ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಪರಿಚಯ: ಸುಲ್ತಾನ್‌ಪುರ (ಉತ್ತರ ಪ್ರದೇಶ)

Published 3 ಮೇ 2024, 0:46 IST
Last Updated 3 ಮೇ 2024, 0:46 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಗೋಮತಿ ನದಿ ದಡದಲ್ಲಿರುವ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಘಟಾನುಘಟಿಗಳ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಬಿಜೆಪಿಯು ಈ ಬಾರಿಯೂ ಮೇನಕಾ ಗಾಂಧಿ ಅವರನ್ನೇ ಕಣಕ್ಕಿಳಿಸಿದರೆ, ಸಮಾಜವಾದಿ ಪಕ್ಷವು (ಎಸ್‌.ಪಿ) ರಾಮ್‌ ಭೂವಾಲ್‌ ನಿಶಾದ್‌ ಅವರನ್ನು ಸ್ಪರ್ಧೆಗಿಳಿಸಿದೆ. ಬಿಎಸ್‌ಪಿಯು ಉದಯ್‌ ರಾಜ್‌ ವರ್ಮಾ ಅವರನ್ನು ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಮೇನಕಾ ಗಾಂಧಿ ಅವರು 14,526 ಮತಗಳ ಅಂತರದಿಂದ ಬಿಎಸ್‌ಪಿಯ ಚಂದ್ರ ಭದ್ರ ಸಿಂಗ್‌ ಅವರನ್ನು ಪರಾಭವಗೊಳಿಸಿದ್ದರು. ಈ ಬಾರಿ ಎಸ್‌ಪಿಯು ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದು ನಿಶಾದ್‌ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಎಸ್‌ಪಿಯು ಈ ಕ್ಷೇತ್ರಕ್ಕೆ ಆರಂಭದಲ್ಲಿ ಭೀಮ್‌ ನಿಶಾದ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಬಳಿಕ ಅವರನ್ನು ಬದಲಿಸಿ, ರಾಮ್‌ ಭೂವಾಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಿತ್ತು. ಈ ಬಾರಿ ಬಿಎಸ್‌ಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಎಸ್‌ಪಿಯ ಮತಗಳು ವಿಭಜನೆಯಾಗುವ ಸಾಧ್ಯತೆ ಇದ್ದು, ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯ. ನಿಶಾದ್‌ ಅವರು ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಜಕಾರಣಿ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಮೇನಕಾ ಅವರು ಕೇಂದ್ರ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದವರು. ಈ ಬಾರಿ ಇಲ್ಲಿನ ಮತದಾರರು ಯಾರ ಪರ ನಿಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT