ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಪರಿಚಯ | ರಾಯಚೂರು: ಸಂಸತ್ತಿನಲ್ಲಿ ಮೌನ, ಅಭಿವೃದ್ಧಿ ಗೌಣ

ಭತ್ತ-ಚಿನ್ನ ಹಾಗೂ ವಿದ್ಯುತ್ ನೀಡುವ ಹೆಗ್ಗಳಿಕೆಯ ಕ್ಷೇತ್ರ
Published 12 ಏಪ್ರಿಲ್ 2024, 5:37 IST
Last Updated 12 ಏಪ್ರಿಲ್ 2024, 5:37 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರವು ರಾಯಚೂರು ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಎಡೆದೊರೆ ಹಾಗೂ ಸಗರ ನಾಡಿನ ದೊರೆಗಳು ಆಳಿದ ಈ ಪ್ರದೇಶದಲ್ಲಿ ತುಂಗಭದ್ರಾ, ಕೃಷ್ಣಾ, ಭೀಮಾ ನದಿಗಳ ಸಂಗಮವಿದೆ. ದೇಶಕ್ಕೆ ಪ್ರಮುಖವಾಗಿ ಭತ್ತ-ಚಿನ್ನ ಹಾಗೂ ವಿದ್ಯುತ್ ನೀಡುವ ಹೆಗ್ಗಳಿಕೆಯ ಕ್ಷೇತ್ರವಾಗಿದೆ.

ಸಂಪದ್ಭರಿತ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಸುರಪುರ, ಗುರುಗುಂಟಾ, ಗುಂತಗೋಳ ಸಂಸ್ಥಾನ, ವಿಜಯಪುರದ ಆದಿಲ್‌ಷಾಹಿಗಳು, ಹೈದರಾಬಾದ್ ನಿಜಾಮರು ಕಾದಾಡಿದ ನೆಲವಿದು. ಬಹಮನಿ ಸುಲ್ತಾನರು, ವಿಜಯಪುರದ ಆದಿಲ್‌ಷಾಹಿಗಳು, ಹೈದರಾಬಾದ್ ನಿಜಾಮರ ಕಾದಾಡಿದ ನೆಲ ಇದಾಗಿದೆ. ಸ್ವಾತಂತ್ರ್ಯದ ನಂತರ ನಾಯಕರ ದರ್ಬಾರು ಮುಂದುವರಿದಿದೆ.

2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕ್ಷೇತ್ರದ ಭೌಗೋಳಿಕ, ರಾಜಕೀಯ ಮತ್ತು ಸಾಮಾಜಿಕ ನಕ್ಷೆ ಬದಲಾಗಿದೆ. ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರ ಪರಿಶಿಷ್ಟ ಪಂಗಡ (ವಾಲ್ಮೀಕಿ ನಾಯಕ), ಒಂದು ಪರಿಶಿಷ್ಟ ಜಾತಿ, ಉಳಿದ ಮೂರು ಸಾಮಾನ್ಯ ಕ್ಷೇತ್ರಗಳಾಗಿವೆ.

ಹಲವು ರಾಜಮನೆತನಗಳು ಆಳಿಹೋದ ರಾಯಚೂರು ಜಿಲ್ಲೆ ಇಷ್ಟೊತ್ತಿಗೆ ಪ್ರಗತಿ ಪಥದತ್ತ ಸಾಗಬೇಕಿತ್ತು. ಹಳೆಯ ಜಿಲ್ಲೆಯಾದರೂ ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಕಳಚಿಕೊಳ್ಳಲು ಸಾಧ್ಯವಾಗಿಲ್ಲ.

1990ರ ದಶಕದಲ್ಲಿ ರಾಯಚೂರು ಕ್ಷೇತ್ರದಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರು ತಮ್ಮ ಹಕ್ಕಿಗಾಗಿ ನಡೆಸಿದ ಹೋರಾಟ ಉತ್ತುಂಗದಲ್ಲಿ ಇತ್ತು. ಆಡಳಿತ ವರ್ಗ ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದ ಕಾರಣ ನಕ್ಸಲ್ ಚಳವಳಿಗೆ ನಾಂದಿ ಹಾಡಿತ್ತು. ಪ್ರಸ್ತುತ ನಕ್ಸಲ್ ಚಟುವಟಿಕೆ ಇಲ್ಲದೇ ಹೋದರೂ ಆಡಳಿತ ವರ್ಗದ ವಿರುದ್ಧ ಆಕ್ರೋಶ ಇದ್ದೇ ಇದೆ.

ರಾಜ್ಯದಲ್ಲಿ ಐಐಟಿ ಸ್ಥಾಪನೆ ಬಗ್ಗೆ ಚರ್ಚೆಗಳು ಶುರುವಾದಾಗ ರಾಯಚೂರಿನ ಹೆಸರು ಕೇಳಿಬಂದಿತ್ತು. ಆದರೆ, ಅದು ಧಾರವಾಡ ಜಿಲ್ಲೆಯ ಪಾಲಾಯಿತು. ಅತಿ ಹೆಚ್ಚು ಹತ್ತಿ ಉತ್ಪಾದನೆ ಇಲ್ಲಿದೆ. ಜಿನ್ನಿಂಗ್ ಫ್ಯಾಕ್ಟರಿ ಇದ್ದರೂ ಬೃಹತ್‌ ಟೆಕ್ಸ್‌ಟೈಲ್‌ ಪಾರ್ಕ್ ಕಲಬುರಗಿ ಪಾಲಾಗಿದೆ. ಕೊನೆಯ ಪಕ್ಷ ಏಮ್ಸ್‌ ಆದರೂ ರಾಯಚೂರಿಗೆ ದೊರೆಯಲಿ ಎಂದು ಎರಡು ವರ್ಷಗಳಿಂದ ಜಿಲ್ಲೆಯ ಜನ ಧರಣಿ ನಡೆಸುತ್ತಿದ್ದರೂ ಆಳುವವರು ಗಂಭೀರವಾಗಿಲ್ಲ.

ಇವತ್ತಿಗೂ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ರಾಯಚೂರನ್ನು ಮಹತ್ವಾಕಾಂಕ್ಷಿ ಜಿಲ್ಲೆಯ ಪಟ್ಟಿಗೆ ಸೇರಿಸಲಾಗಿದೆ. ಬಿಸಿಲಿನ ಝಳ ಜನರನ್ನು ನಲುಗಿಸಿದೆ. ಅಂತರ್ಜಲದ ಮಟ್ಟ ಕುಸಿದು ಜನರ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಗಳ ಸ್ಥಾಪನೆಯಾಗದ ಕಾರಣ ಉದ್ಯೋಗ ಸೃಷ್ಟಿಯಾಗಿಲ್ಲ. ಜಿಲ್ಲೆಯ ಜನ ಉದ್ಯೋಗ ಅರಿಸಿಕೊಂಡು ಗುಳೆ ಹೋಗುವುದು ತಪ್ಪಿಲ್ಲ. ಬರ ರೈತರ ಬದುಕಿನ ಮೇಲೆ ಬರೆ ಎಳೆದಿದೆ.

ಕಳಪೆ ಕಾಮಗಾರಿ, ವ್ಯಾಪಕ ಭ್ರಷ್ಟಾಚಾರದಿಂದ ನಲುಗಿ ಹೋಗಿದೆ. ಅಭಿವೃದ್ಧಿ ಹಾಗೂ ಪಕ್ಷ ರಾಜಕಾರಣಕ್ಕಿಂತ ಹಣ ಹಾಗೂ ತೋಳ್ಬಲವೇ ರಾಜಕೀಯವನ್ನು ಹಿಡಿತದಲ್ಲಿಟ್ಟುಕೊಂಡು ಬಂದಿದೆ. ವ್ಯಕ್ತಿನಿಷ್ಠೆ, ಒಳ ಒಪ್ಪಂದಗಳ ಡಾವು ಚುನಾವಣೆಯ ಕಾವು ಹೆಚ್ಚಿಸಿವೆ.

***

ಕ್ಷೇತ್ರದಲ್ಲಿ ದೊರೆಗಳದ್ದೇ ಕಾರಬಾರು.

ಕ್ಷೇತ್ರಕ್ಕೆ 17 ಬಾರಿ ಚುನಾವಣೆ ನಡೆದಿದೆ. ಒಟ್ಟು 13 ಬಾರಿ ಕಾಂಗ್ರೆಸ್‌ ಗೆದ್ದಿದೆ. ಎರಡು ಬಾರಿ ಬಿಜೆಪಿ, ಒಂದು ಬಾರಿ ಜನತಾ ದಳ ಗೆಲುವು ಸಾಧಿಸಿದೆ. 1967ರಲ್ಲಿ ರಾಜಾ ವೆಂಕಟಪ್ಪ ನಾಯಕ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ 1996ರಲ್ಲಿ ಜನತಾ ದಳ ರಾಜಾ ರಂಗಪ್ಪ ನಾಯಕ ಒಂದೊಂದು ಬಾರಿ ಗೆಲುವು ಸಾಧಿಸಿದ್ದಾರೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತುರುಸಿನ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್‌ನ ಬಿ.ವಿ.ನಾಯಕ ಶೇಕಡ 45.78ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಕೆ.ಶಿವನಗೌಡ ನಾಯಕ ಶೇಕಡ 45.53ರಷ್ಟು ಮತ ಪಡೆದು ಸೋತಿದ್ದರು. ಗೆಲವಿನ ಅಂತರ ಕೇವಲ 1,499 ಇತ್ತು.

2019ರಲ್ಲಿ ಬಿಜೆಪಿಯ ರಾಜಾ ಅಮರೇಶ್ವರ ನಾಯ್ಕ ಅವರು ಕಾಂಗ್ರೆಸ್‌ನ ಬಿ.ವಿ.ನಾಯಕ ಅವರನ್ನು 1,17,716 ಮತಗಳ ಅಂತರದಿಂದ ಸೋಲಿಸಿದ್ದರು. ಅಮರೇಶ್ವರ ನಾಯಕ ಶೇ 53.21ರಷ್ಟು ಮತ ಪಡೆದಿದ್ದರೆ, ಬಿ.ವಿ.ನಾಯಕ ಶೇ 42.75ರಷ್ಟು ಮತಗಳನ್ನು ಪಡೆದಿದ್ದರು.

ಕ್ಷೇತ್ರದಿಂದ ಆಯ್ಕೆಯಾದವರು ಸಂಸತ್ತಿನಲ್ಲಿ ಸರಿಯಾಗಿ ಪ್ರತಿನಿಧಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಈ ಬಾರಿಯಾದರೂ ಮತದಾರರೇ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT