ (625ಕ್ಕೆ 625 ಅಂಕ) ಆಗಿದ್ದ ಅತ್ತಿಬೆಲೆಯ ಸೃಜನಾ. ಅವರೀಗ ಕ್ರೈಸ್ಟ್‌ ಅಕಾಡೆಮಿಯ ಪಿಯು ವಿದ್ಯಾರ್ಥಿನಿ.

ಕೊನೆಯ ಹಂತ ಎಂದರೆ ‘ಯುದ್ಧ ಕಾಲದ ಶಸ್ತ್ರಾಭ್ಯಾಸವೇ’ ಎಂಬ ಜಿಜ್ಞಾಸೆಗೆ ಸೃಜನಾ ವಿವರವಾಗಿ ಪ್ರತಿಕ್ರಿಯಿಸಿದರು.

‘ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ವರ್ಷಪೂರ್ತಿ ಅಧ್ಯಯನದಲ್ಲಿ ಗಂಭೀರವಾಗಿಯೇ ತೊಡಗಿಕೊಂಡಿದ್ದೆ. ತರಗತಿಗಳು ಮುಗಿದ ಬಳಿಕವೂ ಟ್ಯೂಷನ್‌, ಪರಾಮರ್ಶೆ ಸೇರಿದಂತೆ ನಾಲ್ಕಾರು ಗಂಟೆಗಳು ಅಧ್ಯಯನಕ್ಕಾಗಿಯೇ ಮೀಸಲಾಗಿದ್ದವು’ ಎಂದು ಅವರು ತಮ್ಮ ಯಶಸ್ಸಿನ ಸೂತ್ರವನ್ನು ‘ಪ್ರಜಾವಾಣಿ’ಗೆ ತೆರೆದಿಟ್ಟರು.

ಸರಳ ವಿಷಯ: ಧೈರ್ಯವಾಗಿರಿ

ರಾಷ್ಟ್ರೀಯ ಪಠ್ಯಕ್ರಮಕ್ಕೆ ಹೋಲಿಸಿದರೆ ರಾಜ್ಯ ಪಠ್ಯಕ್ರಮದಲ್ಲಿ ಪಠ್ಯ ವಿಷಯಗಳು ಕಡಿಮೆ ಮತ್ತು ಅಷ್ಟೇ ಸರಳ. ಹಾಗಾಗಿ ಒತ್ತಡವೂ ಕಡಿಮೆ. ಈ ದಿನಗಳಲ್ಲಿ ವಿನಾಕಾರಣ ಒತ್ತಡಕ್ಕೊಳಗಾಗದೆ ಶಿಕ್ಷಕರ ಮಾರ್ಗದರ್ಶನದಲ್ಲಿ ಮುಂದುವರಿದರೆ ಸಾಧನೆ ಸಾಧ್ಯ. ಈ ಹಂತದಲ್ಲಿ ಯಾರೂ ಕೂಡ ಏನೂ ಗೊತ್ತಿಲ್ಲದೆ ಸುಮ್ಮನೆ ಕೂರುವುದು ಸರಿಯಲ್ಲ; ಸುಮ್ಮನೆ ಕೂರುವುದೂ ಇಲ್ಲ. ತರಗತಿಯ ಪಠ್ಯಗಳನ್ನು ಒಮ್ಮೆ ಮನನ ಮಾಡಿ ಪಠ್ಯ ಪುಸ್ತಕಗಳತ್ತ ಗಮನಹರಿಸಿದರೆ ಕಲಿತದ್ದು ಸ್ಮರಣೆಯಲ್ಲಿರುತ್ತದೆ.

ಗೈಡ್‌ಗಳನ್ನು ಬದಿಗಿರಿಸಿ

ಪರೀಕ್ಷಾ ಸಿದ್ಧತೆಯ ಕೊನೆಯ ಹಂತದಲ್ಲಿ ಗೈಡ್‌ಗಳನ್ನು ಓದುತ್ತಾ ಕೂರಬಾರದು. ಅವುಗಳನ್ನು ನೆಚ್ಚಿಕೊಳ್ಳಲೂಬಾರದು. ಪಠ್ಯಪುಸ್ತಕಗಳ ಪ್ರತಿ ಪಾಠವನ್ನೂ ಗಾಢವಾಗಿ ಅಧ್ಯಯನ ಮಾಡಬೇಕು. ಅವೇ ಮೂಲ ಮಾರ್ಗದರ್ಶಿಗಳು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿ. ಶಿಕ್ಷಕರೊಂದಿಗೆ ಚರ್ಚಿಸಿ ಗೊಂದಲ ಪರಿಹಾರ ಮಾಡಿಕೊಳ್ಳಬೇಕು. ಪುನರಾವರ್ತನೆ ಮಾಡುತ್ತಾ ಬಂದರೆ ವಿಷಯಗಳನ್ನು ಅರೆದು ಕುಡಿದಂತೆ ಆಗುತ್ತದೆ.

ಶಾಲೆಗೆ ಹೋಗಲಿಲ್ಲ

ನಾನು ಪರೀಕ್ಷೆಗೆ ಒಂದು ತಿಂಗಳಿರುವಾಗ ಶಾಲೆಗೆ ಹೋಗುವುದನ್ನು ನಿಲ್ಲಿಸಿದೆ. ಏಕೆಂದರೆ ಮನಸ್ಸು ವಿಚಲಿತಗೊಳ್ಳದಂತೆ ಎಚ್ಚರವಹಿಸಿದೆ. ಎಲ್ಲ ವಿಷಯಗಳನ್ನೂ ಮನೆಯಲ್ಲೇ ಅಧ್ಯಯನ ಮಾಡಿದೆ. ಶಾಲಾ ಶಿಕ್ಷಕರು, ವಿಜ್ಞಾನ ಶಿಕ್ಷಕರಾಗಿರುವ ಅಪ್ಪ (ದಿವಾಕರ) ಪೂರ್ಣ ಬೆಂಬಲಿಸಿದರು. ಹೀಗಾಗಿ ಸಾಧನೆ ಸಾಧ್ಯವಾಯಿತು.

ಪರೀಕ್ಷೆಯ ಮಧ್ಯೆ ಸಿಗುವ ರಜಾದಿನಗಳನ್ನೂ ಕೂಡಾ ಸದುಪಯೋಗಪಡಿಸಿಕೊಳ್ಳಿ. ಕೊನೆಯ ಹಂತದ ಅಧ್ಯಯನ ಬಹಳ ಮುಖ್ಯ. ಪ್ರತಿ ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಲು ಸಾಧ್ಯ.

ಆಯಾ ದಿನದ ಪಾಠದ ಅದ್ಯಯನ, ಟಿಪ್ಪಣಿ ಮಾಡುವುದನ್ನು ಅಂದೇ ಮುಗಿಸುತ್ತಿದ್ದೆ. ಪಾಠ ಗಮನವಿಟ್ಟು ಕೇಳುತ್ತಿದ್ದೆ. ವರ್ಷಪೂರ್ತಿ ಒಂದೇ ರೀತಿಯ ಸಿದ್ಧತೆ ನಡೆಸಿದ್ದರಿಂದ ನನಗೆ ಅಷ್ಟೊಂದು ಒತ್ತಡ ಅನಿಸಲಿಲ್ಲ. ಹಾಗೆಂದು ಕೊನೆಯ ಹಂತದ ಸಿದ್ಧತೆಗಳನ್ನು ಅಲಕ್ಷಿಸುವಂತಿಲ್ಲ. ಶಿಕ್ಷಕರು 620, 623ರ ಒಳಗೆ ಅಂಕ ನಿರೀಕ್ಷಿಸಿದ್ದರು. ಆದರೆ, ನಿರೀಕ್ಷೆ ಮೀರಿ 625 ಅಂಕಗಳು ಲಭ್ಯವಾಗಿವೆ.

ಶ್ರದ್ಧೆಯಿಟ್ಟು ಅಧ್ಯಯನ ಮಾಡಿದರೆ ಖಂಡಿತ ಸಾಧನೆ ಸಾಧ್ಯ ಎಂಬ ವಿಶ್ವಾಸ ನನ್ನದು. ಅದೇ ಅಧ್ಯಯನ ವಿಧಾನವನ್ನು ಪಿಯು ಶಿಕ್ಷಣಕ್ಕೂ ಅಳವಡಿಸಿಕೊಂಡಿದ್ದೇನೆ ಎಂದು ಸೃಜನಾ ಮಾತು ಮುಗಿಸಿದರು.

ಭಾಷೆ ಅಧ್ಯಯನ

‘ನನ್ನದೇನೂ ಪಾತ್ರವಿಲ್ಲ. ಅವಳ ಪಾಡಿಗೆ ಅವಳು ಓದುತ್ತಾ ಹೋದಳು. ಸಾಧನೆ ನಿರೀಕ್ಷಿಸಿರಲಿಲ್ಲ. ಏನೋ ಆಗಿಹೋಯಿತು’ ಎಂದು ಖುಷಿಯ ಕ್ಷಣವನ್ನು ನೆನಪಿಸುತ್ತಾರೆ ಸೃಜನಾ ಅವರ ತಂದೆ ದಿವಾಕರ.

‘ಸೃಜನಾಗೆ ಕನ್ನಡವೇ ಸ್ವಲ್ಪ ಕಷ್ಟವೆನಿಸಿತ್ತು. ಅದಕ್ಕಾಗಿ ಅವಳನ್ನು ನನ್ನ ಗುರುಗಳ ಬಳಿಗೇ ಕಳುಹಿಸಿದೆ. ಭಾಷೆ ಅಧ್ಯಯನ ಸುಲಭವಾಯಿತು. ಇದು ಬಿಟ್ಟರೆ ಉಳಿದಂತೆ ಅವಳ ಪರಿಶ್ರಮ ಕಾರಣ. ಯಾವುದೇ ಒತ್ತಡಕ್ಕೊಳಗಾಗದೆ ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಎಲ್ಲ ವಿದ್ಯಾರ್ಥಿಗಳೂ ಉತ್ತಮ ಅಂಕ ಗಳಿಸಲು ಸಾಧ್ಯ’ ಎನ್ನುತ್ತಾರೆ ದಿವಾಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT