ಸೋಮವಾರ, ಆಗಸ್ಟ್ 2, 2021
28 °C

ಎಸ್ಸೆಸ್ಸೆಲ್ಸಿ ಪರೀಕ್ಷಾ ದಿಕ್ಸೂಚಿ | ಸಮೀಕರಣ ಬಿಡಿಸಲು ಸರಳ ವಿಧಾನ

ವೆಂಕಟ ಸುಬ್ಬರಾವ್ ವಿ. Updated:

ಅಕ್ಷರ ಗಾತ್ರ : | |

SSLC Exam

ಗಣಿತ ವಿಷಯದಲ್ಲಿ ಎಲ್ಲವನ್ನು ಮನದಟ್ಟು ಮಾಡಿಕೊಂಡಿದ್ದರೂ ಪರೀಕ್ಷೆಯಲ್ಲಿ ಸಣ್ಣ ಸಣ್ಣ ಸಂಗತಿಗಳಲ್ಲಿ ಎಡವುವುದು ಸಹಜ. ಅಂತಹ ಸಣ್ಣ ಪುಟ್ಟ ವಿಧಾನಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ? 

ಹಲವಾರು ವಿದ್ಯಾರ್ಥಿಗಳಿಗೆ ಗಣಿತದ ವಿಷಯ ಸರಿಯಾದ ರೀತಿಯಲ್ಲಿ ಅರ್ಥವಾಗಿದ್ದರೂ, ಸಮಸ್ಯೆಗಳನ್ನು ಬಿಡಿಸುವ ವಿಧಾನಗಳು ತಿಳಿದಿದ್ದರೂ ಸಹ ಪರೀಕ್ಷೆಯಲ್ಲಿ ಸಣ್ಣ ಸಣ್ಣ ತಪ್ಪುಗಳಿಂದ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ, ಈ ಪರೀಕ್ಷಾ ಸಮಯದಲ್ಲಿ ಇಂತಹ ವಿಷಯಗಳನ್ನು ಕಡೆಗಣಿಸದಿರಿ.

ಉದಾಹರಣೆ: ಈ ರೀತಿಯ ಕೆಲವು ಪ್ರಶ್ನೆಗಳನ್ನು ಆಗಾಗ ಉತ್ತರಿಸುತ್ತಿರಿ

3 + 3 = ?, 3 -3 = ?, -3 –3 = ?, +3 –3= ?, +3 +3 = ? ಅಥವಾ
6 + 6 -6 (6 x 6) / 6

ಇವುಗಳು ನಿಮಗೆ ಅರಿವಿಲ್ಲದೆಯೇ ಸಹಾಯ ಮಾಡುತ್ತವೆ. ಉದಾಹರಣೆಗೆ ಯಾವುದಾದರೂ ಸಮೀಕರಣವನ್ನು ನೀವು ಬಿಡಿಸುತ್ತಿರುವಾಗ ಅಲ್ಲಿ ಕೊನೆಯ ಹಂತದಲ್ಲಿ ಈ ಸಣ್ಣ ಸಣ್ಣ ಸಮಸ್ಯೆಗೆ ಉತ್ತರಗಳು ಸಹಕರಿಸುತ್ತವೆ.

ಸೂತ್ರಗಳು

ಇನ್ನು ಗಣಿತದಲ್ಲಿ ಸೂತ್ರಗಳು ಬಹಳ ಮುಖ್ಯ. ಸೂತ್ರಗಳನ್ನು ನೆನಪಿನಲ್ಲಿಡಿ. ಆದರೆ ಸೂತ್ರಗಳನ್ನು ಕಂಠಪಾಠ ಮಾಡಬೇಡಿ. ಅವುಗಳ ಮೂಲಗಳನ್ನು ಮತ್ತು ಆ ಸೂತ್ರಗಳ ಅಸ್ತಿತ್ವವನ್ನು ತಿಳಿಯಿರಿ ಮತ್ತು ಸೂತ್ರಾಧಾರಿತ ಸಮಸ್ಯೆಗಳನ್ನು ಬಿಡಿಸಿ, ಅಭ್ಯಾಸ ಮಾಡಿ. ಆಗ ಸೂತ್ರಗಳು ಸಹಜವಾಗಿಯೇ ನೆನಪಿನಲ್ಲಿ ಉಳಿಯುತ್ತವೆ. ಸೂತ್ರಗಳನ್ನು ಒಂದು ಹಾಳೆಯಲ್ಲಿ ಬರೆದು, ಓದುವ ಕೊಠಡಿಯಲ್ಲಿ ನೇತುಹಾಕಿ. ಆಗಾಗ ನೋಡುತ್ತಿರಿ.

ಗಣಿತದ ಸಮಸ್ಯೆಗಳನ್ನು ಹಂತ ಹಂತವಾಗಿ ಹಾಗೂ ಸುಂದರವಾಗಿ, ಬೇರೆಯವರಿಗೆ ಅರ್ಥವಾಗುವಂತೆ ಬರೆಯಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಪರೀಕ್ಷಾ ಮೌಲ್ಯಮಾಪಕರಿಗೆ ಸುಲಭವಾಗಿ ಅರ್ಥವಾಗುತ್ತದೆ. ನಿಮ್ಮ ಉತ್ತರ ಪತ್ರಿಕೆಯೂ ಸುಂದರವಾಗಿ ಕಾಣುತ್ತದೆ! ಉತ್ತರ ಪತ್ರಿಕೆಯಲ್ಲಿ ಗೀಚುವುದು, ಹೊಡೆದು ಹಾಕುವುದು ಮಾಡಬೇಡಿ.

ಈಗ ನಾವು ಪರೀಕ್ಷಾ ದೃಷ್ಟಿಯಿಂದ ಪ್ರತಿಯೊಂದು ಪಾಠದ ಬಗ್ಗೆ ಕೆಲವು ಸೂಕ್ಷ್ಮ ವಿಷಯಗಳನ್ನು ನೋಡೋಣ.

• ಸಮಾಂತರ ಶ್ರೇಢಿಯ ಸಮಸ್ಯೆಗಳನ್ನು ದೃಶ್ಯೀಕರಿಸಿಕೊಂಡು ಅರ್ಥ ಮಾಡಿಕೊಂಡರೆ ಸುಲಭವಾಗಿ ಬಿಡಿಸಬಹುದು. ಏಕೆಂದರೆ, ನಿಮಗೆ ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸ, ಮೊದಲ ಪದ ಮತ್ತು ನಿರ್ದಿಷ್ಟ ಸ್ಥಾನದ ಪದಗಳನ್ನು ತಿಳಿಯಲು ಸಾಧ್ಯವಾದರೆ, ಆ ಸಮಸ್ಯೆಯನ್ನು ಬಿಡಿಸುವ ರೀತಿಯನ್ನು ತಿಳಿಯುವುದು ಸುಲಭ. ಇಲ್ಲಿಯ ಸರಳ ಸೂತ್ರಗಳನ್ನು ನೆನಪಿಡಿ.

• ಸಮರೂಪಿ ಆಕೃತಿಗಳು ಮತ್ತು ತ್ರಿಭುಜಗಳ ಪ್ರಮೇಯಗಳ ಬಗ್ಗೆ ನಿಮಗೆ ಮೊದಲೇ ಅರಿವಿದೆಯಲ್ಲವೇ? ಇಲ್ಲಿ, ಪ್ರಮೇಯಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಿ. ಕಣ್ಣು ಮುಚ್ಚಿ ಪ್ರಮೇಯದ ವಾಕ್ಯಗಳನ್ನು ಅರ್ಥ ಮಾಡಿಕೊಂಡು ಆಕೃತಿಗಳನ್ನು ಅಥವಾ ಚಿತ್ರಗಳನ್ನು ದೃಶ್ಯೀಕರಿಸಿಕೊಳ್ಳಿ. ಪ್ರಮೇಯ ಆಧಾರಿತ ಪ್ರಶ್ನೆಗಳನ್ನು ಉತ್ತರಿಸುವಾಗ ಪ್ರಮೇಯದ ಮುಖ್ಯ ಅಂಶಗಳನ್ನು ನೆನಪಿಸಿಕೊಳ್ಳಿ.

• ಕೆಲವೊಮ್ಮೆ, ಕೊಟ್ಟಿರುವ ಸಮಸ್ಯೆಯು ಯಾವ ಪ್ರಮೇಯದ ಆಧಾರದಿಂದ ಬಿಡಿಸಲು ಸುಲಭ ಎಂದು ತಿಳಿಯುವ ಗೊಂದಲ ಉಂಟಾಗಬಹುದು. ಆದ್ದರಿಂದ ಪರೀಕ್ಷೆಗೆ ಮೊದಲೇ ಈ ರೀತಿಯ ಹಲವಾರು ಸಮಸ್ಯೆಗಳನ್ನು ಬಿಡಿಸಿ, ಅಭ್ಯಾಸ ಮಾಡಿ. ಹಲವಾರು ಬಾರಿ ಕೊಟ್ಟಿರುವ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ತಕ್ಷಣ ಯಾವ ಪ್ರಮೇಯವನ್ನು ಆಧರಿಸಿದೆ ಎಂದು ತಿಳಿಯುತ್ತದೆ.

• ಸಮೀಕರಣಗಳನ್ನು ಬಿಡಿಸುವ ವಿಧಾನಗಳನ್ನು, ಸೂತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಿ. ಪ್ರಶ್ನೆಪತ್ರಿಕೆಯಲ್ಲಿ ಯಾವ ವಿಧಾನವನ್ನು ಅಪೇಕ್ಷಿಸಿದ್ದಾರೋ ಆ ವಿಧಾನದಿಂದಲೇ ಸಮೀಕರಣವನ್ನು ಬಿಡಿಸಿ. ನಕ್ಷೆಗಳ ಬಗ್ಗೆ ಗಮನ ಹರಿಸಿ. ನಕ್ಷೆಗಳ ಸಮಸ್ಯೆಗಳನ್ನು ಬಿಡಿಸುವುದರ ಮುಖಾಂತರ ಸುಲಭವಾಗಿ ಅಂಕಗಳನ್ನು ಗಳಿಸಬಹುದು. ನಕ್ಷೆಯಲ್ಲಿ ಅಕ್ಷಗಳನ್ನು ಮತ್ತು ಪರಿಮಾಣಗಳನ್ನು ಸರಿಯಾಗಿ ಗುರುತಿಸುವುದನ್ನು ಮರೆಯಬೇಡಿ.

ಮುಂದಿನ ಲೇಖನದಲ್ಲಿ ಮತ್ತಷ್ಟು ಅಂಶಗಳ ಬಗ್ಗೆ ತಿಳಿಯೋಣ

(ಲೇಖಕ: ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು