ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Elections 2024: ಶರದ್, ಠಾಕ್ರೆಗೆ ದೊಡ್ಡ ಸವಾಲು

Published 21 ಮಾರ್ಚ್ 2024, 22:10 IST
Last Updated 21 ಮಾರ್ಚ್ 2024, 22:10 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣ ಮತ್ತು ನಿರ್ದಿಷ್ಟ ಕುಟುಂಬ ನಡೆಸುವ ಪಕ್ಷಗಳ ವಿರುದ್ಧ ಬಿಜೆಪಿ ನಡೆಸಿದ ತಂತ್ರಗಳ ಪರಿಣಾಮ, ಹಿರಿಯ ರಾಜಕಾರಣಿಗಳಾದ ಶರದ್‌ ಪವಾರ್‌ ಮತ್ತು ಉದ್ಧವ್‌ ಠಾಕ್ರೆ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ವೃತ್ತಿ ಜೀವನದ ಅತಿ ದೊಡ್ಡ ಸಮರವನ್ನು ಎದುರಿಸುವಂತಾಗಿದೆ.

ಮಹಾರಾಷ್ಟ್ರದಲ್ಲಿ ಯಾವಾಗಲಾದರೂ ಮೈತ್ರಿಗಳು ಏರ್ಪಡಬಹುದು ಮತ್ತು ಮುರಿಯಬಹುದು ಎಂಬ ಮಾತಿದೆ. ಅಂತೆಯೇ ಅವುಗಳನ್ನು ಆಧರಿಸಿ ಸರ್ಕಾರಗಳು ರಚನೆಯಾಗಬಹುದು ಮತ್ತು ಪತನವಾಗಬಹುದು. ಹೀಗಿರುವಾಗ ಪವಾರ್‌ (83) ಮತ್ತು ಠಾಕ್ರೆ (63) ಅವರಿಗೆ ಈ ಲೋಕಸಭಾ ಚುನಾವಣೆ ಮತ್ತು ಅಕ್ಟೋಬರ್‌ನಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗಳು ಸವಾಲಿನದ್ದಾಗಿವೆ.

ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಶಿವಸೇನಾ ಮತ್ತು ಎನ್‌ಸಿಪಿ ಕ್ರಮವಾಗಿ 20 ಮತ್ತು 10 ಸ್ಥಾನಗಳನ್ನು ಎಂದಿಗೂ ದಾಟಿಲ್ಲ. ವಿಧಾನಸಭೆಯಲ್ಲಿ ಅವರು ಎಂದಿಗೂ 100ರ ಗಡಿ ದಾಟಿಲ್ಲ.

ಶಿವಸೇನಾ, ಎನ್‌ಸಿಪಿ ಉದಯ:

ದಿವಂಗತ ಬಾಳಾಸಾಹೇಬ್‌ ಠಾಕ್ರೆ ಅವರು 1966ರ ಜೂನ್‌ 16ರಂದು ಶಿವಸೇನಾ ಸ್ಥಾಪಿಸಿ, ಹಿಂದುತ್ವವನ್ನು ಪ್ರತಿಪಾದಿಸಿದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಪ್ರಶ್ನಿಸಿದ್ದಕ್ಕಾಗಿ ಶರದ್‌ ಪವಾರ್‌ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಲಾಯಿತು. ಆ ಬಳಿಕ ಅವರು 1999ರ ಜೂನ್‌ 10ರಂದು ಎನ್‌ಸಿಪಿ ಸ್ಥಾಪಿಸಿದರು.

ಶಿವಸೇನಾದ ಮೂಲ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮೂಲ ಚಿಹ್ನೆ ‘ಗಡಿಯಾರ’ ಈಗ ಈ ನಾಯಕರ ಬಣಗಳಲ್ಲಿ ಇಲ್ಲ. ಅವು ಕ್ರಮವಾಗಿ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ನಿಯಂತ್ರಣದಲ್ಲಿವೆ.

ಇದೀಗ ಠಾಕ್ರೆ ಅವರು ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಬಣದ ಮುಖ್ಯಸ್ಥರಾಗಿದ್ದು ‘ಪಂಜು’ ಅವರ ಚಿಹ್ನೆಯಾಗಿದೆ. ಪವಾರ್‌ ಅವರು ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ– ಶರದ್‌ಚಂದ್ರ ಪವಾರ್’ ಅನ್ನು ಮುನ್ನಡೆಸುತ್ತಿದ್ದು, ‘ಕಹಳೆ ಊದುತ್ತಿರುವ ಮನುಷ್ಯ’ನ ಗುರುತನ್ನು ಚಿಹ್ನೆಯಾಗಿ ನೀಡಲಾಗಿದೆ. ಈ ಇಬ್ಬರೂ ನಾಯಕರು ‘ಇಂಡಿಯಾ’ ಮತ್ತು ‘ಮಹಾ ವಿಕಾಸ್ ಅಘಾಡಿ’ಯ (ಎಂವಿಎ) ಭಾಗವಾಗಿದ್ದಾರೆ.

ಪಕ್ಷಗಳ ವಿಭಜನೆ:

2019ರ ವಿಧಾನಸಭಾ ಚುನಾವಣೆ ಬಳಿಕ ಎಂವಿಎ ಜತೆ ಠಾಕ್ರೆ ಕೈಜೋಡಿಸಿದರು. ಆ ನಂತರ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿಗಳು ಬದಲಾದವು. ಎನ್‌ಸಿಪಿಯ ಅಜಿತ್‌ ಪವಾರ್‌ ಅವರೊಂದಿಗೆ ಸರ್ಕಾರ ರಚಿಸಲು ಬಿಜೆಪಿಯ ದೇವೇಂದ್ರ ಫಡಣವೀಸ್‌ ನಡೆಸಿದ ಪ್ರಯತ್ನಗಳು ವಿಫಲವಾದವು. ಅಧಿಕಾರ ಬಿಜೆಪಿಯ ಕೈತಪ್ಪಿತು. ಆದರೆ ಫಡಣವೀಸ್‌ ಸೇಡು ತೀರಿಸಿಕೊಳ್ಳಲು ಬದ್ಧರಾಗಿದ್ದರು. ಇದರ ಪರಿಣಾಮ ಶಿವಸೇನಾ ಮತ್ತು ಎನ್‌ಸಿಪಿ ಕ್ರಮವಾಗಿ 2022ರ ಜೂನ್‌– ಜುಲೈ ಮತ್ತು 2023ರ ಜೂನ್‌– ಜುಲೈನಲ್ಲಿ ಒಂದರ ಹಿಂದೆ ಒಂದರಂತೆ ವಿಭಜನೆಯಾದವು. 

‘ನಾನು ಮತ್ತೆ ಬರುತ್ತೇನೆ ಎಂದು ಹಿಂದೆ ಹೇಳಿದ್ದೆ. ಅದರಂತೆಯೇ ಮರಳಿ ಬಂದಿದ್ದೇನೆ. ಎರಡು ಪಕ್ಷಗಳನ್ನು (ಶಿವಸೇನಾ ಮತ್ತು ಎನ್‌ಸಿಪಿ) ಮುರಿದು ಇಲ್ಲಿಗೆ ಬಂದಿದ್ದೇನೆ. ನನ್ನೊಂದಿಗೆ ಹೊಸದಾಗಿ ಇಬ್ಬರು ಪಾಲುದಾರರು (ಏಕನಾಥ ಶಿಂದೆ ಮತ್ತು ಅಜಿತ್‌ ಪವಾರ್‌) ಇದ್ದಾರೆ’ ಎಂದು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಮತ್ತು ಈಗ ಉಪ ಮುಖ್ಯಮಂತ್ರಿ ಆಗಿರುವ ದೇವೇಂದ್ರ ಫಡಣವೀಸ್‌ ಹೇಳಿದ್ದರು. 

ಚಿತ್ರಣಗಳ ಬದಲಿಗೆ ಕಾರಣ:

ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಮುಂಬೈನಲ್ಲಿ ಅನೇಕ ವಿಷಯಗಳ ಬಗ್ಗೆ ಆಸಕ್ತಿ ತೋರಿದ್ದು ಶಿವಸೇನಾದ ಹಲವು ಸಂಸದರು ಮತ್ತು ಶಾಸಕರನ್ನು ಸಿಟ್ಟಾಗುವಂತೆ ಮಾಡಿತ್ತು. ಮತ್ತೊಂದೆಡೆ ಪವಾರ್ ಅವರು ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಮುಂಚೂಣಿಗೆ ತರಲು ಯತ್ನಿಸುತ್ತಿದ್ದರು. ಇದು ಅವರ ಸೋದರಳಿಯ ಅಜಿತ್‌ ಪವಾರ್‌ ಅವರನ್ನು ಕೆರಳಿಸಿತ್ತು. ಇವುಗಳ ನಡುವೆ ಎನ್‌ಸಿಪಿ ಮತ್ತು ಶಿವಸೇನಾದ ಹಲವು ನಾಯಕರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದು, ರಾಜಕೀಯ ಚಿತ್ರಣಗಳನ್ನು ಬದಲಿಸುವಂತೆ ಮಾಡಿತು. 

ಎನ್‌ಸಿಪಿ ರಚನೆಯಾದಾಗ 1999ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ನಂತರ ಶಿವಸೇನಾ– ಬಿಜೆಪಿ ಕೇಸರಿ ಮೈತ್ರಿ ಹಾಗೂ ಕಾಂಗ್ರೆಸ್‌– ಎನ್‌ಸಿಪಿ ಡೆಮಾಕ್ರಟಿಕ್‌ ಫ್ರಂಟ್‌ಗಳು ಪರಸ್ಪರರ ವಿರುದ್ಧ ಚುನಾವಣೆಗಳಲ್ಲಿ ಸೆಣೆಸಿದ್ದವು. ಆದರೆ 2014ರ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಮೈತ್ರಿಗಳು ಮುರಿದು ಬಿದ್ದವು.

ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT