ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಸು ಗುಸು: ರೆಡ್ಡಿ ಕಿಕ್‌ಗೆ ಫುಟ್‌ಬಾಲ್‌ ವ್ಯಾಪಾರಿಗಳು ‘ಔಟ್‌’

Published 27 ಮಾರ್ಚ್ 2024, 23:25 IST
Last Updated 27 ಮಾರ್ಚ್ 2024, 23:25 IST
ಅಕ್ಷರ ಗಾತ್ರ

ಚುನಾವಣೆ ಬಂತೆಂದರೆ ಸಾಕು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಚಿಹ್ನೆ ಫುಟ್‌ಬಾಲ್‌ನದ್ದೇ ಸುದ್ದಿ. ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರನ್ನು ಮೆಚ್ಚಿಸಲು ಕಾರ್ಯಕರ್ತರು ಚೆಂಡುಗಳನ್ನು ಖರೀದಿಸಿ ಸಮಾರಂಭಗಳಲ್ಲಿ ಕೈ ಮೇಲಕ್ಕೆ ಎತ್ತರಿಸಿ ಪ್ರದರ್ಶಿಸುತ್ತಿದ್ದರು.

ರೆಡ್ಡಿ 15 ತಿಂಗಳ ಹಿಂದೆ ಪಕ್ಷ ಸ್ಥಾಪನೆ ಮಾಡಿದಾಗಿನಿಂದಲೂ ಈ ಎರಡೂ ಜಿಲ್ಲೆಗಳ ಕ್ರೀಡಾ ಸಾಮಗ್ರಿಗಳ ವ್ಯಾಪಾರಿಗಳಿಗೆ ಭರ್ಜರಿ ಗಳಿಕೆ. ಫುಟ್‌ಬಾಲ್‌ಗಂತೂ ಹೆಚ್ಚಿನ ಬೇಡಿಕೆಯಂತೆ. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ರೆಡ್ಡಿ ತಮ್ಮ ಪ್ರತಿ ಭಾಷಣದಲ್ಲಿಯೂ ಎದುರಾಳಿಗಳನ್ನು ‘ಫುಟ್‌ಬಾಲ್‌ ಆಡುತ್ತೇನೆ’ ಎಂದು ಅಬ್ಬರಿಸುತ್ತಿದ್ದರು.

ಆಗ ಅಭಿಮಾನಿಗಳು ನಿಂತಲ್ಲಿಯೇ ಚೆಂಡು ತೋರಿಸಿ ಶಕ್ತಿ ಪ್ರದರ್ಶಿಸುತ್ತಿದ್ದರು. ಫುಟ್‌ಬಾಲ್‌ ಮಾರಾಟ ಮಾಡುವ ಅಂಗಡಿಯವರು ಚುನಾವಣೆಯಲ್ಲಿ ರೆಡ್ಡಿ ಕೊಟ್ಟ ಭರವಸೆಗಳನ್ನು ಈಡೇರಿಸಲಿ ಬಿಡಲಿ. ಆದರೆ, ‘ಫುಟ್‌ಬಾಲ್‌ ಆಡುತ್ತೇನೆ’ ಎಂದು ಮೇಲಿಂದ ಮೇಲೆ ಹೇಳುತ್ತಿದ್ದರೆ ಅಷ್ಟೇ ಸಾಕು. ನಮ್ಮ ವ್ಯಾಪಾರ ಜೋರಾಗುತ್ತದೆ ಎಂದು ಬಯಸುತ್ತಿದ್ದರಂತೆ.

ಈಗ ಲೋಕಸಭಾ ಚುನಾವಣೆಯೂ ಸಮೀಪ ಬಂದಿದೆ. ಪ್ರಚಾರದ ನೆಪದಲ್ಲಿ ಮತ್ತೆ ನಮ್ಮ ಗಳಿಕೆಯೂ ಹೆಚ್ಚಾಗುತ್ತದೆ ಎಂದು ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಚೆಂಡುಗಳನ್ನು ಖರೀದಿಸಿದ್ದಾರಂತೆ. ಹಿಂದಿನ ಚುನಾವಣೆಯಲ್ಲಿ ಕೆಆರ್‌ಪಿಪಿ ಮುಖಂಡರು ಮಕ್ಕಳಿಗೆ ಹಾಗೂ ಕ್ರೀಡಾಸಕ್ತರಿಗೆ ಫುಟ್‌ಬಾಲ್‌ ಉಡುಗೊರೆಯಾಗಿ ನೀಡಿ, ‘ನಮ್ಮ ಪಕ್ಷಕ್ಕೆ ಮತಗೋಲು’ ಹೊಡೆಯುವಂತೆ ಪ್ರಚಾರ ಮಾಡುತ್ತಿದ್ದರು. ಯುವಕರಿಗೆ ಪುಕ್ಕಟೆ ಆಟ, ಪಕ್ಷದ ಮುಖಂಡರಿಗೆ ಅತ್ಯಂತ ಕಡಿಮೆ ದರದಲ್ಲಿ ಜೋರು ಪ್ರಚಾರ. ಇವರಿಬ್ಬರ ನಡುವೆ ನಮಗೆ ಭರ್ಜರಿ ಲಾಭವಾದರೆ ಸಾಕು ಎಂದು ವ್ಯಾಪಾರಿಗಳು ಈ ಬಾರಿಯೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರಂತೆ.

ಆದರೆ, ಜನಾರ್ದನ ರೆಡ್ಡಿ ‘ಫುಟ್‌ಬಾಲ್‌’ ಒದ್ದು ‘ಕಮಲ’ ಹಿಡಿದ ಮೇಲೆ ವ್ಯಾಪಾರಿಗಳೇ ಕಕ್ಕಾಬಿಕ್ಕಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಚೆಂಡು ಮಾರಾಟದಿಂದ ಭಾರಿ ಲಾಭದ ನಿರೀಕ್ಷೆಯಲ್ಲಿದ್ದವರಿಗೆ ರೆಡ್ಡಿಯೇ ‘ವಾಕ್‌ ಓವರ್‌’ ಕೊಟ್ಟು ಹೋಗಿದ್ದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಅಳಲು ವ್ಯಾಪಾರಿಗಳಿಂದ ಈಗ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT