ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ | ನಾನಾ, ನೀನಾ? ಬಣಗಳ ಮುಗಿಯದ ಕಥೆ!

ಕೋಲಾರ: 2019ರ ಚುನಾವಣೆಯ ಪುನರಾವರ್ತನೆಗೆ ಅವಕಾಶ ಕೊಡಬೇಡಿ: ರಮೇಶ್‌ ಕುಮಾರ್‌ ಬಣದ ಎಚ್ಚರಿಕೆ
Published 26 ಮಾರ್ಚ್ 2024, 5:56 IST
Last Updated 26 ಮಾರ್ಚ್ 2024, 5:56 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭಕ್ಕೆ ಕೇವಲ ಎರಡು ದಿನ ಬಾಕಿ ಇದ್ದು, ಕೋಲಾರ ಮೀಸಲು ಕ್ಷೇತ್ರದ ಟಿಕೆಟ್‌ ವಿಚಾರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಲಿಗೆ ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದಿದೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಹಕ್ಕೊತ್ತಾಯ ಮಂಡಿಸಿರುವ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣವಾಗಲಿ, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಬಣದವರಾಗಲಿ ಪಟ್ಟು ಸಡಿಲಿಸುವ ಸೂಚನೆ ಕಂಡುಬರುತ್ತಿಲ್ಲ.

ಹೀಗಾಗಿ, ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಿ.ಎಂ.ಮುನಿಯಪ್ಪ ಅಭ್ಯರ್ಥಿಯೋ, ಎಡಗೈ ಸಮುದಾಯದ ಕೆ.ಜಿ.ಚಿಕ್ಕಪೆದ್ದಣ್ಣ ಅಭ್ಯರ್ಥಿಯೋ ಅಥವಾ ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿರುವ ಎಲ್‌.ಹನುಮಂತಯ್ಯ ಅವರಿಗೆ ಟಿಕೆಟ್‌ ಅದೃಷ್ಟ ಒಲಿಯಲಿದೆಯೋ ಎಂಬ ಕುತೂಹಲ ಸೋಮವಾರವೂ ಮುಂದುವರಿಯಿತು.

ಎರಡೂ ಬಣದವರು ಕಾಂಗ್ರೆಸ್‌ ಹೈಕಮಾಂಡ್‌ ಜೊತೆಗೆ ಸತತ ಸಂಪರ್ಕದಲ್ಲಿದ್ದು, ತಮ್ಮ ತಮ್ಮ ಬೇಡಿಕೆ, ವಾದ ಮುಂದಿಡುತ್ತಲೇ ಇದ್ದಾರೆ. ಟಿಕೆಟ್‌ ವಿಚಾರ ಹೈಕಮಾಂಡ್‌ಗೂ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.

ರಮೇಶ್‌ ಕುಮಾರ್‌ ಬಣದವರು ರಾಜ್ಯ ಚುನಾವಣಾ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಜೊತೆ ಸೋಮವಾರ ಮಾತನಾಡಿರುವುದು ಗೊತ್ತಾಗಿದೆ.

‘ಸಿ.ಎಂ.ಮುನಿಯಪ್ಪ ಹೊರತುಪಡಿಸಿ ಬೇರೆ ಯಾರಿಗಾದರೂ ಟಿಕೆಟ್‌ ನೀಡಿದರೆ ಕೋಲಾರ ಕ್ಷೇತ್ರದಲ್ಲಿ 2019ರ ಲೋಕಸಭೆ ಚುನಾವಣೆ ಪರಿಸ್ಥಿತಿ ಪುನರಾವರ್ತನೆ ಆಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

‘ಹೆಚ್ಚು ಮತದಾರರು ಇರುವ ಬಲಗೈ ಸಮುದಾಯಕ್ಕೆ ಈವರೆಗೆ ಟಿಕೆಟ್‌ ಕೊಟ್ಟಿಲ್ಲ ಎಂಬ ಆಕ್ರೋಶ ಕೋಲಾರಕ್ಷೇತ್ರದಲ್ಲಿದೆ. ಆಕಸ್ಮಾತ್‌ ಟಿಕೆಟ್‌ ಕೈತಪ್ಪಿದರೆ ಈ ಬಾರಿ ಚುನಾವಣೆಯಿಂದ ದೂರ ಉಳಿಯುತ್ತೇವೆ’ ಎಂದಿರುವುದು ಗೊತ್ತಾಗಿದೆ.

ಈ ಸಂಬಂಧ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಕೆಜಿಎಫ್‌ ಶಾಸಕಿ ರೂಪಕಲಾ ಎಂ.ಶಶಿಧರ್‌ ಹೊರತುಪಡಿಸಿ ಉಳಿದ ಶಾಸಕರು, ಪರಾಜಿತ ಅಭ್ಯರ್ಥಿಗಳು ಸಿ.ಎಂ.ಮುನಿಯಪ್ಪ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನೇರವಾಗಿ ಬೆಂಬಲ ವ್ಯಕ್ತಪಡಿಸದಿದ್ದರೂ ಉಳಿದ ಶಾಸಕರ ನಡೆಗೆ ಬದ್ಧ ಎಂಬುದಾಗಿ ಹೇಳಿರುವುದು ತಿಳಿದು ಬಂದಿದೆ. ಸುರ್ಜೇವಾಲಾ ಅವರೇ ಖುದ್ದಾಗಿ ಶಾಸಕರೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಶ್ರೀನಿವಾಸಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಮೇಶ್‌ ಕುಮಾರ್‌, ಸಚಿವ ಡಾ.ಎಂ.ಸಿ.ಸುಧಾಕರ್‌ (ಚಿಂತಾಮಣಿ), ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕರಾದ ಕೊತ್ತೂರು ಮಂಜುನಾಥ್‌ (ಕೋಲಾರ), ಕೆ.ವೈ.ನಂಜೇಗೌಡ (ಮಾಲೂರು), ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್, ಮುಳಬಾಗಿಲು ಪರಾಜಿತ ಅಭ್ಯರ್ಥಿ ಆದಿನಾರಾಯಣ ಜೊತೆಯೂ ಚರ್ಚಿದ್ದಾರೆ ಎನ್ನಲಾಗಿದೆ.

ಹೋಳಿ ಹಬ್ಬದ ಕಾರಣ ಸೋಮವಾರ ಕಾಂಗ್ರೆಸ್‌ ಕೇಂದ್ರಿಯ ಚುನಾವಣಾ ಸಮಿತಿ ಸಭೆ ನಡೆದಿಲ್ಲ. ಮಂಗಳವಾರ ನಡೆಯುವ ನಿರೀಕ್ಷೆ ಇದ್ದು, ಅಭ್ಯರ್ಥಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ
ಕೆ.ಜಿ.ಚಿಕ್ಕಪೆದ್ದಣ್ಣ
ಕೆ.ಜಿ.ಚಿಕ್ಕಪೆದ್ದಣ್ಣ
ಸಿ.ಎಂ.ಮುನಿಯಪ್ಪ
ಸಿ.ಎಂ.ಮುನಿಯಪ್ಪ
ಮಲ್ಲೇಶ್‌ ಬಾಬು
ಮಲ್ಲೇಶ್‌ ಬಾಬು
ಸಮೃದ್ಧಿ ಮಂಜುನಾಥ್‌
ಸಮೃದ್ಧಿ ಮಂಜುನಾಥ್‌

ಹೋಳಿ ಕಾರಣ ನಡೆಯದ ಕಾಂಗ್ರೆಸ್‌ ಸಿಇಸಿ ಸಭೆ ಜೆಡಿಎಸ್, ಕಾಂಗ್ರೆಸ್‌ನಲ್ಲಿ ಟಿಕೆಟ್‌ ವಿಚಾರ ಬಿಡಿಸಲಾಗದ ಕಗ್ಗಂಟು ಸುರ್ಜೇವಾಲಾಗೆ ಶಾಸಕರು ಮನವರಿಕೆ

ಜೆಡಿಎಸ್‌ ಕೋರ್‌ ಸಮಿತಿ ಸಭೆ ಇಂದು ಕೋಲಾರ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳಿಸಲು ಬೆಂಗಳೂರಿನಲ್ಲಿ ಮಂಗಳವಾರ ಜೆಡಿಎಸ್‌ ಕೋರ್‌ ಸಮಿತಿ ಸಭೆ ನಡೆಯಲಿದೆ. ಪ್ರವಾಸದಲ್ಲಿದ್ದ ಎಚ್‌.ಡಿ.ದೇವೇಗೌಡರು ಬೆಂಗಳೂರಿಗೆ ಹಿಂತಿರುಗಲಿದ್ದು ಸಭೆಯಲ್ಲಿ ಭಾಗವಹಿಸಲಿದ್ದಾರೆ. ‘ಈಗಲೂ ಕೋಲಾರ ಕ್ಷೇತ್ರಕ್ಕೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌ ಬಂಗಾರಪೇಟೆ ಪರಾಜಿತ ಅಭ್ಯರ್ಥಿ ಮಲ್ಲೇಶಬಾಬು ಹಾಗೂ ದೇವನಹಳ್ಳಿ ಪರಾಜಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಹೆಸರೂ ಮುಂಚೂಣಿಯಲ್ಲಿದೆ. ಈವರೆಗೆ ಅಂತಿಮಗೊಳಿಸಲ್ಲ. ಇವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಪರಿಗಣಿಸಲ್ಲ’ ಎಂದು ಜೆಡಿಎಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ನಡುವೆ ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಸೇರಿದಂತೆ ಜಿಲ್ಲೆಯ ಜೆಡಿಎಸ್‌ನ ಕೆಲ ಮುಖಂಡರು ಸೋಮವಾರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಪಟ್ಟು ಬಿಡದ ಕೆ.ಎಚ್‌.ಮುನಿಯಪ್ಪ ಸಾಮಾಜಿಕ ನ್ಯಾಯ ಹಾಗೂ ಕ್ಷೇತ್ರದಲ್ಲಿ ಗೆಲ್ಲಿಸುವ ಭರವಸೆಯೊಂದಿಗೆ ಕೆ.ಎಚ್‌.ಮುನಿಯಪ್ಪ ಅವರು ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದಾರೆ. ಉಳಿದ ಪರಿಶಿಷ್ಟ ಜಾತಿಯ ಕ್ಷೇತ್ರಗಳಲ್ಲಿ ಟಿಕೆಟ್‌ ಹಂಚಿಕೆ ಆಗಿರುವ ರೀತಿ ಕೋಲಾರ ಕ್ಷೇತ್ರಕ್ಕೆ ನ್ಯಾಯಬದ್ಧವಾಗಿ ಎಡಗೈ ಸಮುದಾಯಕ್ಕೆ ಟಿಕೆಟ್‌ ಸಲ್ಲಬೇಕಿದೆ ಎಂಬ ವಾದ ಮುಂದಿಟ್ಟಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ತಮಗಿರುವ 33 ವರ್ಷಗಳ ಹಿಡಿತ ಅನುಭವದ ಬಗ್ಗೆಯೂ ಹೈಕಮಾಂಡ್‌ಗೆ ವಿವರಿಸಿದ್ದಾರೆ. ಅವರ ಬೆಂಬಲಿಗರು ಬೆಂಗಳೂರಿನಲ್ಲೇ ಇದ್ದು ಪ್ರಯತ್ನ ಮುಂದುವರಿಸಿದ್ದಾರೆ. ಮುನಿಯಪ್ಪ ಸೋಮವಾರ ಬೆಂಗಳೂರು ಗ್ರಾಮಾಂತರದ ವಿಜಯಪುರದಲ್ಲಿ ಧರ್ಮರಾಯಸ್ವಾಮಿ ದೇವಾಲಯದ ಹೂವಿನ ಕರಗದ ಅಂಗವಾಗಿ ಪೂಜೆ ಸಲ್ಲಿಸಿದರು. ಒಂದೆರಡು ದಿನಗಳಲ್ಲಿ ಕೋಲಾರ ಟಿಕೆಟ್‌ ಗೊಂದಲ ಬಗೆಹರಿಯಲಿದೆ ಎಂದರು .

ಎಡಗೈ–ಬಲಗೈ ಸರಿದೂಗಿಸಲು ಪ್ರಯತ್ನ ಇನ್ನು ಟಿಕೆಟ್‌ ವಿಚಾರದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಹೈಕಮಾಂಡ್‌ ಮಟ್ಟದಲ್ಲೂ ಚರ್ಚೆಗಳು ನಡೆಯುತ್ತಿರುವುದು ಗೊತ್ತಾಗಿದೆ. ವಿಜಯಪುರ ಕಲಬುರಗಿ ಕ್ಷೇತ್ರದಲ್ಲಿ ಬಲಗೈ ಸಮುದಾಯದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಚಾಮರಾಜನಗರದಲ್ಲೂ ಬಲಗೈ ಸಮುದಾಯಕ್ಕೆ (ಡಾ.ಎಚ್‌.ಸಿ.ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌) ಸಿಗುವ ಸಾಧ್ಯತೆ ಇದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್‌ ಸಿಕ್ಕಿದೆ. ಕೋಲಾರದಲ್ಲಿ ಮಾತ್ರ ಎಡಗೈ ಸಮುದಾಯಕ್ಕೆ ಕೊಡಬೇಕೋ ಬಲಗೈ ಸಮುದಾಯಕ್ಕೆ ಕೊಡಬೇಕೋ ಎಂಬ ಚರ್ಚೆ ನಡೆಯುತ್ತಿದೆ. ಇನ್ನು ಪಕ್ಷ ಸಂಘಟನೆ ವಿಭಾಗಕ್ಕೆ ಬಂದರೆ ಎಡಗೈ ಸಮುದಾಯದ ಎಲ್‌.ಹನುಮಂತಯ್ಯ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿಯಲ್ಲಿ ಸಹ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಲಗೈ ಸಮುದಾಯಕ್ಕೆ ಸೇರಿರುವ ರಾಯಚೂರಿನ ವಸಂತಕುಮಾರ್‌ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT