ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಆರೋಗ್ಯ ಕ್ಷೇತ್ರ ಸುಧಾರಣೆಗೆ ಮೊದಲ ಆದ್ಯತೆ: ಅಂಜಲಿ ನಿಂಬಾಳ್ಕರ್

Published 30 ಏಪ್ರಿಲ್ 2024, 5:18 IST
Last Updated 30 ಏಪ್ರಿಲ್ 2024, 5:18 IST
ಅಕ್ಷರ ಗಾತ್ರ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಅವರು ಈ ಹಿಂದೆ ಖಾನಾಪುರದ ಶಾಸಕಿಯಾಗಿದ್ದರು. ಮಾರ್ಗರೇಟ್ ಆಳ್ವಾ ಬಳಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎರಡನೇ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ಇವರದ್ದು. ಡಾ.ಅಂಜಲಿ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
ಪ್ರ

ಮತದಾರರು ನಿಮಗೆ ಯಾಕೆ ಮತ ಚಲಾಯಿಸಬೇಕು?

ಉತ್ತರ ಕನ್ನಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತೇನೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸಂಸತ್‍ನಲ್ಲಿ ಧ್ವನಿಯಾಗಲು ಮತ ನೀಡುವಂತೆ ಮತದಾರರಲ್ಲಿ ಕೇಳಿಕೊಳ್ಳುತ್ತೇನೆ.

ಪ್ರ

ಚುನಾವಣಾ ಕಣ ಹೇಗಿದೆ? ನಿರೀಕ್ಷೆಯಂತೆಯೇ ಎಲ್ಲವೂ ನಡೆಯುತ್ತಿದೆಯೇ?

ಇಡೀ ಜಿಲ್ಲೆಯಲ್ಲಿ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ, ಸಚಿವರಾದ ಸತೀಶ್ ಜಾರಕಿಹೊಳಿ, ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ಬಾಬಾ ಸಾಹೇಬ ಪಾಟೀಲ್, ಮಾಜಿ ಶಾಸಕರಾದ ಶಾರದಾ ಶೆಟ್ಟಿ, ವಿ.ಎಸ್.ಪಾಟೀಲ್, ಮುಖಂಡರಾದ ನಿವೇದಿತ್ ಆಳ್ವಾ, ವಿವೇಕ್ ಹೆಬ್ಬಾರ್ ಎಲ್ಲರೂ ಒಗ್ಗಟ್ಟಾಗಿ ನನ್ನ ಗೆಲುವಿಗಾಗಿ ದುಡಿಯುತ್ತಿದ್ದಾರೆ. ನಿರೀಕ್ಷೆಗಿಂತ ಮೀರಿ ಜನರು ಸ್ಪಂದಿಸುತ್ತಿದ್ದು ಈ ಬಾರಿ ನೂರಕ್ಕೆ ನೂರರಷ್ಟು, ಗೆಲ್ಲಲಿದ್ದೇವೆ.

ಪ್ರ

ನೀವು ಈವರೆಗೆ ಕೊಟ್ಟ ಭರವಸೆಗಳು ಮತ್ತು ಮುಂದಿನ ಯೋಜನೆಗಳು ಏನು?

ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಗಳನ್ನು ನೀಡಿದ್ದೇನೆ. ಜಿಲ್ಲೆಯಲ್ಲಿ ಕೇಂದ್ರದ ಯೋಜನೆಗಳಿರುವುದರಿಂದ ಏಮ್ಸ್ ಮಾದರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಹಾಲಕ್ಕಿ, ಕುಣಬಿ ಸೇರಿದಂತೆ ಬುಡಕಟ್ಟು ಕೆಲ ಸಮುದಾಯಗಳನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸುವ, ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತುವ, ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಪರಿಸರ ಸ್ನೇಹಿ ಕೈಗಾರಿಕೆಗಳನ್ನು ತಂದು ಉದ್ಯೋಗ ಸೃಷ್ಟಿಸುವ, ಹುಬ್ಬಳ್ಳಿ–ಅಂಕೋಲಾ, ಶಿರಸಿ- ತಾಳಗುಪ್ಪ, ಶಿರಸಿ-ಹಾವೇರಿ ನಡುವಿನ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸಂಸತ್‍ನಲ್ಲಿ ಧ್ವನಿಯಾಗುವುದು ಸೇರಿದಂತೆ ಹಲವು ಭರವಸೆ ನೀಡಿದ್ದೇನೆ. ಕೊಟ್ಟ ಮಾತಿನಂತೆ ನಡೆದು ಕೊಳ್ಳುವ ವ್ಯಕ್ತಿತ್ವ ನನ್ನದು.

ಪ್ರ

ಯಾವುದೆಲ್ಲ ಭರವಸೆ ಈಡೇರಿಸಿದ್ದೀರಿ ಮತ್ತು ಜನರ ಬೇಡಿಕೆಗೆ ಸ್ಪಂದಿಸಿದ್ದೀರಿ?

ಜಿಲ್ಲೆಯ ಜನರಿಗೆ ನನ್ನ ಭರವಸೆಯ ಪ್ರಣಾಳಿಕೆಯನ್ನೇ ನೀಡಿದ್ದೇನೆ. ಈ ಹಿಂದೆ ಶಾಸಕಿಯಾಗಿದ್ದಾಗ ಖಾನಾಪುರದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ, ನೂರಾರು ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ.

ಪ್ರ

ರಾಜಕಾರಣದಲ್ಲಿನ ಸುದೀರ್ಘ ಅನುಭವದಲ್ಲಿ ಈಗಿನ ಚುನಾವಣೆ ಹೇಗೆ ಅನ್ನಿಸುತ್ತಿದೆ?

ಜಿಲ್ಲೆಯ ಬಹುಸಂಖ್ಯಾತರು ಬದಲಾವಣೆ ಬಯಸಿ ನನಗೆ ಬೆಂಬಲಕ್ಕೆ ನಿಂತಿದ್ದಾರೆ. ಅಭಿವೃದ್ಧಿಗಾಗಿ ಚುನಾವಣೆ ನಡೆಯುತ್ತಿದ್ದು ಜನರು ಅಭಿವೃದ್ಧಿ ಬಯಸಿ ನನಗೆ ಮತ ಹಾಕಲಿದ್ದಾರೆ. ಒಮ್ಮೆ ಶಾಸಕಿಯಾದ ಅನುಭವವಿದೆ. ಕಾಂಗ್ರೆಸ್ ಪಕ್ಷದಲ್ಲಿನ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಜನರ ಬೇಡಿಕೆಗಳನ್ನು ಈಡೇರಿಸಿ ನೆಮ್ಮದಿಯಿಂದ ಬದುಕುವಂತೆ ಮಾಡಲು ಹೊರಟಿದ್ದರೆ ಬಿಜೆಪಿ ಕೇವಲ ಧರ್ಮ, ಇನ್ನಿತರ ಕಾರಣ ನೀಡಿ ಚುನಾವಣೆ ಎದುರಿಸುತ್ತಿದೆ. ನಾವು ನೀಡಿದ ಗ್ಯಾರಂಟಿ ಯೋಜನೆಯಿಂದ ಜನರು ನೆಮ್ಮದಿಯಿಂದ ಇದ್ದಾರೆ.

ಪ್ರ

ಕ್ಷೇತ್ರವು ಇನ್ನೂ ಯಾವುದೆಲ್ಲ ರೀತಿ ಅಭಿವೃದ್ಧಿ ಆಗಬೇಕಿದೆ?

ಕ್ಷೇತ್ರದಲ್ಲಿ ಸುತ್ತಾಡಿದಾಗ ಹಲವು ಸಮಸ್ಯೆ ಗಮನಕ್ಕೆ ಬಂದಿದೆ. ಜನರು ಆಸ್ಪತ್ರೆ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಅಗತ್ಯವಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು ಅದನ್ನ ಹೋಗಲಾಡಿಸಲು ಪರಿಸರ ಸ್ನೇಹಿ ಕೈಗಾರಿಕೆ, ಪ್ರವಾಸೋದ್ಯಮ ಬೆಳವಣಿಗೆ ಮಾಡಬೇಕಾಗಿದೆ.

ಪ್ರ

ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ, ನಿಮ್ಮ ಮೊದಲ ಆದ್ಯತೆ ಏನಿರಲಿದೆ?

ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ. ಗೆದ್ದರೇ ನನ್ನ ಮೊದಲ ಆದ್ಯತೆಯೇ ಆಸ್ಪತ್ರೆ ನಿರ್ಮಾಣ. ಜನರ ಪ್ರಾಣ ಉಳಿಸಲು ದುಡಿದರೆ ಎಲ್ಲರೂ ಸರಿಯಾಗಲಿದೆ. ಕೊಟ್ಟ ಮಾತಿನಂತೆ ವೈದ್ಯೆಯಾದ ನಾನು ಆಸ್ಪತ್ರೆ ನಿರ್ಮಿಸಲು ಹಗಲಿರುಳು ಶ್ರಮಿಸುತ್ತೇನೆ. ಅತಿಕ್ರಮಣದಾರರ ಪರ ಹೋರಾಟ ನಡೆಸಲಿದ್ದೇನೆ. ಹಾಲಕ್ಕಿ ಹಾಗೂ ಕುಣಬಿ ಸಮುದಾಯಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಅತೃಪ್ತಿ ಎಲ್ಲ ಪಕ್ಷದಲ್ಲೂ ಸಹಜ
ಪ್ರ

ಪಕ್ಷದೊಳಗಿನ ಅತೃಪ್ತ ಆಕಾಂಕ್ಷಿಗಳನ್ನು ಮುನಿಸಿಕೊಂಡವರನ್ನು ಹೇಗೆ ಸಮಾಧಾನ ಮಾಡುವಿರಿ?

ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷ. ಇಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶ ಇದೆ. ಟಿಕೆಟ್ ಕೇಳಿದವರಲ್ಲಿ ಕೊನೆಯದಾಗಿ ಒಬ್ಬರನ್ನ ಆಯ್ಕೆಮಾಡುತ್ತಾರೆ. ಇದೇ ರೀತಿ ಬೇರೆ ಪಕ್ಷದಲ್ಲೂ ನಡೆಯುತ್ತದೆ. ಇಲ್ಲಿ ಅತೃಪ್ತಿ ಅಸಮಾಧಾನ ಮುನಿಸು ಎನ್ನುವುದಿಲ್ಲ. ಟಿಕೆಟ್ ಬಯಸಿದ್ದ ಎಲ್ಲರೂ ಒಗ್ಗಟ್ಟಾಗಿ ನನ್ನ ಜತೆಯೇ ಗೆಲುವಿಗಾಗಿ ದುಡಿಯುತ್ತಿದ್ದಾರೆ.

ಹೊರಗಿನವಳೆಂಬುದು ವಿರೋಧಿಗಳ ವ್ಯರ್ಥ ಟೀಕೆ
ಪ್ರ

ಉತ್ತರ ಕನ್ನಡ ಕ್ಷೇತ್ರದವರಾದರೂ ಜಿಲ್ಲೆಗೆ ಹೊಸಬರು ಎಂಬುದು ವಿರೋಧಿಗಳ ಟೀಕೆ. ಇದನ್ನು ಹೇಗೆ ನಿಭಾಯಿಸುತ್ತೀರಿ?

ಈ ಪ್ರಶ್ನೆಯನ್ನ ಬಿಜೆಪಿಗರು ಅನವಶ್ಯಕವಾಗಿ ಎತ್ತಿದ್ದಾರೆ. ನಾನು ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಖಾನಾಪುರ ಉತ್ತರ ಕನ್ನಡ ಕ್ಷೇತ್ರಕ್ಕೆ ಬರುವ ತಾಲ್ಲೂಕು. ನಾನು ಕ್ಷೇತ್ರದವಳೇ ಆದರೂ ಹೊರಗಿನವರು ಎಂದು ಬಿಂಬಿಸುವ ಪ್ರಯತ್ನ ಮಾಡಿ ವಿಫಲವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜನರು ತಮ್ಮ ಮನೆ ಮಗಳಂತೆ ನನ್ನನ್ನು ನೋಡುತ್ತಿದ್ದಾರೆ. ಈ ರೀತಿ ವಿರೋಧ ಮಾಡುವ ಬಿಜೆಪಿಗರು ಖಾನಾಪುರಕ್ಕೆ ತಮ್ಮ ಮತ ಕೇಳಿಕೊಂಡು ಬರಬೇಕಲ್ಲವೇ? ಅವರು ಮತ ಹಾಕದೇ ಇದ್ದರೇ ಇಷ್ಟು ವರ್ಷ ಬಿಜೆಪಿ ಗೆಲ್ಲುತ್ತಿತ್ತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT