ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಲೋಕಸಭೆ ಕ್ಷೇತ್ರ: ಮೂವರು ಸಂಸದರು ‘ಹ್ಯಾಟ್ರಿಕ್’ ವೀರರು

Published 25 ಮಾರ್ಚ್ 2024, 6:46 IST
Last Updated 25 ಮಾರ್ಚ್ 2024, 6:46 IST
ಅಕ್ಷರ ಗಾತ್ರ

ಕಾರವಾರ: ಪ್ರಜ್ಞಾವಂತ ಮತದಾರರ ಕ್ಷೇತ್ರ ಎಂಬ ಬಿರುದು ಪಡೆದುಕೊಂಡಿರುವ ‘ಉತ್ತರ ಕನ್ನಡ ಲೋಕಸಭೆ ಕ್ಷೇತ್ರ’ ಸಂಸತ್ ಚುನಾವಣೆಯಲ್ಲಿ ‘ಅಚ್ಚರಿ’ಯ ಫಲಿತಾಂಶ ನೀಡುವ ಮೂಲಕ ಗಮನಸೆಳೆದ ಕ್ಷೇತ್ರವಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ದೇಶದಾದ್ಯಂತ ಹೆಸರು ಮಾಡಿದ್ದವರು ಈ ಕ್ಷೇತ್ರದಲ್ಲಿ ‘ಮತದಾರರ’ ಮನ ಗೆಲ್ಲಲಾಗದೆ ಸೋತಿದ್ದು ಈಗ ಇತಿಹಾಸ. ಈ ನಡುವೆ ಅಷ್ಟೇನೂ ಪ್ರಸಿದ್ಧಿ ಆಗಿಲ್ಲದಿದ್ದರೂ ಘಟಾನುಘಟಿ ನಾಯಕರನ್ನು ಮಣಿಸಿ ಸತತ ಗೆಲುವು ಸಾಧಿಸಿದವರೂ ಇದೇ ಕ್ಷೇತ್ರದಲ್ಲಿದ್ದಾರೆ.

ಜಿಲ್ಲೆಯ ಆರು ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಖಾನಾಪುರ ಸೇರಿದಂತೆ ಒಟ್ಟು ಎಂಟು ವಿಧಾನಸಭೆ ಕ್ಷೇತ್ರವನ್ನು ಉತ್ತರ ಕನ್ನಡ ಲೋಕಸಭೆ ಕ್ಷೇತ್ರವು ಒಳಗೊಂಡಿದೆ.

1952 ರಿಂದ 2019ರ ವರೆಗೆ ಕ್ಷೇತ್ರದಲ್ಲಿ 17 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಈ ಪೈಕಿ ಕಾಂಗ್ರೆಸ್ 10 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು, ಬಿಜೆಪಿ ಆರು ಬಾರಿ ಗೆದ್ದಿದೆ. 1967ರ ಚುನಾವಣೆಯಲ್ಲಿ ಚುಟುಕು ಬ್ರಹ್ಮ ಎಂದೇ ಹೆಸರಾಗಿದ್ದ ದಿನಕರ ದೇಸಾಯಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಕ್ಷೇಥ್ರವನ್ನು ಮೊದಲ ಬಾರಿಗೆ ಸಂಸತ್‍ನಲ್ಲಿ ಸ್ಪರ್ಧಿಸಿದ ಹೆಗ್ಗಳಿಕೆ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಜೋಕಿಮ್ ಆಳ್ವ ಅವರ ಹೆಸರಿನಲ್ಲಿದೆ. 1952 ರಿಂದ 1962ರ ವರೆಗೆ ಸತತವಾಗಿ ಮೂರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅವರು ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಅವರು ಕಾಂಗ್ರೆಸ್ ಪಕ್ಷ ಪ್ರತಿನಿಧಿಸಿದ್ದರು. 1980 ರಿಂದ 1991ರ ವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಶಿರಸಿಯ ದೇವರಾಯ ನಾಯ್ಕ ಗೆಲುವು ಸಾಧಿಸಿ ಜೋಕಿಮ್ ಬಳಿಕ ಹೊಸ ಇತಿಹಾಸ ಬರೆದಿದ್ದರು.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ 1996ರಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟಿದ್ದು ಅನಂತಕುಮಾರ ಹೆಗಡೆ. 1998ರಲ್ಲಿಯೂ ಅವರು ಮರು ಗೆಲುವು ಸಾಧಿಸಿದರು. 2004 ರಿಂದ ಸತತ ನಾಲ್ಕು ಚುನಾವಣೆಯಲ್ಲಿಯೂ ಅವರು ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಕ್ಷೇತ್ರವನ್ನು ಅತಿ ಹೆಚ್ಚು ಅವಧಿಗೆ ಸಂಸತ್‍ನಲ್ಲಿ ಪ್ರತಿನಿಧಿಸಿದ ದಾಖಲೆ ಬರೆದಿದ್ದಾರೆ.

ಉತ್ತರ ಕನ್ನಡದ ಈವರೆಗಿನ ಸಂಸದರು

ಸಂಸದ; ಆಯ್ಕೆಯಾದ ವರ್ಷ

1952; ಜೋಕಿಮ್ ಆಳ್ವ

1957; ಜೋಕಿಮ್ ಆಳ್ವ

1962; ಜೋಕಿಮ್ ಆಳ್ವ

1967; ದಿನಕರ ದೇಸಾಯಿ

1971; ಬಿ.ವಿ.ನಾಯ್ಕ

1977; ಬಿ.ಪಿ.ಕದಂ

1980; ಜಿ.ದೇವರಾಯ ನಾಯ್ಕ

1984; ಜಿ.ದೇವರಾಯ ನಾಯ್ಕ

1989; ಜಿ.ದೇವರಾಯ ನಾಯ್ಕ

1991; ಜಿ.ದೇವರಾಯ ನಾಯ್ಕ

1996; ಅನಂತಕುಮಾರ ಹೆಗಡೆ

1998; ಅನಂತಕುಮಾರ ಹೆಗಡೆ

1999; ಮಾರ್ಗರೇಟ್ ಆಳ್ವ

2004; ಅನಂತಕುಮಾರ ಹೆಗಡೆ

2009; ಅನಂತಕುಮಾರ ಹೆಗಡೆ

2014; ಅನಂತಕುಮಾರ ಹೆಗಡೆ

2019; ಅನಂತಕುಮಾರ ಹೆಗಡೆ

ಘಟಾನುಘಟಿಗಳಿಗೆ ಸೋಲು
ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಘಟಾನುಘಟಿ ಅಭ್ಯರ್ಥಿಗಳು ಸೋತ ನಿದರ್ಶನಗಳಿವೆ. ಪ್ರಸಿದ್ಧ ಸಾಹಿತಿ ಶಿವರಾಮ ಕಾರಂತ ಹೆಸರಾಂತ ಚಿತ್ರನಟ ಉತ್ತರ ಕನ್ನಡ ಮೂಲದವರೇ ಆದ ಅನಂತ ನಾಗ್ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಾರ್ಗರೆಟ್ ಆಳ್ವ ಶಾಸಕ ಆರ್.ವಿ.ದೇಶಪಾಂಡೆ ಸೋಲು ಅನುಭವಿಸಿದ ಘಟಾನುಘಟಿಗಳು. ಅಚ್ಚರಿಯ ಸಂಗತಿ ಎಂದರೆ ಬಿಜೆಪಿಯ ಅನಂತಕುಮಾರ್ ಹೆಗಡೆ ಹಾಗೂ ಕಾಂಗ್ರೆಸ್‍ನ ದೇವರಾಯ ನಾಯ್ಕ ನಿರಾಯಾಸವಾಗಿ ಗೆದ್ದು ಬಂದಿದ್ದಾರೆ. ಪ್ರಬಲ ಅಭ್ಯರ್ಥಿಯ ವಿರುದ್ಧ ಸೆಣಸಿ ಅವರನ್ನು ಸೋಲಿಸಿದ ಹಿರಿಮೆ ಇವರದ್ದು. 1977ರಲ್ಲಿ ಕಾಂಗ್ರೆಸ್‍ನ ಬಿ.ಪಿ.ಕದಂ ರಾಮಕೃಷ್ಣ ಹೆಗಡೆ ಅವರನ್ನು ಮಣಿಸಿದ್ದರು. 1980ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಆರ್.ವಿ.ದೇಶಪಾಂಡೆ ಅವರನ್ನು ದೇವರಾಯ ನಾಯ್ಕ ಸೋಲಿಸಿದ್ದರು.  1989ರಲ್ಲಿ ಶಿವರಾಮ ಕಾರಂತ ಅನಂತನಾಗ ಅವರಂತಹ ಘಟಾನುಘಟಿಗಳಿಗೆ ದೇವರಾಯ ನಾಯ್ಕ ಸೋಲಿನ ರುಚಿ ತೋರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT