ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುಸಿಸಿ: ಚುನಾವಣೆ ಹೊತ್ತಿನ ಗಿಮಿಕ್‌

Published : 27 ಮಾರ್ಚ್ 2024, 22:11 IST
Last Updated : 27 ಮಾರ್ಚ್ 2024, 22:11 IST
ಫಾಲೋ ಮಾಡಿ
Comments

‌ಮತ್ತೊಂದು ಲೋಕಸಭಾ ಚುನಾವಣೆ ಬಂದಿದೆ. ಇದರ ಬೆನ್ನಿಗೇ ‘ಏಕರೂಪ ನಾಗರಿಕ ಸಂಹಿತೆ’ಯ (ಯುಸಿಸಿ) ಮತ್ತೊಂದು ಸುತ್ತಿನ ಚರ್ಚೆಗಳು ಆರಂಭಗೊಂಡಿವೆ. ಆದರೆ, ಈ ವಿಷಯವು ಕೇವಲ ಚರ್ಚೆಗಷ್ಟೇ ಈ ಬಾರಿ ಸೀಮಿತವಾಗಿಲ್ಲ. ಕೆಲವು ರಾಜ್ಯ ಸರ್ಕಾರಗಳು ಯುಸಿಸಿ ಜಾರಿಗೆ ಮುಂದಾಗಿವೆ. ಉತ್ತರಾಖಂಡದಲ್ಲಿ ಯುಸಿಸಿ ಜಾರಿಯಾಗಿದೆ. ಯುಸಿಸಿ ಜಾರಿಯಲ್ಲಿ ‘ಉತ್ತರಾಖಂಡ ಮಾದರಿ’ಯು ಕೆಲವು ಬಿಜೆಪಿ ನೇತೃತ್ವದ ಸರ್ಕಾರಗಳಿಗೆ ಉತ್ಸಾಹವನ್ನೂ ತುಂಬಿದೆ. ಇದೇ ಹೊತ್ತಿನಲ್ಲಿ ದೇಶದ ಕೆಲವು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕವನ್ನೂ ಸೃಷ್ಟಿಸಿದೆ.

‘ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ, ಯುಸಿಸಿ ಜಾರಿ ಖಚಿತ’ ಎನ್ನುವ ಮಾತುಗಳನ್ನು ಬಿಜೆಪಿ ಪಕ್ಷದ ಹಲವು ನಾಯಕರು ಈಗಾಗಲೇ ಹೇಳಿದ್ದಾರೆ. ಯುಸಿಸಿ ಜಾರಿ ವಿಚಾರವು ಬಿಜೆಪಿ ಪ್ರಣಾಳಿಕೆಯಲ್ಲಿ ಹಿಂದಿನಿಂದಲೂ ಸ್ಥಾನ ಪಡೆದಿರುವ ವಿಚಾರ. ಲೋಕಸಭೆ ಚುನಾವಣೆಯೇ ಇರಲಿ, ವಿಧಾನಸಭೆ ಚುನಾವಣೆ ಇರಲಿ ಬಿಜೆಪಿ ನಾಯಕರು ಯುಸಿಸಿ ಕುರಿತ ಚರ್ಚೆಗಳನ್ನು ಮುಂದಿಡುತ್ತಾರೆ. ಸರ್ಕಾರ ರಚಿಸಿದರೆ ಯುಸಿಸಿ ಜಾರಿ ಮಾಡುವುದಾಗಿಯೂ ಹೇಳುತ್ತಾರೆ. ಆದರೆ, ಯುಸಿಸಿಯ ನಿಯಮಗಳು ಯಾವ ರೀತಿ ಇರಲಿವೆ ಎನ್ನುವ ಸ್ಪಷ್ಟ ನೀಲಿನಕ್ಷೆಯನ್ನು ಮಾತ್ರ ಕೇಂದ್ರ ಸರ್ಕಾರವಾಗಲಿ, ಯುಸಿಸಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರಗಳಾಗಲಿ ಜನರ ಮುಂದಿಡುತ್ತಿಲ್ಲ. ಇದು ಚುನಾವಣೆಯ ಹೊತ್ತಿನ ಒಂದು ಗಿಮಿಕ್‌ ಎಂದಷ್ಟೇ ಕಾಣುತ್ತಿದೆ. ಆದರೆ ಇವು ಒಂದು ಮಟ್ಟಿಗೆ ಮತಧ್ರುವೀಕರಣಕ್ಕೆ ಕಾರಣವಾಗಬಹುದು.

ಯುಸಿಸಿ ಕುರಿತು ಇತ್ತೀಚೆಗೆ ಅಸ್ಸಾಂನಲ್ಲಿ ಹಲವು ಬೆಳವಣಿಗೆಗಳು ನಡೆದವು. ಬಹುಪತ್ನಿತ್ವ ತಡೆ ಮಸೂದೆಯನ್ನು ಅಧಿವೇಶನದಲ್ಲಿ ಮುಂಡಿಸುವುದಾಗಿ ಮುಖ್ಯಮಂತ್ರಿ ಹಿಮಂತ್‌ ಬಿಸ್ವ ಶರ್ಮಾ ಹೇಳಿದ್ದರು. ಬಹುಪತ್ನಿತ್ವವು ಕ್ರಿಮಿನಲ್‌ ಅಪರಾಧ ಎಂದು ಈ ಮಸೂದೆಯಲ್ಲಿ ಹೇಳಲಾಗಿತ್ತು. ‘ಯುಸಿಸಿ ಜಾರಿಗೆ ಅಸ್ಸಾಂ ಸರ್ಕಾರವು ಮೊದಲ ಹೆಜ್ಜೆ ಇರಿಸಿದೆ’ ಎಂದೇ ಈ ಕ್ರಮವನ್ನು ವಿಶ್ಲೇಷಿಸಲಾಗಿತ್ತು. ನಂತರ, ಯುಸಿಸಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಯಿತು. ಆದರೆ, ಈ ಎರಡೂ ಮಸೂದೆಗಳನ್ನು ಸರ್ಕಾರವು ಅಧಿವೇಶನದಲ್ಲಿ ಮಂಡಿಸಲಿಲ್ಲ. ‘ಸರ್ಕಾರವು ಯುಸಿಸಿ ಕುರಿತು, ಬಹುಪತ್ನಿತ್ವವನ್ನು ತೆಗೆದು ಹಾಕುವ ಕುರಿತು ಮಾತನಾಡುತ್ತದೆ ಅಷ್ಟೆ. ಆದರೆ, ಈ ಬಗ್ಗೆ ಯಾವುದೇ ಮಸೂದೆಯನ್ನಾಗಲಿ, ಸುಗ್ರೀವಾಜ್ಞೆಯನ್ನಾಗಲಿ ಹೊರಡಿಸಿಲ್ಲ.ಇವು ಮುಸ್ಲಿಮರನ್ನು ತಾರತಮ್ಯದಿಂದ ನೋಡುವ, ಚುನಾವಣೆ ಹೊತ್ತಿನ ಘೋಷಣೆಗಳಷ್ಟೆ’ ಎಂದು ವಿರೋಧ ಪಕ್ಷಗಳು ದೂರಿದವು.

ಯುಸಿಸಿ ಜಾರಿಗೆ ಸಮಿತಿಯೊಂದನ್ನು ರಚಿಸುವ ಕುರಿತು ಗುಜರಾತ್‌ನ ಬಿಜೆಪಿ ನೇತೃತ್ವದ ಸರ್ಕಾರ ನಿರ್ಧಾರ ತೆಗೆದುಕೊಂಡಿದೆಯಷ್ಟೆ. ಉತ್ತರಾಖಂಡದಲ್ಲಿ ಮಾತ್ರವೇ ಯುಸಿಸಿ ಜಾರಿಯಾಗಿದೆ. ಕೆಲವು ನಿಯಮಗಳನ್ನೂ ಮಾಡಲಾಗಿದೆ. ಮದುವೆ, ವಿಚ್ಛೇದನ, ವಾರಸುದಾರಿಕೆ, ಆಸ್ತಿ ಕುರಿತು ವಿಚಾರಗಳಲ್ಲೂ ಯುಸಿಸಿ ಅನ್ವಯವಾಗುತ್ತದೆ ಎಂದೂ ಸರ್ಕಾರ ಹೇಳಿದೆ. ಆದರೆ, ಕಾನೂನುಗಳನ್ನು ಹೇಗೆ ರೂಪಿಸಲಾಗಿದೆ ಎಂಬುದನ್ನು ಮಾತ್ರ ವಿವರಿಸಲಾಗಿಲ್ಲ. ಯುಸಿಸಿಯು ಮಹಿಳೆಯರಿಗೆ ಸ್ವಾತಂತ್ರ್ಯವನ್ನು ತಂದುಕೊಡುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ, ಸಹಜೀವನ ನಡೆಸುವ ಜೋಡಿಗಳು ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳುತ್ತದೆ. ಈ ನಿಯಮವು ಹೇಗೆ ಮಹಿಳಾ ಪರವಾಗುತ್ತವೆ ಎನ್ನುವುದು ಮಹಿಳಾಪರ ಹೋರಾಟಗಾರರ ಪ್ರಶ್ನೆ. ಕರ್ನಾಟಕ, ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ ಇಲ್ಲೆಲ್ಲಾ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿಯು ಯುಸಿಸಿ ಕುರಿತು ಚರ್ಚೆ ಆರಂಭಿಸಿತ್ತು. ಆದರೆ, ಬಿಜೆಪಿ ಚುನಾವಣೆ ಗೆದ್ದು ಸರ್ಕಾರ ರಚಿಸಿದ ರಾಜ್ಯಗಳಲ್ಲಿಯೂ ಈ ದಿಕ್ಕಿನಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.

ಮತ ಧ್ರವೀಕರಣ ಯತ್ನವಷ್ಟೆ: ಯುಸಿಸಿ ಕುರಿತು ಬಿಜೆಪಿಯು ಯಾವುದೇ ಸ್ಪಷ್ಟತೆಯನ್ನು ಜನರಿಗೆ ನೀಡಿಲ್ಲ. ಯುಸಿಸಿ ಕುರಿತು ಮಾತನಾಡುತ್ತಾ, ಮುಸ್ಲಿಂ ದ್ವೇಷವನ್ನು ಪೋಷಿಸುತ್ತಾ, ಜನರನ್ನು ಗೊಂದಲದಲ್ಲಿರಿಸುತ್ತಾ, ಹಿಂದೂಗಳ ಮತಗಳನ್ನು ಸೆಳೆಯುವುದು ಬಿಜೆಪಿಯ ತಂತ್ರಗಾರಿಕೆ. ಅತ್ತ ಹಿಂದೂಗಳು ಮುಸ್ಲಿಂ ದ್ವೇಷವನ್ನು ತಲೆಯಲ್ಲಿಟ್ಟುಕೊಳ್ಳಬೇಕು. ಇತ್ತ ಮುಸ್ಲಿಂ ಸಮುದಾಯವು ಭಯ, ಆತಂಕದಲ್ಲಿರಬೇಕು. ಹಲವು ವರ್ಷಗಳಿಂದ ಬಿಜೆಪಿಯು ಇದನ್ನೇ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಹಲವು ಬಾರಿ ದೂರಿವೆ. ನಿರುದ್ಯೋಗ, ಬೆಲೆ ಏರಿಕೆಯಂಥ ಸಮಸ್ಯೆಗಳನ್ನು ಜನರು ದಿನನಿತ್ಯ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೋಮುಧ್ರವೀಕರಣದ ವಾತಾವರಣ ಸೃಷ್ಟಿಸುವುದು ಬಿಜೆಪಿಗೆ ಅನುಕೂಲವಾಗುವ ಬದಲು ಮುಳುವಾಗುವುದೇ ಹೆಚ್ಚು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕರಡು ಸಂವಿಧಾನ ರಚನಾ ಸಭೆಯಲ್ಲಿ ಕೇಳಿಸಿದ್ದು..

ಭಾರತವು ಸಂಪೂರ್ಣವಾಗಿ ಸಾಕ್ಷರತೆ ಹೊಂದಬೇಕು, ಜನರು ಆಧುನಿಕಗೊಳ್ಳಬೇಕು, ಅವರ ಆರ್ಥಿಕ ಸ್ಥಿತಿಗಳು ಸುಧಾರಿಸಬೇಕು... ದೇಶವು ಇಂಥ ಸ್ಥಿತಿಗೆ ತಲುಪಿದಾಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿ
–ಹುಸೇನ್‌ ಇಮಾಮ್‌, ಸಂವಿಧಾನ ರಚನಾ ಸಭೆಯಲ್ಲಿ ಬಿಹಾರ ಪ್ರತಿನಿಧಿ
ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸರ್ಕಾರ ಪ್ರಯತ್ನಿಸಬೇಕು ಎಂದಷ್ಟೇ ಹೇಳಲಾಗಿದೆ. ಇಂಥದೊಂದು ಕಾನೂನು ಇದೆ ಎಂದ ಮಾತ್ರಕ್ಕೆ ಸರ್ಕಾರವು ಅದನ್ನು ಜಾರಿಗೊಳಿಸಬೇಕು ಎಂದೇನಿಲ್ಲ. ತಾನು ಈ ಏಕರೂಪ ನಾಗರಿಕ ಸಂಹಿತೆಗೆ ಒಳಪಡುತ್ತೇನೆ ಎಂದು ವ್ಯಕ್ತಿಯು ಘೋಷಿಸಿಕೊಂಡರೆ ಅಂಥವರನ್ನು ಈ ಕಾನೂನಿಗೆ ಒಳಪಡಿಸುವ ಕಾರ್ಯವನ್ನು ಭವಿಷ್ಯದ ಸರ್ಕಾರಗಳು ನಡೆಸಬಹುದು. ಇದು ಏಕರೂಪ ನಾಗರಿಕ ಸಂಹಿತೆಯ ಜಾರಿಯ ಮೊದಲ ಹೆಜ್ಜೆಯಾಗಲಿದೆ. ಜೊತೆಗೆ ಅದು ಸಂಪೂರ್ಣ ಸ್ವಯಂಪ್ರೇರಿತ ಆಗಿರಬೇಕು. ಇದನ್ನು ಮಾದರಿ ನಡೆ ಎನ್ನಲಾಗದು, ಆದರೆ ಸಂಸತ್ತು ಈ ವ್ಯವಸ್ಥೆಯನ್ನು ಅನುಸರಿಸಬಹುದು
–ಬಿ. ಆರ್‌. ಅಂಬೇಡ್ಕರ್‌, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷ
ಏಕರೂಪ ನಾಗರಿಕ ಸಂಹಿತೆ’
‘ಏಕರೂಪ ನಾಗರಿಕ ಸಂಹಿತೆ’ಯನ್ನು ಜಾರಿ ಮಾಡುವ ಮೂಲಕ ದೇಶದಲ್ಲಿ ಧರ್ಮ ಆಧಾರಿತ ತಾರತಮ್ಯವನ್ನು ತೊಡೆದು ಹಾಕುತ್ತೇವೆ ಎನ್ನುವುದನ್ನು ಬಿಜೆಪಿ ಚುನಾವಣೆ ಹೊತ್ತಿನಲ್ಲಿ ಹೇಳುತ್ತಲೇ ಇರುತ್ತದೆ. ಹೀಗೆ ಹೇಳುವಾಗಲೆಲ್ಲಾ ಮುಸ್ಲಿಂ ಸಮುದಾಯದ ವೈಯಕ್ತಿಕ ಕಾನೂನುಗಳನ್ನು ತೊಡೆದು ಹಾಕಿ, ಅವರನ್ನು ‘ದಾರಿಗೆ ತರುವ’ ಕುರಿತ ಮಾತುಗಳನ್ನು ಆಡುತ್ತದೆ. ನಿಜದಲ್ಲಿ ಯುಸಿಸಿ ಜಾರಿಯಾದರೆ ಮುಸ್ಲಿಮರದ್ದು ಮಾತ್ರವಲ್ಲ ಹಿಂದೂ, ಜೈನ, ಪಾರ್ಸಿ, ಕ್ರೈಸ್ತ... ಹೀಗೆ ಎಲ್ಲ ಧರ್ಮದವರ ವೈಯಕ್ತಿಕ ಕಾನೂನುಗಳೂ ರದ್ದಾಗುತ್ತವೆ. ಈ ವಿಚಾರ ಮಾತ್ರ ಜನರಿಗೆ ಅರಿವಾಗದಂತೆ ನೋಡಿಕೊಳ್ಳಲಾಗಿದೆ. ಯುಸಿಸಿ ಬಿಜೆಪಿಯ ಮತ ಗಳಿಸುವ ತಂತ್ರವೂ ಹೌದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT