ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಸಂದರ್ಶನ | ನಾನು ನೆಪ ಮಾತ್ರ; ಮೋದಿಯೇ ಎಲ್ಲ: ಡಾ. ಬಸವರಾಜ ಕ್ಯಾವಟರ್‌

Published 3 ಮೇ 2024, 23:09 IST
Last Updated 3 ಮೇ 2024, 23:09 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ವೈದ್ಯರಾದ ಬಸವರಾಜ ಕ್ಯಾವಟರ್‌ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ರಾಜಕಾರಣದ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದಭಾಗ ಇಲ್ಲಿದೆ.

ಪ್ರ

ವೈದ್ಯ ವೃತ್ತಿಯಿಂದ ಚುನಾವಣಾ ಕಣಕ್ಕೆ ಏಕೆ ಧುಮುಕಿದ್ದೀರಿ?

ವೈದ್ಯ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸಗಳನ್ನೂ ಮಾಡಿಕೊಂಡು ಬಂದಿದ್ದೇನೆ. ನನಗೆ ರಾಜಕಾರಣ ಹೊಸದೇನಲ್ಲ. ತಂದೆ ಶಾಸಕರಾಗಿದ್ದರು. ಸಹೋದರ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದರಿಂದ ಮೊದಲಿನಿಂದಲೂ ಕುಟುಂಬಕ್ಕೆ ರಾಜಕಾರಣದ ನಂಟು ಇದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿಯೇ ಟಿಕೆಟ್‌ಗಾಗಿ ಪ್ರಯತ್ನಿಸಿದ್ದೆ. ಅತಿ ದೊಡ್ಡ ಪಕ್ಷ ಬಿಜೆಪಿ ಈಗ ನನಗೆ ಅವಕಾಶ ಕೊಟ್ಟಿದೆ. ವಯಸ್ಸು, ವೃತ್ತಿ, ಸಾಮರ್ಥ್ಯವನ್ನು ಪರಿಗಣಿಸಿ ಟಿಕೆಟ್ ನೀಡಿದೆ ಎಂದು ಭಾವಿಸಿದ್ದೇನೆ.

ಪ್ರ

ನೀವು ಪಕ್ಷಕ್ಕೆ ಹೊಸಬರು, ಯಾರೊಂದಿಗೂ ನಿಕಟ ಸಂಪರ್ಕವಿಲ್ಲ ಎಂಬ ದೂರು ಇದೆಯಲ್ಲ?

ಇದು ರಾಜಕೀಯ ಕಾರಣಕ್ಕಾಗಿ ಎದುರಾಳಿಗಳು ಮಾಡುತ್ತಿರುವ ಅಪಪ್ರಚಾರ. ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ.

ಪ್ರ

ಜನ ನಿಮಗೆ ಏಕೆ ಮತ ಹಾಕಬೇಕು?

ನಮ್ಮ ಪಕ್ಷ ದೇಶದ ಅಭಿವೃದ್ಧಿ ಮತ್ತು ಪ್ರಾದೇಶಿಕವಾಗಿ ಆಯಾ ಕ್ಷೇತ್ರಗಳ ಪ್ರಗತಿಗೆ ಪ್ರಥಮಾದ್ಯತೆ ನೀಡುತ್ತಿದೆ. ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತಿದ್ದೇವೆ. ದೇಶವನ್ನು ಆಳಲು ಸಮರ್ಥ ಹಾಗೂ ಪ್ರಭಾವಿ ನಾಯಕತ್ವ ಬೇಕಾಗಿದ್ದು, ಅಂಥ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಅವರ ಕೈ ಬಲಪಡಿಸಲು ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನಗೆ ಮತ ನೀಡಬೇಕು. 

ಪ್ರ

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಕೊಪ್ಪಳ ಜಿಲ್ಲೆಯಲ್ಲಿ ಧಾರ್ಮಿಕತೆಗೆ ಸಂಬಂಧಿಸಿದ ಸಾಕಷ್ಟು ಸ್ಥಳಗಳಿವೆ. ಅವುಗಳನ್ನು ಅಭಿವೃದ್ಧಿ ಮಾಡಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವೆ. ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿ ಕೂಡ ನಮ್ಮ ಪಕ್ಷದ ಕನಸು. ಕ್ಷೇತ್ರದ ಎಲ್ಲ ಐತಿಹಾಸಿಕ ಸ್ಥಳಗಳಿಗೆ ಬಸ್‌, ರೈಲು ಮತ್ತು ವಿಮಾನದ ಸಂಪರ್ಕ ಕಲ್ಪಿಸುವ ಗುರಿಯಿದೆ. ಉತ್ತರ ಕರ್ನಾಟಕದ ಈ ಜಿಲ್ಲೆಗೆ ಹಿಂದುಳಿದಿದೆ ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ. ಕೃಷಿ, ತೋಟಗಾರಿಕೆ, ಕೈಗಾರಿಕೆಗಳ ಇನ್ನಷ್ಟು ಬೆಳವಣಿಗೆಗೆ ಹೇರಳ ಅವಕಾಶಗಳಿದ್ದು, ಅವುಗಳನ್ನು ಅಭಿವೃದ್ಧಿ ಮಾಡುವ ಕನಸು ಹೊಂದಿದ್ದೇನೆ.

ಪ್ರ

ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದು ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲವೇ?

ಬಿಜೆಪಿಯು ಕಾರ್ಯಕರ್ತರ ಆಧಾರಿತ ಪಕ್ಷವಾಗಿದ್ದು, ನರೇಂದ್ರ ಮೋದಿ ಅವರನ್ನು ವಿಶ್ವಗುರುವಿನ ಸ್ಥಾನದಲ್ಲಿ ನೋಡುತ್ತಿದ್ದಾರೆ. ಹೊಸ ಅಭ್ಯರ್ಥಿಗಳಿಗೆ ಅವಕಾಶ ಕೊಡುವ ಮೂಲಕ ಪಕ್ಷ ನಿರಂತರವಾಗಿ ಪ್ರಯೋಗಗಳನ್ನು ಮಾಡುತ್ತಲೇ ಇದೆ. ಸಂಗಣ್ಣ ಕರಡಿ ಬಿಜೆಪಿಯಲ್ಲಿದ್ದರೂ ಎದುರಾಳಿ ಕಾಂಗ್ರೆಸ್‌ನ ಹಿಟ್ನಾಳ ಕುಟುಂಬದ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಒಂದು ವೇಳೆ ಹೊಂದಾಣಿಕೆ ರಾಜಕಾರಣ ಮಾಡಿರದಿದ್ದರೆ ಅವರು ಇಷ್ಟು ಬೇಗನೆ ಹೋಗಿ ವೈರಿ ಪಾಳೆಯ ಸೇರಿಕೊಳ್ಳುತ್ತಿರಲಿಲ್ಲ. ನನಗೂ ವೈರಿಯಾಗುತ್ತಿರಲಿಲ್ಲ.

ಪ್ರ

ನಿಮ್ಮ ಗೆಲುವಿಗೆ ಯಾವ ಅಂಶ ಶ್ರೀರಕ್ಷೆಯಾಗಲಿದೆ?

ಅಭ್ಯರ್ಥಿಯಾಗಿದ್ದರೂ ನಾನು ನೆಪ ಮಾತ್ರ. ಪಕ್ಷದ ಕಾರ್ಯಕರ್ತರು ಮತ್ತು ನರೇಂದ್ರ ಮೋದಿ ಅವರೇ ಎಲ್ಲ.

ಪ್ರ

ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದು, ಅವರ ಮತಗಳಿಕೆಗೆ ನಿಮ್ಮ ಯೋಜನೆಗಳೇನು?

ಮಹಿಳೆಯರ ಶ್ರೇಯೋಭಿವೃದ್ಧಿಗೆ ಬಿಜೆಪಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಕಾಂಗ್ರೆಸ್‌ ‘ಗ್ಯಾರಂಟಿ’ ಮುಂದಿಟ್ಟು ಪ್ರಚಾರ ಮಾಡುತ್ತಿದ್ದರೂ ದೇಶದ ವಿಚಾರ ಬಂದಾಗ ಅದು ಪ್ರಯೋಜನವಾಗುವುದಿಲ್ಲ.

ಪ್ರ

ಕೋವಿಡ್‌ ಸಮಯದಲ್ಲಿ ನೀವು ಬಹಳಷ್ಟು ಹಣ ಸುಲಿಗೆ ಮಾಡಿದ್ದೀರಿ ಎಂಬ ಆರೋಪಕ್ಕೆ ಏನು ಹೇಳುತ್ತೀರಿ?

ಹಣ ಮಾಡಬೇಕು ಎನ್ನುವ ದುರಾಸೆ ನನಗಿದ್ದರೆ ವಿದೇಶದಲ್ಲಿ ವ್ಯಾಸಂಗ ಮುಗಿಸಿ ಕೊಪ್ಪಳಕ್ಕೆ ಬರುತ್ತಿರಲಿಲ್ಲ. ದೇಶದ ಮಹಾನಗರಗಳಲ್ಲಿ ದೊಡ್ಡ ಆಸ್ಪತ್ರೆಯಲ್ಲಿ ಸಾಕಷ್ಟು ವೇತನ ಪಡೆಯಬಹುದಿತ್ತು. ಆರೋಗ್ಯ ಸೇವೆ ಉತ್ಕೃಷ್ಟಕ್ಕೆ ಕೊಂಡೊಯ್ಯಬೇಕು ಎನ್ನುವ ಕಾರಣಕ್ಕೆ ಕೊಪ್ಪಳದಲ್ಲಿ ಆಸ್ಪತ್ರೆ ನಿರ್ಮಿಸಿದ್ದೇನೆ. ಕೆಲವರು ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿದ್ದು, ನನ್ನ ಬಳಿ ಚಿಕಿತ್ಸೆ ಪಡೆದವರೇ ಅವರಿಗೆಲ್ಲ ಉತ್ತರ ಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT