ಶನಿವಾರ, ಆಗಸ್ಟ್ 13, 2022
26 °C

PV Web Exclusive | ಫುಲೆ ದಂಪತಿಯ ಶಿಕ್ಷಣ ಕ್ರಾಂತಿ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಕಲೆ: ಗುರು ನಾವಳ್ಳಿ

ಹುಟ್ಟಿನ ಕಾರಣಕ್ಕಾಗಿಯೇ ಕೆಳ ವರ್ಗದವರಿಗೆ ಘನತೆಯಿಂದ ಬದುಕುವ ಹಕ್ಕನ್ನು ನಿರಾಕರಿಸಿದ ಕಳಂಕ ಭಾರತೀಯ ಸಮಾಜದ್ದು. ಹೆಣ್ಣನ್ನು ದೇವರ ಸ್ಥಾನಕ್ಕೇರಿಸಿಯೂ, ಆಕೆಯ ಹಕ್ಕುಗಳ ಮೇಲೆ ಸವಾರಿ ಮಾಡಿ, ‘ಸಂಪ್ರದಾಯ’ದ ಹೆಸರಲ್ಲಿ ಕತ್ತಲೆಯ ಕೋಣೆಯಲ್ಲಿ ಕೂರಿಸಿದ್ದು ಈ ವ್ಯವಸ್ಥೆ. ‘ಶೋಷಣೆಯೂ ನಮ್ಮ ಹಕ್ಕು’ ಅಂದುಕೊಂಡು ತಳ ಸಮುದಾಯಗಳಿಗೆ ಅಕ್ಷರ ಜ್ಞಾನ ಸಿಗದಂತೆ ಮಾಡಿದವರ ಬಳಿ ಇದ್ದ ಪ್ರಮುಖ ಅಸ್ತ್ರ ಶಿಕ್ಷಣ.

ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಶಿಕ್ಷಣ ಯಾವುದೇ ಬೇಧವಿಲ್ಲದೆ ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗಬೇಕು ಎಂದು ಕನಸು ಕಂಡವರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ. ಈ ದಂಪತಿ ಮಾಡಿದ ಶಿಕ್ಷಣ ಕ್ರಾಂತಿ, ದೇಶದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಗೆ ನಾಂದಿಯಾಯಿತು. ಸ್ವಾತಂತ್ರ್ಯೋತ್ತರ ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ದಕ್ಕಿರುವುದರ ಹಿಂದೆ, ಇವರ ಕ್ರಾಂತಿಯ ಪ್ರಭಾವವೂ ಇದೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಟಗುಣದಲ್ಲಿ 1827, ಏಪ್ರಿಲ್ 11ರಲ್ಲಿ ಜ್ಯೋತಿಬಾ ಫುಲೆ ಜನಿಸಿದರು. ವ್ಯಾಪಾರ ಮತ್ತು ಕೃಷಿ, ಕುಟುಂಬದ ಕುಲ ಕಸುಬು. ತಂದೆ ಗೋವಿಂದರಾವ್ ಮತ್ತು ತಾಯಿ ಚಿಮಣಾಬಾಯಿ. ತಾಯಿಯ ಅಕಾಲ ಮರಣದಿಂದಾಗಿ, ಫುಲೆ ಅವರನ್ನು ಸಾಕುವ ಹೊಣೆ ಹೊತ್ತವರು ಚಿಕ್ಕಮ್ಮ ಸುಗುಣಬಾಯಿ. ಶಿಕ್ಷಣದ ಮಹತ್ವದ ಅರಿತಿದ್ದ ಸಗುಣಬಾಯಿ, ಚಿಕ್ಕಂದಿನಲ್ಲೇ ಫುಲೆ ಅವರ ಮನಸ್ಸಿನಲ್ಲಿ ಶಿಕ್ಷಣದ ಆಸಕ್ತಿ ಬೆಳೆಸಿ, ಸಮಾಜಸೇವೆಯ ಬೀಜವನ್ನು ಬಿತ್ತಿದರು.

ನೈಗಾಂವ್‌ನಲ್ಲಿ 1831ರಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ 9ನೇ ವಯಸ್ಸಿನಲ್ಲಿ, 12 ವರ್ಷದ ಜ್ಯೋತಿಬಾ ಜತೆ ದಾಂಪತ್ಯಕ್ಕೆ ಕಾಲಿಟ್ಟರು. ಓದು ಗೊತ್ತಿಲ್ಲದಿದ್ದರೂ ಗಂಡನ ಮನೆಗೆ ಬರುವಾಗ ತಂದಿದ್ದ ಇಂಗ್ಲಿಷ್ ಪುಸ್ತಕವೊಂದು, ಅಕ್ಷರ ಜ್ಞಾನದ ಬಗ್ಗೆ ಅವರಿಗಿದ್ದ ಆಸಕ್ತಿಗೆ ಸಾಕ್ಷಿಯಾಗಿತ್ತು. ಅದನ್ನು ಗುರುತಿಸಿದ ಜ್ಯೋತಿಬಾ, ಮುಂದೆ ಪತ್ನಿಯನ್ನು ಸಹಭಾಗಿಯಾಗಿಸಿಕೊಂಡು ಶಿಕ್ಷಣ ಕ್ರಾಂತಿ ಮಾಡಿದರು.

1847ರಲ್ಲಿ ತಮ್ಮ ಶಿಕ್ಷಣ ಮುಗಿಸಿದ ಫುಲೆ, ಒಮ್ಮೆ ಬ್ರಾಹ್ಮಣ ಸ್ನೇಹಿತರ ಮದುವೆಯೊಂದಕ್ಕೆ ಹೋಗಿದ್ದರು. ಜಾತಿಯ ಕಾರಣಕ್ಕೆ ಮೆರವಣಿಗೆಯಿಂದ ಅವರನ್ನು ಹೊರ ಹಾಕಲಾಗಿತ್ತು. ಆ ಅವಮಾನ ವ್ಯವಸ್ಥೆಯ ಬಗ್ಗೆ ಅವರಲ್ಲಿ ಆಕ್ರೋಶ ಮೂಡಿಸುವ ಜತೆಗೆ, ಚಿಂತನೆಗೂ ಹಚ್ಚಿತು. ತಾರತಮ್ಯ ಆಧಾರಿತ ಸಾಮಾಜಿಕ ವ್ಯವಸ್ಥೆಗೆ ಆಗ ಅವರಿಗೆ ಪರಿಹಾರವಾಗಿ ಕಂಡಿದ್ದು ಶಿಕ್ಷಣ. ಸಾಮಾಜಿಕ ನ್ಯಾಯದ ಸಾಕಾರಕ್ಕೆ ಇದಕ್ಕಿಂತ ಬೇರೆ ಮಾರ್ಗವಿಲ್ಲ ಎಂಬುದನ್ನು ಕಂಡುಕೊಂಡ ಫುಲೆ, ಅಕ್ಷರ ವಂಚಿತರಿಗೆ ಶಿಕ್ಷಣ ನೀಡುವತ್ತ ದೃಷ್ಟಿ ನೆಟ್ಟರು. ಶತಮಾನಗಳಿಂದ ವಿದ್ಯೆಯಿಂದ ವಂಚಿತರಾಗಿದ್ದ ತಳ ಸಮುದಾಯಗಳು ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡಲು ಮುಂದಾದರು.

ಶುರುವಿನಲ್ಲಿ ಪತ್ನಿಗೆ ಶಿಕ್ಷಣದ ಜತೆಗೆ, ಶಿಕ್ಷಕಿ ವೃತ್ತಿಯ ತರಬೇತಿಯನ್ನೂ ಕೊಡಿಸಿದರು. ಅದೇ ವರ್ಷ ಮಹಿಳೆಯರು ಮತ್ತು ತಳ ವರ್ಗದವರಿಗೆ ದಂಪತಿ ಮೊದಲ ಶಾಲೆ ತೆರೆದರು. 9 ವಿದ್ಯಾರ್ಥಿನಿಯರು ದಾಖಲಾಗಿದ್ದ ಆ ಶಾಲೆಗೆ, ಮೇಲ್ಜಾತಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ, ಫುಲೆ ಅವರ ಶೈಕ್ಷಣಿಕ ಸೇವೆಗೆ ಬ್ರಿಟಿಷ್ ಸರ್ಕಾರದ ಬೆಂಬಲವೂ ಇದ್ದಿದ್ದರಿಂದ, ವಿರೋಧಿಗಳಿಗೆ ಅದನ್ನು ತಡೆಯುವ ಧೈರ್ಯ ಇರಲಿಲ್ಲ. ಬದಲಿಗೆ, ಸಾವಿತ್ರಿಬಾಯಿ ಅವರು ಪಾಠ ಮಾಡಲು ಶಾಲೆಗೆ ಹೋಗುವಾಗ ಅವರ ಮೇಲೆ ಕೆಸರು, ಸಗಣಿ, ಕಲ್ಲುಗಳನ್ನು ತೂರಿ ವಿಕೃತಿ ಮೆರೆಯುತ್ತಿದ್ದರು.

ಶಿಕ್ಷಣದ ಮಹತ್ವವನ್ನು ಸಾರುತ್ತಾ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವೊಲಿಸುತ್ತಿದ್ದ ದಂಪತಿಗೆ, ಉತ್ತಮ ಸ್ಪಂದನೆ ಸಿಗತೊಡಗಿತು. ಇದೇ ಹುರುಪಿನಲ್ಲಿ 1848ರಲ್ಲಿ ಐದು ಶಾಲೆಗಳನ್ನು ತೆರೆದರು. ತಮ್ಮ ಶಾಲೆಯಲ್ಲಿ ಕಲಿತವರನ್ನು ಅಲ್ಲಿಗೆ ಶಿಕ್ಷಕರನ್ನಾಗಿ ನೇಮಿಸುತ್ತಿದ್ದರು. ಪುಣೆಯ ಬುಧವಾರಪೇಟೆಯಲ್ಲಿ ಕನ್ಯಾ ಪಾಠಶಾಲೆ ಆರಂಭಿಸಿದ ಸಾವಿತ್ರಿಬಾಯಿ, ದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಮೊದಲ ಶಾಲೆ ತೆರೆದ ಮಹಿಳೆ. 1848ರಿಂದ 1852ರ ಅವಧಿಯಲ್ಲಿ ದಂಪತಿ ವಿವಿಧೆಡೆ 18 ಶಾಲೆಗಳನ್ನು ಆರಂಭಿಸಿದರು. ಈ ಪೈಕಿ, ಕೂಲಿ ಕಾರ್ಮಿಕರಿಗಾಗಿ ತೆರೆದಿದ್ದ ರಾತ್ರಿ ಶಾಲೆಯೂ ಒಂದು. ಶಿಕ್ಷಣದಿಂದ ವಂಚಿತರಾಗಿದ್ದವರಿಗೆ ದಂಪತಿ ಶಾಲೆ ತೆರೆಯುವ ಜತೆಗೆ, ವಿದ್ಯಾರ್ಥಿಗಳನ್ನು ಸೆಳೆಯಲು ಶಿಷ್ಯವೇತನದಂತಹ ಯೋಜನೆಯನ್ನು ಆಗಲೇ ಜಾರಿಗೆ ತಂದಿದ್ದರು.

ಶಿಕ್ಷಣದ ಜತೆಗೆ ಫುಲೆ ದಂಪತಿ ಸಮಾಜ ಸುಧಾರಣೆಯತ್ತಲೂ ದಿಟ್ಟ ಹೆಜ್ಜೆ ಇಟ್ಟರು. ವಿಧವೆಯರ ಮರುವಿವಾಹದ ಜತೆಗೆ, ಮೇಲ್ಜಾತಿಗಳ ವಿಧವೆಯರಿಗೆ ಆಶ್ರಯ ಸದನ ತೆರೆದರು. ಅಂದಿನ ಸಮಾಜಕ್ಕೆ ಅಪಥ್ಯವಾಗಿದ್ದ ಹೆಣ್ಣು ಶಿಶುಗಳ ಪೋಷಣೆಗಾಗಿ ಶಿಶು ಕೇಂದ್ರ ಆರಂಭಿಸಿದರು. ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ ಹಾಗೂ ಕೇಶಮುಂಡನದಂತಹ ಹೀನ ಆಚರಣೆಗಳ ವಿರುದ್ಧ ದನಿ ಮೊಳಗಿಸಿದರು. ಅತ್ಯಾಚಾರದಿಂದ ಗರ್ಭಿಣಿಯಾದವರಿಗಾಗಿ ಬಾಲಹತ್ಯಾ ಪ್ರತಿಬಂಧಕ ಗೃಹ ಹಾಗೂ ಅಬಲಾಶ್ರಮಗಳನ್ನು ಸ್ಥಾಪಿಸಿದರು. ಅಸ್ಪಶ್ಯತೆ ಆಚರಣೆ ವಿರೋಧಿ ಚಳವಳಿಯ ಭಾಗವಾಗಿ, ತಮ್ಮ ಮನೆಯ ಬಾವಿಯ ನೀರನ್ನು ಎಲ್ಲಾ ಸಮುದಾಯದವರ ಬಳಕೆಗೆ ಮುಕ್ತವಾಗಿಸಿದ್ದರು.

ಶೂದ್ರರು ಹಾಗೂ ತಳಸಮುದಾಯಗಳನ್ನು ಶೋಷಣೆಯಿಂದ ಬಿಡುಗಡೆಗೊಳಿಸುವುದಕ್ಕಾಗಿ ಫುಲೆ, 1873ರಲ್ಲಿ ಬೆಂಬಲಿಗರೊಂದಿಗೆ ‘ಸತ್ಯಶೋಧಕ ಸಮಾಜ’ ಸಂಸ್ಥೆಯನ್ನು ಸ್ಥಾಪಿಸಿದರು. ಆರಂಭದಲ್ಲಿ ಸಾವಿತ್ರಿಬಾಯಿ ಮುಖ್ಯಸ್ಥರಾಗಿದ್ದ ಸಮಾಜದಲ್ಲಿ 90 ಸದಸ್ಯೆಯರೂ ಇದ್ದರು. ಸಂಸ್ಥೆಯ ಮುಖವಾಣಿಯಾಗಿ ‘ಧೀನಬಂಧು’ ಪ್ರಕಾಶನ ಆರಂಭಿಸಿ, ಅಸ್ಪೃಶ್ಯತೆ ಆಚರಣೆ ವಿರುದ್ಧ ಸಮರ ಸಾರಿದ್ದರು. ಈ ಪ್ರಕಾಶನದಿಂದ ಪ್ರಕಟವಾಗಿದ್ದ ಫುಲೆಯವರ ‘ಗುಲಾಮಗಿರಿ’ ಪುಸ್ತಕವನ್ನು, ಗುಲಾಮಗಿರಿ ತೊಡೆಯಲು ಶ್ರಮಿಸಿದ್ದ ಅಮೆರಿಕದ ನಾಗರಿಕರಿಗೆ ಅರ್ಪಿಸಿದ್ದರು. 1874ರಲ್ಲಿ ದಂಪತಿ ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡು ಸಾಕಿದರು. ಅವರೇ ಯಶವಂತರಾವ ಫುಲೆ.

ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಫುಲೆ, 1890ರ ನವೆಂಬರ್ 28ರಂದು 63ನೇ ವಯಸ್ಸಿನಲ್ಲಿ ನಿಧನರಾದರು. ಪತಿಯ ಚಿತೆಗೆ ಸಾವಿತ್ರಿಬಾಯಿ ಅಗ್ನಿಸ್ಪರ್ಶ ಮಾಡಿದ್ದು ಆ ಕಾಲದ ಮತ್ತೊಂದು ಕ್ರಾಂತಿ. ಪತಿ ನಿಧನದ ಬಳಿಕವೂ ಸಾವಿತ್ರಿಬಾಯಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿದರು. ಅಂದು ದೇಶವನ್ನು ಕಾಡಿದ್ದ ಸಾಂಕ್ರಾಮಿಕ ರೋಗ ಪ್ಲೇಗ್‌ಗೆ ತುತ್ತಾದವರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಅವರು, 1897ರ ಮಾರ್ಚ್ 10ರಂದು ಕೊನೆಯುಸಿರೆಳೆದರು.

ಫುಲೆ ದಂಪತಿ 19ನೇ ಶತಮಾನದ ಭಾರತ ಕಂಡ ಶೈಕ್ಷಣಿಕ ಕ್ರಾಂತಿಕಾರರು, ಸಮಾಜ ಸುಧಾರಕರು, ಚಿಂತಕರು ಹಾಗೂ ಬರಹಗಾರರೂ ಆಗಿದ್ದರು. ಶಿಕ್ಷಣದ ಮೂಲಕ ಮೊದಲುಗೊಂಡಿದ್ದ ಅವರ ಕ್ರಾಂತಿ ಅಸ್ಪೃಶ್ಯತೆ ಆಚರಣೆ ನಿವಾರಣೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ, ಮಹಿಳೆಯರ ಹಕ್ಕುಗಳ ಪ್ರತಿಪಾದನೆ ಹಾಗೂ ಜಾತಿ ವಿನಾಶದವರೆಗೂ ವ್ಯಾಪಿಸಿತ್ತು. ಅವರ ಹೋರಾಟದಿಂದ ಪ್ರೇರಿತರಾಗಿದ್ದವ ಡಾ.ಬಿ.ಆರ್. ಅಂಬೇಡ್ಕರ್, ‘ಎಲ್ಲರಿಗೂ ಘನತೆಯಿಂದ ಬದುಕುವ ಹಕ್ಕು, ಶಿಕ್ಷಣ ಹಾಗೂ ಅವಕಾಶಗಳು ಸಿಗಬೇಕು’ ಎಂಬ ಫುಲೆ ದಂಪತಿಯ ಕನಸನ್ನು ಸಂವಿಧಾನದ ಮೂಲಕ ಸಾಕಾರಗೊಳಿಸಿದರು.

ಅಂದಹಾಗೆ, ಸೆಪ್ಟೆಂಬರ್ 5ರಂದು ಇಡೀ ದೇಶವೇ ಶಿಕ್ಷಕರ ದಿನಾಚರಣೆ ಆಚರಿಸಿತು. ಆದರೆ, ಈ ದೇಶದ ತಳ ಸಮುದಾಯಗಳು ಹಾಗೂ ಮಹಿಳೆಯರಿಗೆ ಶಿಕ್ಷಣದ ದೀಕ್ಷೆ ಕೊಟ್ಟ, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರನ್ನು ಸುಶಿಕ್ಷಿತರು ಕೂಡ ಸ್ಮರಿಸದಿರುವುದು ಇಂದಿಗೂ ದೊಡ್ಡ ಅಚ್ಚರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು