ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ‘ಭದ್ರಕೋಟೆ’ಗೆ ಬಿಜೆಪಿ ಲಗ್ಗೆ

Published 16 ಏಪ್ರಿಲ್ 2024, 5:49 IST
Last Updated 16 ಏಪ್ರಿಲ್ 2024, 5:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಕ್ಷೇತ್ರಕ್ಕೆ ಇದುವರೆಗೆ ನಡೆದ ಚುನಾವಣೆಗಳಲ್ಲಿ 11 ಬಾರಿ ಗೆದ್ದಿರುವ ಕಾಂಗ್ರೆಸ್‌ ‘ಭದ್ರಕೋಟೆ’ಗೆ ಬಿಜೆಪಿ ಲಗ್ಗೆ ಇಟ್ಟಿದೆ. ‘ಕೈ’ ಗೆಲುವಿನ ನಾಗಾಲೋಟಕ್ಕೆ ‘ಕಮಲ’ ಸವಾಲಾಗಿದ್ದು, ವಿಜಯಮಾಲೆ ಧರಿಸುವ ತವಕದಲ್ಲಿ ಎರಡು ಪಕ್ಷಗಳು ಮತದಾರರ ಮನೆ ಬಾಗಿಲು ತಟ್ಟುತ್ತಿವೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ 1952ರಿಂದ 2019ರವರೆಗೆ 17 ಚುನಾವಣೆಗಳು ನಡೆದಿವೆ. ಕ್ಷೇತ್ರ ಕಾಂಗ್ರೆಸ್‌ಗೆ ಹೆಚ್ಚು ಬಾರಿ ಒಲಿದಿದ್ದು, ಬಿಜೆಪಿ ಎರಡು ಬಾರಿ ಹಾಗೂ ಪಿಎಸ್‌ಪಿ, ಸ್ವತಂತ್ರ ಪಕ್ಷ, ಜನತಾ ದಳ ಮತ್ತು ಜೆಡಿಯು ತಲಾ ಒಂದು ಬಾರಿ ಕ್ಷೇತ್ರ ಪ್ರತಿನಿಧಿಸಿವೆ. 18ನೇ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವ ಪಕ್ಷದತ್ತ ಒಲವು ತೋರಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಸ್ವಾತಂತ್ರ್ಯಾನಂತರ ನಡೆದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ನಾಯಕ ಎಸ್‌.ನಿಜಲಿಂಗಪ್ಪ 1.26 ಲಕ್ಷ ಮತಗಳಿಸಿ ವಿಜೇತರಾಗಿದ್ದರು. 1957ರಲ್ಲಿ ನಿಜಲಿಂಗಪ್ಪ ಅವರು ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದರಿಂದ ಮತದಾರರು, ಭಾರತೀಯ ಪ್ರಜಾ ಸೋಶಿಯಲಿಸ್ಟ್ ಪಕ್ಷದ (ಪಿಎಸ್‌ಪಿ) ಜೆ.ಎಂ. ಮಹ್ಮದ್ ಇಮಾಮ್ ಅವರನ್ನು ಸಂಸತ್ತಿಗೆ ಕಳುಹಿಸಿದರು. ನಿಜಲಿಂಗಪ್ಪ ಬದಲಾಗಿ ಕಣಕ್ಕೆ ಇಳಿದಿದ್ದ ರಂಗನಾಥರಾವ್‌ 11 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.

1962ರಲ್ಲಿ ಅಭ್ಯರ್ಥಿ ಬದಲಿಸಿದ ಕಾಂಗ್ರೆಸ್‌, ಎಸ್. ವೀರಬಸಪ್ಪ ಅವರನ್ನು ಕಣಕ್ಕೆ ಇಳಿಸಿ ಕ್ಷೇತ್ರವನ್ನು ಕೈವಶ ಮಾಡಿಕೊಂಡಿತು. 1967ರಲ್ಲಿ ನಡೆದ ಚುನಾವಣೆಯಲ್ಲಿ ಎಸ್‌.ವೀರಬಸಪ್ಪ ಅವರಿಗೆ ಮತದಾರರು ಮಣೆ ಹಾಕಲಿಲ್ಲ. ಸ್ವತಂತ್ರ ಪಕ್ಷದ (ಎಸ್‌ಡಬ್ಲುಎ) ಉಮೇದುವಾರರಾಗಿ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದ ಜೆ.ಎಂ.ಮಹ್ಮದ್‌ ಇಮಾಮ್‌ ಅವರಿಗೆ ಅದೃಷ್ಟ ಒಲಿದಿತ್ತು. 31,000 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಪರಾಭವಗೊಂಡರು.

ಕಾಂಗ್ರೆಸ್‌ ಹಿಡಿತಕ್ಕೆ ಕ್ಷೇತ್ರ:

1971ರ ಬಳಿಕ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಸಂಪೂರ್ಣ ಹಿಡಿತ ಸಾಧಿಸಿತು. 1991ರವರೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಮತದಾರರು ‘ಕೈ’ ಅಭ್ಯರ್ಥಿಗಳಿಗೇ ಮಣೆ ಹಾಕಿದರು. ಈ ವಿಜಯಯಾತ್ರೆ ಕೊಂಡಜ್ಜಿ ಬಸಪ್ಪ ಅವರಿಂದ ಆರಂಭವಾಯಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕೊಂಡಜ್ಜಿ ಬಸಪ್ಪ, 1.67 ಲಕ್ಷ ಮತಗಳ ಅಂತರದಿಂದ ಮಹ್ಮದ್ ಇಮಾಮ್ ಅವರನ್ನು ಪರಾಭವಗೊಳಿಸಿದರು. ಭಾರಿ ಅಂತರದ ಈ ಗೆಲುವು ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ದಾಖಲಾಗಿದೆ.

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಲು ಹೆಣಗಾಡಿದ್ದ ಕೆ.ಮಲ್ಲಣ್ಣ 1977ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಕ್ಷೇತ್ರಕ್ಕೆ ಕಾಲಿಟ್ಟಾಗ ‘ಕೈ’ ನಾಯಕರು ಅಚ್ಚರಿಗೊಂಡಿದ್ದರು. ಶಿರಾ ತಾಲ್ಲೂಕಿನ ಕೆ.ಮಲ್ಲಣ್ಣ ಶೇ 62ರಷ್ಟು ಮತ ಪಡೆದು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಎಚ್.ಸಿ. ಬೋರಯ್ಯ ವಿರುದ್ಧ ವಿಜಯ ಸಾಧಿಸಿದ್ದರು. 1980ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಪುನರಾಯ್ಕೆಯಾದರು. ಸತತ ಎರಡು ಬಾರಿ ಗೆಲುವು ಸಾಧಿಸಿ ಹೊಸ ಮೈಲುಗಲ್ಲು ಸೃಷ್ಟಿಸಿದರು.

1984ರ ಹೊತ್ತಿಗೆ ರಾಜ್ಯದಲ್ಲಿ ಜನತಾ ಪರಿವಾರದ ಶಕ್ತಿ ಹೆಚ್ಚಾಗಿತ್ತು. ಪ್ರಭಾವಿ ನಾಯಕ ಬಿ.ಎಲ್‌. ಗೌಡ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಹುರಿಯಾಳು ಕೆ.ಎಚ್. ರಂಗನಾಥ್ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಶಿರಾ ತಾಲ್ಲೂಕಿನ ಸಿ.ಪಿ. ಮೂಡಲಗಿರಿಯಪ್ಪ 1989ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಂಸತ್ತಿಗೆ ಆಯ್ಕೆಯಾದರು. 1991ರ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ನಾಯಕ ಎಲ್‌.ಜಿ. ಹಾವನೂರ ಅವರನ್ನು ಸೋಲಿಸಿ ಸಿ.ಪಿ.ಮೂಡಲಗಿರಿಯಪ್ಪ ಪುನರಾಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT