ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಸರ್ಕಾರ ಉರುಳಿಸುವುದಾಗಿ ಅಮಿತ್‌ ಶಾ ಬೆದರಿಸುತ್ತಿದ್ದಾರೆ: ಕೇಜ್ರಿವಾಲ್

Published 27 ಮೇ 2024, 15:35 IST
Last Updated 27 ಮೇ 2024, 15:35 IST
ಅಕ್ಷರ ಗಾತ್ರ

ಚಂಡೀಗಢ: ‘ಪಂಜಾಬ್‌ನ ಭಗವಂತ ಮಾನ್‌ ಸರ್ಕಾರವನ್ನು ಉರುಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿರುವ ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ‘ಇದು ಸರ್ವಾಧಿಕಾರ’ ಆಗಿದೆ ಎಂದು ದೂರಿದರು.

ಲುಧಿಯಾನದಲ್ಲಿ ಭಾನುವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಅಮಿತ್‌ ಶಾ ಅವರು, ಚುನಾವಣೆಯಲ್ಲಿ ಬಿಜೆಪಿಯ ವಿಜಯದ ಬಳಿಕ ಭಗವಂತ ಮಾನ್‌ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದರು.

ಇದಕ್ಕೆ ಅಮೃತಸರದ ವ್ಯಾಪಾರಿಗಳ ಸಭೆಯಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಕೇಜ್ರಿವಾಲ್‌, ‘ಅಮಿತ್‌ ಶಾ ಅವರ ಹೇಳಿಕೆಯನ್ನು ನೀವು ಕೇಳಿದ್ದೀರಾ? ಹಿಂದೆ ಪಂಜಾಬಿಗಳನ್ನು ಸಾಕಷ್ಟು ನಿಂದಿಸಿದ್ದ ಅವರು, ಈಗ ಪಂಜಾಬ್ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಜೂನ್‌ 4ರ ಬಳಿಕ ಭಗವಂತ ಮಾನ್‌ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂದಿದ್ದಾರೆ’ ಎಂದರು.

‘ನಮ್ಮಲ್ಲಿ 92 ಶಾಸಕರಿದ್ದಾರೆ. ಅದು ಹೇಗೆ ಸರ್ಕಾರವನ್ನು ಉರುಳಿಸುತ್ತೀರಿ’ ಎಂದು ಪ್ರಶ್ನಿಸಿದ ಅವರು ‘ದೇಶ ಸರ್ವಾಧಿಕಾರಿಯ ಹಿಡಿತದಲ್ಲಿದೆ. ಸಿಬಿಐ ಮತ್ತು ಇ.ಡಿ ಮೂಲಕ ಶಾಸಕರಿಗೆ ಬೆದರಿಕ ಹಾಕಿ ಅವರನ್ನು ಖರೀದಿಸುವ ಯೋಜನೆ ಇದ್ದಂತಿದೆ’ ಎಂದು ಆರೋಪಿಸಿದರು.

‘ನೀವು ಪಂಜಾಬಿನ ಜನರಿಗೆ ಹೀಗೆಲ್ಲ ಬೆದರಿಕೆ ಹಾಕಿದರೆ, ಅವರು ನಿಮಗೆ ಪಂಜಾಬ್‌ ಪ್ರವೇಶಕ್ಕೆ ಬಿಡುತ್ತಾರೆಯೇ’ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು, ‘ನೀವು ಮತ ಕೇಳಲು ಇಲ್ಲಿಗೆ ಬರುತ್ತಿದ್ದೀರಾ ಅಥವಾ ಸರ್ಕಾರವನ್ನು ಬೀಳಿಸುವ ಬೆದರಿಕೆ ಹಾಕಲು ಬರುತ್ತಿದ್ದೀರಾ? ನಮ್ಮಲ್ಲಿ 92 ಶಾಸಕರಿದ್ದಾರೆ, ನಮ್ಮ ಸರ್ಕಾರವನ್ನು ಬೀಳಿಸುವ ಧೈರ್ಯ ನಿಮಗಿದೆಯಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT