ಗುರುವಾರ , ಮಾರ್ಚ್ 4, 2021
29 °C

ಎಕ್ಸೀಡ್‌ ಎಂಬ ‘ಪ್ರಯೋಗ’ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸಿಂಗಪುರದ ಆಶೀಷ್‌ ರಾಜ್‌ಪಾಲ್‌ ಅವರು ಹಾರ್ವರ್ಡ್‌ನ ಗ್ರ್ಯಾಜುಯೇಟ್‌ ಸ್ಕೂಲ್‌ ಆಫ್‌ ಎಜುಕೇಷನ್‌ನಲ್ಲಿ ಉನ್ನತ ಪದವಿ ಪಡೆದವರು. ನಂತರ ಎಂಬಿಎ ಪದವಿ ಪಡೆದು ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಪಡೆಯುತ್ತಾರೆ. ಮಗಳಿಗೆ ನಾಲ್ಕು ವರ್ಷ ತುಂಬುತ್ತಿದ್ದಂತೆ ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಆಶೀಷ್‌ ತಲೆಯಲ್ಲಿ ಗಂಭೀರ ವಿಚಾರವೊಂದು ಕಾಡಲು ಶುರುವಾಗುತ್ತದೆ. ಶಿಕ್ಷಣ ವಿಷಯದಲ್ಲಿ ಪದವಿ ಪಡೆದಿರುವ ಇವರ ತಲೆಯಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಏನಾದರೂ ಮಾಡಬೇಕು ಎಂಬ ಆಲೋಚನೆ ಬರುತ್ತದೆ. ನಾಲ್ಕು ಕೊಠಡಿಯೊಳಗೆ ನೀಡುತ್ತಿರುವ ಪಾಠ, ನೀರಸವೆನಿಸುವ ಪಠ್ಯಕ್ರಮ, ನೋಟ್ಸ್‌, ಪರೀಕ್ಷೆ, ಅಂಕ ಇಷ್ಟರ ಒಳಗೇ ಸುತ್ತುತ್ತಿರುವ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿದವರೇ XSEED EDUCATION ಎಂಬ ಹೆಸರಿನ ಅಂತರರಾಷ್ಟ್ರೀಯ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. 

ಈಗ ಎಕ್ಸೀಡ್‌ ಶಿಕ್ಷಣ ಪದ್ಧತಿಯನ್ನು ಹಲವು ದೇಶಗಳಲ್ಲಿ ಅಳವಡಿಸಲಾಗಿದೆ. ಭಾರತದಲ್ಲೂ ಸಿಬಿಎಸ್‌ಇ ಪಠ್ಯಕ್ರಮವಿರುವ ಶಾಲೆಗಳು ಎಕ್ಸೀಡ್‌ ಪದ್ಧತಿಯನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿವೆ. ಬೆಂಗಳೂರಿನ ರಾಜಾಜಿನಗರ ಮತ್ತು ಬಸವೇಶ್ವರ ನಗರದಲ್ಲಿರುವ ಶ್ರೀವಾಣಿ ವಿದ್ಯಾಸಂಸ್ಥೆಗಳು, ಬಸವೇಶ್ವರನಗರದ ಕಡೆಂಬಿ ಸ್ಕೂಲ್‌ ಸೇರಿದಂತೆ 80ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈಗಾಗಲೇ ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ.

ಎಕ್ಸೀಡ್‌ ಪಠ್ಯಕ್ರಮವನ್ನು ಬೋಧಿಸುವ ಕುರಿತು ಮೊದಲು ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗುತ್ತದೆ. ಪ್ರತಿ ಮಗುವಿಗೂ ಎಕ್ಸೀಡ್‌ ಅಭಿವೃದ್ಧಿಪಡಿಸಿರುವ ಕಲಿಕಾ ಕಿಟ್‌ ನೀಡಲಾಗುತ್ತದೆ. 

ಹೇಗಿದೆ ಎಕ್ಸೀಡ್‌ ಶಿಕ್ಷಣ ಕ್ರಮ ಹೇಗಿದೆ? 

ಎಕ್ಸೀಡ್‌ ಎಜುಕೇಷನ್‌ ಕ್ರಮದಲ್ಲಿ ಏಮ್‌, ಆ್ಯಕ್ಷನ್‌, ಅನಾಲಿಸಿಸ್, ಪ್ರಾಕ್ಟಿಕಲ್, ಅಸೆಸ್ಮೆಂಟ್‌ ಎಂಬ ಒಟ್ಟು ಐದು ಹಂತಗಳಿವೆ. ಮೊದಲ ಹಂತದಲ್ಲಿ ಮಕ್ಕಳಿಗೆ ಆವತ್ತಿನ ಪಾಠದಿಂದ ಏನನ್ನು ಕಲಿಯಲಿದ್ದೀರಿ ಎಂಬ ಬಗ್ಗೆ ತಿಳಿಸಲಾಗುತ್ತದೆ. ನಂತರದ ಹಂತ ಆ್ಯಕ್ಷನ್‌. ಇದರಲ್ಲಿ ಚಟುವಟಿಕೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮೂಡಿದ ಪ್ರಶ್ನೆಗಳೇನು ಎಂಬುದನ್ನು ಮಕ್ಕಳಿಂದ ತಿಳಿದುಕೊಳ್ಳುವುದು ಶಿಕ್ಷಕರ ಕೆಲಸ. ನಂತರದ ಹಂತದಲ್ಲಿ ವಿಶ್ಲೇಷಣೆ. ನಂತರ ಅದನ್ನು ಅಳವಡಿಸಿಕೊಳ್ಳುವ ಪ್ರಾಯೋಗಿಕ ಅವಧಿ ಇರುತ್ತದೆ. ಕೊನೆಯ ಹಂತದಲ್ಲಿ ಮಕ್ಕಳ ಅರಿವಿನ ಮೌಲ್ಯಮಾಪನ ನಡೆಯುತ್ತದೆ. 

ಉದಾಹರಣೆಗೆ, ಎಲೆಗಳ ಬಗ್ಗೆ ತಿಳಿಸಿಕೊಡುವ ಪಾಠದ ಕ್ರಮ ಹೀಗಿದೆ. ಮಕ್ಕಳನ್ನು ಗಾರ್ಡನ್‌ಗೆ ಹೋಗಿ ಅಲ್ಲಿ ಸಿಗುವ ವಿವಿಧ ಬಗೆಯ ಎಲೆಗಳನ್ನು ಕಿತ್ತು ತರುವ ಚಟುವಟಿಕೆ ನೀಡಲಾಗುತ್ತದೆ. ಮಕ್ಕಳು ತಮ್ಮ ಕೈಗೆ ಸಿಗುವ ನಾಲ್ಕೈದು ಬಗೆಯ ಎಲೆಗಳನ್ನು ಕಿತ್ತು ತರುತ್ತಾರೆ. ಆ ಎಲೆ ಹೇಗಿದೆ ಎಂಬುದನ್ನು ಮಕ್ಕಳು ಹೇಳುತ್ತಾ ಹೋಗುತ್ತಾರೆ. ಅವುಗಳನ್ನು ಶಿಕ್ಷಕಿ ಬೋರ್ಡಿನ ಮೇಲೆ ಬರೆಯುತ್ತಾರೆ. ದಪ್ಪ, ತೆಳು, ತಿಳಿಹಸಿರು, ಗಾಢ ಹಸಿರು, ದೊಡ್ಡ, ಚಿಕ್ಕ, ಅಗಲ, ಗಟ್ಟಿ, ಮೆದು, ಅಂಚು ಚೂಪಾದ... ಹೀಗೆ ಒಟ್ಟು ಲಕ್ಷಣಗಳನ್ನು ಮಕ್ಕಳು ಗುರುತಿಸುತ್ತಾರೆ. ನಂತರ ತಮ್ಮ ಬಳಿ ಇರುವ ಎಲೆಯ ಆಕಾರ ಹೇಗಿದೆ ಎಂಬುದನ್ನು ಹೇಳುವ ಸರದಿ. ಹೃದಯದ ಆಕಾರ, ವಜ್ರಾಕಾರ, ಕತ್ತಿಯಾಕಾರ, ಚೂಪಾದ ತುದಿಗಳು, ಓವಲ್ ... ಹೀಗೆ ಮಕ್ಕಳು ಹೇಳಿದಂತೆ ಶಿಕ್ಷಕಿ ಬೋರ್ಡ್‌ ಮೇಲೆ ಬರೆಯುತ್ತಾರೆ. ನಂತರ ಮಕ್ಕಳಿಗೆ ನೀಡಿದ ಚಾರ್ಟ್‌ನಲ್ಲಿ ಆಯಾ ಆಕಾರದ ಎಲೆಗಳನ್ನು ಅಂಟಿಸಬೇಕು. ಅವುಗಳ ಬಣ್ಣ, ಆಕಾರಗಳ ಬಗ್ಗೆ ಬರೆಯಬೇಕು. ನಂತರ ಎಲೆಯ ವಾಸನೆ ಗ್ರಹಿಸುವ ಚಟುವಟಿಕೆ ನೀಡಲಾಗುತ್ತದೆ. ನಂತರ ಸ್ಪರ್ಶದಿಂದ ಎಲೆಯನ್ನು ಗುರುತಿಸುವ ಚಟುವಟಿಕೆ ನೀಡಲಾಗುತ್ತದೆ. ಕೊನೆಯ ಭಾಗವಾಗಿ ಶಿಕ್ಷಕರು ಪ್ರತಿ ಗಿಡದ ಬಗ್ಗೆ ಮಾಹಿತಿ ನೀಡುತ್ತಾರೆ. ಪ್ರತಿ ಗಿಡದ ಎಲೆ ಬೇರೆ ಬೇರೆ ಆಕಾರದಲ್ಲಿರಲು, ಬಣ್ಣದಲ್ಲಿರಲು ಕಾರಣ ಏನು ಎಂದು ವಿವರಿಸುತ್ತಾರೆ. ವಿಜ್ಞಾನ, ಗಣಿತ ಹೀಗೆ ಎಲ್ಲ ವಿಷಯಗಳೂ ಇದೇ ಮಾದರಿಯಲ್ಲಿ ನಡೆಯುತ್ತದೆ.

ಖಾಸಗಿ ಶಾಲೆಗಳಲ್ಲಿ ಮಾತ್ರ

ಎಕ್ಸೀಡ್‌, ತನ್ನ ಪ್ರಯೋಗಗಳಿಗೆ ಖಾಸಗಿ ಶಾಲೆಗಳನ್ನು ಮಾತ್ರವೇ ಆಯ್ದುಕೊಂಡಿದೆ. ‘ನಾವು ಪ್ರತ್ಯೇಕ ಪಠ್ಯ ಮತ್ತು ಕಲಿಕಾ ಕಿಟ್‌ಗಳನ್ನು ಪೂರೈಸುತ್ತೇವೆ. ಇದಕ್ಕೆ ಶಾಲೆಗಳು ಹಣ ಪಾವತಿ ಮಾಡುತ್ತವೆ. ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರು ಹೆಚ್ಚುವರಿ ಶುಲ್ಕ ಪಾವತಿಸುವ ಸ್ಥಿತಿಯಲ್ಲಿಲ್ಲ. ಹಾಗಾಗಿ ನಮ್ಮ ಆಯ್ಕೆ ಖಾಸಗಿ ಶಾಲೆಗಳೇ ಆಗಿವೆ. ಬೆಂಗಳೂರಿನಲ್ಲಿ ಅತಿಹೆಚ್ಚು ಖಾಸಗಿ ಶಾಲೆಗಳಿವೆ. ಹಾಗಾಗಿ ಬೆಂಗಳೂರು ನಗರ ನಮ್ಮ ಪ್ರಯೋಗಶಾಲೆಯಾಗಿದೆ’ ಎಂದು ಆಶೀಷ್‌ ಹೇಳುತ್ತಾರೆ.

* ನಮ್ಮಲ್ಲಿ ಮೂರು ವರ್ಷಗಳ ಹಿಂದೆ 2ರಿಂದ 5ನೇ ತರಗತಿಯ ಮಕ್ಕಳಿಗೆ ಈ ಪದ್ಧತಿಯನ್ನು ಅಳವಡಿಸಿದ್ದೆವು. ಈಗ ಎರಡು ವರ್ಷಗಳಿಂದ ಎಲ್‌ಕೆಜಿಯಿಂದಲೇ ಅಳವಡಿಸಿದ್ದೇವೆ. ಮೊದಲು ಶಿಕ್ಷಕರಿಗೆ ತಮ್ಮ ಸಾಂಪ್ರದಾಯಕ ಕ್ರಮದಿಂದ ಹೊರಬರುವುದು ಕಷ್ಟವಾಯಿತು. ಪೋಷಕರಿಂದಲೂ ಮೊದಲು ವಿರೋಧ ವ್ಯಕ್ತವಾಯಿತು. ಅವರಿಗೆ ಮನವರಿಕೆ ಮಾಡಿಕೊಟ್ಟೆವು. ಈ ಪದ್ಧತಿ ಸಂಪೂರ್ಣವಾಗಿ ವೈಜ್ಞಾನಿಕವಾಗಿದೆ. ಈಗ ಶಿಕ್ಷಕರೂ ಖುಷಿಯಿಂದ ತರಗತಿಗಳನ್ನು ನಡೆಸುತ್ತಿದ್ದಾರೆ. ಚಟುವಟಿಕೆ ಆಧಾರಿತವಾದ ಕಾರಣ ಮಕ್ಕಳಿಗೂ ಹೊರೆ ಎನಿಸುತ್ತಿಲ್ಲ. ಮಕ್ಕಳಲ್ಲಿ ಪ್ರಶ್ನಿಸುವ ಗುಣ, ವಿಷಯ ತಿಳಿಯುವ ಕುತೂಹಲ ಹೆಚ್ಚಿದೆ. ಪೋಷಕರೂ ಖುಷಿಯಾಗಿದ್ದಾರೆ.

– ಮಾಲಿನಿ ಬಿ.ಆರ್‌, ಮುಖ್ಯ ಶಿಕ್ಷಕಿ, ಕಡೆಂಬಿ ಪ್ರಾಥಮಿಕ ಶಾಲೆ, ಬಸವೇಶ್ವರನಗರ

* ಮಗಳು ಅದಿತಿ ಕಡೆಂಬಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾಳೆ. ಒಂದನೇ ತರಗತಿಯಿಂದ ಆಕೆಗೆ ಎಕ್ಸೀಡ್‌ ಮಾದರಿ ಶಿಕ್ಷಣ ಸಿಕ್ಕಿದೆ. ಇದರಿಂದಾಗಿ ಆಕೆಯಲ್ಲಿ ಪ್ರಶ್ನಿಸುವ ಗುಣ, ಸ್ಪರ್ಧಾ ಮನೋಭಾವ ಹೆಚ್ಚಿದೆ. ಮುಖ್ಯವಾಗಿ ವೇದಿಕೆಯ ಭಯ ಇಲ್ಲವಾಗಿದೆ. ಕಲಿಕೆಯಲ್ಲಿ ಆಸಕ್ತಿ ಹೆಚ್ಚಿದೆ. ಈ ಕ್ರಮದಲ್ಲಿ ಮಕ್ಕಳು ನೋಟ್ಸ್‌ ಬಾಯಿ ಪಾಠ ಮಾಡುವ ಪ್ರಮೇಯವೇ ಇಲ್ಲ. 

– ರೋಹಿಣಿ, ವಿಜಯನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು