ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ

Last Updated 9 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನದ ಸಂಶೋಧನೆಗಳು ನಾವು ಇಂದು ಕಲ್ಪಿಸಿಕೊಳ್ಳುವ ಪ್ರತಿಯೊಂದು ಉದ್ಯಮದಲ್ಲೂ ಸಂಚಲನ ಸೃಷ್ಟಿಸಿವೆ. ಆಟೊಮೊಬೈಲ್ಸ್, ಮನೆಗಳಿಂದ ಹಿಡಿದು ಚಿಲ್ಲರೆ ಮಾರಾಟ ವಲಯದವರೆಗೂ ನಾವು ಇಂದು ಕ್ರಾಂತಿಕಾರಕ ಬದಲಾವಣೆಯನ್ನು ಕಾಣುತ್ತಿದ್ದೇವೆ. ಒಂದು ವಿಧದಲ್ಲಿ ಈ ಕೈಗಾರಿಕೆಗಳ ಆಧುನೀಕರಣಕ್ಕೆ ತಂತ್ರಜ್ಞಾನ ಗಣನೀಯ ಕೊಡುಗೆ ನೀಡಿದ್ದು, ಮನುಕುಲದ ಹೊಸ ಅವಶ್ಯಕತೆಗಳನ್ನು ಪೂರೈಸಲು ಇದು ಸಹಕಾರಿಯಾಗಿದೆ.

ಈ ನಿಟ್ಟಿನಲ್ಲಿ ನೋಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಅತ್ಯಲ್ಪ. ದಶಕಗಳ ಹಿಂದೆ ನಾವು ಮಕ್ಕಳಿಗೆ ಹೇಗೆ ಬೋಧನೆ ಮಾಡುತ್ತಿದ್ದೆವೋ ಅದೇ ವಿಧಾನದಲ್ಲಿ ಕಲಿಸುವುದು ಮುಂದುವರಿದಿದೆ. ಕಲಿಕಾ ವ್ಯವಸ್ಥೆ ಇನ್ನೂ ಅಂಕಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ‘ಒನ್ ಸೈಝ್ ಫಿಟ್ಸ್ ಆಲ್’ ಎಂಬ ಇಂಗ್ಲಿಷ್ ನಾಣ್ನುಡಿಯಂತೆ ಗ್ರೇಡ್ ವ್ಯವಸ್ಥೆಯನ್ನೇ ಅವಲಂಬಿಸಿದ್ದೇವೆ. ಇದರಿಂದಾಗಿ ಕಲಿಕೆ ಎನ್ನುವುದು ಪರೀಕ್ಷೆಯ ಭಯಕ್ಕೇ ಸೀಮಿತವಾಗಿದೆ.

ಮಕ್ಕಳ ಕಲಿಕಾ ವಿಧಾನದಲ್ಲಿ ಕೂಡಾ ತಂತ್ರಜ್ಞಾನ ಲಗ್ಗೆ ಇಟ್ಟಿದ್ದರೂ, ಇದನ್ನು ಕ್ರಾಂತಿಕಾರಕ ಎಂದು ಪರಿಗಣಿಸಲು ನಾವು ಇನ್ನೂ ಸುದೀರ್ಘ ದೂರವನ್ನು ಕ್ರಮಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಅಗತ್ಯವೇನೂ ಇಲ್ಲ; ಇಂದಿನ ತುರ್ತು ಅಗತ್ಯ ಕಲಿಕಾ ವ್ಯವಸ್ಥೆಯ ಸಮಗ್ರ ಬದಲಾವಣೆ. ಈ ಬದಲಾವಣೆಯು ಸ್ವಯಂ ಕಲಿಕೆ ಮತ್ತು ಜೀವನ ಪರ್ಯಂತ ಕಲಿಕೆಯ ದೃಷ್ಟಿಯಿಂದ ಆಗಬೇಕು. ತಂತ್ರಜ್ಞಾನದ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಕಲ್ಪನಾತ್ಮಕ ಮತ್ತು ವಿಶೇಷ ಅಗತ್ಯದ ಕಲಿಕೆಯನ್ನು ರೂಢಿಸಿಕೊಳ್ಳುವ ಬದಲಾವಣೆ ಇಂದು ಅಗತ್ಯವಾಗಿದೆ.

ವೈಯಕ್ತಿಕ ಬೋಧನೆ
ಇತ್ತೀಚಿನ ದಿನಗಳಲ್ಲಿ, ಶಿಕ್ಷಣ ತಂತ್ರಜ್ಞಾನವು ವೈಯಕ್ತಿಕ ಬೋಧನೆಯ ಪರಿಕಲ್ಪನೆಯನ್ನು ಅಳವಡಿಸಿಕೊಂಡಿದ್ದು, ಕಲಿಕೆಯನ್ನು ಮುಂದಿನ ಹಂತಕ್ಕೆ ಒಯ್ಯುವಲ್ಲಿ ನೆರವಾಗಿದೆ. ಆದ್ದರಿಂದ ತಂತ್ರಜ್ಞಾನವು ವಿಷಯ ಬೋಧನೆಯ ವಿಧಾನವನ್ನು ವಿನೂತನಗೊಳಿಸಲು ನೆರವಾಗುತ್ತದೆ. ಅಂತೆಯೇ ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಆತನ ಅಗತ್ಯತೆಗೆ ಅನುಸಾರ ಕಲಿಕೆಗೆ ಅವಕಾಶ ಮಾಡಿಕೊಡುತ್ತದೆ.

ಅಧ್ಯಯನಗಳಿಂದ ತಿಳಿದುಬರುವಂತೆ ಮಕ್ಕಳು ಕಲಿಕೆಗೆ ತಮ್ಮ ಇಂದ್ರಿಯಗಳನ್ನು ಅತಿಯಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲೂ ಕಣ್ಣುಗಳನ್ನು ಶೇಕಡ 75ರಷ್ಟು ಬಳಕೆ ಮಾಡಿಕೊಳ್ಳುತ್ತಾರೆ. ಇಂದಿನ ಮಕ್ಕಳಿಗೆ ಸ್ಕ್ರೀನ್‌ ಎನ್ನುವುದು ಮಾಹಿತಿಗಳನ್ನು ತಿಳಿದುಕೊಳ್ಳಲು ಸಹಜವಾದ ಮಾಧ್ಯಮವಾಗಿ ಪರಿಣಮಿಸಿದೆ. ತಂತ್ರಜ್ಞಾನ ಹಾಗೂ ಸ್ಮಾರ್ಟ್ ಸಾಧನಗಳ ಬಳಕೆ ಹೆಚ್ಚಳದ ಹಿನ್ನೆಲೆಯಲ್ಲಿ, ಎಲ್ಲ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅನುಭವಗಳ ಮೂಲಕ ಹೆಚ್ಚಿನ ಪ್ರಭಾವ ಬೀರಲು ದೊಡ್ಡ ಅವಕಾಶಗಳಿವೆ.

ಭವಿಷ್ಯದ ಕಲಿಕಾ ವ್ಯವಸ್ಥೆ
ತಂತ್ರಜ್ಞಾನವು ಮಕ್ಕಳ, ಪೋಷಕರ, ಶಿಕ್ಷಕರ ಮತ್ತು ಸಂಸ್ಥೆಗಳ ಕಲಿಕಾ ವ್ಯವಸ್ಥೆಯ ಪಥವನ್ನೇ ಬದಲಿಸಿದೆ. ಎಆರ್ ಮತ್ತು ವಿಆರ್‌ನಂಥ ತಂತ್ರಜ್ಞಾನಗಳು ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು, ನಮಗೆ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ, ಉತ್ತಮ ಕಲಿಕೆಗೆ ಕೊಡುಗೆ ನೀಡಿವೆ. ಇಂದು ಕಲಿಕೆಗೆ ಪೂರಕವಾದ ತಂತ್ರಜ್ಞಾನ ಬೇಕಾಗಿದೆ. ತಂತ್ರಜ್ಞಾನಗಳು ಈ ಕ್ಷೇತ್ರದಲ್ಲಿ ಕೂಡಾ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು, ಕಲಿಕಾ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಪೂರಕವಾದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕಿದೆ.

ಆದರ್ಶ ಕಲಿಕಾ ವ್ಯವಸ್ಥೆ ಎಂದರೆ, ವಿದ್ಯಾರ್ಥಿಗಳ ಮೇಲೆ ಸಂಪೂರ್ಣ ಗಮನ ಹರಿಸುವುದಾಗಿರಬೇಕು ಮತ್ತು ಅವರ ಕಲಿಕಾ ಅಗತ್ಯತೆಗಳನ್ನು ಅರಿತುಕೊಂಡು ಅದಕ್ಕೆ ಅಗತ್ಯ ಪರಿಹಾರಗಳನ್ನು ಒದಗಿಸಬೇಕೇ ವಿನಃ ಮಕ್ಕಳು ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆಯುತ್ತಾರೆ ಎನ್ನುವುದರ ಮೇಲೆ ಗಮನ ಕೇಂದ್ರೀಕರಿಸುವಂತಿರಬಾರದು. ವಿದ್ಯಾರ್ಥಿಗಳೇ ಸ್ವತಃ ಕಲಿಕೆಯಲ್ಲಿ ಆಸಕ್ತಿ ವಹಿಸುವಂತಾಗಬೇಕು ಮತ್ತು ಶಿಕ್ಷಕರು ಮಾರ್ಗದರ್ಶನದ ಪಾತ್ರ ನಿರ್ವಹಿಸುವತ್ತ ಗಮನ ಹರಿಸಬೇಕು. ಸ್ಮಾರ್ಟ್ ಸಾಧನಗಳ ಮೂಲಕ ಸಂವಾದ ಮಾಡಬಹುದಾದ ಉಪನ್ಯಾಸಗಳು ಕಲಿಕೆಯನ್ನು ಹೆಚ್ಚು ಫ್ಲೆಕ್ಸಿಬಲ್‌ ಇರುವಂತೆ ಮತ್ತು ಏಕತಾನತೆ ಇಲ್ಲದಂತೆ ಮಾಡಲು ನೆರವಾಗುತ್ತವೆ. ಈ ಮೂಲಕ ಇದು ಸುಲಲಿತ ಕಲಿಕಾ ಪರಿಸರವನ್ನು ಸೃಷ್ಟಿಸುತ್ತದೆ.

ಶಿಕ್ಷಣದ ಮಹತ್ವದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇದು ನಮ್ಮ ಆರ್ಥಿಕತೆ ಮತ್ತು ದೇಶವನ್ನು ಮುನ್ನಡೆಸುವ ಮಹತ್ವದ ಆಸ್ತಿ. ಆಧುನಿಕ ಜಗತ್ತು, ಜಾಗತೀಕರಣ, ಬದಲಾವಣೆಗಳಿಗೆ ತಕ್ಕಂತೆ ಶಿಕ್ಷಣದಲ್ಲಿ ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡರೆ ನಮ್ಮ ಮಕ್ಕಳು ಬೇರೆಯವರ ಜೊತೆ ಪೈಪೋಟಿ ನಡೆಸಲು ಸಾಧ್ಯ. ನಮ್ಮ ದೇಶದ ಯುವಜನತೆಯನ್ನು ನಾಳೆಯ ಉದ್ಯೋಗಕ್ಕೆ ಸಜ್ಜುಗೊಳಿಸಲು ಸಾಧ್

ವಿಡಿಯೊ, ಅನಿಮೇಶನ್‌ ಬಳಕೆ
ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಬಳಸುವುದರಿಂದ ಕಲಿಕೆಯನ್ನು ಸರಳಗೊಳಿಸಬಹುದು. ವಿದ್ಯಾರ್ಥಿಗಳು ಹೆಚ್ಚು ಒತ್ತಡವಿಲ್ಲದೇ ಸಂತಸದಿಂದ ಕಲಿಯುವಂತೆ ಮಾಡಬಹುದು. ಇದು ಸಂವಹನವನ್ನು ಇನ್ನಷ್ಟು ಸರಳಗೊಳಿಸುತ್ತದೆ ಮತ್ತು ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಅವಶ್ಯಕತೆಗೆ ಅನುಗುಣವಾಗುವಂತೆ ಮಾಡುತ್ತದೆ.

ಇದು ಹಲವು ಮಂದಿ ಶಿಕ್ಷಕರು, ವಿಡಿಯೊಗಳು ಮತ್ತು ಆನಿಮೇಶನ್‌ಗಳನ್ನು ಬಳಸಿಕೊಂಡು, ಮಕ್ಕಳನ್ನು ತೊಡಗಿಸಿಕೊಳ್ಳುವ ಕಲಿಕಾ ಅನುಭವವನ್ನು ಒದಗಿಸುತ್ತದೆ. ಇದಲ್ಲದೇ ಬಿಗ್ ಡೇಟಾ ಅನಾಲಿಟಿಕ್ಸ್‌ನಿಂದಾಗಿ ವೈಯಕ್ತಿಕ ಅಗತ್ಯತೆಯ ಕಲಿಕೆ, ಫೀಡ್‌ಬ್ಯಾಕ್ ಮತ್ತು ಮೌಲ್ಯಮಾಪನ ಕೂಡಾ ತಂತ್ರಜ್ಞಾನದ ಮೂಲಕ ಸಾಧ್ಯ. ಇದು ಪ್ರತಿಯೊಂದು ಮಗುವು ಕೂಡಾ ವೇಗವಾಗಿ ಹಾಗೂ ಸರಿಯಾದ ಕ್ರಮದಲ್ಲಿ ಕಲಿಯುವುದನ್ನು ಖಾತ್ರಿಪಡಿಸುತ್ತದೆ.
(ಲೇಖಕಿ ಶಿಕ್ಷಕರು ಮತ್ತು ಸಹಸಂಸ್ಥಾಪಕರು, ಬೈಜು’ಸ್ ಲರ್ನಿಂಗ್ ಆ್ಯಪ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT