ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಕ ಲೋಕಸಭಾ ಕ್ಷೇತ್ರ | ಕೆನರಾ ಕ್ಷೇತ್ರದಲ್ಲಿದೆ 160 ನೆಟ್‍ವರ್ಕ್ ರಹಿತ ಮತಗಟ್ಟೆ

ಮತದಾನದಲ್ಲಿ ಗೊಂದಲ ಎದುರಾದರೆ ಸಂವಹನಕ್ಕೆ ಸಮಸ್ಯೆ
Published 30 ಏಪ್ರಿಲ್ 2024, 4:44 IST
Last Updated 30 ಏಪ್ರಿಲ್ 2024, 4:44 IST
ಅಕ್ಷರ ಗಾತ್ರ

ಕಾರವಾರ: ತಂತ್ರಜ್ಞಾನ ಬೆಳೆದಂತೆ ಚುನಾವಣೆ ಪ್ರಕ್ರಿಯೆಯಲ್ಲೂ ಸುಧಾರಣೆ ಕಂಡುಬರುತ್ತಿದೆ. ಮತದಾನ ನಡೆಯುವ ವೇಳೆ ಒಟ್ಟು ಮತಗಟ್ಟೆಗಳ ಪೈಕಿ ಅರ್ಧದಷ್ಟು ಮತಗಟ್ಟೆಗಳಿಂದ ನೇರಪ್ರಸಾರದ ಮೂಲಕ ಅಧಿಕಾರಿಗಳು ನಿಗಾ ಇಡುತ್ತಿದ್ದಾರೆ. ಆದರೆ, ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ 160 ಮತಗಟ್ಟೆಗಳು ಇಂದಿಗೂ ನೆಟ್‍ವರ್ಕ್ ಕಾಣದ ಸ್ಥಿತಿಯಲ್ಲಿವೆ.

ಗುಡ್ಡಗಾಡು ಪ್ರದೇಶಗಳೇ ಹೆಚ್ಚಿರುವ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಶೇ.80 ರಷ್ಟು ಅರಣ್ಯ ಪ್ರದೇಶವಿದೆ. ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಖಾನಾಪುರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದಟ್ಟ ಅರಣ್ಯದ ನಡುವೆ, ಗುಡ್ಡದ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ಮತಗಟ್ಟೆಗಳಿವೆ. ಇಂತಹ ಸ್ಥಳಗಳಲ್ಲಿ ಇಂದಿಗೂ ಮೊಬೈಲ್ ನೆಟ್‍ವರ್ಕ್ ಸೇವೆ ಇಲ್ಲದಂತಾಗಿದೆ.

ಕ್ಷೇತ್ರದಲ್ಲಿ ಒಟ್ಟು 1,977 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಈ ಪೈಕಿ 16 ಮತಗಟ್ಟೆಗಳಲ್ಲಿ ಮಾತ್ರ ಲ್ಯಾಂಡ್‍ಲೈನ್ ಸಂಪರ್ಕವಿದೆ. 160 ಮತಗಟ್ಟೆಗಳಲ್ಲಿ ಯಾವುದೇ ನೆಟ್‍ವರ್ಕ್ ಲಭ್ಯವಿಲ್ಲ. ಇಂತಹ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಕಂಡುಬಂದರೆ, ಮತದಾನದಲ್ಲಿ ಗೊಂದಲಗಳು ಉಂಟಾದರೆ ತಕ್ಷಣ ಮಾಹಿತಿ ನೀಡಲು ಸಿಬ್ಬಂದಿ ಸಮಸ್ಯೆ ಎದುರಿಸುವ ಸ್ಥಿತಿ ಎದುರಾಗಬಹುದು ಎಂಬುದು ಸಿಬ್ಬಂದಿಯ ದೂರು.

‘ಮೊಬೈಲ್ ನೆಟ್‍ವರ್ಕ್ ಸೇರಿದಂತೆ ಯಾವುದೇ ಸಂಪರ್ಕ ಮಾಧ್ಯಮ ಇಲ್ಲದ ಮತಗಟ್ಟೆಗಳನ್ನು ನೆರಳು ಮತಗಟ್ಟೆ (ಶ್ಯಾಡೋ ಬೂತ್) ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಸಮಸ್ಯೆ ಎದುರಾದರೆ ತಕ್ಷಣ ಮಾಹಿತಿಯನ್ನು ಅಧಿಕಾರಿಗಳಿಗೆ ರವಾನಿಸಲು ರನ್ನರ್ (ಹೆಚ್ಚುವರಿ ಸಿಬ್ಬಂದಿ) ನೇಮಕ ಮಾಡಲಾಗುತ್ತದೆ. ಅವರು ನೆಟ್‍ವರ್ಕ್ ಇರುವ ಜಾಗಕ್ಕೆ ಬಂದು ಹಿರಿಯ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ವಿವರಿಸುತ್ತಾರೆ. ಬದಲಿ ಯಂತ್ರಗಳ ಅಗತ್ಯವಿದ್ದರೆ ಸಮೀಪದಲ್ಲಿರುವ ಇನ್ನೊಂದು ಮತಗಟ್ಟೆಯಿಂದ ಯಂತ್ರ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ’ ದು ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರತಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ಪೈಕಿ ಅರ್ಧದಷ್ಟು ಮತಗಟ್ಟೆಯಲ್ಲಿ ಸಿಸಿಟಿವಿ ಮೂಲಕ ಮತದಾನ ಚಟುವಟಿಕೆಯ ವೆಬ್ ಟೆಲಿಕಾಸ್ಟಿಂಗ್ ನಡೆಯುತ್ತದೆ. ನೆರಳಿನ ಮತಗಟ್ಟೆಗಳಲ್ಲಿ ಮತದಾನ ನಡೆಯುವ ಪ್ರಕ್ರಿಯೆಗಳನ್ನು ವಿಡಿಯೊ ಚಿತ್ರೀಕರಣ ಮಾಡಿಟ್ಟುಕೊಳ್ಳಲಾಗುತ್ತದೆ. ಅಲ್ಲದೇ, ಇಲ್ಲಿ ನಿಗಾ ಇಡಲು ಮೈಕ್ರೋ ಆಬ್ಸರ್ವರ್ ನೇಮಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 180 ರಷ್ಟು ಮೈಕ್ರೋ ಆಬ್ಸರ್ವರ್ ಗಳನ್ನು ನೇಮಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ನೆಟ್‍ವರ್ಕ್ ಇಲ್ಲದ ಮತಗಟ್ಟೆಗಳಲ್ಲಿ ಸಂವಹನಕ್ಕೆ ಸಮಸ್ಯೆಯಾಗದಂತೆ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದೆ. ಗೊಂದಲಕ್ಕೆ ಆಸ್ಪದ ನೀಡದಂತೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.
- ಗಂಗೂಬಾಯಿ ಮಾನಕರ ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT