ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಗುವಿಗೆ ಗ್ರೇಡ್‌ ಸಮಸ್ಯೆಯೆ!

Last Updated 15 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಕ್ಕಳು ಶಾಲೆಯಲ್ಲಿ ನಿರೀಕ್ಷಿತ ಗ್ರೇಡ್‌ ಪಡೆಯಲು ವಿಫಲರಾದರೆ ಪೋಷಕರು ತೀವ್ರವಾಗಿ ಪ್ರತಿಕ್ರಿಯಿಸಿ, ಕಠಿಣವಾಗಿ ಶಿಕ್ಷಿಸಬೇಕಾದ ಅಗತ್ಯವಿಲ್ಲ. ತಮ್ಮ ಮಗು ಎಲ್ಲಿ ವಿಫಲವಾಗಿದೆ ಎಂದು ಕಾರಣಗಳನ್ನು ಅರಿತು ಸರಿಪಡಿಸುತ್ತ ಹೋದರೆ ಆ ಮಗು ಖಂಡಿತವಾಗಿ ಸಾಧನೆಯ ಶಿಖರ ಏರಬಲ್ಲದು.

ಈಗ ತಾನೇ ಶಾಲೆಗಳಲ್ಲಿ ಮಧ್ಯಂತರ ಅಥವಾ ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದು ಮಕ್ಕಳ ಪ್ರಗತಿಪತ್ರ ಪೋಷಕರ ಕೈ ಸೇರಿದೆ. ಇದು ವಿದ್ಯಾರ್ಥಿಗಳ ಕಲಿಕೆಗೆ, ಕೌಶಲಕ್ಕೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹಿಡಿದ ಕನ್ನಡಿ. ಆ ಮೂಲಕ ಪೋಷಕರಿಗೆ ತಮ್ಮ ಮಕ್ಕಳು ಯಾವುದರಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ, ಯಾವುದರಲ್ಲಿ ಇನ್ನೂ ಸುಧಾರಣೆ ಬೇಕಾಗಿದೆ, ಅವರ ಪಠ್ಯೇತರ ಚಟುವಟಿಕೆ ಹಾಗೂ ನಡವಳಿಕೆ ಹೇಗಿದೆ ಎಂಬುದು ವೇದ್ಯವಾಗುತ್ತದೆ.

ಅಂಕಗಳು ಕೆಂಪು ಶಾಯಿಯಲ್ಲಿ ನಮೂದಿತವಾಗಿದ್ದರೆ ಪೋಷಕರ ಪ್ರತಿಕ್ರಿಯೆ ಹೇಗಿರಬಹುದು? ‘ನಿನ್ನನ್ನು ಮನೆ ಪಾಠಕ್ಕೆ ಹಾಕಿ, ಅಂತಹ ಒಳ್ಳೆಯ ಶಾಲೆಯಲ್ಲಿ ಸೇರಿಸಿದ್ದರೂ ನಿನ್ನ ಫಲಿತಾಂಶ ಹೀಗೆ. ನೀನು ನಾಲಾಯಕ್‌’ ಎಂದು ಆಕ್ರೋಶ ವ್ಯಕ್ತಪಡಿಸಿ, ಹತಾಶೆಗೆ ಒಳಗಾಗಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಡುತ್ತಾರೆ ಬಹುತೇಕ ಪೋಷಕರು. ಹಾಗಾದರೆ ಪೋಷಕರ ನಿಲುವು ಈ ಸಂದರ್ಭದಲ್ಲಿ ಯಾವ ರೀತಿ ಇದ್ದರೆ ಮಕ್ಕಳ ಪ್ರಗತಿಗೆ ಪೂರಕವಾಗಿರುತ್ತದೆ?

ಮಕ್ಕಳ ಸ್ನೇಹ ವರ್ತುಲ

ಮಕ್ಕಳ ಆತ್ಮೀಯ ಸ್ನೇಹಿತರು ಯಾರೆಂದು ತಿಳಿದುಕೊಂಡು ಅವರ ಪೋಷಕರೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಬೇಕು. ಹೀಗೆ ಕನಿಷ್ಠ ಪಕ್ಷ ನಾಲ್ವರು ಸ್ನೇಹಿತರ ಪೋಷಕರು ಸಂಪರ್ಕದಲ್ಲಿದ್ದರೆ, ತಮ್ಮ ಮಗು ಮುಚ್ಚಿಟ್ಟ ಸಂಗತಿಗಳ ಅನಾವರಣವಾಗುತ್ತದೆ. ಮಕ್ಕಳ ಅರಿವಿಗೆ ಬಾರದಂತೆಯೇ ಮಕ್ಕಳ ಮೇಲೆ ನಿಗಾ ಇಡಲು, ಇದು ಅತಿ ಪರಿಣಾಮಕಾರಿ ಹಾಗೂ ಸರಳ ಉಪಾಯ. ಅಷ್ಟೇ ಅಲ್ಲದೆ ಸಾಂಘಿಕ ಕಲಿಕೆಗೂ ಇದು ಪೂರಕವಾಗುತ್ತದೆ. ಎಲ್ಲರೂ ಎಲ್ಲದರಲ್ಲೂ ಜಾಣರಾಗಿರಲು ಸಾಧ್ಯವಿಲ್ಲ. ಜೊತೆಯಲ್ಲಿ ಅಭ್ಯಾಸ ಮಾಡುವ ಅವಕಾಶ ಸಿಕ್ಕಿದರೆ ಸಹಪಾಠಿಯ ಜಾಣ್ಮೆಯೂ ತಮ್ಮದಾಗುತ್ತದೆ. ಕಲಿಕೆಗೆ ಹೊಸ ಆಯಾಮ ದೊರೆಯುತ್ತದೆ.

ಭದ್ರವಿಲ್ಲದ ವಿಷಯದ ತಳಪಾಯ

ಪ್ರಾಥಮಿಕ ಹಂತದಲ್ಲಿ ಪ್ರತಿ ವಿದ್ಯಾರ್ಥಿಯೂ ಸರ್ವ ಶೇಷ್ಠನೆಂದೇ ಫಲಿತಾಂಶವಿರುತ್ತದೆ. ಆಗ ಪಠ್ಯದ ಮೂಲಕ ಕಲಿಯುವುದು ಕಡಿಮೆ, ಹೊರಗಿನ ಪ್ರಪಂಚದಿಂದ ಅರಿಯಬೇಕಾದ್ದು ಜಾಸ್ತಿ ಇರುತ್ತದೆ. ಆದರೆ ಕೇವಲ ಪಠ್ಯವಷ್ಟನ್ನೇ ಕಲಿತುಕೊಂಡು ಮುಂದಿನ ತರಗತಿಗಳಿಗೆ ಹೋಗುತ್ತಿದ್ದಂತೆ ಕಲಿಯಬೇಕಾದ ವಿಷಯಗಳು ಹೆಚ್ಚಾಗಿ, ಫಲಿತಾಂಶದ ಗ್ರೇಡ್ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಮುಂದಿನ ತರಗತಿಗೆ ಬಂದ ನಂತರ ಹಿಂದೆ ಹೋಗುವುದು ಹೇಗೆ? ಮಗುವಿನ ತಿಳಿವಳಿಕೆ ಎಲ್ಲಿ ಸ್ಥಗಿತವಾಗಿದೆ ಎಂದು ಪೋಷಕರು ತಿಳಿದುಕೊಂಡು ಅಲ್ಲಿಂದಲೇ ಮತ್ತೆ ಕಲಿಸಿದರೆ ಮಾತ್ರವೇ ಮುಂದಿನ ಪಾಠಗಳು ಅರ್ಥವಾಗಲು ಸಾಧ್ಯ.

ಕೀಳರಿಮೆ

ತನ್ನ ಸಹಪಾಠಿಗಳು ಅಥವಾ ಒಡಹುಟ್ಟಿದವರಿಗಿಂತ ಕಡಿಮೆ ಅಂಕ ಪಡೆದಾಗ, ಇತರರೊಂದಿಗೆ ಹೋಲಿಸಿ ಪದೇ ಪದೇ ನಿಂದಿಸಿ ಅವಹೇಳನೆ ಮಾಡುವುದರಿಂದ ಮಗುವಿಗೆ ಕೀಳರಿಮೆ ಉಂಟಾಗುತ್ತದೆ. ತಾನು ನಿಜವಾಗಿಯೂ ಅಪ್ರಯೋಜಕನೇ ಇರಬಹುದು ಎಂದು ನಂಬಿಕೊಳ್ಳುತ್ತದೆ. ತನ್ನಿಂದ ಏನೋ ಘೋರ ಅಪರಾಧವಾಗಿದೆ ಎಂದು ಭಾವಿಸಿ, ಒಳಗೊಳಗೇ ಕುಗ್ಗಿ ಹೋಗುತ್ತದೆ. ನಮ್ಮ ಹೊರ ಮನಸ್ಸು ಏನನ್ನು ಹೇಳುತ್ತದೋ ಅದನ್ನು ಒಳ ಮನಸ್ಸು ಸತ್ಯವೆಂದು ಒಪ್ಪಿಕೊಂಡು ಅದನ್ನೇ ನಿಜ ಮಾಡಿಬಿಡುತ್ತದೆ. ಎಂದಿಗೂ ಒಂದು ಮಗುವನ್ನು ಬೇರೆಯವರೊಂದಿಗೆ ಹೋಲಿಸಬಾರದು. ವ್ಯಕ್ತಿಗತ ವ್ಯತ್ಯಾಸಗಳನ್ನು ಒಪ್ಪಿಕೊಳ್ಳಬೇಕು ಮತ್ತು ಸಾಧ್ಯವಾದರೆ ಪ್ರಶಂಸೆ ಮಾಡಬೇಕು. ಮಕ್ಕಳಿಗಾಗಿ, ದಿನದ ಸ್ವಲ್ಪ ಸಮಯ ಭಾವನಾತ್ಮಕ, ಸ್ನೇಹದ ಸಂಬಂಧ ಬೆಸೆಯಲು ಪಾಲಕರು ಮೀಸಲಿಡಬೇಕು. ತನ್ನ ವೈಫಲ್ಯಕ್ಕೆ ಕಾರಣಗಳನ್ನು ಮುಕ್ತವಾಗಿ ಪೋಷಕರೊಂದಿಗೆ ಹಂಚಿಕೊಳ್ಳುವಷ್ಟು ಸಲುಗೆ ಮಕ್ಕಳಲ್ಲಿರಬೇಕು. ಎಷ್ಟು ಬೇಗ ಸಮಸ್ಯೆ ಏನೆಂದು ತಿಳಿಯುತ್ತದೋ, ಪರಿಹಾರದ ಮಾರ್ಗ ತೆರೆದುಕೊಳ್ಳುವುದು ಅಷ್ಟೇ ಸುಲಭ.

ಪೋಷಕರಿಂದ ಬಲವಂತದ ಮಾಘಸ್ನಾನ

ಪೋಷಕರು ತಮ್ಮ ಆಶಯ, ಅಭಿಲಾಷೆಗಳನ್ನು ಮಕ್ಕಳ ಮೇಲೆ ಹೇರುವುದು. ಮಕ್ಕಳಿಗೆ ಕ್ರೀಡೆಗಳಲ್ಲಿ, ಕಲೆಗಳಲ್ಲಿ ಹೆಚ್ಚು ಆಸಕ್ತಿ ಇದ್ದರೂ ಅದಕ್ಕೆ ಅವಕಾಶ ನೀಡದೆ ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಸೀಮಿತಗೊಳಿಸುವುದರಿಂದ ಮಕ್ಕಳಿಗೆ ಕಲಿಕೆ ನಿಸ್ಸಾರವೆನಿಸುತ್ತದೆ. ಆಸಕ್ತಿ ಇಲ್ಲದ ಕಲಿಕೆ ಗ್ರಹಣೆಗೆ ಒಳಪಡದ ಕಾರಣ ಮಗು ಹಿಂದುಳಿಯುತ್ತದೆ. ಮಗುವಿನ ಅರ್ಹತೆ, ಅಪೇಕ್ಷೆ, ಕೌಶಲಗಳನ್ನು ಪಾಲಕರು ಪ್ರೋತ್ಸಾಹಿಸಬೇಕು. ಶೈಕ್ಷಣಿಕ ಪಠ್ಯಕ್ರಮದೊಂದಿಗೇ ಮಗುವಿನ ಆಸಕ್ತಿಯ ಕ್ಷೇತ್ರವನ್ನೂ ಸೇರಿಸಿದರೆ, ಸಮಯ ಸಾಲುವುದಿಲ್ಲವೆಂಬುದು ತಪ್ಪು ಅಭಿಪ್ರಾಯ. ಕಲೆ ಹಾಗೂ ಕ್ರೀಡೆ ಮನಸ್ಸನ್ನು ಹರಿತವಾಗಿಡುವುದರ ಜೊತೆಗೆ ಶರೀರವನ್ನೂ ಸದೃಢವಾಗಿಸುತ್ತದೆ. ಏಕಾಗ್ರತೆ ಹೆಚ್ಚಿ, ಕಲಿಕೆ ದೃಢವಾಗುತ್ತದೆ. ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೆ ಹೊರಗಿನ ಪ್ರಪಂಚದ ಅರಿವನ್ನು ಸಹ ಮೂಡಿಸುವುದು ಅತ್ಯಾವಶ್ಯಕ.

ಪೋಷಕರ ಸಭೆ

ಶಾಲೆಯಲ್ಲಿ ಆಯೋಜಿಸುವ ಪೇರೆಂಟ್ಸ್ ಮೀಟಿಂಗ್‌ಗಳಿಗೆ ತಪ್ಪದೆ ಹಾಜರಾಗಬೇಕು. ಪೋಷಕರೂ, ಶಿಕ್ಷಕರೂ ಮಗುವಿನ ಕಲಿಕೆಯ ಎರಡು ಕೊಂಡಿಗಳಾದ್ದರಿಂದ, ಮಗುವಿನ ಕಲಿಕೆಯ ಬಗ್ಗೆ ಇದರಿಂದಾಗಿ ನಿಖರವಾಗಿ ತಿಳಿಯಬಹುದು ಹಾಗೂ ಮಕ್ಕಳಿಗೆ ಕಲಿಯುವುದರಲ್ಲಿ ಇರುವ ತೊಂದರೆಯನ್ನು ನಿವಾರಿಸಬಹುದು. ಪೋಷಕರು ಈ ಸರಳ ಉಪಾಯಗಳನ್ನು ಅನುಷ್ಠಾನಗೊಳಿಸಿದರೆ ಕ್ಲಿಷ್ಟ ಸಂಗತಿಗಳನ್ನು ಬಿಟ್ಟು ಕೇವಲ ಸುಲಭವಾದದ್ದನ್ನು ಗ್ರಹಿಸುತ್ತಿದ್ದ ವಿದ್ಯಾರ್ಥಿಯು ನೋಡಿದ್ದು, ಕೇಳಿದ್ದು, ಅನುಭವಿಸಿದ್ದನ್ನೆಲ್ಲಾ ಹೀರಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾನೆ.

ಗ್ರೇಡ್ ಕಡಿಮೆ ಬಂದ ಮಾತ್ರಕ್ಕೆ ಪೋಷಕರು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವ ಅವಶ್ಯಕತೆಯೇನೂ ಇಲ್ಲ. ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಹೇಳಿರುವಂತೆ FAIL is the First Attempt In Learning. ತೊಂದರೆ ಎಲ್ಲಿದೆ ಎಂದು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಪರಿಹಾರ ಹುಡುಕಿದರೆ ಮಕ್ಕಳ ಶೈಕ್ಷಣಿಕ ಔನ್ನತ್ಯವಷ್ಟೇ ಅಲ್ಲ, ವ್ಯಕ್ತಿತ್ವವೂ ರೂಪುಗೊಳ್ಳುತ್ತದೆ.

ಅಂತರ್ಜಾಲ ಸೌಲಭ್ಯ

ಈಗ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಇಲ್ಲದ ಮನೆಯೇ ಇಲ್ಲವೆಂದು ಹೇಳಬಹುದು. ಜೊತೆಗೆ ಸ್ಮಾರ್ಟ್‌ಫೋನ್‌ ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳ ಬಳಿಯೂ ಇರುತ್ತದೆ. ಇವುಗಳ ಸಹಾಯದಿಂದ ಉತ್ತರಗಳನ್ನು ಭಟ್ಟಿ ಇಳಿಸಿ ಹೋಂವರ್ಕ್‌ ಪೂರೈಸುತ್ತಾರೆ ವಿದ್ಯಾರ್ಥಿಗಳು. ಶಿಕ್ಷಕರ ನಿರೀಕ್ಷೆ ಪೂರ್ಣಗೊಳ್ಳುವುದು ನಿಜ. ಆದರೆ ಅದನ್ನು ಕಲಿಯುವಲ್ಲಿ ಪ್ರಯತ್ನ ಇಲ್ಲದ್ದರಿಂದ ಅಷ್ಟೇ ಸುಲಭವಾಗಿ ಮರೆತೂ ಹೋಗುತ್ತದೆ. ಪಠ್ಯಪುಸ್ತಕಗಳನ್ನು ಓದುವುದು ಅತ್ಯಾವಶ್ಯಕ. ಅದರಿಂದ ಪ್ರಶ್ನೆಗಳಿಗೆ ಉತ್ತರವನ್ನು ಹೆಕ್ಕಿ ಬರೆಯುವುದರಿಂದ, ಓದುತ್ತಾ ಹೋದಂತೆ ವಿಷಯ ಮನನವಾಗುತ್ತಾ ಹೋಗುತ್ತದೆ. ನಂತರ ಪುಸ್ತಕವನ್ನು ಮುಚ್ಚಿಟ್ಟು ಪ್ರಶ್ನೆಗಳಿಗೆ ಉತ್ತರ ಬರೆಯುವುದರಿಂದ ಸ್ಮರಣೆ ಸಾಧ್ಯವಾಗುತ್ತದೆ. ಹೀಗೆ ಮಾಡಿದಾಗ ಕಲಿಕೆ ಶಾಶ್ವತವಾಗುತ್ತದೆ. ಪೋಷಕರು ಮಕ್ಕಳನ್ನು ಪಠ್ಯಪುಸ್ತಕ ಓದಲು ಉತ್ತೇಜಿಸಬೇಕು.

ಪುನರಾವರ್ತನೆಯ ಸಮಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸಮೀಕರಣವನ್ನು ಅಥವಾ ಗಣಿತದ ಲೆಕ್ಕಗಳನ್ನು ಸಹ ಪುಟ ತಿರುಗಿಸುತ್ತಾ ಓದುತ್ತಾ ಹೋಗುತ್ತಾರೆ. ಕಣ್ಣಿನ ಕ್ಯಾಮೆರಾದಿಂದ ಸೆರೆ ಹಿಡಿದ ದೃಶ್ಯ, ಮೆದುಳಿನ ಪರದೆಯ ಮೇಲೆ ಶಾಶ್ವತವಾಗಿ ಉಳಿಯುವುದಿಲ್ಲ. ಅದಕ್ಕಾಗಿ ಸಮಸ್ಯೆಗಳನ್ನು ಬಿಡಿಸಬೇಕು ಮತ್ತು ಸಮೀಕರಣವನ್ನು ಬರೆದು ಅಭ್ಯಾಸ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT