ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಮಂಡ್ಯದಲ್ಲಿ ಕುಗ್ಗಿತೇ ಸಂಸದೆ ಸುಮಲತಾ ಜನಪ್ರಿಯತೆ?

ಮಂಡ್ಯ ಬಿಟ್ಟು ಬೆಂಗಳೂರಿನಲ್ಲಿ ಸಭೆ ಏಕೆ, ಒಬ್ಬಂಟಿಯಾದರೆ ಸ್ವಾಭಿಮಾನದ ಸಂಸದೆ?
Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ‘ಸ್ವಾಭಿಮಾನ’ದ ಅಭ್ಯರ್ಥಿಯಾಗಿ ಸ್ಪರ್ಧಿಸಿ 1.25 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದ ಸಂಸದೆ ಸುಮಲತಾ ಅವರ ಜನಪ್ರಿಯತೆ ಈ ಬಾರಿ ತೀವ್ರವಾಗಿ ಕುಸಿತ ಕಂಡಿದೆ ಎಂಬ ಮಾತು ಜಿಲ್ಲೆಯಾದ್ಯಂತ ಹರಿದಾಡುತ್ತಿವೆ.

ಬಿಜೆಪಿಗೆ ಬೆಂಬಲ ಕೊಟ್ಟಿರುವ ಅವರು ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳಬೇಕು ಎಂದು ಹೋರಾಡುತ್ತಿದ್ದಾರೆ. ಆದರೆ, ಅವರ ಧ್ವನಿಗೆ ಧ್ವನಿಗೂಡಿಸುವವರು ಜಿಲ್ಲೆಯಲ್ಲಿ ಯಾರೂ ಇಲ್ಲವಾಗಿದ್ದಾರೆ. ಅವರೀಗ ಒಂಟಿಯಾಗಿದ್ದು ಇದೇ ಕಾರಣಕ್ಕೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಮಂಡ್ಯ ಬಿಟ್ಟು ಬೆಂಗಳೂರಿನಲ್ಲಿ ಅವರು ಏಕೆ ಸಭೆ ನಡೆಸಬೇಕು ಎಂಬ ಪ್ರಶ್ನೆ ಸ್ಥಳೀಯರಲ್ಲಿದೆ.

ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದ್ದು ಮುಂದಿನ ನಡೆ ಬಗ್ಗೆ ಅವರು ಗೊಂದಲದಲ್ಲಿದ್ದಾರೆ. ರಾಜಕಾರಣಿಯಾಗಿ ಜಿಲ್ಲೆಯಲ್ಲಿ ತಮ್ಮದೇ ಕಾರ್ಯಕರ್ತರ ಪಡೆ ಕಟ್ಟಿಕೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ. ಅಂಬರೀಷ್‌ ಮೃತಪಟ್ಟ ನಂತರ ಅವರನ್ನು ಒತ್ತಾಯಿಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದ ಹಲವರು ಈಗ ಸುಮಲತಾ ಸಖ್ಯ ಬಿಟ್ಟು ಹೋಗಿದ್ದಾರೆ.

ದರ್ಶನ್‌, ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಕೆಲ ಗಣ್ಯರು, ಅಂಬರೀಷ್‌ ಅಭಿಮಾನಿಗಳ ಸಂಘದ ಕೆಲ ಪದಾಧಿಕಾರಿಗಳನ್ನು ಹೊರತುಪಡಿಸಿದರೆ ಸುಮಲತಾ ಜೊತೆಯಲ್ಲಿ ಈಗ ಯಾರೂ ಇಲ್ಲವಾಗಿದ್ದಾರೆ. ಸುಮಲತಾ ಕೂಡ ತನಗೇ ಬಿಜೆಪಿ ಟಿಕೆಟ್‌ ಕೊಡಿ ಎಂದು ಕೇಳುತ್ತಿಲ್ಲ, ಸುಮಲತಾ ಅವರಿಗೆ ಬಿಜೆಪಿ ಟಿಕೆಟ್‌ ಕೊಡಬೇಕು ಎಂದು ಒತ್ತಾಯಿಸುವವರು ಯಾರೂ ಇಲ್ಲ. ಬಿಜೆಪಿಗೇ ಕ್ಷೇತ್ರ ಉಳಿಸಿಕೊಳ್ಳಬೇಕೆಂದಷ್ಟೆ ಸುಮಲತಾ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಅವರು ಬಿಜೆಪಿಗೆ ಬೆಂಬಲ ಕೊಟ್ಟಿದ್ದರೂ ಸ್ಥಳೀಯ ಬಿಜೆಪಿ ಮುಖಂಡರ ಮೇಲೂ ಅವರಿಗೆ ವಿಶ್ವಾಸವಿಲ್ಲ. ಬಿಜೆಪಿಯ ಯಾವುದೇ ಸಭೆ–ಸಮಾರಂಭಗಳಿಗೂ ಅವರನ್ನು ಆಹ್ವಾನಿಸುತ್ತಿಲ್ಲ. ಸುಮಲತಾ ಕಾಂಗ್ರೆಸ್‌ ಕದ ತಟ್ಟಿದ್ದರಾದರೂ ‘ಕೈ’ಬಾಗಿಲು ಕೂಡ ಮುಚ್ಚಿದೆ. ಈ ಕಾರಣಗಳಿಂದ ಅವರು ಅತಂತ್ರರಾಗಿದ್ದು ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

ಕಳೆದ ಚುನಾವಣೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಅವರಿಗೆ ಬೆಂಬಲ ಕೊಟ್ಟಿದ್ದರು. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಧರ್ಮ ಮೀರಿ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕರೂ ಸುಮಲತಾ ಪರ ರಹಸ್ಯ ಪ್ರಚಾರ ನಡೆಸಿದ್ದರು. ಜೊತೆಗೆ ಪ್ರಗತಿಪರ ಸಂಘಟನೆಗಳು, ಸಣ್ಣಪುಟ್ಟ ಸಮುದಾಯದವರು ಪಕ್ಷ ಮೀರಿ ಬೆಂಬಲವಾಗಿ ನಿಂತಿದ್ದರು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ, ಹೀಗಾಗಿ ಮುಂದೆ ಮತ್ತೆ ‘ಸ್ವಾಭಿಮಾನ’ದ ಕಾರ್ಡ್‌ ಎತ್ತುವರೇ ಎಂಬ ಪ್ರಶ್ನೆ ಮೂಡಿದೆ.

‘ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್‌ ಸೇರಿ ಸಂಘ ಪರಿವಾರದ ಮುಖಂಡರು ಸುಮಲತಾ ಪರ ಪ್ರಚಾರ ಮಾಡಿದ್ದರು. ಆದರೆ, ಅವರು ಗೆದ್ದ ಮೇಲೆ ಕಾರ್ಯಕರ್ತರಿಗೆ ಒಂದು ಕೃತಜ್ಞತೆ ಹೇಳಲಿಲ್ಲ; ಬಿಜೆಪಿಗೆ ಬೆಂಬಲ ಕೊಟ್ಟ ನಂತರವೂ ಸ್ಥಳೀಯ ಮುಖಂಡರ ಜೊತೆ ಸೇರಲಿಲ್ಲ. ಈಗ ಬಿಜೆಪಿ ಟಿಕೆಟ್‌ ಕೇಳಲು ಅವರಿಗೆ ಯಾವ ನೈತಿಕತೆ ಇದೆ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ ಪ್ರಶ್ನಿಸಿದರು.

ಪ್ರತಿಕ್ರಿಯೆಗಾಗಿ ಸುಮಲತಾ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ, ಅವರ ಬೆಂಬಲಿಗರೂ ಸಂಪರ್ಕಕ್ಕೆ ಸಿಗಲಿಲ್ಲ.

ಮಂಡ್ಯ ಬಿಡಲು ಇಷ್ಟವಿಲ್ಲ: ಸುಮಲತಾ

ಬೆಂಗಳೂರು: ‘ಮಂಡ್ಯ ಬಿಟ್ಟು ಬರಲು ನನಗೆ ಇಷ್ಟ ಇಲ್ಲ. ಬೆಂಬಲಿಗರೂ ಕೂಡಾ ಮಂಡ್ಯ ಬಿಟ್ಟು ಹೋಗಬಾರದು ಎಂದಿದ್ದಾರೆ. ಅಲ್ಲಿ ಬಿಜೆಪಿಯ ಗೆಲುವಿಗೆ ಪೂರಕ ವಾತಾವರಣವಿದೆ’ ಎಂದು ಸಂಸದೆ ಸುಮಲತಾ ಅಂಬರೀಷ್‌ ಇಲ್ಲಿ ಹೇಳಿದರು.

ತಮ್ಮ ನಿವಾಸದಲ್ಲಿ ಭಾನುವಾರ ನಡೆದ ಬೆಂಬಲಿಗರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲ್ಲಬಹುದು. ಆದರೆ, ನನ್ನ ಆದ್ಯತೆ ಮಂಡ್ಯಕ್ಷೇತ್ರ. ಅಂಬರೀಷ್ ಅವರು 25 ವರ್ಷ ಮಂಡ್ಯದಲ್ಲೇ ರಾಜಕಾರಣ ಮಾಡಿಕೊಂಡು ಬಂದಿದ್ದು, ಹೀಗಾಗಿ ಮಂಡ್ಯ ಕ್ಷೇತ್ರವನ್ನು ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದರು.

‘ಸಾಮಾಜಿಕ ಜಾಲತಾಣದಲ್ಲಿ ಕೆಲವರು ಊಹಾಪೋಹಗಳನ್ನು ಹರಿಬಿಡುತ್ತಿದ್ದಾರೆ. ನಾವು ಎಲ್ಲರೂ ಪರಸ್ಪರ ವಿಶ್ವಾಸದಲ್ಲೇ ಇದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೆ. ಚಿತ್ರ ನಟ ದರ್ಶನ್ ಅವರು ಕೂಡಾ ಜತೆಗೆ ಇರುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ದೇಶಕ್ಕಾಗಿ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಎಲ್ಲ ದೇಶಗಳ ನಾಯಕರೂ ಅವರಿಗೆ ಗೌರವ ನೀಡುತ್ತಾರೆ. ವಿಶ್ವಗುರುವಿನ ಸ್ಥಾನದಲ್ಲಿದ್ದಾರೆ. ದೇಶದ ಮುನ್ನಡೆಯ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಸುಮಲತಾ ಹೇಳಿದರು.

ಮನೆ ಕಟ್ಟಲಿಲ್ಲ, ವಾಸ್ತವ್ಯ ಹೂಡಲಿಲ್ಲ

‘ದಿಶಾ’ ಸಭೆಯನ್ನಷ್ಟೆ ನಡೆಸಿದ ಅವರು, ಜನರನ್ನು ಸಂಪರ್ಕಿಸುವ ಯಾವುದೇ ಕಾರ್ಯಕ್ರಮ ಮಾಡಲಿಲ್ಲ. ಒಂದು ದಿನವೂ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡಲಿಲ್ಲ, ಮನೆ ಕಟ್ಟುತ್ತೇನೆಂದು ಹೇಳಿದವರು ಮನೆ ಮಾತನ್ನೇ ಎತ್ತಲಿಲ್ಲ, ಕಚೇರಿಗೆ ಕಾಲಿಡಲಿಲ್ಲ. ಕೇವಲ ‘ಸಂದರ್ಶನ ಸಂಸದೆ’ ರೀತಿ ಅವರು ಆಗಾಗ ಬಂದುಹೋಗುತ್ತಿದ್ದರು ಎಂಬ ಆರೋಪಗಳು ಸ್ಥಳೀಯರಲ್ಲಿವೆ.

‘ಗೆದ್ದನಂತರ ನಮ್ಮ ಊರಿನಲ್ಲಿ ಕೃತಜ್ಞತಾ ಸಮಾವೇಶ ಮಾಡುವುದಾಗಿ ಮಾತು ಕೊಟ್ಟಿದ್ದರು. ನಮ್ಮ ಬೂತ್‌ನಲ್ಲಿ ಲೀಡ್‌ ಕೊಟ್ಟಿದ್ದೆವು. ಆದರೆ, ಅವರು ಮಾತು ಉಳಿಸಿಕೊಳ್ಳಲಿಲ್ಲ’ ಎಂದು ಮಂಡ್ಯ ತಾಲ್ಲೂಕು ಆಲಕೆರೆ ಗ್ರಾಮದ ರೈತ ಮಹಿಳೆ ರಾಣಿ ರುದ್ರೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT